ನವದೆಹಲಿ: ಸಂಕಷ್ಟ ಕಾಲದಲ್ಲಿ ವಿರೋಧ ಪಕ್ಷಗಳ ಅಸಹಕಾರ, ಗಲಭೆ ಎಬ್ಬಿಸುತ್ತಾ ದೇಶದ ಆಸ್ತಿಗೆ ಹಾನಿ ಮಾಡುವ ಪ್ರಯತ್ನಗಳ ಮಧ್ಯೆ, ದೇಶವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಮೆಯ ಕಿರೀಟಕ್ಕೆ ಮತ್ತೊಂದು ಗರಿ.
ಅಮೆರಿಕದ ಸಂಶೋಧನಾ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ, ಕೋವಿಡ್ ಹೆಮ್ಮಾರಿ ಕಾಲದಲ್ಲಿ ದೇಶಕ್ಕಾಗಿ ಅತ್ಯುತ್ತಮ ಕೆಲಸ ಮಾಡಿದ ನರೇಂದ್ರ ಮೋದಿ ಅವರು ಅತ್ಯಂತ ಜನಪ್ರಿಯ ನೇತಾರ ಎಂಬುದು ದೃಢಪಟ್ಟಿದೆ. ಆದರೆ ಎಂದಿನಂತೆ ಇದು ವಿರೋಧ ಪಕ್ಷಗಳ ಕಣ್ಣು ಕೆಂಪಗಾಗಿಸಿದೆ.
ಅಮೆರಿಕದ ಸಂಶೋಧನಾ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯಲ್ಲಿ ನಮ್ಮ ಪ್ರಧಾನಿಯವರು ಸರ್ಕಾರವೊಂದರ ಅತ್ಯಂತ ಜನಪ್ರಿಯ ಮುಖ್ಯಸ್ಥ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೋವಿಡ್-19 ನಿಭಾಯಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿ, ದೇಶದ ಜನತೆಗೆ ಹೆಚ್ಚು ತೊಂದರೆ ಕಾಡದಂತೆ ನೋಡಿಕೊಂಡಿದ್ದಾರೆ ಎಂದು ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರು ಟ್ವೀಟ್ ಮೂಲಕ ವಿವರಿಸಿದ್ದಾರೆ.
ರೇಟಿಂಗ್‌ನಲ್ಲಿ ನರೇಂದ್ರ ಮೋದಿ ಅವರಿಗೆ ಶೇ.74 ಅಂಕಗಳು ದೊರೆತಿದ್ದರೆ, ಎರಡನೇ ಸ್ಥಾನದಲ್ಲಿ ಬ್ರೆಜಿಲ್ ರಾಷ್ಟ್ರಪತಿ ಶೇ.46 ಮತಗಳನ್ನು ಗಳಿಸಿದ್ದಾರೆ. ಅಮೆರಿಕದ ರಾಷ್ಟ್ರಪತಿಗೆ ಶೇ.41 ಹಾಗೂ ಬ್ರಿಟನ್ ಪ್ರಧಾನ ಮಂತ್ರಿಗೆ ಶೇ.39 ಜನಮಾನ್ಯತೆ ದೊರೆತಿದೆ. ಜಗತ್ತಿನಲ್ಲೇ ಮೋದಿ ಅವರು ನಂ.1 ಸ್ಥಾನ ಪಡೆದಿರುವುದು ಎಲ್ಲ ಭಾರತೀಯರು ಹೆಮ್ಮೆ ಪಡಬೇಕಾದ ವಿಚಾರ. ದೇಶಕ್ಕೆ ಗೌರವದ ವಿಚಾರ.
ಈ ಸಮೀಕ್ಷೆ ನಡೆಸಿದ್ದು ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ. ಅಮೆರಿಕ, ಜಪಾನ್, ಬ್ರೆಜಿಲ್ ಸೇರಿದಂತೆ 13 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು.
ಮಾರ್ನಿಂಗ್ ಕನ್ಸಲ್ಟ್ ಎಂಬುದು ಜಾಗತಿಕ ಡೇಟಾ ಇಂಟೆಲಿಜೆನ್ಸ್‌ನಲ್ಲಿ ಅಗ್ರಗಣ್ಯ ಸಂಸ್ಥೆಯಾಗಿದ್ದು, ಅಮೆರಿಕದಲ್ಲಿ ಸ್ಟಾರ್ಟಪ್ ರೂಪದಲ್ಲಿ ಸ್ಥಾಪನೆಗೊಂಡು, ಈಗ ಪ್ರಮುಖ ಡೇಟಾ ವಿಶ್ಲೇಷಣಾ ಸಂಸ್ಥೆಯಾಗಿ ಬೆಳೆದಿದೆ. 2018 ಹಾಗೂ 2019 -ಎರಡೂ ವರ್ಷಗಳಲ್ಲಿ ಉತ್ತರ ಅಮೆರಿಕದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟೆಕ್ನಾಲಜಿ ಸಂಸ್ಥೆ ಎಂಬ ಅಭಿದಾನಕ್ಕೆ ಅದು ಪಾತ್ರವಾಗಿದೆ.
ವಾಷಿಂಗ್ಟನ್, ನ್ಯೂಯಾರ್ಕ್, ಶಿಕಾಗೊ ಹಾಗೂ ಸ್ಯಾನ್ ಫ್ರಾನ್ಸಿಸ್ಕೊಗಳಲ್ಲಿ ಕಚೇರಿಗಳನ್ನು ಹೊಂದಿದ್ದು, ಜಾಗತಿಕವಾಗಿ ಸಮೀಕ್ಷೆ-ಸಂಶೋಧನೆಗಾಗಿ ಟೂಲ್‌ಗಳನ್ನು ಅಭಿವೃದ್ಧಿಪಡಿಸುವುದು, ಡೇಟಾ ಸೇವೆಗಳನ್ನು ಒದಗಿಸುವುದು ಮತ್ತು ವಾಣಿಜ್ಯ, ಮಾರ್ಕೆಟಿಂಗ್, ಇಕನಾಮಿಕ್ಸ್ ಮತ್ತು ರಾಜಕೀಯದಲ್ಲಿರುವ ಸಂಸ್ಥೆಗಳಿಗೆ ಸುದ್ದಿ ಒದಗಿಸುವ ಕಾರ್ಯವನ್ನೂ ಮಾಡುತ್ತಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ. ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
ನರೇಂದ್ರ ಮೋದಿಯವರಿಗೆ ಶೇ.75 ಮಂದಿಯ ಬೆಂಬಲ ಸಿಕ್ಕಿದ್ದರೆ ಅವರ ಕಾರ್ಯವೈಖರಿಗೆ ಶೇ.20ರಂದು ವಿರೋಧ ವ್ಯಕ್ತವಾಗಿದೆ. ಅದರ ಅನುಸಾರ ಅವರ ಒಟ್ಟಾರೆ ರೇಟಿಂಗ್ ಶೇ.55.
ಜರ್ಮನಿಯ ಚಾನ್ಸಲರ್ ಏಜೆಂಲಾ ಮೆರ್ಕೆಲ್ ಅವರ ಅನುಮೋದನಾ ರೇಟಿಂಗ್ ಶೇ.24. ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಅವರ ರೇಟಿಂಗ್ ನೆಗೆಟಿವ್‌ಗೆ ಇಳಿದಿದೆ. ಅಲ್ಲಿ ಕೊರೊನಾ ಎರಡನೇ ರೂಪಾಂತರಿ ತಳಿ ಪ್ರವರ್ಧಮಾನಕ್ಕೆ ಬಂದಿರುವುದು ಉಲ್ಲೇಖನೀಯ.
ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅನುಮೋದನಾ ರೇಟಿಂಗ್ ಶೇ.27 ಇದ್ದರೆ, ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುಯೆಲ್ ಲೋಪೆಜ್ ಒಬ್ರಡಾರ್ ಅವರ ರೇಟಿಂಗ್ ಶೇ.29.
ಇದೀಗ ಭಾರತಕ್ಕೆ ಭಾರತದಲ್ಲೇ ತಯಾರಾದ ಕೋವಿಡ್ ಲಸಿಕೆಯು ಲಭ್ಯವಾಗುತ್ತಿರುವ ಶುಭ ಸೂಚನೆ ದೊರೆತಿರುವುದು ನರೇಂದ್ರ ಮೋದಿ ಅವರು ಕೋವಿಡ್-19 ಹೆಮ್ಮಾರಿ ತಡೆಗೆ ಕೈಗೊಂಡ ಕ್ರಮಗಳಿಗೆ ಸಾಕ್ಷಿಯಾಗಿದೆ. ಅದರ ಜೊತೆಗೇ ಈ ರೇಟಿಂಗ್ ಬಂದಿರುವುದರಲ್ಲಿ ಅಚ್ಚರಿಯೇನೂ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ, ನರೇಂದ್ರ ಮೋದಿ ಎಂಬ ಕಾರಣಕ್ಕಾಗಿ ವಿರೋಧಿಸುತ್ತಲೇ ಇರುವ ವಿರೋಧ ಪಕ್ಷಗಳು, ಪ್ರಧಾನಿಯ ಸಾಧನೆಯನ್ನು ಒಪ್ಪಲು ತಯಾರಿಲ್ಲ. ಸದಾ ಒಂದಿಲ್ಲೊಂದು ಪ್ರತಿಭಟನೆಯನ್ನು ಏರ್ಪಡಿಸುವುದು ಅಥವಾ ಪ್ರತಿಭಟನೆ ಯಾರಾದರೂ ಮಾಡಲಾರಂಭಿಸಿದರೆ, ಅಪಪ್ರಚಾರದ ಮೂಲಕ ಬೆಂಕಿಗೆ ತುಪ್ಪ ಸುರಿಯುತ್ತಾ, ದೇಶದ ಹೆಸರಿಗೂ ಮಸಿ ಬಳಿಯಲು ಪ್ರಯತ್ನಿಸುತ್ತಿವೆ ಎಂಬುದು, ವಿಶೇಷವಾಗಿ ಅನಗತ್ಯವಾಗಿ ನಡೆದ ಸಿಎಎ-ವಿರೋಧಿ ಹೋರಾಟ ಹಾಗೂ ರೈತರ ಪರವಾಗಿರುವ ಕಾಯ್ದೆಗಳ ವಿರುದ್ಧ ರೈತರೇ ನಡೆಸುತ್ತಿರುವ ಹೋರಾಟ ಸಾಕ್ಷಿಯಾಗಿದೆ.

Average Rating