ಲಖನೌ: ಅಪ್ರತಿಮ ಸೇನಾನಿ, ಭಾರತಾಂಬೆಯ ವೀರ ಪುತ್ರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರನ್ನು ಕೊಲ್ಲಿಸಿದ್ದೇ ಕಾಂಗ್ರೆಸ್. ಮಹಾತ್ಮ ಗಾಂಧಿಯಾಗಲೀ, ಪಂಡಿತ್ ನೆಹರು ಅವರಾಗಲೀ ಬೋಸ್ ಜನಪ್ರಿಯತೆಯೆದುರು ನಿಲ್ಲಲಾರದೆ ಹೋಗಿದ್ದರು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿರುವುದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಉನ್ನಾವ್ನಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಾಕ್ಷಿ ಮಹಾರಾಜ್, ಬೋಸ್ ಜನಪ್ರಿಯತೆ ಸಹಿಸದೆ ಕಾಂಗ್ರೆಸ್ಸೇ ಅವರನ್ನು ಕೊಲ್ಲಿಸುವ ಸಂಚು ರೂಪಿಸಿತ್ತು ಎಂದು ಆರೋಪಿಸಿದರು.
ನೇತಾಜಿ ಜನ್ಮದಿನವಾದ ಜ.23ರಂದು ಪಶ್ಚಿಮ ಬಂಗಾಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ‘ಜೈ ಶ್ರೀರಾಂ’ ಎಂದು ಜನರು ಕೂಗಿದಾಗ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಟ್ಟಿಗೆದ್ದು, ಪ್ರಧಾನಿ ನರೇಂದ್ರ ಮೋದಿ ಅವರೆದುರೇ ಕೂಗಾಡಿದ ಬೆನ್ನಲ್ಲೇ ಸಾಕ್ಷಿ ಮಹಾರಾಜ್ ಹೇಳಿಕೆ ಹೊರಬಿದ್ದಿದೆ.
ವಿಕ್ಟೋರಿಯಾ ಮೆಮೋರಿಯಲ್ನಲ್ಲಿ ನಡೆದ ನೇತಾಜಿ ಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಮಮತಾ ಭಾಷಣ ಮಾಡಲೆಂದು ಎದ್ದ ತಕ್ಷಣ ಕೆಲವರು ಜೈಶ್ರೀರಾಂ ಎಂದು ಘೋಷಿಸಿದಾಗ ಮಮತಾ ಸಿಡಿಮಿಡಿಯಾದರು. ‘ಇದು ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಸರ್ಕಾರಿ ಕಾರ್ಯಕ್ರಮ. ಸ್ವಲ್ಪ ಮರ್ಯಾದೆ ತೋರಿಸಿ’ ಅಂತ ಗುಡುಗಿ, ಏನನ್ನೂ ಮಾತನಾಡದೆ ಪ್ರತಿಭಟಿಸಿದರು. ಆಹ್ವಾನ ನೀಡಿ ಅಪಮಾನಿಸುವುದು ನಿಮಗೆ ತರವಲ್ಲ ಎಂದು ಅಬ್ಬರಿಸಿದರು ಅವರು.
ನೇತಾಜಿ ಕಾರ್ಯಕ್ರಮದಲ್ಲಿ ನೇತಾಜಿ ಬಗ್ಗೆ ಒಂದು ಮಾತನ್ನೂ ಆಡದೆ ಮಮತಾ ಅವರು ಬಂಗಾಳದ ಮಣ್ಣಿನ ಮಗ ಸುಭಾಶ್ಗೆ ಅವಮಾನ ಮಾಡಿದೆ ಎಂದು ಬಿಜೆಪಿ ಇದೇ ವೇಳೆ ಆರೋಪಿಸಿದೆ.
ನೇತಾಜಿ ಅವರು 1897ರ ಜನವರಿ 23ರಂದು ಒಡಿಶಾದ ಕಟಕ್ನಲ್ಲಿ ಜಾನಕಿನಾಥ್ ಬೋಸ್ ಪುತ್ರನಾಗಿ ಜನಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಅವರು ಆಜಾದ್ ಹಿಂದ್ ಫೌಜ್ ಸ್ಥಾಪಿಸಿ, ಬ್ರಿಟಿಷರಿಗೆ ಬಿಸಿ ಮುಟ್ಟಿಸಿದ್ದರು. ಆದರೆ 1945ರ ಆಗಸ್ಟ್ 18ರಂದು ತೈಪೈಯಲ್ಲಿ ನಡೆದ ವಿಮಾನ ಅವಘಡದಲ್ಲಿ ಅವರು ಮೃತಪಟ್ಟರೆಂದು ಹೇಳಲಾಗುತ್ತಿದೆ. ಆದರೆ, ಸಾವಿನ ನಿಗೂಢತೆಯಿನ್ನೂ ಬಗೆಹರಿದಿಲ್ಲ. ಇದುವರೆಗೆ ದೇಶವಾಳಿದವರು ನೇತಾಜಿ ಸಾವಿನ ಸತ್ಯ ಹೊರಬರುವಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಜನಸಾಮಾನ್ಯರ ಅಭಿಪ್ರಾಯ.

Average Rating