ನವದೆಹಲಿ: ಪ್ರತಿಭಟನೆಯ ಹೆಸರಿನಲ್ಲಿ ತಮ್ಮದೇ ದೇಶದ ಮೂಲಸೌಕರ್ಯ ವ್ಯವಸ್ಥೆ, ಆಸ್ತಿಪಾಸ್ತಿ ಹಾನಿಗೆಡಹುವ ಮನಸ್ಥಿತಿಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ.
ದೇಶದ ಪೂರ್ವಭಾಗದ ನಿಗದಿತ ಸರಕು ಕಾರಿಡಾರ್‌ನ ಮೊದಲ ವಿಭಾಗ ಉದ್ಘಾಟಿಸಿದ ಬಳಿಕ ಮಂಗಳವಾರ ಮಾತನಾಡಿದ ಪ್ರಧಾನಿ, ಜನರಿಗೆ ಅನುಕೂಲವಿರುವ ಈ ರೀತಿಯ ಯೋಜನೆಗಳನ್ನು ವಿಳಂಬ ಮಾಡಿದ್ದಕ್ಕಾಗಿ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಇದು ಅವರ ಕೆಲಸದ ಸಂಸ್ಕೃತಿ ಎಂದರು.
ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿಸಿದ್ದ ತೆಲಂಗಾಣಕ್ಕೀಗ ಜ್ಞಾನೋದಯ: ರೈತರು ಯಾರಿಗೂ ಮಾರಬಹುದೆಂದ ಸಿಎಂ ಚಂದ್ರಶೇಖರ ರಾವ್
ಪಂಜಾಬ್ ಮತ್ತಿತರ ಭಾಗಗಳಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಮೂಲಸೌಕರ್ಯಗಳಾದ ಮೊಬೈಲ್ ಟವರ್‌ಗಳನ್ನು ಧ್ವಂಸ ಮಾಡುವುದು, ಹಾನಿ ಮಾಡುವುದು, ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚುವುದು, ಸಾರ್ವಜನಿಕ ಆಸ್ತಿಪಾಸ್ತಿ ಹಾಳುಗೆಡಹಿದ ಪ್ರಕರಣಗಳನ್ನೇ ಪರೋಕ್ಷವಾಗಿ ಉಲ್ಲೇಖಿಸಿದ ಪ್ರಧಾನಿ, ದೇಶದ ಆಸ್ತಿಪಾಸ್ತಿಗೆ ಹಾನಿಯಾಗುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದರು.
ಪ್ರತಿಭಟನೆಯ ವೇಳೆ ಇಂತಹಾ ಮನಸ್ಥಿತಿಯ ಬಗ್ಗೆ ನನಗೆ ಖೇದವಿದೆ. ಈ ರೀತಿಯ ಮನಸ್ಥಿತಿಯಿಂದ ದೇಶಕ್ಕೆ, ನಮ್ಮದೇ ಸಾರ್ವಜನಿಕರಿಗಾಗಿ ಇರುವ ಆಸ್ತಿಪಾಸ್ತಿಗೆ ಹಾನಿಯಾಗುತ್ತದೆ. ಈ ಮೂಲಸೌಕರ್ಯಗಳು ಯಾವುದೇ ನಾಯಕ, ಪಕ್ಷ ಅಥವಾ ಸರ್ಕಾರಕ್ಕೆ ಸೇರಿದ್ದಲ್ಲ. ಪ್ರತಿಯೊಬ್ಬ ಬಡವನ, ತೆರಿಗೆದಾರನ, ಮಧ್ಯಮವರ್ಗದವರ ಮತ್ತು ಸಮಾಜದ ಪ್ರತಿಯೊಂದು ವರ್ಗದವರ ಬೆವರಿನ ಹಣದಲ್ಲಿ ಈ ಸೌಲಭ್ಯಗಳನ್ನು ಮಾಡಿಕೊಡಲಾಗಿದೆ. ಇವೆಲ್ಲ ದೇಶದ ಆಸ್ತಿ. ಇವುಗಳಿಗೆ ಹಾನಿ ಮಾಡಿದರೆ, ಅದರ ಪರಿಣಾಮ ತಟ್ಟುವುದು ಇದೇ ಜನಸಾಮಾನ್ಯರು ಮತ್ತು ಬಡವರ ಮೇಲಲ್ಲವೇ ಎಂದು ಪ್ರಶ್ನಿಸಿದರು ಮೋದಿ.
ಇದನ್ನೂ ಓದಿ: ಅಂಬಾನಿಯ ಜಿಯೋ ಟವರ್‌ಗಳು ಟಾರ್ಗೆಟ್, ಆದ್ರೆ ರೈತ ಪ್ರತಿಭಟನೆಗೆ ಬೆಂಬಲಿಸಿದ ಕೆನಡಾ ಉದ್ಯಮಕ್ಕೇ ಹಾನಿ!
ಪ್ರತಿಭಟನೆಯು ಪ್ರಜಾಪ್ರಭುತ್ವದಲ್ಲಿರುವ ಹಕ್ಕು ಹೌದು. ಆದರೆ, ತಮ್ಮ ರಾಷ್ಟ್ರೀಯ ಕರ್ತವ್ಯವನ್ನು ಜನರು ಮರೆತರೆ ಹೇಗೆ ಎಂದು ಕೇಳಿದ ಮೋದಿ, ಪ್ರತಿಭಟನಾಕಾರರು ಪ್ರತೀ ಬಾರಿಯೂ ರೈಲ್ವೇ ಇಲಾಖೆಯನ್ನು, ಸಾರಿಗೆ ಇಲಾಖೆಯನ್ನು ಟಾರ್ಗೆಟ್ ಮಾಡುತ್ತಾರೆ. ಕೋವಿಡ್ ಕಾಲದಲ್ಲಿ ಇದೇ ರೈಲ್ವೇ ಹಾಗೂ ಸಾರಿಗೆ ವ್ಯವಸ್ಥೆಯೇ ಅಲ್ಲಲ್ಲಿ ಸಿಲುಕಿದ್ದವರನ್ನು ಅವರವರ ಊರಿಗೆ ಸುರಕ್ಷಿತವಾಗಿ ತಲುಪಿಸಿದ್ದವಲ್ಲವೇ ಎಂದು ಮೋದಿ ನೆನಪಿಸಿದರು. ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈಲು ತಡೆದು, ಹಳಿಗಳಿಗೆ ಹಾನಿ ಮಾಡಿದ್ದರು ಎಂಬುದು ಉಲ್ಲೇಖಾರ್ಹ.
ಕೃಷಿ ಕಾರ್ಮಿಕರ ಪರವಾಗಿ, ಅವರ ಲಾಭಕ್ಕಾಗಿಯೇ ಇರುವ ಕೃಷಿ ಕಾಯ್ದೆಗಳ ಬಗ್ಗೆ ರೈತರು ನರೇಂದ್ರ ಮೋದಿಯನ್ನು ವಿರೋಧಿಸುವ ಪಕ್ಷದವರ ಕುಮ್ಮಕ್ಕಿನಿಂದ, ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ತಮ್ಮದೇ ಲಾಭಕ್ಕೆ ಚಪ್ಪಡಿ ಎಳೆದುಕೊಳ್ಳುವ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Farmer Protest: ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿರುವ ರಾಹುಲ್, ಕೇಜ್ರಿವಾಲ್: ಸಾಕ್ಷ್ಯಾಧಾರ ಸಮೇತ ನೈಜಮುಖ ಬಟಾಬಯಲು

Average Rating