ನೀವು ತಿಳಿಯಲೇಬೇಕಾದ ಇಂದಿನ (ಡಿ.29, 2020) ಪ್ರಮುಖ 10 ಬೆಳವಣಿಗೆಗಳು.
ಬಾಕ್ಸಿಂಗ್ ಡೇ ಟೆಸ್ಟ್: ಭಾರತಕ್ಕೆ ಭರ್ಜರಿ ಜಯ
ಮೆಲ್ಬರ್ನ್: ಬಾರ್ಡರ್-ಗವಾಸ್ಕರ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಭರ್ಜರಿ 8 ವಿಕೆಟುಗಳ ದಿಗ್ವಿಜಯ ಸಾಧಿಸಿ, ಸರಣಿಯನ್ನು 1-1 ಸಮಬಲ ಮಾಡಿಕೊಂಡಿದೆ. 4 ಪಂದ್ಯಗಳ ಎರಡನೇ ಟೆಸ್ಟ್ನ ನಾಲ್ಕನೇ ದಿನದಲ್ಲಿ ಭಾರತ ಗೆಲುವು ಸಾಧಿಸಿತು. ಹೊಸ ನಾಯಕ ಅಜಿಂಕ್ಯ ರಹಾನೆ ಭರ್ಜರಿ ಶತಕದ ಮೂಲಕ ಕೇಂದ್ರ ಬಿಂದುವಾದರು. ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ 100 ಓವರುಗಳಲ್ಲಿ 200 ರನ್ ದಾಟದೆ ಹೊಸ ದಾಖಲೆಯನ್ನೂ ಬರೆಯಿತು. ಭಾರತದ ಗೆಲುವಿಗೆ 2ನೇ ಇನ್ನಿಂಗ್ಸಲ್ಲಿ ಬೇಕಾಗಿದ್ದುದು 70 ರನ್ ಮಾತ್ರ. ಆಸ್ಟ್ರೇಲಿಯಾ 195 & 200; ಭಾರತ 326 & 70-2.
ರಾಜಕೀಯ ಬಿಟ್ಟ ರಜನೀಕಾಂತ್
ಕರ್ನಾಟಕದಲ್ಲಿ ಹುಟ್ಟಿ ತಮಿಳರ ಆರಾಧ್ಯ ದೈವವಾಗಿದ್ದ ಸ್ಟಾರ್ ನಟ ರಜನೀಕಾಂತ್, ರಾಜಕೀಯ ಪಕ್ಷ ಕಟ್ಟುವ ಆಸೆ ಕೈಬಿಟ್ಟಿದ್ದು, ಮಾತಿಗೆ ತಪ್ಪಿದ್ದಕ್ಕೆ ಕ್ಷಮಿಸಿ ಅಂತ ಕೇಳಿಕೊಂಡಿದ್ದಾರೆ. ಡಿ.31ರಂದು ಅವರು ಹೊಸ ಪಕ್ಷ ಘೋಷಿಸಬೇಕಿತ್ತು. ಆದರೆ ಆರೋಗ್ಯದ ಕಾರಣ ನೀಡಿ, ರಾಜಕೀಯ ಪಕ್ಷವಿಲ್ಲದೆಯೇ ರಜನಿ ಮಕ್ಕಳ್ ಮಂಡ್ರಮ್ ಮೂಲಕ ಸಮಾಜಸೇವೆ ಮುಂದುವರಿಸುವುದಾಗಿ ಘೋಷಿಸಿದ್ದು, ಅಭಿಮಾನಿಗಳು ನಿರಾಶರಾಗಿದ್ದಾರೆ. ಬಿಪಿ ಹೆಚ್ಚಿದ್ದರಿಂದಾಗಿ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ರಜನಿ ಅವರು ಸೋಮವಾರವಷ್ಟೇ ಬಿಡುಗಡೆಯಾಗಿದ್ದರು.
ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ
ಬೆಂಗಳೂರು: ವಿಧಾನ ಪರಿಷತ್ ಉಪಸಭಾಪತಿ, ಜೆಡಿಎಸ್ ಮುಖಂಡರಾಗಿದ್ದ ಧರ್ಮೇಗೌಡ ಅವರು ಕಡೂರಿನ ರೈಲ್ವೇ ಟ್ರ್ಯಾಕ್ನಲ್ಲಿ ಸಾವನ್ನಪ್ಪಿದ್ದು, ಮರಣ ಪತ್ರವೂ ದೊರಕಿದೆ. ಧರ್ಮೇಗೌಡರ ಆತ್ಮಹತ್ಯೆಗೆ ರಾಜಕೀಯ ಮುಖಂಡರೆಲ್ಲರೂ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅವರನ್ನು ಇತ್ತೀಚೆಗೆ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯರು ಕುರ್ಚಿಯಿಂದ ಎಳೆದಾಡಿ ಹಲ್ಲೆ ಮಾಡಲು ಪ್ರಯತ್ನಿಸಿದ್ದು ವಿಡಿಯೊಗಳಲ್ಲಿ ದಾಖಲಾಗಿತ್ತು. ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯದ ಸಂದರ್ಭ ಈ ನಾಟಕ ನಡೆದಿತ್ತು.
ಭಾರತದ 4 ರಾಜ್ಯಗಳಲ್ಲಿ ಲಸಿಕೆ ಪರೀಕ್ಷೆ
ನವದೆಹಲಿ: ಚೀನಾದಿಂದ ಬಂದ ಕೊರೊನಾ ವೈರಸ್ ವಿರುದ್ಧದ ಲಸಿಕೆ ಪಡೆಯಲು ಭಾರತವು ಸಿದ್ಧವಾಗುತ್ತಿರುವಂತೆಯೇ, ಸೋಮವಾರದಿಂದ (ಡಿ.28) ದೇಶದ ನಾಲ್ಕು ರಾಜ್ಯಗಳಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ (ಡ್ರೈ ರನ್) ನಡೆಸಲಾಗುತ್ತಿದೆ. ಪಂಜಾಬ್, ಅಸ್ಸಾಂ, ಆಂಧ್ರಪ್ರದೇಶ ಮತ್ತು ಗುಜರಾತ್ನಲ್ಲಿ ಈ ಪ್ರಾಯೋಗಿಕ ಲಸಿಕೆ ಕಾರ್ಯಕ್ರಮವು ಎರಡು ದಿನ ನಡೆಯುತ್ತಿದೆ. ನೋಂದಣಿ ಮಾಡಿಸುವುದು, ಲಸಿಕೆ ಹೇಗೆ ಹಾಕಿಕೊಳ್ಳುವುದು, ಲಸಿಕೆಯ ಶೇಖರಣೆಯ ಪರೀಕ್ಷೆ ಮುಂತಾದ ಎಲ್ಲ ಹಂತಗಳೂ ಈ ಪರೀಕ್ಷಾ ಹಂತದಲ್ಲಿರುತ್ತವೆ. ಜನವರಿ ತಿಂಗಳಿಂದ ಲಸಿಕೆ ನೀಡಲು ಪೂರ್ವಭಾವಿಯಾಗಿ, ಏನಾದರೂ ಸಮಸ್ಯೆಗಳಿವೆಯೇ ಎಂದು ತಿಳಿದುಕೊಳ್ಳಲು ಇದನ್ನು ಮಾಡಲಾಗುತ್ತಿದೆ.
ಕರ್ನಾಟಕದ ಮೂವರಿಗೆ ರೂಪಾಂತರಿತ ಕೊರೊನಾ ಸೋಂಕು
ಯುಕೆಯಿಂದ ಇತ್ತೀಚೆಗೆ ಮರಳಿದ್ದ 6 ಮಂದಿಗೆ ಕೋವಿಡ್-19ನ ರೂಪಾಂತರಿತ ವೈರಸ್ ಇರುವುದು ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ತಳಿಯು ಮೂಲ ವೈರಸ್ಗಿಂತ ಶೇ.70ರಷ್ಟು ಹೆಚ್ಚು ವೇಗದಲ್ಲಿ ಪ್ರಸರಣೆಯಾಗುವ ಅಪಾಯವಿದೆ. ಬೆಂಗಳೂರಿನಲ್ಲಿ ಮೂವರಿಗೆ, ಹೈದರಾಬಾದ್ನಲ್ಲಿ ಇಬ್ಬರಿಗೆ ಹಾಗೂ ಪುಣೆಯಲ್ಲಿ ಒಬ್ಬರಿಗೆ ಈ ರೂಪಾಂತರಿ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇವರೆಲ್ಲರನ್ನೂ ಕಟ್ಟುನಿಟ್ಟಿನಲ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ. ನ.25ರಿಂದ ಡಿ.23 ಮಧ್ಯೆ ಸುಮಾರು 33,000 ಮಂದಿ ಯುಕೆಯಿಂದ ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಬಂದಿಳಿದಿದ್ದರು. ಅವರಲ್ಲಿ 114 ಮಂದಿಗೆ ಕೋವಿಡ್-19 ಪತ್ತೆಯಾಗಿತ್ತು. ಈ ಸ್ಯಾಂಪಲ್ಗಳನ್ನು ಹೊಸ ತಳಿಯ ಇರುವಿಕೆಯ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಈಗ 6 ಮಂದಿಯಲ್ಲಿ ಹೊಸ ವೈರಸ್ ತಳಿ ಇರುವುದು ಪತ್ತೆಯಾಗಿದೆ.
100ನೇ ಕಿಸಾನ್ ರೈಲು: ರೈತರಿಗೆ ಮೋದಿ ಭರ್ಜರಿ ಕೊಡುಗೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭಾರತೀಯ ರೈಲ್ವೇಯ 100ನೇ ಕಿಸಾನ್ ರೈಲು (ರೈತರ ರೈಲು) ಉದ್ಘಾಟಿಸಿದ್ದಾರೆ. ಇದು ಮಹಾರಾಷ್ಟ್ರದ ಸಂಗೋಲಾ ಮತ್ತು ಪಶ್ಚಿಮ ಬಂಗಾಳದ ಶಾಲಿಮಾರ್ ಅನ್ನು ಸಂಪರ್ಕಿಸುತ್ತಿದ್ದು, ಕಾಲಿಫ್ಲವರ್, ಮೆಣಸು, ಈರುಳ್ಳಿ, ಕ್ಯಾಬೇಜ್, ಕ್ಯಾಪ್ಸಿಕಂ, ನುಗ್ಗಿಕಾಯಿ ಮುಂತಾದ ತರಕಾರಿ ಹಾಗೂ ಬಾಳೆಹಣ್ಣು, ದ್ರಾಕ್ಷಿ, ದಾಳಿಂಬೆ, ಸೀತಾಫಲ, ಕಿತ್ತಳೆ ಮುಂತಾದ ಹಣ್ಣುಗಳ ಸಾಗಾಟಕ್ಕೆ ಬಳಕೆಯಾಗಲಿದೆ. ಮೋದಿ ಅವರು ಹಣ್ಣು ತರಕಾರಿ ಸಾಗಾಟಕ್ಕೆ ಶೇ.50 ಕಡಿತ ಘೋಷಿಸಿದ್ದಾರೆ. ಮೊದಲ ಕಿಸಾನ್ ರೈಲು ಆಗಸ್ಟ್ 7ರಂದು ಹೊರಟಿತ್ತು. ಅದು ಜನಪ್ರಿಯವಾಗಿದ್ದರಿಂದ ವಾರಕ್ಕೊಮ್ಮೆ ಇದ್ದುದನ್ನು ವಾರಕ್ಕೆ ಮೂರು ಬಾರಿ ಎಂದು ವಿಸ್ತರಿಸಲಾಗಿದೆ.
ರೈತರಿಗೆ ಮಾತುಕತೆಗೆ ಆಹ್ವಾನ, ಒತ್ತಡ ಹೇರಿದ್ರೆ ಆಗದು
ನವದೆಹಲಿ: ಕೃಷಿಕರ ಪರವಾಗಿರುವ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ರೈತರು ಒಂದು ತಿಂಗಳಿಂದ ನಡೆಸುತ್ತಿರುವ ಪ್ರತಿಭಟನೆ ನಿಲ್ಲಿಸುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ರೈತರನ್ನು ಡಿ.30ರಂದು ಮಾತುಕತೆಗೆ ಆಹ್ವಾನಿಸಿದೆ. ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮೋದಿ ಸರ್ಕಾರವು ಬದ್ಧವಾಗಿದ್ದು, ಮಾತುಕತೆಯ ವೇಳೆ ಯಾವುದೇ ಒತ್ತಡ ಅಥವಾ ಪ್ರಭಾವ ಬೀರಲಾಗದು ಎಂದು ಕೃಷಿ ಸಚಿವ ನರೇಂದ್ರ ತೋಮರ್ ಸ್ಪಷ್ಟವಾಗಿ ಹೇಳಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್, ಕೃಷಿ ಸಚಿವ ಶರದ್ ಪವಾರ್ ಕೂಡ ಈ ಕಾಯ್ದೆಯ ಪರವಾಗಿ ಮಾತನಾಡಿದ್ದರು. ಆದರೆ ಶಾಸನ ತರಲು ವಿಫಲರಾಗಿದ್ದರು. ಆದರೆ ಮೋದಿ ಪ್ರಧಾನಿಯಾದ ಬಳಿಕ ಇದನ್ನೇ ಮಾಡಿದ್ದಕ್ಕೆ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ವಿರೋಧಿಸುತ್ತಿವೆ ಎಂದು ತೋಮರ್ ಹೇಳಿದ್ದಾರೆ.
ಹಣಕಾಸು ಒದಗಿಸಿದವರೇ ಹಾನಿ ಮಾಡಿದರೇ ರೈತರು?
ಪ್ರಧಾನಿ ನರೇಂದ್ರ ಮೋದಿ ಅವರು ರಿಲಾಯನ್ಸ್ ಉದ್ಯಮಿ ಅಂಬಾನಿಗಳಿಗೆ ಜಮೀನನ್ನು, ಕೃಷಿ ಕ್ಷೇತ್ರವನ್ನೂ ಒಪ್ಪಿಸುತ್ತಾರೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡಿದ್ದ ಹಿನ್ನೆಲೆಯಲ್ಲಿ, ಕೃಷಿ ಕಾಯ್ದೆ ಮತ್ತು ಮೋದಿ ವಿರುದ್ಧದ ರೈತರ ವೃಥಾ ಆಕ್ರೋಶವು, ಜಿಯೋದತ್ತ ತಿರುಗಿದೆ. ಪಂಜಾಬಿನಲ್ಲಿ ಒಂದುವರೆ ಸಾವಿರಕ್ಕೂ ಹೆಚ್ಚು ಮೊಬೈಲ್ ಟವರ್ಗಳಿಗೆ ಅವರು ಹಾನಿ ಎಸಗಿದ್ದಾರೆ. ಇದು ರೈತರೋ ಅಥವಾ ಪ್ರತಿಭಟನೆಯಲ್ಲಿ ನುಸುಳಿದ ದುಷ್ಕರ್ಮಿಗಳೋ ತಿಳಿದಿಲ್ಲ. ಆದರೆ, ರಿಲಾಯನ್ಸ್ ಟವರ್ ಸ್ಥಾಪಿಸುವ ವಿಭಾಗವನ್ನು, ಇದೇ ರೈತರ ಹೋರಾಟ ಬೆಂಬಲಿಸುತ್ತಿರುವ ಕೆನಡಾದ ಕಂಪನಿಯೊಂದಕ್ಕೆ ನೀಡಲಾಗಿದ್ದು, ತಮಗೆ ನೆರವು ನೀಡಿದವರಿಗೇ ರೈತರು ಹಾನಿ ಮಾಡಿದರೋ ಎಂಬುದು ಭಾರಿ ಚರ್ಚೆಯ ವಿಷಯ. ಇಲ್ಲಿದೆ ಪೂರ್ಣ ವಿವರ.
ಕೃಷಿ ಕಾಯ್ದೆ ವಿರೋಧಿಸಿದ್ದ ತೆಲಂಗಾಣ ಯು ಟರ್ನ್
ಹೈದರಾಬಾದ್: ದೇಶಾದ್ಯಂತ ಲಾಗೂ ಆಗಿರುವ ಹೊಸ ಕೃಷಿ ಕಾಯ್ದೆಗಳ ಅನುಸಾರವಾಗಿ, ರೈತರು ಯಾರಿಗೆ ಬೇಕಿದ್ದರೂ (ಹೆಚ್ಚು ಹಣ ನೀಡುವವರಿಗೆ) ತಮ್ಮ ಕೃಷ್ಯುತ್ಪನ್ನಗಳನ್ನು ಮಾರಾಟ ಮಾಡಬಹುದಾಗಿರುವುದರಿಂದ, ರಾಜ್ಯ ಸರ್ಕಾರಗಳು ರೈತರಿಂದ ಖರೀದಿಸಬೇಕಾದ ಅಗತ್ಯವಿರುವುದಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೊನೆಗೂ ಹೇಳಿದ್ದಾರೆ. ವಿವರ ಇಲ್ಲಿದೆ ನೋಡಿ.
ರೂಪಾಂತರಿ ವೈರಸ್: ಬೆಂಗಳೂರಿನಲ್ಲಿ ಸೀಲ್ಡೌನ್
ಬ್ರಿಟನ್ನಲ್ಲಿ ಕಂಡುಬಂದಿರುವ ಕೊರೊನಾ ವೈರಸ್ನ ರೂಪಾಂತರಿ ತಳಿಯ ಸೋಂಕು, ಬೆಂಗಳೂರಿಗೂ ಬಂದಿದ್ದು, ಬ್ರಿಟನ್ನಿಂದ ಬಂದಿರುವ ತಾಯಿ-ಮಗುವಿನಲ್ಲಿ ಕಂಡುಬಂದಿದೆ. ಇವರು ಡಿ.19ರಂದು ಬಂದಿದ್ದು, ಡಿ.22ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿದ್ದ ಬೆಂಗಳೂರಿನ ವಸಂತನಗರದ ಅಪಾರ್ಟ್ಮೆಂಟನ್ನು ಈಗ ಸೀಲ್ಡೌನ್ ಮಾಡಲಾಗಿದ್ದು, ರಾಜ್ಯದಾದ್ಯಂತ ಕಳವಳಕ್ಕೂ ಕಾರಣವಾಗಿದೆ. ಹೊಸ ವೈರಸ್ ಸೋಂಕು ತಗುಲಿದವರಿಗೆ 28 ದಿನಗಳ ಕ್ವಾರಂಟೈನ್ ಅವಧಿ ಇರುತ್ತದೆ. ರಾಜ್ಯದ ಮೂರು ಮಂದಿಯಲ್ಲಿ ಇಬ್ಬರು ಪತ್ತೆಯಾಗಿದ್ದು, ಮೂರನೇ ವ್ಯಕ್ತಿಯೆಲ್ಲಿದ್ದಾರೆಂಬ ಮಾಹಿತಿ ಇಂದಿನವರೆಗೆ ಲಭ್ಯವಾಗಿಲ್ಲ. ಬ್ರಿಟನ್ನಿಂದ ಬಂದ ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಅಡಗಿ ಕೂತಿದ್ದಾರೆ. ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

Average Rating