ನವದೆಹಲಿ: ನರೇಂದ್ರ ಮೋದಿ ಸರ್ಕಾರದ ವಿರುದ್ಧ ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬುದನ್ನು ಬಟಾಬಯಲು ಮಾಡಿದ ಘಟನೆಯಿದು.
ರೈತ ನಾಯಕರ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಬಿಂಬಿಸಲು ರೈತರ ಹೆಸರಿನಲ್ಲಿ ಪ್ರತಿಭಟಿಸುತ್ತಿರುವವರು ಏನು ಮಾಡಿದ್ದಾರೆಂಬ ಮಾಹಿತಿ ಇಲ್ಲಿದೆ.
ದೆಹಲಿ ಗಡಿಯಲ್ಲಿ ಪ್ರತಿಭಟನಾ ನಿರತ ‘ರೈತರು’ ಮುಸುಕುಧಾರಿ ಯುವಕನೊಬ್ಬನನ್ನು ‘ಸೆರೆಹಿಡಿದು’ ಪತ್ರಿಕಾಗೋಷ್ಠಿ ಮಾಡಿಸಿದ್ದರು. ಗಣರಾಜ್ಯೋತ್ಸವ ದಿನದಂದು ನಾಲ್ಕು ಮಂದಿ ರೈತ ಮುಖಂಡರ ಹತ್ಯೆಗೆ ಈ ಯುವಕನನ್ನು ನಿಯೋಜಿಸಲಾಗಿದೆ ಮತ್ತು ಆ ದಿನ ನಡೆಸಲುದ್ದೇಶಿಸಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ಅಡ್ಡಿ ಮಾಡುವ ಉದ್ದೇಶ ಆತನದು ಎಂದು ತಥಾಕಥಿತ ರೈತರು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಕೋವಿಡ್ ಸಂಕಷ್ಟದ ನಡುವೆ ರೈತರ ವೃಥಾ ಪ್ರತಿಭಟನೆಯಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತೇ? 70 ಸಾವಿರ ಕೋಟಿ!
ಆದರೆ, ಪೊಲೀಸರೇ ತನ್ನನ್ನು ನಿಯೋಜಿಸಿದ್ದಾರೆಂಬ ಆತನ ಹೇಳಿಕೆಯ ಹಿಂದಿನ ಸಂಚನ್ನು ಹರ್ಯಾಣ ಪೊಲೀಸರು ಬಯಲು ಮಾಡಿದ್ದಾರೆ. ಈ 21ರ ಹರೆಯದ ಯುವಕನಿಗೆ ರೈತರು ಚಿತ್ರ ಹಿಂಸೆ ನೀಡಿ, ಪೊಲೀಸರ ವಿರುದ್ಧ ಹೇಳಿಕೆ ನೀಡುವಂತೆ ಒತ್ತಡ ಹೇರಿದ್ದರೆಂದು ಹರ್ಯಾಣ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ಯುವಕನಿಗೆ ಚೆನ್ನಾಗಿ ತದುಕಿರುವ ರೈತರು, ಆತನಿಂದ ಸುಳ್ಳು ಹೇಳಿಕೆ ಕೊಡಿಸಿದ್ದಾರೆ ಎಂದು ಹರ್ಯಾಣ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸೋನಿಪತ್ ಎಸ್ಪಿ ಜಶನ್‌ದೀಪ್ ಸಿಂಗ್ ರಾಂಧವ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ವಿಷಯ ಬಯಲು ಮಾಡಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿಸಿದ್ದ ತೆಲಂಗಾಣಕ್ಕೀಗ ಜ್ಞಾನೋದಯ: ರೈತರು ಯಾರಿಗೂ ಮಾರಬಹುದೆಂದ ಸಿಎಂ ಚಂದ್ರಶೇಖರ ರಾವ್
ರೈತ ಮುಖಂಡರ ಹತ್ಯೆಗೆ ರಾಯ್ ಪೊಲೀಸ್ ಠಾಣೆಯ ‘ಪ್ರದೀಪ್’ ಹೆಸರಿನ ಇನ್‌ಸ್ಪೆಕ್ಟರ್ ತನ್ನನ್ನು ನಿಯೋಜಿಸಿದ್ದರು ಎಂದು ಈ ಮುಸುಕುಧಾರಿ ವ್ಯಕ್ತಿಯು ಆರೋಪಿಸಿದ್ದ. ಆದರೆ, ವಾಸ್ತವವಾಗಿ ರಾಯ್ಪೊಲೀಸ್ ಠಾಣೆಯಲ್ಲಾಗಲೀ, ಇಡೀ ಜಿಲ್ಲೆಯಲ್ಲಾಗಲೀ ಪ್ರದೀಪ್ ಹೆಸರಿನ ಇನ್‌ಸ್ಪೆಕ್ಟರೇ ಇಲ್ಲ.
ಈ ಹುಡುಗ ಸೋನಿಪತ್‌ನ ಒಬ್ಬ ನಿರುದ್ಯೋಗಿ ಯುವಕ. ಆತ ರೈತರ ಪ್ರತಿಭಟನೆ ಸ್ಥಳಕ್ಕೆ ಬಂದಿದ್ದು, ಚುಡಾಯಿಸುವ ವಿಷಯದಲ್ಲಿ ರೈತರೊಂದಿಗೆ ಜಗಳ ಮಾಡಿದ್ದ.
ರೈತರೆಲ್ಲಾ ಈತನನ್ನು ಹಿಡಿದು ಒಂದು ಶಿಬಿರಕ್ಕೆ ಕರೆತಂದು ಚೆನ್ನಾಗಿ ತದುಕಿದ್ದಾರೆ. ಪೊಲೀಸರ ವಿರುದ್ಧ ಹೇಳಿಕೆ ನೀಡುವಂತೆ ಒತ್ತಾಯಿಸಿದ್ದಾರೆ. ರೈತರ ಭಯದಿಂದಾಗಿ ಈ ಹೇಳಿಕೆ ನೀಡಿರುವುದಾಗಿ ಸೋನಿಪತ್ ಎಸ್ಪಿ ತಿಳಿಸಿದ್ದಾರೆ.
ಈ ಮುಸುಕುಧಾರಿ ಯುವಕನನ್ನು ಬಂಧಿಸಿಲ್ಲ ಅಥವಾ ವಶಕ್ಕೂ ಪಡೆದಿಲ್ಲ. ಆತನ ವಿಚಾರಣೆಯಷ್ಟೇ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ರೈತರ ಒಳಿತಿಗಾಗಿ ಮೋದಿ ಸರ್ಕಾರ ಜಾರಿಗೊಳಿಸಿರುವ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತಿರುವ ರೈತರು ಶುಕ್ರವಾರ ರಾತ್ರಿ ಸಿಂಘು ಗಡಿಯಲ್ಲಿ ಈ ‘Masked Man’ ಎಂದೇ ಗುರುತಿಸಲ್ಪಟ್ಟ ಯುವಕನನ್ನು ಮಾಧ್ಯಮಗಳೆದುರು ಪ್ರದರ್ಶಿಸಿ, ಈತ ನಮ್ಮ ನಾಯಕರ ಹತ್ಯೆಗೆ ಬಂದಿದ್ದಾನೆ, ರೈತರ ಪ್ರತಿಭಟನೆಗೆ ಅಡ್ಡಿಯುಂಟು ಮಾಡಲು ನಿಯೋಜಿಸಲ್ಪಟ್ಟಿದ್ದಾನೆ ಎಂದೆಲ್ಲಾ ಹೇಳಿದ್ದರು.
ಆತ ನೀಡಿದ ಹೇಳಿಕೆಯ ಪ್ರಕಾರ, ಆತ ಮತ್ತು ಆತನ ತಂಡವು ಜ.26ರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಪೊಲೀಸರಂತೆ ವೇಷ ಧರಿಸಲು ಸೂಚಿಸಲಾಗಿತ್ತು. ಅಂತೆಯೇ ವೇದಿಕೆಯಲ್ಲಿರುವ ನಾಲ್ಕು ರೈತ ಮುಖಂಡರ ಕೊಲೆ ಮಾಡುವಂತೆ ತನಗೆ ಸೂಚಿಸಲಾಗಿತ್ತು ಎಂದಿದ್ದನಾತ.
ಇದನ್ನೂ ಓದಿ: Farmer Protest: ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿರುವ ರಾಹುಲ್, ಕೇಜ್ರಿವಾಲ್: ಸಾಕ್ಷ್ಯಾಧಾರ ಸಮೇತ ನೈಜಮುಖ ಬಟಾಬಯಲು
ಗಮನಿಸಬೇಕಾದ ಅಂಶವೆಂದರೆ, ಈ ಆರೋಪಿ ಹುಡುಗ ಇದನ್ನು ಹೇಳಲು ಮರೆತಾಗ, ಪತ್ರಿಕಾಗೋಷ್ಠಿಯಲ್ಲಿ ಪಕ್ಕದಲ್ಲೇ ಇದ್ದ ರಾಕೇಶ್ ಟಿಕಾಯತ್ ಎಂಬ ರೈತ ಮುಖಂಡರೊಬ್ಬರು ಆತನಿಗೆ ಅದನ್ನು ನೆನಪಿಸಿದರು!
ಹೀಗಾಗಿ ಬಂಧಿತನಿಗೆ ರೈತರು ಚೆನ್ನಾಗಿ ಪಾಠ ಮಾಡಿ ಕರೆತಂದಿದ್ದಾರೆ ಎಂಬ ಶಂಕೆ ಹೆಚ್ಚಲು ಕಾರಣವಾಗಿದೆ. ಈ ಶಂಕೆಗೆ ಪುಷ್ಟಿಯಾಗಿ ಇದೇ ಮುಸುಕುಧಾರಿ ವ್ಯಕ್ತಿಯ ಮತ್ತೊಂದು ವಿಡಿಯೊ ಕಾಣಿಸಿಕೊಂಡಿದೆ.
ಅದರಲ್ಲಿ, ರೈತರು ತನಗೆ ಚಿತ್ರ ಹಿಂಸೆ ನೀಡಿ, ಪೊಲೀಸರ ವಿರುದ್ಧ ಆರೋಪ ಮಾಡುವಂತೆ ಒತ್ತಾಯ ಹೇರಿದರೆಂದು ಹೇಳಿರುವ ಸನ್ನಿವೇಶವಿದೆ. ಅದರ ಪ್ರಕಾರ ಈ ಯುವಕನ ಹೆಸರು ಯೋಗೇಶ್ ಸಿಂಗ್. ಪೊಲೀಸರ ವಿರುದ್ಧ ಸುಳ್ಳು ಹೇಳಿಕೆ ನೀಡದಿದ್ದರೆ, ತನ್ನನ್ನು ಕೊಲ್ಲುವುದಾಗಿಯೂ ರೈತರು ಬೆದರಿಸಿದ್ದರು ಎಂದಾತ ಹೇಳಿಕೊಂಡಿದ್ದಾನೆ.
ಇನ್ನೂ ಆಸಕ್ತಿದಾಯಕ ಸಂಗತಿಯೆಂದರೆ, ಪೊಲೀಸರು ಈ ಯುವಕನನ್ನು ವಿಚಾರಣೆಗಾಗಿ ಕರೆದೊಯ್ಯುವ ಹಂತದಲ್ಲಿ, ಪೊಲೀಸರಿಗೆ ಒಪ್ಪಿಸಲು ರೈತರು ಹಿಂಜರಿಕೆ ತೋರಿದ್ದರು. ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ, ಆತನನ್ನು ಕೆಟ್ಟದಾಗಿ ನಡೆಸಿಕೊಳ್ಳಬೇಡಿ ಎಂದೂ ಪೊಲೀಸರಲ್ಲಿ ವಿನಂತಿಸಿದ್ದರು. ಹೀಗಾಗಿ, ‘ರೈತರನ್ನು ಕೊಲ್ಲುವ’ ಥಿಯರಿ ಎಷ್ಟರ ಮಟ್ಟಿಗೆ ನಿಜ ಎಂಬುದು ಪ್ರಶ್ನಾರ್ಥವಾಗಿಯೇ ಉಳಿದಿದೆ.

Average Rating