ಚಂಡೀಗಢ: ಕೇಂದ್ರದ ಕೃಷಿ ಕಾಯ್ದೆಯ ವಿರುದ್ಧ ಪ್ರಚೋದಿತ ಪ್ರತಿಭಟನೆ ನಡೆಸುತ್ತಿರುವ ರೈತರ ಹಿಂದಿರುವ ಶಕ್ತಿಗಳು ಈಗ ಒಂದೊಂದಾಗಿ ಬಯಲಿಗೆ ಬರತೊಡಗಿವೆ.
ಪ್ರಧಾನಿ ನರೇಂದ್ರ ಮೋದಿಯನ್ನೇ ಟಾರ್ಗೆಟ್ ಮಾಡಿ ನಡೆಯುತ್ತಿರುವ ಪ್ರತಿಭಟನೆಯ ಮಧ್ಯೆ, ದೇಶದ ಪ್ರಮುಖ ಉದ್ಯಮಿಗಳಿಗೆ ಹಾನಿ ತರುವ ಒಂದು ಗುಂಪು ಕೂಡ ಕೆಲಸ ಮಾಡುತ್ತಿದ್ದು, ಪಂಜಾಬ್ ರಾಜ್ಯವೊಂದರಲ್ಲಿಯೇ 1500ಕ್ಕೂ ಹೆಚ್ಚು ಮೊಬೈಲ್ ಟವರ್ಗಳಿಗೆ ಈ ‘ರೈತ ಹೋರಾಟಗಾರರು’ ಹಾನಿ ಮಾಡಿದ್ದಾರೆ.
ರೈತರ ಜಮೀನನ್ನು ಮತ್ತು ಕೃಷಿಯನ್ನು ನರೇಂದ್ರ ಮೋದಿ ಸರ್ಕಾರವು ಅಂಬಾನಿ, ಅದಾನಿ ಮುಂತಾದ ಉದ್ಯಮಿಗಳ ಕೈಗೊಪ್ಪಿಸುತ್ತದೆ ಎಂದು ಕಾಂಗ್ರೆಸ್ ಪದೇ ಪದೇ ಅಪಪ್ರಚಾರ ಮಾಡುತ್ತಿರುವುದರಿಂದ ರಿಲಾಯನ್ಸ್ ಜಿಯೋ ಅನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದರ ಮಧ್ಯೆ, ಪ್ರತಿಭಟನೆಯ ಕಾವಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಉದ್ಯಮಿಗಳ ವಿರೋಧಿ ದುಷ್ಕರ್ಮಿಗಳು ಕೂಡ ಮುಂದಾಗಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ಅಂಬಾನಿ ಗ್ರೂಪಿಗೆ ಅನುಕೂಲ ಮಾಡಿಕೊಡುತ್ತಿದೆ ಎಂಬ ಅಪಪ್ರಚಾರದಿಂದಾಗಿ ಆಕ್ರೋಶಗೊಂಡಿರುವ ಕೆಲವರು, ಪಂಜಾಬ್ನಲ್ಲಿ 1561 ಮೊಬೈಲ್ ಟವರ್ಗಳಿಗೆ ಹಾನಿ ಮಾಡಿದ್ದು, ರಾಜ್ಯಾದ್ಯಂತ ದೂರಸಂಪರ್ಕ ವ್ಯವಸ್ಥೆಗೆ ಸಮಸ್ಯೆಯಾಗಿದೆ. ಸೋಮವಾರ 146 ಟವರ್ಗಳಿಗೆ ವಿದ್ಯುತ್ ಪೂರೈಕೆಗೆ ತಡೆ ಮಾಡಲಾಗಿದೆ ಮತ್ತು ಉಳಿದವುಗಳಿಗೆ ಹಾನಿ ಎಸಗಲಾಗಿದೆ ಎಂದು ರಾಜ್ಯ ಸರ್ಕಾರದ ವಕ್ತಾರರೇ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ 22 ಜಿಲ್ಲೆಗಳಲ್ಲಿ ಒಟ್ಟು 2.13 ಲಕ್ಷ ಮೊಬೈಲ್ ಟವರ್ಗಳಿದ್ದು, ಹಾನಿಯಾದವುಗಳಲ್ಲಿ ಇದುವರೆಗೆ 433 ಟವರ್ಗಳನ್ನು ದುರಸ್ತಿ ಮಾಡಲಾಗಿದೆ.
ಈ ರೀತಿಯಾಗಿ ಮೊಬೈಲ್ ಟವರ್ಗಳಿಗೆ ಹಾನಿ ಮಾಡಿ, ಇಂಟರ್ನೆಟ್ ಸಹಿತ ದೂರಸಂಪರ್ಕ ವ್ಯವಸ್ಥೆಗೆ ತೊಂದರೆಯುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಂಜಾಬಿನ ಕಾಂಗ್ರೆಸ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೋಮವಾರವೇ ಎಚ್ಚರಿಸಿದ್ದಾರೆ.
ಹಾನಿಯಾದ ಹೆಚ್ಚಿನ ಟವರ್ಗಳು ರಿಲಯನ್ಸ್ ಜಿಯೋ ನೆಟ್ವರ್ಕ್ನವು. ಇದು ಅಂಬಾನಿ ಬಳಗಕ್ಕೆ ಸೇರಿದ ಆಸ್ತಿ. ಮೋದಿ ವಿರುದ್ಧದ ದ್ವೇಷವನ್ನು ಜನರು ಅಂಬಾನಿ ಮೇಲೂ ತೋರಿಸಿ, ತಮ್ಮದೇ ಅನುಕೂಲಕ್ಕೆ ಕಲ್ಲು ಚಪ್ಪಡಿ ಎಳೆದುಕೊಳ್ಳುತ್ತಿದ್ದು, ಕೋವಿಡ್ ಕಾಲದಲ್ಲಿ ಆನ್ಲೈನ್ ಮೂಲಕ ಕಲಿಯುವ ಮಕ್ಕಳಿಗೆ, ಮನೆಯಿಂದಲೇ ಕೆಲಸ ಮಾಡುತ್ತಿರುವವರಿಗೆ ಭಾರಿ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಇನ್ನು ಕೆಲವರಂತೂ, ಜಿಯೋ ಮೊಬೈಲಿಂದ ಬೇರೆ ಸೇವಾದಾತರಿಗೆ ಪೋರ್ಟ್ ಮಾಡಿಸುವಂತೆ ಅಭಿಯಾನ ಕೈಗೊಂಡಿದ್ದಾರೆ.
ಜನರ ಉಪಯೋಗಕ್ಕಾಗಿ ಇರುವ ಈ ಮೊಬೈಲ್ ಸಂಪರ್ಕ ವ್ಯವಸ್ಥೆಗೆ ಹಾನಿ ಮಾಡಿದ್ದರಿಂದ ಆನ್ಲೈನ್ ತರಗತಿಗೆ ಹಾಜರಾಗುತ್ತಿರುವ ಮಕ್ಕಳಿಗೆ, ಆನ್ಲೈನ್ ಪರೀಕ್ಷೆ ಬರೆಯುತ್ತಿರುವವರಿಗೆ, ಬ್ಯಾಂಕಿಂಗ್ ಮುಂತಾದ ಹಲವಾರು ಚಟುವಟಿಕೆಗಳಿಗೆ ತೊಡಕಾಗಿದೆ.
ರಿಲಯನ್ಸ್ ಜಿಯೋ ಮೊಬೈಲ್ ಟವರ್ಗಳಿಗೇ ಹಾನಿ ಮಾಡಿರುವುದನ್ನು ನೋಡಿದರೆ, ರೈತರ ಪ್ರತಿಭಟನೆಯ ಮಧ್ಯೆ ಸಮಾಜಘಾತುಕ ಶಕ್ತಿಗಳು ನುಸುಳಿರುವುದನ್ನು ಸ್ಪಷ್ಟಪಡಿಸುತ್ತದೆ.
ಆದರೆ, ನಾವೇನೂ ಮಾಡಿಲ್ಲ, ಇದು ನಮ್ಮ ಅಜೆಂಡಾದಲ್ಲಿಲ್ಲ, ರಿಲಾಯನ್ಸ್ ಸ್ಟೋರ್ಗಳು, ಅದರ ಉತ್ಪನ್ನಗಳ ಬಹಿಷ್ಕಾರಕ್ಕೆ ನಾವೇನೂ ಕರೆ ನೀಡಿಲ್ಲ ಎಂದು ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಭಾರತೀಯ ಕಿಸಾನ್ ಯೂನಿಯನ್ (ಉಗ್ರಹಣ್) ಸೇರಿದಂತೆ ಕೆಲವು ಸಂಘಟನೆಗಳು ಹೇಳಿವೆ.
ರೈತರ ಈ ರೀತಿಯ ಕ್ರಮದಿಂದಾಗಿ ರಿಲಾಯನ್ಸ್ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಈ ಕುರಿತು ಸಂಸ್ಥೆಯು ಪಂಜಾಬ್ ಡಿಜಿಪಿಗೆ ಪತ್ರ ಬರೆದು, ರಕ್ಷಣೆಗೆ ವಿನಂತಿಸಿದೆ. ಆದರೆ ಪಂಜಾಬಿಗಳು ಜಿಯೋಗೆ ಹಾನಿ ಮಾಡುವ ಮೂಲಕ, ಅದರ ಟವರ್ ವಹಿವಾಟನ್ನು ಖರೀದಿಸಿದ, ರೈತ ಪ್ರತಿಭಟನೆಗೆ ಬೆಂಬಲಿಸುತ್ತಿರುವ ಕೆನಡಾ ಮೂಲದ ಕಂಪನಿಗೇ ಹಾನಿ ಮಾಡುತ್ತಿದ್ದಾರೆ ಎಂಬುದು ‘ಕರ್ಮ ರಿಟರ್ನ್ಸ್’ ಎಂಬುದಕ್ಕೆ ಸಾಕ್ಷಿ.
ಪಂಜಾಬ್ನಲ್ಲಿ ಜಿಯೋ ಅತಿದೊಡ್ಡ ಮೊಬೈಲ್ ನೆಟ್ವರ್ಕ್ ಆಗಿದ್ದು, ಸುಮಾರು ಒಂದು ಕೋಟಿಗೂ ಹೆಚ್ಚು ಮಂದಿಗೆ ಸೇವೆ ನೀಡುತ್ತಿದೆ. ಆದರೆ, ಜಿಯೋ ಮತ್ತು ಸಿಎಎ ವಿರೋಧಿ ಹೋರಾಟ, ರೈತರ ಹೋರಾಟಕ್ಕೆ ಏನು ಸಂಬಂಧ ಎಂಬ ಪ್ರಶ್ನೆಯಂತೂ ಉದ್ಭವಿಸುತ್ತಿದೆ. ಕೆಳಗಿನ ಟ್ವೀಟ್ ನೋಡಿ.
ರೈತರ ಪ್ರತಿಭಟನೆಗೆ ವಿದೇಶದಿಂದ, ವಿಶೇಷವಾಗಿ ಖಲಿಸ್ತಾನಿ ಪ್ರತ್ಯೇಕತಾವಾದಿ ಉಗ್ರರು ಆಶ್ರಯ ಪಡೆದಿರುವ ಕೆನಡಾದಿಂದಲೂ ಹಣ ಹರಿದುಬರುತ್ತಿರುವ ಬಗ್ಗೆ ಈ ಹಿಂದೆಯೇ ಶಂಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಮೋದಿ ವಿರುದ್ಧದ ರೈತ ಹೋರಾಟ | ಕಿಸಾನ್ ಯೂನಿಯನ್ಗೆ ವಿದೇಶದಿಂದ ಅಕ್ರಮವಾಗಿ ಹರಿದುಬರುತ್ತಿದೆ ಲಕ್ಷ ಲಕ್ಷ ಹಣ!

Average Rating