ನವದೆಹಲಿ: ಭಾರತದ ತಾಳ್ಮೆಗೆ ತಕ್ಕ ಫಲ ಸಿಕ್ಕಿದೆ. ರೈತರ ಹಿತಕ್ಕಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಹೆಸರಿನಲ್ಲಿ ರಾಜಧಾನಿಯಲ್ಲಿ 72ನೇ ಗಣರಾಜ್ಯೋತ್ಸವದಂದು ನಡೆದ ಪ್ರತಿಭಟನೆಯ ಹಿಂಸಾಚಾರದಿಂದ ಇಡೀ ದೇಶವೇ ತಲೆ ತಗ್ಗಿಸುವಂತಾಗಿದೆ.
ರೈತರ ಪರವಾಗಿಯೇ ಇರುವ ಕಾನೂನನ್ನು ಅವರಿಗೆ ಮನವರಿಕೆ ಮಾಡಲು 11 ಬಾರಿ ಮಾತುಕತೆಗೆ ಕರೆಯಲಾಗಿದ್ದರೂ ಈ ಪ್ರತಿಭಟವೆ ಹಮ್ಮಿಕೊಳ್ಳಲಾಗಿತ್ತು. ನೇರವಾಗಿ ಭಾರತದ ಸಾರ್ವಭೌಮತೆಗೇ ಸವಾಲೊಡ್ಡಿದ ಈ ‘ರೈತ’ ಹೆಸರಿನ ಪ್ರತಿಭಟನಾಕಾರರ ಹಿಂದೆ ಯಾರ ಕೈವಾಡವಿದೆ ಎಂಬುದು ತನಿಖೆಯಿಂದ ತಿಳಿದುಬರಲಿದೆ.
ಇಷ್ಟೆಲ್ಲ ಆದರೂ, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಸಹಿತ ಅದರ ಮುಖಂಡರು, ಎಲ್ಲದಕ್ಕೂ ನರೇಂದ್ರ ಮೋದಿ ಸರ್ಕಾರವೇ ಹೊಣೆ ಎಂದು ದೂರುತ್ತಿದ್ದಾರೆ.
ಆದರೆ ‘ಅನ್ನದಾತ’ ಅಂತ ಕರೆದುಕೊಳ್ಳುವವರು ಈಗ ದಿಢೀರ್ ಆಗಿ ತೀವ್ರವಾದಿಗಳಾಗಿ ಬದಲಾಗಿದ್ದು ಹೇಗೆ ಎಂದು ಬಿಜೆಪಿ ಅಚ್ಚರಿ ವ್ಯಕ್ತಪಡಿಸಿದೆ.
ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಟ್ವಿಟರ್‌ನಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ, ಪ್ರತಿಭಟನಾಕಾರನೊಬ್ಬ ಭಾರತದ ಹೆಮ್ಮೆಯ, ಗೌರವದ ಮತ್ತು ಆತ್ಮಾಭಿಮಾನದ ಸಂಕೇತವಾಗಿರುವ ತ್ರಿವರ್ಣ ಧ್ವಜವನ್ನೇ ಎಸೆಯುವ ದೃಶ್ಯವಿದೆ. ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಲೆಂದು ಆತ ಕಂಬ ಹತ್ತಿದ್ದಾಗ, ಅದರಲ್ಲಿ ಹಾರಿಸಲು ಕೊಟ್ಟ ತ್ರಿವರ್ಣ ಧ್ವಜವನ್ನು ಉದ್ದೇಶಪೂರ್ವಕವಾಗಿ ದೂರ ತಳ್ಳಿ, ಬೇರೆ ಯಾವುದೋ ಧ್ವಜವನ್ನು ತೆಗೆದುಕೊಂಡು, ಕೆಂಪು ಕೋಟೆಯಲ್ಲಿ ಹಾರಿಸುತ್ತಾನೆ. ಇದು ಖಾಲಿಸ್ತಾನ್ ಉಗ್ರಗಾಮಿ ಸಂಘಟನೆಯ ಧ್ವಜ ಎಂಬ ಒಂದು ವಾದವಿದ್ದರೆ, ಮತ್ತೊಂದು ವಾದದ ಪ್ರಕಾರ, ಸಿಖ್ ಧರ್ಮೀಯರ ಧ್ವಜ. ಇಲ್ಲಿ ಹಿಂದೂ ಧರ್ಮದ ಪ್ರತೀಕವಾಗಿರುವ ಕೇಸರಿ ಧ್ವಜ (ಭಗವಾಧ್ವಜ) ಪ್ರತಿಷ್ಠಾಪಿಸಿದ್ದರೆ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳ ಪ್ರತಿಕ್ರಿಯೆ ಏನಿರುತ್ತಿತ್ತು ಎಂದು ಹಲವರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ತೀವ್ರ ದುಃಖಕರ ಎಂದು ಸಂಬಿತ್ ಪಾತ್ರ ಅವರು ವಿಡಿಯೊ ಹಂಚಿಕೊಂಡಿದ್ದಾರೆ. ಇಷ್ಟು ದಿನಗಳ ಕಾಲವೂ ಅನ್ನದಾತರೆಂದು ಕರೆಯಲ್ಪಡುತ್ತಿದ್ದವರೀಗ ಉಗ್ರಗಾಮಿಗಳಾಗಿ ಕರೆಸಿಕೊಳ್ಳುತ್ತಿದ್ದಾರೆ. ಅನ್ನದಾತರ ಹೆಸರು ಹಾಳು ಮಾಡಬೇಡಿ. ಉಗ್ರಗಾಮಿಗಳನ್ನು ಮಾತ್ರ ಉಗ್ರಗಾಮಿಗಳೆಂದೇ ಕರೆಯಿರಿ ಎಂದು ಸಂಬಿತ್ ಪಾತ್ರ ಬರೆದಿದ್ದಾರೆ.
ದೆಹಲಿ ಪೊಲೀಸರು ಹಾಗೂ ರೈತರ ಮಧ್ಯೆ ಜ.26ರ ಶಾಂತಿಯುತ ಪ್ರತಿಭಟನೆಗಾಗಿ ಮುನ್ನಾದಿನ ಒಪ್ಪಂದವೇರ್ಪಟ್ಟಿತ್ತು. ಆದರೆ, ಈ ಒಪ್ಪಂದವನ್ನು ರೈತರು ಮುರಿದು ದೆಹಲಿಗೆ ಲಗ್ಗೆ ಹಾಕಿದ್ದರು. ನಿಗದಿತ ಸಮಯಕ್ಕೆ ಮೊದಲೇ ಬಂದರಲ್ಲದೆ, ನಿಗದಿತ ಸ್ಥಳಕ್ಕೆ ಹೋಗಬೇಕು, ಟ್ರ್ಯಾಕ್ಟರ್ ಮಾತ್ರ ಇರಬೇಕು, ಅದಕ್ಕೆ ಟ್ರಾಲಿಗಳಿರಬಾರದು, ಭಾರತದ ಧ್ವಜ ಮಾತ್ರ ಇರಬೇಕು, ಬೇರೆ ಧಾರ್ಮಿಕ, ರಾಜಕೀಯ ಧ್ವಜಗಳಿರಬಾರದು, ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು – ಈ ರೀತಿಯ ಮುನ್ನೆಚ್ಚರಿಕೆಯ ಕ್ರಮಕ್ಕಾಗಿ ಷರತ್ತುಗಳನ್ನು ವಿಧಿಸಲಾಗಿತ್ತು ಮತ್ತು ರೈತರು ಇದಕ್ಕೆ ಒಪ್ಪಿಯೂ ಇದ್ದರು.
ಈ ಎಲ್ಲ ಒಪ್ಪಂದಗಳನ್ನು ಮುರಿಯಲಾಗಿತ್ತು. ಟ್ರ್ಯಾಕ್ಟರ್‌ಗಳಲ್ಲಿ ಆಯುಧಧಾರಿಗಳಾಗಿ ಬಂದಿದ್ದರು ‘ರೈತರು’. ಸ್ಟೀಲ್ ರಾಡು, ಖಡ್ಗ ಝಳಪಿಸಿ, ಪೊಲೀಸ್ ವಾಹನಗಳನ್ನು, ಸಾರ್ವಜನಿಕ ವಾಹನಗಳನ್ನು ಪುಡಿಗಟ್ಟುವ ದೃಶ್ಯಗಳು ಜಗತ್ತಿನಾದ್ಯಂತ ಪ್ರದರ್ಶನಗೊಂಡವು.
ಇಷ್ಟಲ್ಲದೆ, ಟ್ರ್ಯಾಕ್ಟರನ್ನೇ ಅಡ್ಡಾದಿಡ್ಡಿ ಓಡಿಸುತ್ತಾ ಪೊಲೀಸರ ಹತ್ಯೆಗೆ ಯತ್ನಿಸಲು ಬಳಸಿದ ದೃಶ್ಯವೂ ಕಂಡುಬಂತು. ಟ್ರ್ಯಾಕ್ಟರನ್ನೇ ದೆಹಲಿಯ ಬಸ್ಸಿಗೆ ಗುದ್ದಿಸಿ ಪುಡಿಗಟ್ಟಿದ ದೃಶ್ಯವೂ ಪ್ರಸಾರವಾಯಿತು.
ಅಡ್ಡಾದಿಡ್ಡಿ ಟ್ರ್ಯಾಕ್ಟರನ್ನು ವಿವೇಚನೆಯಿಲ್ಲದೆ ಅತಿವೇಗವಾಗಿ ಓಡಿಸಿದಾಗ ಒಂದು ಟ್ರ್ಯಾಕ್ಟರ್ ಉರುಳಿ, ಅದರ ಚಾಲಕ ಸಾವನ್ನಪ್ಪಿದ. ರೈತರನ್ನು ಪ್ರಚೋದಿಸುತ್ತಾ ಬೆಂಬಲಿಸುತ್ತಿರುವ ಪತ್ರಕರ್ತರು ಇದನ್ನು ತಮ್ಮ ಸುಳ್ಳು ಸುದ್ದಿ ಹರಡಲು ಬಳಸಿದರು.
ಪೊಲೀಸ್ ಗೋಲಿಬಾರ್‌ನಲ್ಲಿ ರೈತ ಮೃತಪಟ್ಟಿದ್ದಾನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಆತ ಟ್ರ್ಯಾಕ್ಟರಿನಡಿ ಅಪ್ಪಚ್ಚಿಯಾಗಿ ಸತ್ತಿದ್ದನಾದರೂ, ಆತನ ಮೇಲೆ ತ್ರಿವರ್ಣ ಧ್ವಜ ಹೊದಿಸಿ, ಧ್ವಜಕ್ಕೂ ಅಪಮಾನ ಮಾಡಲಾಯಿತು.
ವಿಚಿತ್ರವೆಂದರೆ, ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಎಬ್ಬಿಸಿ ಆಸ್ಪತ್ರೆಗೆ ಸೇರಿಸಲು ದೆಹಲಿ ಪೊಲೀಸರು ಎಲ್ಲ ಪ್ರಯತ್ನವನ್ನೂ ಮಾಡಿದರು. ಆದರೆ, ದೆಹಲಿ ಪೊಲೀಸರ ವಿರುದ್ಧವೇ ಮುಗಿಬಿದ್ದ ಈ ತಥಾಕಥಿತ ‘ರೈತ’ ಪ್ರತಿಭಟನಾಕಾರರು, ಅವರಿಗೆ ತಡಿಯೊಡ್ಡಿದರು. ಈ ಟ್ರ್ಯಾಕ್ಟರ್ ಚಾಲಕನ ಶವವನ್ನು ರೈತನೆಂದು ಬಿಂಬಿಸಿ, ಪರಿಸ್ಥಿತಿಯ ದುರ್ಲಾಭಕ್ಕೆ ಬಳಸಿಕೊಂಡರು.
ಸಕಾಲದಲ್ಲಿ ಆತ ಆಸ್ಪತ್ರೆ ಸೇರಿದ್ದರೆ ಬದುಕುಳಿಯುವ ಸಾಧ್ಯತೆಗಳಿದ್ದವು ಎಂದು ಟೈಮ್ಸ್ ನೌ ಸಹಿತ ಹಲವು ವಾಹಿನಿಗಳು ವರದಿ ಮಾಡಿದವು.
2021ರ ಜ.26 ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನವಾಯಿತು. ಅನ್ನದಾತ ‘ಕಿಸಾನ್’, ನಮ್ಮ ರಕ್ಷಕರಾದ ‘ಜವಾನ್’ರ ಮೇಲೆ ದಾಳಿ ಮಾಡಿದ. 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಈ ರೀತಿ ಗಲಭೆ ಮಾಡಿದವರನ್ನು ಭಯೋತ್ಪಾದಕರು ಅಂತಲೇ ಕರೆಯಬೇಕೇ ಎಂದು ಪ್ರಶ್ನಿಸಿದ್ದಾರೆ ಬಿಜೆಪಿ ವಕ್ತಾರ ಸಯ್ಯದ್ ಜಾಫರ್ ಇಸ್ಲಾಂ.
“ಎಂಥಾ ನಾಚಿಕೆಗೇಡಿನ ಸಂಗತಿಯಿದು. ನಮ್ಮ ವೀರ ಪೊಲೀಸರು ಈ ಗುಂಪು ಗಲಭೆಯಲ್ಲಿ ಸಾವನ್ನಪ್ಪುವುದನ್ನು ತಪ್ಪಿಸಿಕೊಳ್ಳಲು ಗೋಡೆಯಿಂದ ಕೆಳಗೆ ಹಾರಬೇಕಾಯಿತಲ್ಲಾ! ಇಷ್ಟು ದೊಡ್ಡ ಮಟ್ಟಿನಲ್ಲಿ ‘ರೈತ ಹೆಸರಿನ ಪ್ರತಿಭಟನಾಕಾರರು’ ಆಕ್ರೋಶದಿಂದ ಗಲಭೆ ಮಾಡುತ್ತಾ, ಕೊಲ್ಲಲು ಬರುತ್ತಿದ್ದರೂ ದೆಹಲಿ ಪೊಲೀಸರು ತೋರಿದ ಸಂಯಮ ಮೆಚ್ಚಬೇಕಾಗಿದ್ದೇ. ಈ ಗುಂಪನ್ನು ನೀವು ಪ್ರತಿಭಟನಾ ನಿರತ ರೈತರು ಅಂತ ಕರೆಯುತ್ತೀರಾ? ಅಥವಾ ಸಮಾಜದ್ರೋಹಿ ಅಥವಾ ದೇಶ ದ್ರೋಹಿ ಶಕ್ತಿಗಳು ಇಲ್ಲವೇ ಭಯೋತ್ಪಾದಕರು ಅಂತ ಕರೆಯುತ್ತೀರಾ? ನೀವೇ ನಿರ್ಧರಿಸಿ” ಅಂತ ಅವರು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ಬಿಜೆಪಿ ಮುಖಂಡ ಅಮಿತ್ ಮಾಳವೀಯ ಟ್ವೀಟ್ ಮಾಡಿ, ‘ದೆಹಲಿ ಬೀದಿಗಳಲ್ಲಿ ರೈತರ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲು ಬಂದಿರುವ ಇವರಿಗೂ ಕೃಷಿ ಕಾನೂನುಗಳಿಗೆ ಮತ್ತು ರೈತರಿಗೆ ಸಂಬಂಧವೇ ಇಲ್ಲ’ ಎಂದಿದ್ದಾರೆ.
‘ಇದು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರದ ವಿರುದ್ಧ ನಡೆದಿರುವ ದಂಗೆ. ಈ ಸರ್ಕಾರವನ್ನು ಚುನಾಯಿಸಿದ ನಾವು ಎಚ್ಚೆತ್ತುಕೊಳ್ಳದೇಹೋದರೆ, ಮುಂದಿನ ಗುರಿ ನಾವೇ ಆಗುತ್ತೇವೆ’ ಎಂದವರು ಟ್ವೀಟ್ ಮಾಡಿದ್ದಾರೆ.
ಅಂತೂ, ಭಾರತದ ಶಕ್ತಿ ಕೇಂದ್ರವಾಗಿರುವ, ಭಾರತದ ಸಾರ್ವಭೌಮತೆಯ ಪ್ರತೀಕವಾಗಿರುವ ಮತ್ತು ರಾಷ್ಟ್ರಪತಿ, ಪ್ರಧಾನಿಗಳಷ್ಟೇ ಭಾರತದ ತ್ರಿವರ್ಣ ಧ್ವಜವನ್ನು ರಾರಾಜಿಸುವಂತೆ ಮಾಡಬಹುದಾಗಿದ್ದ ಕೆಂಪು ಕೋಟೆಯಲ್ಲಿ ಅನ್ಯ ಧರ್ಮದ ಧ್ವಜವೊಂದು ಹಾರಾಡುವಂತೆ ಮಾಡುವ ಮೂಲಕ ಜಗತ್ತೇ ಈ ‘ರೈತರ ಹೆಸರಿನ’ ಪ್ರತಿಭಟನೆಯ ಹಿಂದಿನ ಹುನ್ನಾರವನ್ನು ತಿಳಿದುಕೊಂಡಿತು. ತ್ರಿವರ್ಣ ಧ್ವಜಕ್ಕೆ, ಭಾರತದ ಹೆಗ್ಗಳಿಕೆಗೆ ಅವಮಾನವಾಯಿತು.
ಜೊತೆಗೆ, ಹಲವು ಎಡಬಿಡಂಗಿಗಳ, ದೇಶ ವಿರೋಧಿಗಳ ಮುಖವೂ ಬೆತ್ತಲಾಯಿತು.

Average Rating