ಜೈಪುರ: ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಚಂದ್ರ ಲೋಕದಲ್ಲಿಯೇ ಸೈಟು ಖರೀದಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಗಿಫ್ಟ್ ನೀಡಿದ್ದಾನೆ. ಅದೂ 8ನೇ ವಿವಾಹ ವಾರ್ಷಿಕೋತ್ಸವಕ್ಕೆ!
ಆದರೆ, ಇದನ್ನು ನಂಬಿ, ಬಿಟ್ರೆ ಬಿಡಿ ಅಂತ ಹೇಳಲಾಗದು. ಕಾರಣವೇನು? ಮುಂದೆ ಓದಿ.
ಆಗಿದ್ದಿಷ್ಟೇ. ಹನಿಮೂನ್ ಬದಲು ಮೂನ್ನಲ್ಲೇ ಸೈಟು ತೆಗೆದುಕೊಟ್ಟವ ಅಜ್ಮೇರ್ನ ಧರ್ಮೇಂದ್ರ ಅನಿಜಾ. ನ್ಯೂಯಾರ್ಕ್ನಲ್ಲಿರುವ ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಎಂಬೊಂದು ಸಂಸ್ಥೆಯ ಹೆಸರಿದೆ. ಡಿ.24ರಂದು ಧರ್ಮೇಂದ್ರನ ವಿವಾಹ ವಾರ್ಷಿಕೋತ್ಸವ. ಪತ್ನಿ ಸಪ್ನಾಳಿಗೆ ಭೂಮಿಯ ನೈಸರ್ಗಿಕ ಉಪಗ್ರವಾದ ಚಂದ್ರನಲ್ಲೇ ‘ಭೂಮಿ’ಯನ್ನು ಖರೀದಿಸಲು ಈ ಸಂಸ್ಥೆಯನ್ನೇ ಸಂಪರ್ಕಿಸಿದ್ದಾನೆ. ಈ ‘ಭೂ ಖರೀದಿ ಪ್ರಕ್ರಿಯೆ’ ಎಲ್ಲ ಪೂರ್ಣವಾಗಲು ಒಂದು ವರ್ಷ ಬೇಕಾಯಿತು.
ಉಳಿದವರೆಲ್ಲ ಭೂಮಿಯಲ್ಲಿರುವ ಕಾರು, ಚಿನ್ನ ಎಲ್ಲ ಉಡುಗೊರೆ ಕೊಡುತ್ತಾರೆ. ಏನೋ ವಿಭಿನ್ನವಾದುದು ಮಾಡಬೇಕೆಂದು ಯೋಚಿಸಿದೆ. ಹೀಗಾಗಿ ಅವಳಿಗಾಗಿ ಚಂದ್ರನಲ್ಲಿ ಸೈಟು ಖರೀದಿಸಿದೆ ಎಂದಿದ್ದಾನೆ ಧರ್ಮೇಂದ್ರ.
ಆತ ಚಂದ್ರನಲ್ಲಿ ಸೈಟು ಖರೀದಿಸಿದ ಇಂಟರ್ನ್ಯಾಶನಲ್ ಲೂನಾರ್ ಲ್ಯಾಂಡ್ ರಿಜಿಸ್ಟ್ರಿ- ಚಂದ್ರನ ಮೇಲ್ಮೈಯನ್ನು ಹಲವು ಸೈಟುಗಳಾಗಿ ಪರಿವರ್ತಿಸಿ, ಬೇ ಆಫ್ ರೈನ್ಬೋಸ್, ಸೀ ಆಫ್ ರೈನ್ಸ್, ಲೇಕ್ ಆಫ್ ಡ್ರೀಮ್ಸ್, ಸೀ ಆಫ್ ಟ್ರಾನ್ಕ್ವಿಲಿಟಿ, ದಿ ಲೂನಾರ್ ಆಲ್ಪ್ಸ್, ಸೀ ಆಫ್ ಕ್ಲೌಡ್ಸ್ ಮತ್ತು ಓಶನ್ ಆಫ್ ಸ್ಟಾರ್ಮ್ಸ್ ಅಂತೆಲ್ಲಾ ಹೆಸರಿಸಿ, ಜನರನ್ನು ಆಕರ್ಷಿಸಿ ಹಣ ಮಾಡುತ್ತಿದೆ.
ಆದರೆ, ಇವನಿಗೆ ಭೂಮಿ ಖರೀದಿಯ ಸರ್ಟಿಫಿಕೆಟ್ ಮಾತ್ರ ಸಿಕ್ಕಿದೆ. ಅವುಗಳ ಮಾನ್ಯತೆ ಏನು? ಅಂತ ಯಾರಿಗೂ ಗೊತ್ತಿಲ್ಲ. ಆದರೆ, ಭಾರತವೂ ಸೇರಿದಂತೆ ಹಲವಾರು ರಾಷ್ಟ್ರಗಳು ಅಂತರರಾಷ್ಟ್ರೀಯ ಒಪ್ಪಂದವೊಂದಕ್ಕೆ ಬದ್ಧವಾಗಿವೆ. ಅದೆಂದರೆ, ಯಾವುದೇ ವ್ಯಕ್ತಿಯು ಬಾಹ್ಯಾಕಾಶ ಅಥವಾ ಬಾಹ್ಯಾಕಾಶದಲ್ಲಿರುವ ಗ್ರಹ, ಉಪಗ್ರಹ ಮುಂತಾದವುಗಳ ಮೇಲೆ ಅಧಿಕಾರ ಸ್ಥಾಪಿಸುವಂತಿಲ್ಲ. ಇದು 1967ರ ಅಕ್ಟೋಬರ್ 10ರಂದು ನಡೆದ ಒಪ್ಪಂದ.
ಅದರ 11ನೇ ವಿಧಿಯ ಅನುಸಾರ, ಚಂದ್ರನ ಮೇಲ್ಮೈಯು ಯಾರು ಕೂಡ ಸಾರ್ವಭೌಮತೆ ಸಾಧಿಸುವಂಥ ಪ್ರದೇಶವಲ್ಲ. ಅದರಲ್ಲಿರುವ ನೈಸರ್ಗಿಕ ಸಂಪನ್ಮೂಲಗಳು ಕೂಡ ಯಾವುದೇ ಸರಕಾರದ, ಸಂಸ್ಥೆಯ, ವ್ಯಕ್ತಿಯ, ಸರಕಾರೇತರ ಸಂಸ್ಥೆಗಳ ಭಾಗವಾಗಿರುವಂತಿಲ್ಲ.
ಈ ಅಂತರರಾಷ್ಟ್ರೀಯ ಒಪ್ಪಂದದ ವಿವರದ ಬಗ್ಗೆ ವಿಶ್ವಸಂಸ್ಥೆಯ ಜಾಲತಾಣದಲ್ಲಿ ಮಾಹಿತಿ ಇಲ್ಲಿದೆ.
ಹೀಗಾಗಿ, ‘ರೀ ಅವ್ನು ನೋಡಿ, ಚಂದ್ರನಲ್ಲೇ ಸೈಟು ಮಾಡಿದ್ದಾನೆ, ನಂಗೂ ಕೊಡಿಸಿಕೊಡ್ರೀ’ ಅಂತ ಪತ್ನಿಯರ ಸಂಘದವರು ಕೇಳುವಂತಿಲ್ಲ! ಆದರೆ, ಸರ್ಟಿಫಿಕೇಟ್ ತೋರಿಸಿದ ತಕ್ಷಣ ಪತ್ನಿ ಸಪ್ನಾ ಅಂತೂ ಪರಲೋಕದಲ್ಲಿರುವ ಸೈಟಿನ ಬಗ್ಗೆ ಭಾರಿ ಖುಷಿಯಾಗಿದ್ದಾರೆ!

Average Rating