Read Time:12 Minute, 10 Second

Republic Day Tractor Rally: 3 ಲಕ್ಷ ಟ್ರ್ಯಾಕ್ಟರ್, 30 ಲಕ್ಷ ಲೀಟರ್ ಡೀಸೆಲ್, ಒಂದೇ ದಿನಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ: ಹಣವೆಲ್ಲಿಂದ?

0 0
ಕೋವಿಡ್ ಸಂಕಷ್ಟ ಕಾಲದಲ್ಲಿ ಇಡೀ ದೇಶವೇ ಕೇಂದ್ರಕ್ಕೆ ಬೆಂಬಲಿಸಬೇಕಿತ್ತು. ಇದರ ಬದಲು ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳಿಂದ ಇದೆಂಥಾ ಐಷಾರಾಮಿ ಪ್ರತಿಭಟನೆ?

ಇಡೀ ಭಾರತವೇ ಹೆಮ್ಮೆ ಪಡುವ 72ನೇ ಗಣರಾಜ್ಯೋತ್ಸವ ಹಬ್ಬದಲ್ಲಿ ನಿರತವಾಗಿರುವಾಗ, ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕಾಗಿ, ಮಧ್ಯವರ್ತಿಗಳನ್ನು ಹಣಿಯಲು ಜಾರಿಗೊಳಿಸಿದ ಕಾಯ್ದೆಯನ್ನೇ ‘ರೈತರ’ ಹೆಸರಿನಲ್ಲಿ ವಿರೋಧಿಸುತ್ತಿರುವ ಪ್ರತಿಭಟನಾಕಾರರು, ಪೊಲೀಸರೊಂದಿಗಿನ ಒಪ್ಪಂದವನ್ನೆಲ್ಲಾ ಮುರಿದು ದೇಶದ ರಾಜಧಾನಿಯಲ್ಲಿ ಕಿಚ್ಚು ಹಚ್ಚಿರುವುದು ಆಘಾತಕಾರಿ.

ರೈತರ ಹೆಸರಿನಲ್ಲಿ ನರೇಂದ್ರ ಮೋದಿ ವಿರುದ್ಧ ಮತ್ತು ಭಾರತದ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನವೊಂದು ನಡೆಯುತ್ತಿದ್ದು, ಇದಕ್ಕೆ ತಾವೇನು ಮಾಡುತ್ತಿದ್ದೇವೆಂಬ ಅರಿವಿಲ್ಲದ ಮುಗ್ಧ ರೈತರು ಬಲಿಯಾಗುತ್ತಿದ್ದಾರೆ. ‘ನಿಮ್ಮ ಸರ್ವನಾಶವಾಗುತ್ತದೆ, ಮೋದಿ ವಿರುದ್ಧ ಪ್ರತಿಭಟಿಸಿ’ ಎಂಬ ಸುಳ್ಳು ಪ್ರಚಾರಕ್ಕೆ ಮಾರುಹೋದ ಕೆಲವು ರೈತರು ಮತ್ತು ರೈತರ ಹೆಸರಿನಲ್ಲಿ ದೆಹಲಿ ಸುತ್ತ ಮುತ್ತ ಪ್ರತಿಭಟನೆ ನಡೆಸುತ್ತಿರುವವರಿಂದಾಗಿ ದೇಶದಾದ್ಯಂತ ಕ್ಷೋಭೆ ಹೆಚ್ಚಿದೆ.

ಕೋವಿಡ್ ಸಂಕಷ್ಟ ಕಾಲದಲ್ಲಿ ಇಡೀ ದೇಶಕ್ಕೆ ದೇಶವೇ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕಾದ ಪರಿಸ್ಥಿತಿ ಇದ್ದರೂ, ಇಡೀ ಜಗತ್ತೇ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಕೊಂಡಾಡುತ್ತಿರುವಾಗ, ಏಳು ದಶಕಗಳ ಕಾಲ ದೇಶವಾಳಿ ರೈತರನ್ನು ಹೀನಾಯ ಸ್ಥಿತಿಗೆ ತಂದೊಡ್ಡಿದ್ದ ಕಾಂಗ್ರೆಸ್ ಪಕ್ಷವು ಮೋದಿ ವಿರುದ್ಧ ರೈತರನ್ನು ಎತ್ತಿ ಕಟ್ಟುತ್ತಿರುವುದನ್ನು ನೋಡಿದಾಗ ಯಾವುದೇ ದೇಶಪ್ರೇಮಿಗೂ ಮೈ ಉರಿಯಬಹುದು.

ಹೋದಲ್ಲಿ ಬಂದಲ್ಲಿ, ಪ್ರಜೆಗಳ ಕ್ಷೇಮಕ್ಕಾಗಿ, ಅಭಿವೃದ್ಧಿಗಾಗಿ ಮತ್ತು ಮಧ್ಯವರ್ತಿಗಳ ಕಾಟ ತಪ್ಪಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಕಾನೂನುಗಳ ಬಗ್ಗೆ ಎಲ್ಲ ರೀತಿಯ ಅಪಪ್ರಚಾರಗಳನ್ನು ಸೃಷ್ಟಿಸುತ್ತಾ, ಏನೂ ಅರಿಯದ ಮುಗ್ಧರ ದಾರಿ ತಪ್ಪಿಸಲಾಗುತ್ತಿದೆ. ಇದುವರೆಗೆ ಓಟಿನ ಬ್ಯಾಂಕಾಗಿ ಮಾಡಿಕೊಂಡು, ಅವರನ್ನು ಕಲಿತು ಬೆಳೆದರೆ ತಮ್ಮ ಬೇಳೆ ಬೇಯಲಾರದು ಎಂದು ತಿಳಿದೇ, ಅವರನ್ನೆಲ್ಲಾ ಶಿಕ್ಷಣ ವಂಚಿತರನ್ನಾಗಿ ಮಾಡಲಾಗಿದೆಯೇ ಎಂಬ ಶಂಕೆ ಮೂಡುವಷ್ಟರ ಮಟ್ಟಿಗೆ ದೀರ್ಘ ಕಾಲ ದೇಶವಾಳಿದ್ದ ಪಕ್ಷವೊಂದು ನಡೆದುಕೊಂಡಿರುವುದು ಅದಕ್ಕೇ ನಾಚಿಕೆಗೇಡು ಎನ್ನದೇ ವಿಧಿಯಿಲ್ಲ.

ಇದನ್ನೂ ಓದಿ: ಕೋವಿಡ್ ಸಂಕಷ್ಟದ ನಡುವೆ ರೈತರ ವೃಥಾ ಪ್ರತಿಭಟನೆಯಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತೇ? 70 ಸಾವಿರ ಕೋಟಿ!

ಪ್ರತಿಭಟನೆಯು ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಕಳಶಪ್ರಾಯ ಎಂಬ ಅರಿವಿದ್ದ ಮೋದಿ ಸರ್ಕಾರ, ಅವರಿಗೆ ಯಾವುದೇ ರೀತಿ ಅಡ್ಡಿ ಮಾಡಲಿಲ್ಲ. ಬದಲಾಗಿ, ಪ್ರತಿಭಟಿಸುತ್ತಿರುವ ರೈತರನ್ನು ಹತ್ತು ಬಾರಿ ಮಾತುಕತೆಗೆ ಕರೆದು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿತ್ತು. ರೈತರ, ಕೃಷಿ ಉತ್ಪನ್ನದ ಉದ್ಧಾರಕ್ಕಾಗಿಯೇ ಈ ಕಾಯ್ದೆ ಇದೆ ಎಂದು ಎಷ್ಟೇ ಮನವರಿಕೆ ಮಾಡಲು ಪ್ರಯತ್ನಿಸಿದರೂ, ಈ ರೈತರ ಹೆಸರಿನಲ್ಲಿ ಪ್ರತಿಭಟಿಸುತ್ತಿರುವವರು ಒಂದೇ ರಾಗ. ‘ಕೃಷಿ ಕಾಯ್ದೆ ರದ್ದುಪಡಿಸಿ’ ಅಂತ ತಮ್ಮನ್ನು ನಿಯಂತ್ರಿಸುತ್ತಿರುವವರು ಹೇಳಿಕೊಟ್ಟ ಮಾತುಗಳನ್ನಷ್ಟೇ ಅವರು ಉಸುರುತ್ತಿದ್ದಾರೆ ಎಂದರೆ, ಎರಡು ತಿಂಗಳ ಕಾಲ ಒಂದು ದೇಶದ ಆಳ್ವಿಕೆಯ ವಿರುದ್ಧ ದಂಗೆ ಏಳುವ ಈ ಕ್ರಮ ಏನನ್ನು ಸೂಚಿಸುತ್ತದೆ?

ಎರಡು ತಿಂಗಳ ಕಾಲ ಈ ಪರಿಯಾಗಿ ತಮ್ಮೆಲ್ಲ ಕೃಷಿ ಚಟುವಟಿಕೆಗಳನ್ನು ಬಿಟ್ಟು ಪ್ರತಿಭಟಿಸುವುದು ರೈತರಿಗೆ ಸಾಧ್ಯವೇ? ಅಥವಾ ಇದೇ ಮೋದಿ ಸರ್ಕಾರವು ರೈತರ ಖಾತೆಗೆ ನೇರವಾಗಿ ಹಣ ವರ್ಗಾಯಿಸುತ್ತಾ ತಪ್ಪು ಮಾಡುತ್ತಿದೆಯೇ? ನಿಜವಾದ ರೈತರು ತಮ್ಮ ಪರವಾಗಿರುವ ಕಾಯ್ದೆ ವಿರುದ್ಧ, ತಮ್ಮ ಜೀವನಾಧಾರವಾದ ಕೃಷಿಯನ್ನೇ ದೂರ ತಳ್ಳಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾ ಜೀವನ ನಡೆಸುವುದು ಸಾಧ್ಯವೇ?

ಅದಿರಲಿ, ದೇಶಕ್ಕೆ ದೇಶವೇ ಹೆಮ್ಮೆ ಪಡಬೇಕಾದ, ನಮ್ಮ ದೇಶದ ಹಿರಿಮೆ-ಗರಿಮೆಗಳನ್ನು ಎತ್ತಿಹಿಡಿಯುವ, ಭವ್ಯ ಗಣರಾಜ್ಯೋತ್ಸವದ ದಿನ, ನಮ್ಮ ದೇಶದ ಹೆಮ್ಮೆಯ ವೈವಿಧ್ಯಗಳನ್ನು ಸಂಭ್ರಮಿಸುವ ಬದಲು, 3 ಲಕ್ಷ ಟ್ರ್ಯಾಕ್ಟರ್ ತಂದು ರಾಜಧಾನಿಗೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ ಈ ತಥಾಕಥಿತ ರೈತರು. 3 ಲಕ್ಷ ಟ್ರ್ಯಾಕ್ಟರ್‌ಗಳಿಗೆ ಡೀಸೆಲ್ ಬೇಡವೇ? ಅದರಲ್ಲಿ ಕನಿಷ್ಠ ಐದೈದು ಮಂದಿ ಕುಳಿತರೂ ಸುಮಾರು 15 ಲಕ್ಷ ಮಂದಿಗೆ ಅನ್ನಾಹಾರ ಬೇಡವೇ? ಎಲ್ಲ ಟ್ರ್ಯಾಕ್ಟರ್‌ಗಳಿಗೆ ಕಟ್ಟುವುದಕ್ಕೆ ಧ್ವಜ, ಮೋದಿ ವಿರುದ್ಧ ಘೋಷಣೆಗಳುಳ್ಳ ಬ್ಯಾನರ್, ಬ್ಯಾರಿಕೇಡ್‌ಗಳನ್ನು ಮುರಿಯಲು ಆಯುಧ …. ಇವೆಲ್ಲವುಗಳೂ ಉಚಿತವಾಗಿ ದೊರೆಯುತ್ತವೆಯೇ?

ಈ ದೃಶ್ಯವನ್ನೇ ನೋಡಿದರೆ, ಇವರು ರೈತರು ಅನ್ನಿಸುತ್ತದೆಯೇ?

3 ಲಕ್ಷ ಟ್ರ್ಯಾಕ್ಟರ್‌ಗಳು ರಸ್ತೆಯಲ್ಲಿ ಬಂದರೆ, ದೆಹಲಿಯಲ್ಲಿ ಜಾಗ ಸಾಲಬಹುದೇ? ಈ ಪ್ರಶ್ನೆ ಕಾಡುತ್ತಲೇ ಇರುತ್ತದೆ.

ಆದರೂ, ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟು, ಶಾಂತಿಯುತವಾಗಿ ಪ್ರತಿಭಟಿಸಿ ಅಂತ ರೈತರು ಮತ್ತು ಸರ್ಕಾರದ ಮಧ್ಯೆ ಒಪ್ಪಂದವಾದ ಬಳಿಕವೂ ಬ್ಯಾರಿಕೇಡ್‌ಗಳನ್ನು ದೊಡ್ಡ ದೊಡ್ಡ ಹಾರೆ, ಪಿಕ್ಕಾಸಿ, ಗುದ್ದಲಿ, ಕಬ್ಬಿಣದ ರಾಡ್‌ಗಳನ್ನು ತಂದು ಮುರಿಯುವುದು, ಪೊಲೀಸ್ ವಾಹನದ ಮೇಲೇರಿ ಘೋಷಣೆ ಕೂಗುವುದು – ಇವೆಲ್ಲವೂ ಭಾರತೀಯ ರೈತರ ಸಂಸ್ಕಾರವೇ ಎಂದು ಜಗತ್ತೇ ಅಚ್ಚರಿಪಡಲಾರಂಭಿಸಿದೆ.

ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿಸಿದ್ದ ತೆಲಂಗಾಣಕ್ಕೀಗ ಜ್ಞಾನೋದಯ: ರೈತರು ಯಾರಿಗೂ ಮಾರಬಹುದೆಂದ ಸಿಎಂ ಚಂದ್ರಶೇಖರ ರಾವ್

ಹಿಂದೆ, ಘೋರಿ ಮಹಮದ್, ಘಜ್ನಿ ಮಹಮದ್ ಮುಂತಾದವರೆಲ್ಲಾ ದೆಹಲಿಯ ಮೇಲೆ ದಂಡೆತ್ತಿ ಬಂದು ಮುತ್ತಿಗೆ ಹಾಕಿದ್ದರು. ದೇಶದ ಸಂಸ್ಕೃತಿಯನ್ನು ಸರ್ವನಾಶ ಮಾಡಲು ಪ್ರಯತ್ನಿಸಿದ್ದರು. ಅವರ ವಂಶಸ್ಥರಾದ ಔರಂಗಜೇಬ, ಹುಮಾಯೂನ್, ಅಕ್ಬರ್ ಮುಂತಾದವರ ಪಾಠಗಳನ್ನಷ್ಟೇ ಓದುವಂತೆ ಮಾಡಿದ ಹಿಂದಿನ ಪ್ರಭುತ್ವಗಳು, ದೇಶದ ನಿಜವಾದ ಮಣ್ಣಿನ ಮಕ್ಕಳ ಹೋರಾಟವನ್ನೆಲ್ಲಾ ಪಠ್ಯದಿಂದ ಮುಚ್ಚಿಟ್ಟಿದ್ದವು ಎಂಬುದನ್ನು ಗಮನಿಸಬೇಕು. ರೈತರ ಹೆಸರಿನಲ್ಲಿ ವಿದೇಶೀ ಶಕ್ತಿಗಳು ಭಾರತವನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆಯೇ ಎಂಬ ಆತಂಕಕ್ಕೆ ಮೂಡುವುದಕ್ಕೆ ಕಾರಣವೆಂದರೆ, ಈ ಮುಗ್ಧ ರೈತರ ಹೆಸರಿನಲ್ಲಿ ದೆಹಲಿ ಸುತ್ತಮುತ್ತ ಮುತ್ತಿಗೆ ಹಾಕಲಾದ ದೃಶ್ಯಗಳು.

ಒಂದು ದೇಶದ ಆಳ್ವಿಕೆಯ ವಿರುದ್ಧ ರೈತರ ಹೆಸರಿನಲ್ಲಿ ಯಾರೋ ನಡೆಸುತ್ತಿರುವ ಪ್ರತಿಭಟನೆಯನ್ನು ನೋಡಿದರೆ ದೆಹಲಿಗೆ ಮುತ್ತಿಗೆ ಹಾಕಿ, ಮೋದಿ ಸರ್ಕಾರ ಉರುಳಿಸುವ ಏಕೈಕ ಉದ್ದೇಶವೂ, ಅದರ ಹಿಂದೆ ವಿದೇಶೀ ಶಕ್ತಿಗಳ ಕೈವಾಡವೂ ಇರಬಹುದಲ್ಲ ಎಂದು ಯೋಚನೆಗೀಡುಮಾಡುವ ಸಂಗತಿಯೇ.

ಉದಾಹರಣೆಗೆ, ಈ ಸಂದೇಶವೊಂದನ್ನು ಗಮನಿಸಿ.

ವಿಷಯ: 3 ಲಕ್ಷ ಟ್ರ್ಯಾಕ್ಟರ್‌ಗಳ ರ‍್ಯಾಲಿ
ದೂರ: 100 ಕಿ.ಮೀ.
ಸರಾಸರಿ: ಲೀಟರ್ ಡೀಸೆಲ್‌ಗೆ 10 ಕಿ.ಮೀ. ಮೈಲೇಜ್
ಡೀಸೆಲ್ ಬೆಲೆ: ಲೀಟರಿಗೆ ರೂ. 84
ಬೇಕಾಗಿರುವ ಅಂದಾಜು ಡೀಸೆಲ್: ಒಂದು ಟ್ರ್ಯಾಕ್ಟರ್‌ಗೆ 30 ಲೀಟರ್
ಒಟ್ಟು ಡೀಸೆಲ್: 30 ಲಕ್ಷ ಲೀಟರ್
ಒಟ್ಟು ಹಣ: 25.02 ಕೋಟಿ ರೂ.

ಹೀಗೆ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ದಂಗೆ ಏಳಲು ಬಡ ರೈತರು ಒಂದೇ ದಿನಕ್ಕೆ 25 ಕೋಟಿ ರೂ. ವ್ಯಯಿಸಬಹುದಾಗಿದ್ದರೆ, ಎರಡು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆಯ ಒಟ್ಟು ಖರ್ಚು ಎಷ್ಟಿರಬಹುದು?

ಇಷ್ಟೇ ಡೀಸೆಲ್, ಇಷ್ಟೇ ಟ್ರ್ಯಾಕ್ಟರುಗಳನ್ನು ಹೊಲದಲ್ಲಿ ಉಪಯೋಗಿಸಿದರೆ, ಪಂಜಾಬಿನ 11 ಲಕ್ಷ ರೈತರ ಕುಟುಂಬಕ್ಕೆ ಇಡೀ ವರ್ಷಕ್ಕೇ ಸಾಕಾಗುವಷ್ಟು ಆಹಾರ ಸಿಗುತ್ತಿತ್ತು!

ಇದನ್ನೂ ಓದಿ: Farmer Protest: ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿರುವ ರಾಹುಲ್, ಕೇಜ್ರಿವಾಲ್: ಸಾಕ್ಷ್ಯಾಧಾರ ಸಮೇತ ನೈಜಮುಖ ಬಟಾಬಯಲು

ಇದನ್ನು ಗಮನಿಸಿದರೆ, ಕೃಷಿ ಮಾರುಕಟ್ಟೆಯ ಮಧ್ಯವರ್ತಿಗಳು ಅಥವಾ ಬ್ರೋಕರ್‌ಗಳು ಅಥವಾ ಆಡತಿಯಾಗಳ (ಪಂಜಾಬಿ ಭಾಷೆಯಲ್ಲಿ) ಕೈಯಲ್ಲಿ ಇನ್ನೂ ರೈತರನ್ನೇ ಸುಲಿಗೆ ಮಾಡಿದ ಕೋಟಿಗಟ್ಟಲೆ ಹಣ ಇದೆಯೆಂದಾಯಿತು. ಅಥವಾ ಇವರ ಹೋರಾಟಕ್ಕೆ ಬೇರೆ ದೇಶದ ಸರ್ಕಾರಗಳು (ವಿಶೇಷವಾಗಿ ಭಾರತವನ್ನು ಕಾಲುಕೆರೆದು ಜಗಳಕ್ಕೆ ಎಳೆಯುತ್ತಿರುವ ಚೀನಾ, ಪಾಕಿಸ್ತಾನ) ಇಲ್ಲವೇ ಭಾರತವನ್ನು ಒಡೆಯಲು ಯತ್ನಿಸುತ್ತಿರುವ ಖಲಿಸ್ತಾನಿ ಮುಂತಾದ ಪ್ರತ್ಯೇಕತಾವಾದಿಗಳ ಕೈವಾಡ ಇರಬಹುದೇ?

ಒಂದೇ ದಿನ 30 ಲಕ್ಷ ಲೀಟರ್ ಡೀಸೆಲ್ ಸುಟ್ಟರೆ ಇಡೀ ದೆಹಲಿಯೇ ಮಾಲಿನ್ಯದಿಂದ ಚೇತರಿಸಿಕೊಳ್ಳಲು ಇನ್ನೆಷ್ಟು ವರ್ಷ ಬೇಕೋ?

ರೈತರ ಬಗ್ಗೆ ಸ್ವಯಂ ಕಾಳಜಿ ತೆಗೆದುಕೊಂಡ ಸುಪ್ರೀಂ ಕೋರ್ಟ್ ಕೂಡ ಒಂದು ಸಮಿತಿಯನ್ನು ರಚಿಸಿ, ರೈತರ ಸಮಸ್ಯೆ ಅರಿತುಕೊಂಡು ಪರಿಹಾರ ರೂಪಿಸಲು ಯತ್ನಿಸಿದೆ. ಭಾರತ ಸರ್ಕಾರವೂ ಮಾತುಕತೆ ನಡೆಸುತ್ತಿದೆ. ಆದರೂ, ಕಾಯ್ದೆ ರದ್ದುಪಡಿಸಿ ಎಂಬೊಂದೇ ನಿಲುವು ಬದಲಾಯಿಸಲು ರೈತರು ಸಿದ್ಧರಿಲ್ಲ ಎಂದಾದರೆ, ಕಾಯ್ದೆಯಿಂದಾಗಿ ಬೀದಿಗೆ ಬೀಳಲಿರುವ ಮಧ್ಯವರ್ತಿಗಳೇ ಇದನ್ನು ಮಾಡಿಸುತ್ತಿದ್ದಾರೆಯೇ?

ಇದರಿಂದ ರೈತರಿಗೆ ಯಾವುದೇ ರೀತಿಯಲ್ಲೂ ಹಾನಿಯಾಗುವುದಿಲ್ಲ, ಲಾಭವೇ ಹೆಚ್ಚು ಅಂತ ಸ್ವತಃ ಪ್ರಧಾನಿ ನರೇಂದ್ರ ಮೋದಿ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಭಾರತ ಸರ್ಕಾರದ ಎಲ್ಲ ಸಚಿವರು, ಅಧಿಕಾರಿಗಳು ಕೈಮುಗಿದು ರೈತರಿಗೆ ಭರವಸೆ ತುಂಬುತಿದ್ದರೂ, ತಮಗೇ ಲಾಭವಾಗುವ ಕಾಯ್ದೆಯ ವಿರುದ್ಧ ಹೋರಾಟವನ್ನು ತಥಾಕಥಿತ ರೈತರು ನಿಲ್ಲಿಸುವುದಿಲ್ಲ, ಕೋಟ್ಯಂತರ ರೂಪಾಯಿ ಪ್ರತಿಭಟನೆಗಾಗಿ ಸುರಿಯಲು ಸಿದ್ಧರಿದ್ದಾರೆ ಎಂದರೇನರ್ಥ? ಒಂದು ಕ್ಷಣ ಯೋಚಿಸಬೇಕಾದ ವಿಚಾರ. ಜೊತೆಗೆ, ಸರ್ಕಾರವೇ ರೈತರಿಗೆ ಹಾನಿ ಮಾಡುವುದಕ್ಕಾಗಿಯೇ ಕಾಯ್ದೆ ಜಾರಿಗೆ ತರುವುದು ಸಾಧ್ಯವೇ? ಇದೂ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ.

ಹಾಗಿದ್ದರೆ, ಈ ರೈತರ ಜೇಬಿಗೆ ಹಣ ಹಾಕುತ್ತಿರುವವರು ಯಾರು? ಇದೊಂದು ಮೋದಿ ವಿರುದ್ಧ, ಭಾರತದ ವಿರುದ್ಧ ನಡೆಯುತ್ತಿರುವ ‘ಪ್ರಾಯೋಜಿತ’ ಕಾರ್ಯಕ್ರಮವೆಂದು ಯಾವುದೇ ಜನಸಾಮಾನ್ಯ ಕೂಡ ಅರ್ಥ ಮಾಡಿಕೊಳ್ಳುವ ವಿಚಾರ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Farmer Protest | ಹತ್ಯೆ ಸಂಚು ಹೇಳಿಕೆ ನೀಡಲು ಯುವಕನಿಗೆ ತದುಕಿದ್ದ ರೈತರು: ಪೊಲೀಸರಿಂದ ಬಯಲು
Next post Tractor Rally | ದೆಹಲಿ ಪೊಲೀಸರ ತಾಳ್ಮೆಗೆ ಸಲಾಂ: ಹಿಂಸೆಯಲ್ಲಿ ತೊಡಗಿದವರು ರೈತರಲ್ಲ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ