ನವದೆಹಲಿ: ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವರೂ, ಸಂಸದೀಯ ವ್ಯವಹಾರಗಳ ಖಾತೆ ಸಚಿವರೂ ಆಗಿರುವ ವಿ.ಮುರಳೀಧರನ್ ಅವರ ಮೇಲೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ನ ಕಾರ್ಯಕರ್ತರು ಗುರುವಾರ ದಾಳಿ ನಡೆಸಿದ್ದಾರೆ.
ಚುನಾವಣೋತ್ತರ ಕಾಲದಲ್ಲಿ ಟಿಎಂಸಿ ಗೂಂಡಾಗಳ ದಾಳಿಯಿಂದಾಗಿ ಬಿಜೆಪಿಯ 12ಕ್ಕೂ ಹೆಚ್ಚು ಮಂದಿ ಕೊಲೆಯಾಗಿದ್ದಾರಲ್ಲದೆ, ಬಿಜೆಪಿ ಕಾರ್ಯಕರ್ತರು, ಬೆಂಬಲಿಗರ ಮನೆ, ಕಚೇರಿಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಲಾಗಿತ್ತು. ಇದೀಗ ಗುರುವಾರದ ಘಟನೆಯಲ್ಲಿ ಪಶ್ಚಿಮ ಮಿಡ್ನಾಪುರದಲ್ಲಿ ಕೇಂದ್ರ ಸಚಿವರ ಬೆಂಗಾವಲು ಪಡೆಯ ಮೇಲೂ ಟಿಎಂಸಿ ಗೂಂಡಾಗಳು ದಾಳಿ ನಡೆಸಿದ್ದಾರೆ.
ಈ ಕುರಿತು ಮುರಳೀಧರನ್ ಅವರು ವಿಡಿಯೊ ಸಹಿತವಾಗಿ ಸಾಕ್ಷ್ಯವನ್ನು ಟ್ವಿಟರ್ನಲ್ಲಿ ಹಂಚಿಕೊಂಡು, ಪಶ್ಚಿಮ ಬಂಗಾಳದ ಆಡಳಿತದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಈ ದೃಶ್ಯಗಳಲ್ಲಿ, ಟಿಎಂಸಿ ಕಾರ್ಯಕರ್ತರೆನ್ನಲಾದ ವ್ಯಕ್ತಿಗಳ ಗುಂಪೊಂದು ಬಡಿಗೆಗಳನ್ನು ಹಿಡಿದು ಕಾರಿನ ಗಾಜುಗಳನ್ನು ಪುಡಿ ಮಾಡುವುದನ್ನು ಕಾಣಬಹುದಾಗಿದೆ.
ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆಗೆ ಗ್ರಹಣ ಬಡಿದಿದೆ. ಕೇಂದ್ರ ಸಚಿವರ ಮೇಲೆಯೇ ದಾಳಿ ಆಗುತ್ತದೆಯೆಂದಾದರೆ, ಜನ ಸಾಮಾನ್ಯರ ಪರಿಸ್ಥಿತಿ ಅರ್ಥವಾಗುವಂಥದ್ದೇ ಎಂದು ಕೆಂಡ ಕಾರಿದ್ದಾರೆ.
ಮೇ 2ರಂದು ಚುನಾವಣೆ ಫಲಿತಾಂಶ ಹೊರಬಂದ ಬಳಿಕ, ಬಿಜೆಪಿಯು ರಾಜ್ಯದಲ್ಲಿ 77 ಸ್ಥಾನಗಳನ್ನು ಗೆದ್ದುಕೊಂಡಿರುವುದನ್ನು ಸಹಿಸದೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹಿಂಸಾಚಾರದಲ್ಲಿ ತೊಡಗಿದ್ದರು. ಆದರೆ, ತಮ್ಮ ಮೇಲೂ ದಾಳಿ ನಡೆದಿದೆ ಎಂದು ಟಿಎಂಸಿ ಕೂಡ ಪ್ರತ್ಯಾರೋಪ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ತೃಣಮೂಲ ಗೂಂಡಾಗಳಿಂದ ಹಿಂಸಾಚಾರ: ಬಿಜೆಪಿ ಕಾರ್ಯಕರ್ತರ ಕೊಲೆ, 11 ಸಾವು, ಮನೆ-ಕಚೇರಿ ಧ್ವಂಸ
ನಿಲ್ಲದ ಹಿಂಸಾಚಾರದಿಂದಾಗಿ ನೂರಾರು ಬಿಜೆಪಿ ಬೆಂಬಲಿಗರು ಜೀವಭಯದಿಂದ ರಾಜ್ಯ ತೊರೆದು ಅಸ್ಸಾಂನತ್ತ ಪಲಾಯನ ಮಾಡಿದ್ದಾರೆ.
ಈ ಹಿಂಸಾಚಾರದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ರಾಜ್ಯಪಾಲ ಜಗತಾಪ್ ಧನ್ಕರ್ ಅವರಿಂದ, ರಾಜ್ಯದ ಕಾನೂನು ಸ್ಥಿತಿಗತಿಯ ಕುರಿತು ವರದಿ ಕೇಳಿದೆ.
ಕೇಂದ್ರ ಗೃಹ ಸಚಿವಾಲಯವು ನಾಲ್ವರು ಸದಸ್ಯರ ತಂಡವೊಂದನ್ನು ನಿಯೋಜಿಸಿದ್ದು, ರಾಜ್ಯದ ಪರಿಸ್ಥಿತಿಯ ಪರಾಮರ್ಶೆಗೆ ಸೂಚಿಸಿದೆ.
ಇದನ್ನೂ ಓದಿ: ಮೋದಿ ವಿರೋಧಿಗಳು ಓದಲೇಬೇಕು: 140 ಕೋಟಿ ಮಂದಿಯನ್ನು ಮೋದಿ ರಕ್ಷಿಸಿದ್ದು ಹೀಗೆ!

Average Rating