ಕೋವಿಡ್ ನಿಯಂತ್ರಣ: ಕಾಂಗ್ರೆಸ್, ವಿರೋಧ ಪಕ್ಷಗಳು ಟೀಕೆಯಲ್ಲೇ ತೊಡಗಿದ್ದರೆ, ಮೋದಿ ಮಾಡಿದ್ದೇನು?
ನವದೆಹಲಿ: ಇಡೀ ಜಗತ್ತಿಗೆ ಬಡಿದಿರುವ ಕೋವಿಡ್ ಮಹಾಮಾರಿಯು ಕೇವಲ ಭಾರತಕ್ಕೆ ಮಾತ್ರವೇ ಬಂದಿದೆ ಎಂಬಂತೆ ವರ್ತಿಸುತ್ತಾ, ಜನರಿಗೆ ನೆರವು ನೀಡಿ, ಸರ್ಕಾರಕ್ಕೆ ಹೆಗಲು ಕೊಟ್ಟು ದೇಶದ ರಕ್ಷಣೆಗೆ ಕೈಜೋಡಿಸಬೇಕಿದ್ದ ವಿರೋಧ ಪಕ್ಷಗಳು ಸದಾ ಕಾಲ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸುತ್ತಾ ಕಾಲಾಯಾಪನೆ ಮಾಡುತ್ತಿವೆ.
ಕೋವಿಡ್ ಎರಡನೇ ಅಲೆಯು ಅಯಾಚಿತವಾಗಿ ಜೋರಾಗಿ ಬೀಸಿದೆ. ಲಾಕ್‌ಡೌನ್ ಮಾಡಿದರೂ ಟೀಕೆ, ಮಾಡದಿದ್ದರೂ ಟೀಕೆ; ಲಸಿಕೆ ವಿತರಿಸಿದರೂ ಟೀಕೆ, ವಿತರಿಸದಿದ್ದರೂ ಟೀಕೆ ಮಾಡುವ ಪ್ರತಿಪಕ್ಷಗಳ ಮಧ್ಯೆ, ವಿದೇಶದ ‘ಗಲ್ಫ್ ನ್ಯೂಸ್’ ಮಾಧ್ಯಮವು ಸತ್ಯಾಂಶವನ್ನು ಜಗತ್ತಿನ ಮುಂದಿಡಲು ಪ್ರಯತ್ನಿಸಿದೆ. ಅದರಲ್ಲಿ ಪ್ರಕಟವಾದ ಪ್ರಶ್ನೋತ್ತರ ಮಾದರಿಯ ವರದಿಯು, ನರೇಂದ್ರ ಮೋದಿ ಹಗಲು ರಾತ್ರಿಯೆನ್ನದೆ ದುಡಿಯುತ್ತಿರುವುದನ್ನು ನೋಡಲಾರದೆ ಒಳಗೊಳಗೇ ಬೇಯುತ್ತಿರುವ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳಿಗೆ ಚಾಟಿಯೇಟು ನೀಡಿದಂತಿದೆ. ಇದು ಗಲ್ಫ್ ನ್ಯೂಸ್ ಪತ್ರಿಕೆಯಲ್ಲಿ ಅಖಿಲೇಶ್ ಮಿಶ್ರಾ ಅವರು ಬರೆದಿರುವ ವಸ್ತುಸ್ಥಿತಿ ಲೇಖನ.
ಐಡೆಫೀ ಓದುಗರಿಗಾಗಿ ಗಲ್ಫ್ ನ್ಯೂಸ್ ವಿಶೇಷ ವರದಿಯ ಸಾರಾಂಶ ಇಲ್ಲಿದೆ:
ಚೀನಾದ ಕೋವಿಡ್ ವೈರಸ್‌ನ ಎರಡನೇ ಅಲೆಯು ಅನಿರೀಕ್ಷಿತವಾಗಿ ಭಾರತವನ್ನು ವ್ಯಾಪಿಸಿದ ಸಂದರ್ಭದಲ್ಲಿ ಎಲ್ಲರೂ ಭಾರತ ಸರ್ಕಾರವನ್ನೇ ಪ್ರಶ್ನಿಸುತ್ತಿದ್ದಾರೆ. ಇಂಥಹ ಕ್ಲಿಷ್ಟಕರ ಮತ್ತು ವಾಸ್ತವ ಸನ್ನಿವೇಶದಲ್ಲಿ, ಪರಿಸ್ಥಿತಿ ನಿಭಾಯಿಸಲು ಸರ್ಕಾರ ಕೈಕಟ್ಟಿ ಕುಳಿತಿತ್ತೇ ಅಥವಾ ಲಭ್ಯ ಸಂಪನ್ಮೂಲಗಳನ್ನೆಲ್ಲ ಕ್ರೋಡೀಕರಿಸಿ ಏನಾದರೂ ಕೆಲಸ ಮಾಡಿತೇ? ಬನ್ನಿ ಒಂದಿಷ್ಟು ತಿಳಿಯೋಣ.
ಕೋವಿಡ್ ಎರಡನೇ ಅಲೆಗೆ ಭಾರತ ಸಜ್ಜಾಗಿರಲಿಲ್ಲವೇ?
ಈ ಪ್ರಶ್ನೆಗೆ ಪ್ರಮುಖ ಕಾರಣವೆಂದರೆ, 2021ರ ಆರಂಭದಿಂದ ಮಾರ್ಚ್ 10ರವರೆಗೂ ದೇಶದಲ್ಲಿ ಸರಾಸರಿ 20 ಸಾವಿರ ಪ್ರಕರಣಗಳು ದಾಖಲಾಗುತ್ತಿತ್ತು ಮತ್ತು ಕೆಲವೊಮ್ಮೆ 10 ಸಾವಿರದಷ್ಟೂ ಇತ್ತು. ಇತರ ದೇಶಗಳಲ್ಲಿ 2020ರ ಅಕ್ಟೋಬರ್ ಹಾಗೂ ಡಿಸೆಂಬರ್ ಮಧ್ಯೆ ಎರಡನೇ ಅಲೆಯು ಬಾಧಿಸಿದ್ದರೆ, ಭಾರತದಲ್ಲಿ ಇದರ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ, ಬಹುಶಃ ಎರಡನೇ ಅಲೆಯು ಬಾಧಿಸಲಾರದು ಎಂಬ ಭಾವನೆ ಇಲ್ಲಿತ್ತು.
ಅದೂ ಎಷ್ಟರ ಮಟ್ಟಿಗೆ ಎಂದರೆ, ಈಗ ಕೇಂದ್ರವನ್ನು ಟೀಕಿಸುತ್ತಿರುವ ಇದೇ ಕೆಲವೊಂದು “ತಜ್ಞರು”, ಭಾರತದಲ್ಲೇಕೆ ಎರಡನೇ ಅಲೆ ಬಾಧಿಸಲಾರದು? ಭಾರತವು ಲಾಕ್‌ಡೌನ್-ಸೀಲ್‌ಡೌನ್ ಮುಂತಾದ ಕಠಿಣ ನಿಯಮಗಳನ್ನು ಸಡಿಲಿಸಬೇಕು, ಮಾಸ್ಕ್ ಕಡ್ಡಾಯ ಮಾಡಬಾರದು, ಶಾಲಾ-ಕಾಲೇಜುಗಳನ್ನು ತೆರೆಯಬೇಕು ಎಂದೆಲ್ಲಾ ಸರಣಿ ಸರಣಿ ಲೇಖನಗಳನ್ನು ಬರೆದರು. ಮಾತ್ರವೇ ಅಲ್ಲ, ವಿರೋಧ ಪಕ್ಷಗಳೂ ಬಹುತೇಕ ಈ ಅಭಿಪ್ರಾಯವನ್ನೇ ಸರ್ಕಾರದ ಮೇಲೆ ಹೇರತೊಡಗಿದ್ದವು. ಕರ್ನಾಟಕದಲ್ಲೇ ಶಾಲಾರಂಭಿಸುವಂತೆ, ಲಾಕ್‌ಡೌನ್ ಸಡಿಲಿಸುವಂತೆ ಇದೇ ವಿರೋಧ ಪಕ್ಷಗಳು ಆಗ್ರಹಿಸುತ್ತಿದ್ದವೆಂಬುದು ನೆನಪಾಯಿತೇ?
2021ರ ಫೆಬ್ರವರಿ 15ರಂದು ಅಂತರರಾಷ್ಟ್ರೀಯ ಮಾಧ್ಯಮವು (ಭಾರತವನ್ನು, ಮೋದಿ ಸರ್ಕಾರವನ್ನು ಸದಾ ನಿಂದಿಸುವ) “ಭಾರತದಲ್ಲಿ ಹೆಮ್ಮಾರಿ ಕೊನೆಗೂ ಕೊನೆಯಾಯಿತೇ” ಎಂದು ಲೇಖನದ ಮೂಲಕ ಪ್ರಶ್ನಿಸಿತು. ಅದೇ ರೀತಿ, ನ್ಯೂಯಾರ್ಕ್ ಟೈಮ್ಸ್, ವಾಲ್ ಸ್ಟ್ರೀಟ್ ಜರ್ನಲ್ ಮತ್ತಿತರ ಭಾರತವನ್ನು ಸದಾ ಹಳಿಯುತ್ತಿರುವ ಪತ್ರಿಕೆಗಳು ಕೂಡ, ಭಾರತವು ಬಹುತೇಕ ಬಚಾವ್ ಆಯಿತು ಎಂದೇ ಸುದ್ದಿ, ಲೇಖನಗಳನ್ನು ಪ್ರಕಟಿಸಿದವು.
ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಕಟ್ಟಿ ಕೂರಲಿಲ್ಲ. ಕೋವಿಡ್ ಸಂಖ್ಯೆ ಕಡಿಮೆ ಕಂಡ ಜನವರಿ, ಫೆಬ್ರವರಿ ಅವಧಿಯಲ್ಲಿ ಸರ್ಕಾರವು ವಿವಿಧ ರಾಜ್ಯ ಸರ್ಕಾರಗಳಿಗೆ ಕಳುಹಿಸಿದ್ದು 17 ತಿಳಿವಳಿಕೆ ಪತ್ರಗಳನ್ನು! ಕೊರೊನಾ ಕಡಿಮೆಯಾಯಿತು ಎಂದುಕೊಳ್ಳದಿರಿ, ಪರೀಕ್ಷೆಗಳನ್ನು ಹೆಚ್ಚಿಸಿರಿ, ಆರೋಗ್ಯ ಮೂಲಸೌಕರ್ಯವನ್ನು ಸರಿಪಡಿಸಿಕೊಳ್ಳಿ ಮತ್ತು ಯಾವುದೇ ಸಂದರ್ಭ ಬಂದರೂ ಸಿದ್ಧರಾಗಿರಿ ಎಂದು ಎಚ್ಚರಿಸುವ ಸುತ್ತೋಲೆಯಾಗಿತ್ತದು.
ದೈನಿಕ ಪ್ರಕರಣಗಳ ಸಂಖ್ಯೆ ಇನ್ನೂ 20 ಸಾವಿರ ಮೀರದಿದ್ದ ಅವಧಿಯಲ್ಲಿ, ಮಾರ್ಚ್ 17ರಂದು ಮೋದಿ ಎಲ್ಲ ಸಿಎಂಗಳ ಸಭೆ ಕರೆದು, ಎಚ್ಚರಿಕೆಯಿಂದ ಇರುವಂತೆ, ಮಾಸ್ಕ್, ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಿ, ವೈದ್ಯರನ್ನು ಸಜ್ಜುಗೊಳಿಸುವಂತೆ, ಸಮಸ್ಯೆಯಾದರೆ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಿಕೊಂಡು ಸಜ್ಜಾಗಿರುವಂತೆ ಸ್ವತಃ ಪ್ರಧಾನಿ ಸೂಚನೆ ನೀಡಿದರು.
ಆದರೆ, ಏನಾಯಿತು? ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರಿದವು. ಎರಡನೇ ಅಲೆ ಉದ್ಭವವಾಗಿದ್ದು ಎಂದು ಹೇಳಲಾಗುತ್ತಿರುವ ಮಹಾರಾಷ್ಟ್ರ, ಕೇರಳ, ದೆಹಲಿ, ಛತ್ತೀಸಗಢ, ಪಂಜಾಬ್ ಮತ್ತು ಕರ್ನಾಟಕ ಕೂಡ ನಿಧಾನ ಮಾಡಿದವು. ಅವರೆಲ್ಲರೂ ತಮ್ಮ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ಕಾರ್ಯತತ್ಪರವಾಗುವ ವೇಳೆಗೆ, ಎರಡನೇ ಅಲೆಯು ಜೋರಾಗಿ ಆವರಿಸಿಕೊಂಡಿತ್ತು.
ಕೋವಿಡ್ ಹೆಮ್ಮಾರಿಯ ಮಧ್ಯೆಯೇ ಚುನಾವಣೆ ನಡೆಸಿದ್ದೇಕೆ?
ಸಂವಿಧಾನದ ಪ್ರಕಾರ ಅವಧಿ ಮುಗಿದ ಬಳಿಕ ಹೊಸ ಸರ್ಕಾರ ಆಯ್ಕೆಯಾಗಲೇಬೇಕು. ಏನಾದರೂ ಸಂವಿಧಾನಕ್ಕೆ ತಿದ್ದುಪಡಿ ಮಾಡಿ, ನಿಯಮ ಬದಲಾಯಿಸಿದರೆ ಈ ರಾಜ್ಯಗಳು ಕೇಂದ್ರದ (ರಾಷ್ಟ್ರಪತಿ) ಆಳ್ವಿಕೆಯಲ್ಲೇ ಇರುತ್ತಿದ್ದವು. ಹೀಗಾಗಿದ್ದಲ್ಲಿ ಆ ರಾಜ್ಯಗಳ ಕೋವಿಡ್ ಸಂಕಷ್ಟವನ್ನು ಪರಿಣಾಮಕಾರಿಯಾಗಿ ತಡೆಯುವುದು ಸಾಧ್ಯವಿರಲಿಲ್ಲ ಮತ್ತು ಅದು ಪ್ರಜಾಪ್ರಭುತ್ವಕ್ಕೆ ವಿರುದ್ಧ ನಡೆಯೂ ಆಗುತ್ತಿತ್ತು. ಹಾಗಂತ, ಭಾರತದಲ್ಲಿ ಮಾತ್ರವೇ ಅಲ್ಲ ಚುನಾವಣೆಗಳು ನಡೆದದ್ದು. ಜಗತ್ತಿನ ಇತರೆಡೆಯೂ ಕೋವಿಡ್ ಕಾಲದಲ್ಲೇ ಚುನಾವಣೆಗಳು ನಡೆದಿವೆ.
ರ‍್ಯಾಲಿಗಳನ್ನಾದರೂ ತಡೆಯಬಹುದಿತ್ತಲ್ಲ? ಪ್ರಶ್ನೆಗೆ ಉತ್ತರ ಇಲ್ಲಿದೆ!
ಚುನಾವಣಾ ಸಮಾವೇಶಗಳನ್ನು ತಡೆಯಬಹುದಿತ್ತೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಬಿಜೆಪಿಯು ಚುನಾವಣಾ ಆಯೋಗಕ್ಕೆ ಈ ಮನವಿಯನ್ನೇ ಸಲ್ಲಿಸಿತ್ತು. ರ‍್ಯಾಲಿಗಳು ಬೇಡ, ಮಾಡಲೇಬೇಕಿದ್ದರೆ ವರ್ಚುವಲ್ ಪ್ರಚಾರ ಸಾಕು ಎಂದಿತ್ತು. ಆದರೆ, ಈ ಕ್ರಮವನ್ನು ಎಲ್ಲ ವಿರೋಧ ಪಕ್ಷಗಳೂ ಒಗ್ಗಟ್ಟಿನಿಂದ ವಿರೋಧಿಸಿದವು. ಬಿಜೆಪಿಯು ಹೆಚ್ಚು ಸಂಘಟಿತವಾಗಿದೆ, ಹೀಗಾಗಿ ಅದಕ್ಕೆ ಹೆಚ್ಚು ಲಾಭವಾಗುತ್ತದೆ ಎಂಬುದು ಅವುಗಳ ವಾದವಾಗಿತ್ತು. ಸಹಮತ ಮೂಡದೇ ಇದ್ದಾಗ, ಚುನಾವಣಾ ಆಯೋಗಕ್ಕೆ ಏನೂ ಮಾಡುವಂತಿರಲಿಲ್ಲ. ರ‍್ಯಾಲಿಗಳಿಗೆ ಅನುಮತಿ ನೀಡಲೇಬೇಕಾಯಿತು.
ಇದರಿಂದ ಎಲ್ಲ ರಾಜಕೀಯ ಪಕ್ಷಗಳೂ ಜೋರಾಗಿಯೇ ಅಬ್ಬರದ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದವು. ಎಲ್ಲ ರಾಜ್ಯಗಳಲ್ಲಿ ನಾ ಮೇಲು ತಾ ಮೇಲು ಅಂತ ಜನರನ್ನು ಸೇರಿಸಿದವು. ಕೇರಳದಲ್ಲಿ ರಾಹುಲ್ ಗಾಂಧಿ ವೇತೃತ್ವದಲ್ಲಿ ಭರ್ಜರಿ ರೋಡ್ ಶೋ ನಡೆಯಿತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಎಂದಿನಂತೆ ಭರ್ಜರಿ ಮೆಗಾ ರ‍್ಯಾಲಿಗಳನ್ನು ಆಯೋಜಿಸಿದರು. ಬಿಜೆಪಿ ಕೂಡ ತಾನು ಸ್ಫರ್ಧಿಸಿದ ಕ್ಷೇತ್ರಗಳಲ್ಲಿ ರ‍್ಯಾಲಿ ನಡೆಸಿತು.
ಆದರೆ ಗಮನಿಸಬೇಕಾದ ವಿಚಾರವೆಂದರೆ, ಈಗ ಕೊರೊನಾ ವೈರಸ್ ಕಾಟ ಹೆಚ್ಚಾಗಿರುವ ಮಹಾರಾಷ್ಟ್ರ, ಪಂಜಾಬ್, ಛತ್ತೀಸಗಢ, ದೆಹಲಿ ಅಥವಾ ಪಂಜಾಬ್‌ನಲ್ಲಿ ಚುನಾವಣೆಗಳೇ ಇರಲಿಲ್ಲ. ಮಾರ್ಚ್ ಅಂತ್ಯದಲ್ಲೇ ಕೋವಿಡ್ ಎರಡನೇ ಅಲೆ ಜೋರಾಗತೊಡಗಿತ್ತು ಈ ರಾಜ್ಯಗಳಲ್ಲಿ. ಹೀಗಾಗಿ, ಚುನಾವಣಾ ರ‍್ಯಾಲಿಯಿಂದಲೇ ಕೋವಿಡ್ ಹೆಚ್ಚಾಯಿತು ಎಂಬುದಕ್ಕೆ ಆಧಾರ ಇಲ್ಲ.
ಹರಿದ್ವಾರದ ಕುಂಭ ಮೇಳದ ಕಥೆ ಏನು?
ಹಿಂದೂಗಳು ಹರಿದ್ವಾರದಲ್ಲಿ ಕುಂಭ ಮೇಳದ ಹೆಸರಿನಲ್ಲಿ ಸೇರಿದ್ದರಿಂದಲೇ ಕೋವಿಡ್ ಹರಡಿತು ಎಂದು ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಗಲಾಟೆ ಎಬ್ಬಿಸಿದವು. ಆದರೆ, ಜನವರಿ ತಿಂಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರಿಂದಾಗಿಯೇ ಸಂತರು ಮತ್ತು ಸರ್ಕಾರಗಳು ಕುಂಭ ಮೇಳ ನಡೆಸುವ ತೀರ್ಮಾನಕ್ಕೆ ಬಂದಿದ್ದವು. ಪ್ರವೇಶಕ್ಕೂ ಬಿಗಿಯಾದ ನಿಯಮಗಳಿದ್ದವು. ಏಪ್ರಿಲ್ 1ರಂದು ಕುಂಭ ಮೇಳ ಆರಂಭವಾದಾಗ ಭಾರತದಲ್ಲಿ ದಿನಕ್ಕೆ 72 ಸಾವಿರ ಕೇಸುಗಳು ದಾಖಲಾಗುತ್ತಿದ್ದವು. ಇವುಗಳಲ್ಲಿ ಮಹಾರಾಷ್ಟ್ರ, ಛತ್ತೀಸಗಢ, ಪಂಜಾಬ್, ಕೇರಳ, ಕರ್ನಾಟಕ, ದೆಹಲಿ ಮತ್ತು ಪಂಜಾಬ್ ರಾಜ್ಯಗಳ ಪಾಲು ಶೇ.76. ಇವರ್ಯಾರಿಗೂ ಕುಂಭ ಮೇಳದ ಜೊತೆ ಸಂಬಂಧವಿರಲಿಲ್ಲ.
ಉತ್ತರಾಖಂಡದಲ್ಲಿ ಏಪ್ರಿಲ್ 1ರಂದು 293 ಕೇಸುಗಳಿದ್ದರೆ, ಏಪ್ರಿಲ್ 8ರಂದು 1100 ಕೇಸುಗಳು. ಆದರೆ, ದೇಶದಾದ್ಯಂತ ಕೋವಿಡ್ ಹೆಮ್ಮಾರಿಯ ಕಾಟ ಜೋರಾದಾಗ, ಸ್ವತಃ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸಿ, ಕುಂಭ ಮೇಳವನ್ನು ಅವಧಿಗೆ ಮೊದಲೇ ಮುಕ್ತಾಯಗೊಳಿಸುವಂತೆ ಕೋರಿದರು. ಸಾಧು ಸಂತರೂ ಇದಕ್ಕೆ ಎರಡು ಮಾತನಾಡದೆ ಒಪ್ಪಿಗೆ ಸೂಚಿಸಿದರು. ತಬ್ಲಿಗಿ ಸಮಾವೇಶದಂತಲ್ಲ ಎಂಬುದು ಗಮನದಲ್ಲಿರಲಿ. ಮನವಿ ಮಾಡಿದರೂ ಕೇಳದೆ ಸಮಾವೇಶ ಮಾಡುತ್ತಾ, ತೆರವುಗೊಳಿಸಲು ಬಂದ ಪೊಲೀಸರ ಮೇಲೆಯೇ ಉಗುಳುತ್ತಾ, ದೇಶಾದ್ಯಂತ ಓಡಾಡಿದ ತಬ್ಲೀಗಿಗಳು ಕೊರೊನಾ ಹರಡಿದ್ದು ಜನರ ಮನಸ್ಸಿನಿಂದ ಇನ್ನೂ ಹೋಗಿಲ್ಲ.
ಲಸಿಕೆ ನೀಡುವಿಕೆಯಲ್ಲೇನಾದರೂ ಎಡವಿತೇ ಸರ್ಕಾರ?
ದೇಶೀಯವಾಗಿ ತಯಾರಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ಗಳ ತುರ್ತು ಬಳಕೆಗೆ ಭಾರತವು ಅದಾಗಲೇ ಅನುಮತಿ ನೀಡಿಯಾಗಿತ್ತು. ಕೋವ್ಯಾಕ್ಸಿನ್ ಸಂಪೂರ್ಣವಾಗಿ ಸ್ವದೇಶಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಆಸಕ್ತಿ ತೆಗೆದುಕೊಂಡು, ಸರ್ಕಾರದ ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಕಂಪನಿಗಳು ಒಟ್ಟು ಸೇರಿ ಈ ಲಸಿಕೆಯನ್ನು ದಾಖಲೆಯ ಸಮಯದಲ್ಲಿ ಅಭಿವೃದ್ಧಿಪಡಿಸಲಾಗಿತ್ತು.
ದೇಶದಲ್ಲೇ ತಯಾರಾದ ಕೋವ್ಯಾಕ್ಸಿನ್ ತೀರಾ ಕಡಿಮೆ ಬೆಲೆಗೆ ಸಿಗುತ್ತದೆ ಮತ್ತು ಇದರಿಂದಾಗಿ ತಮ್ಮ ‘ಏಳಿಗೆ’ ಬಯಸುವ ಚೀನಾದ ಕಂಪನಿಗಳಿಗೆ ಭಾರೀ ನಷ್ಟವಾಯಿತು ಎಂಬುದನ್ನು ಮನಗಂಡ ಕೆಲವು ವಿರೋಧ ಪಕ್ಷಗಳು, ಕೋವ್ಯಾಕ್ಸಿನ್ ವಿರುದ್ಧ ಅಪಪ್ರಚಾರ ಆರಂಭಿಸಿದವು. ದುರದೃಷ್ಟವೋ ಎಂಬಂತೆ ದೇಶದ ಬಗ್ಗೆ ಹೆಮ್ಮೆ ಪಡಬೇಕಾದ ಜವಾಬ್ದಾರಿಯುತ ಎಂದು ಹೇಳಲಾಗುತ್ತಿದ್ದ ನಾಯಕರೇ ಈ ಶಂಕೆಯ ಬೀಜ ಬಿತ್ತಿ ಬಿಟ್ಟರು. ಭಾರತವು ಜನವರಿ 16ರಂದು ಲಸಿಕೆ ಅಭಿಯಾನ ಆರಂಭಿಸಿದಾಗ, ವಿರೋಧ ಪಕ್ಷಗಳ ಅಪಪ್ರಚಾರ ಆಂದೋಲನದ ಪರಿಣಾಮವಾಗಿ ಜನರು ಲಸಿಕೆ ತೆಗೆದುಕೊಳ್ಳುವುದಕ್ಕೇ ಹಿಂಜರಿದರು.
ಇದನ್ನೂ ಓದಿ: ಕೋವಿಡ್ ಅಪಪ್ರಚಾರ ನಿಲ್ಲಿಸಿ: ಸೋನಿಯಾಗೆ ಬಿಜೆಪಿಯ ನಡ್ಡಾ ನೇರ ತಿರುಗೇಟು
ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಫೆ.2ರಿಂದ ಮುಂಚೂಣಿ ಕಾರ್ಯಕರ್ತರಿಗೆ, ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆರಂಭಿಸಲಾಯಿತು. ಜೊತೆಗೆ, 45 ಮೇಲ್ಪಟ್ಟ, ಕೆಲವೊಂದು ನಿರ್ದಿಷ್ಟ ಕಾಯಿಲೆಯಿದ್ದವರಿಗೂ ಲಸಿಕೆ ಲಭ್ಯವಾಗುವಂತೆ ಮಾಡಲಾಯಿತು. ಏಪ್ರಿಲ್ 1ರಿಂದ 45 ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ 18 ಮೇಲ್ಪಟ್ಟವರಿಗೂ ಲಸಿಕೆ ನೀಡಬಹುದೆಂದು ಘೋಷಿಸಲಾಯಿತು. ಇದುವರೆಗೆ ಭಾರತದಲ್ಲಿ 18 ಕೋಟಿಯಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಇದು ಜಗತ್ತಿನಲ್ಲೇ ಅತ್ಯಂತ ವೇಗದ ಲಸಿಕಾ ಪ್ರಯೋಗ ಅಭಿಯಾನ. 45 ಮೇಲ್ಪಟ್ಟ ಎಲ್ಲರಿಗೂ ಮತ್ತು ಕೇಂದ್ರ ಸರ್ಕಾರದ ಯೋಜನೆಯಡಿ 18-44 ವಯಸ್ಸಿನವರಿಗೂ ಉಚಿತವಾಗಿಯೇ ಲಸಿಕೆ ವಿತರಣೆ ಆರಂಭಿಸಲಾಯಿತು.
ಅಮೆರಿಕ, ಯುಕೆ, ಯೂರೋಪ್‌ನಲ್ಲಿ ಲಭ್ಯವಿದ್ದ ಲಸಿಕೆಗಳು ಮತ್ತು ರಷ್ಯಾದ ಸ್ಪುಟ್ನಿಕ್ ಲಸಿಕೆಗೂ ಅನುಮತಿ ನೀಡಲಾಯಿತು. ಈಗಾಗಲೇ ಈ ಲಸಿಕೆಗಳು ಭಾರತಕ್ಕೆ ಬರುವ ಹಾದಿಯಲ್ಲಿವೆ. ಸ್ಪುಟ್ನಿಕ್ ಈಗಾಗಲೇ ಬಂದಿದೆ.
ಹಾಗಿದ್ದರೆ ಭಾರತ ಲಸಿಕೆಯನ್ನೇಕೆ ರಫ್ತು ಮಾಡಿತು?
ಮೇ 11ರ ದಿನದವರೆಗೆ ಭಾರತವು 6.64 ಕೋಟಿ ಲಸಿಕೆಯನ್ನು ವಿದೇಶಕ್ಕೆ ಕಳುಹಿಸಿದೆ. ಇದೇ ವೇಳೆಗೆ, ಇದರ ಮೂರು ಪಟ್ಟು ಲಸಿಕೆಯನ್ನು ಭಾರತದಲ್ಲೇ ನೀಡಲಾಗಿದೆ. ಇದರ ಜೊತೆಗೆ, ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾವಸ್ತು ತರಿಸಿಕೊಂಡ ರಾಷ್ಟ್ರಗಳ ಜೊತೆಗೆ ಮಾಡಿಕೊಂಡ ಒಡಂಬಡಿಕೆಯ ಅನುಸಾರ, ಆ ರಾಷ್ಟ್ರಗಳಿಗೂ ನಿರ್ದಿಷ್ಟ ಪ್ರಮಾಣದ ಲಸಿಕೆ ಒದಗಿಸಬೇಕೆಂಬುದು ಕರಾರು. ಇದಕ್ಕೆ ತಪ್ಪುವಂತಿರಲಿಲ್ಲ. ಅಷ್ಟೇ ಅಲ್ಲ, ಜಗತ್ತೇ ನರಳುವಾಗ ವಸುಧೈವ ಕುಟುಂಬಕಂ ಎಂದು ತಿಳಿದುಕೊಂಡಿರುವ ಭಾರತವು ಮಾನವೀಯ ನೆಲೆಯಲ್ಲಿ ಇತರ ದೇಶಗಳಿಗೆ ಸಹಾಯ ಮಾಡುವುದೇನೂ ಹೊಸದಲ್ಲ.
ಇದನ್ನೂ ಓದಿ: ಕೊರೊನಾ ವೈರಸ್ ಎಂಬ ಜೈವಿಕ ಅಸ್ತ್ರ?: ಚೀನಾದ ದುಷ್ಟತನಕ್ಕೆ ಸಾಕ್ಷಿ ಸಿಕ್ತು!
ಇದನ್ನು ಸ್ವತಃ ಅಮೆರಿಕ ಮತ್ತು ಫ್ರಾನ್ಸ್ ಅಧ್ಯಕ್ಷರೇ ಬಹಿರಂಗವಾಗಿ ಹೇಳಿಕೊಂಡಿದ್ದರು. ಕಳೆದ ವರ್ಷ ಇಡೀ ಜಗತ್ತಿಗೇ ಅಗತ್ಯವಿರುವಾಗ, ಭಾರತವು ಔಷಧಿ ಮತ್ತಿತರ ಸಾಮಗ್ರಿಗಳ ಮೂಲಕ ಜಗತ್ತಿಗೇ ಸಹಾಯ ಮಾಡಿತು. ಈಗ ಭಾರತಕ್ಕೆ ಸಹಾಯದ ಅಗತ್ಯವಿದೆ, ಹೀಗಾಗಿ ನಾವೂ ಅವರಿಗೆ ನೆರವಾಗೋಣ ಎಂದು ವಿದೇಶದ ಮುಖ್ಯಸ್ಥರೇ ಹೇಳಿದ್ದರು. ಆದರೆ, ಸ್ವದೇಶದ ವಿರೋಧ ಪಕ್ಷಗಳು ಮಾತ್ರ, ನೆರವಾಗುವ ಗೋಜಿಗೇ ಹೋಗಲಿಲ್ಲ. ಬದಲಾಗಿ ಪ್ರತಿಯೊಂದು ಹೆಜ್ಜೆಯನ್ನೂ ಟೀಕಿಸುತ್ತಾ, ದೇಶದ ಮಾನ ಕಳೆಯಲಾರಂಭಿಸಿದವು.
ವೈದ್ಯಕೀಯ ಮೂಲಸೌಕರ್ಯದಲ್ಲಿ ಸರ್ಕಾರ ಎಡವಿದೆಯೇ?
2020ರ ಮಾರ್ಚ್ ತಿಂಗಳಲ್ಲಿ ಪ್ರತ್ಯೇಕ (ಐಸೋಲೇಶನ್) ಬೆಡ್‌ಗಳ ಸಂಖ್ಯೆ 10,180. ಇಂದು ಅದರ ಸಂಖ್ಯೆ 16 ಲಕ್ಷಕ್ಕೂ ಹೆಚ್ಚು. ಇದೇ ಅವಧಿಯಲ್ಲಿ ಐಸಿಯು ಬೆಡ್‌ಗಳ ಸಂಖ್ಯೆ 2,168ರಿಂದ 92 ಸಾವಿರಕ್ಕೇರಿದೆ.
ವೈದ್ಯಕೀಯ ಆಮ್ಲಜನಕದ ಕೊರತೆಯು ಈಗಿನ ಸ್ಥಿತಿಗೆ ತಲುಪುವ ಮುನ್ನ ಭಾರತದಲ್ಲಿ ಅಗತ್ಯವಿದ್ದ ಆಕ್ಸಿಜನ್ ಪ್ರಮಾಣ 700 ಟನ್. ಕೆಲವೇ ದಿನಗಳಲ್ಲಿ ಈ ಅಗತ್ಯವು ದಿಢೀರನೇ 9 ಸಾವಿರ ಟನ್‌ಗೆ ಏರಿಕೆಯಾಯಿತು. ಅಂದರೆ ಶೇ.1200ರಷ್ಟು ಪಟ್ಟು! ಇದರ ಉತ್ಪಾದನಾ ಸವಾಲು ದೊಡ್ಡದೇ. ಅದಕ್ಕಿಂತಲೂ ದೊಡ್ಡ ಸವಾಲೆಂದರೆ, ಲಾಜಿಸ್ಟಿಕ್ಸ್. ಅಂದರೆ ಸಿಲಿಂಡರುಗಳು ಹಾಗೂ ವಿತರಣಾ ಸರಪಣಿ. ತೀರಾ ನೋವಿನ ದಿನಗಳು ಇವು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ತುರ್ತು ಕ್ರಮಗಳಿಂದಾಗಿ ಆಮ್ಲಜನಕದ ಕೊರತೆ ಕೆಲವೇ ದಿನಗಳಲ್ಲಿ ನಿಧಾನವಾಗಿ ತಗ್ಗುತ್ತಿದೆ.
ಇನ್ನು, ರೆಮ್‌ಡಿಸಿವಿರ್ ಔಷಧಿಯ ಉತ್ಪಾದನೆಯನ್ನು ಕೂಡ ತಿಂಗಳಿಗೆ 40 ಲಕ್ಷ ಸೀಸೆಗಳಿಂದ 1 ಕೋಟಿ ಸೀಸೆಗಳಿಗೆ ಏರಿಸಲಾಗಿದೆ.
ಇದನ್ನೂ ಓದಿ: ಚೀನಾ ವೈರಸ್: ಈಗ ಇಂಡಿಯನ್ ವೈರಸ್ ಎನ್ನುತ್ತಾ, ಮೋದಿ, ಭಾರತದ ಹೆಸರಿಗೆ ಮಸಿ ಬಳಿಯುವ ಅಂತರರಾಷ್ಟ್ರೀಯ ಸಂಚು
ವೈದ್ಯಕೀಯ ಸಿಬ್ಬಂದಿ ಕೊರತೆ ಸರಿದೂಗಿಸಲು, ಇಂಟರ್ನ್‌ಶಿಪ್‌ಗೆ ಬಂದಿರುವ ವೈದ್ಯ ವಿದ್ಯಾರ್ಥಿಗಳನ್ನು ಕೂಡ ನಿಯೋಜಿಸಲು ಕೇಂದ್ರ ಸರ್ಕಾರ ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ತಾವೇ ಮೇಲ್ವಿಚಾರಣೆ ನೋಡಿಕೊಂಡು ಆಮ್ಲಜನಕ, ವೈದ್ಯಕೀಯ ಸಾಮಗ್ರಿಗಳ ಪೂರೈಕೆಗೆ ಸಶಸ್ತ್ರ ಪಡೆಗಳನ್ನೂ ನಿಯೋಜನೆಯಾಗುವಂತೆ ನೋಡಿಕೊಂಡಿದ್ದಾರೆ. ಇದಕ್ಕೆ ಕಾರಣ, ಈ ಸಾಮಗ್ರಿಗಳ ದರೋಡೆಯ ಸಾಧ್ಯತೆ ಮತ್ತು ಅದನ್ನು ಕೂಡ ಸಕಾಲಕ್ಕೆ ತಲುಪದಂತೆ ಮಾಡಿ, ಸರ್ಕಾರದ ಮೇಲೆ ಗೂಬೆ ಕೂರಿಸುವ ಹುನ್ನಾರದ ಆತಂಕ.
ವಿವಿಧ ಪ್ರಮುಖ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆಗಾಗಿ ಪಿಎಂ ಕೇರ್ಸ್ ನಿಧಿಯಿಂದ ಹಣವನ್ನು ವಿನಿಯೋಗಿಸಲಾಗಿದೆ. ಈಗಾಗಲೇ ಅನುಮೋದಿಸಿದ 162 ಆಮ್ಲಜನಕ ತಯಾರಿಕಾ ಘಟಕಗಳ ಹೊರತಾಗಿ ಇನ್ನೂ 551 ಘಟಕಗಳ ಸ್ಥಾಪನೆಗೆ ತ್ವರಿತವಾಗಿ ಅನುಮತಿ ನೀಡಲಾಗಿದೆ. ಡಿಆರ್‌ಡಿಒ ಕೂಡ ಪಿಎಂ ಕೇರ್ಸ್ ನಿಧಿ ಬಳಸಿ 500 ವೈದ್ಯಕೀಯ ಆಮ್ಲಜನಕ ಘಟಕಗಳನ್ನು ಸ್ಥಾಪಿಸುತ್ತಿದೆ. ಒಟ್ಟಿನಲ್ಲಿ 1200 ಆಮ್ಲಜನಕ ಉತ್ಪಾದನಾ ಘಟಕಗಳು ಸಿದ್ಧವಾಗಿವೆ. ಇಷ್ಟೇ ಅಲ್ಲದೆ, ಅತ್ಯಾಧುನಿಕ ವೆಂಟಿಲೇಟರ್‌ಗಳು ಮತ್ತು ಡಿಆರ್‌ಡಿಒ ಅಭಿವೃದ್ಧಿಪಡಿಸಿದ 1.5 ಲಕ್ಷ ಆಮ್ಲಜನಕ ನಿಯಂತ್ರಣ ಯಂತ್ರಗಳನ್ನು ಖರೀದಿಸಲು ಕೂಡ ಪಿಎಂ ಕೇರ್ಸ್ ನಿಧಿ ಬಳಸಲಾಗಿದೆ.
ಇದನ್ನೂ ಓದಿ: ಮೋದಿ ವಿರೋಧಿಗಳು ಓದಲೇಬೇಕು: 140 ಕೋಟಿ ಮಂದಿಯನ್ನು ಮೋದಿ ರಕ್ಷಿಸಿದ್ದು ಹೀಗೆ!
ಇಷ್ಟೇ ಅಲ್ಲ, 80 ಕೋಟಿ ಜನರಿಗೆ ಉಚಿತ ಆಹಾರ ಹಾಗೂ ಪಡಿತರ ವಿತರಣೆಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಗಿದೆ.
ಇಷ್ಟೆಲ್ಲದರ ನಡುವೆಯೇ ಕೋವಿಡ್ ವಿರುದ್ಧ ಸಮರ್ಥವಾಗಿ ಹೋರಾಡಬಲ್ಲ, ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2-ಡಿಆಕ್ಸಿ-ಡಿ-ಗ್ಲುಕೋಸ್ (2ಡಿಜಿ)ಗೆ ಈಗಷ್ಟೇ ಅನುಮೋದನೆ ನೀಡಲಾಗಿದೆ. ಸೋಂಕಿನ ವಿರುದ್ಧ ಈ ಔಷಧಿ ಸಮರ್ಥವಾಗಿ ಹೋರಾಡುತ್ತದೆ ಎಂಬುದು ವೈದ್ಯಕೀಯವಾಗಿ ಸಾಬೀತಾಗಿದೆ.
ಹಾಗಿದ್ದರೆ ಮುಂದೇನು?
ಭಾರತವು ಕೊರೊನಾ ಎರಡನೇ ಅಲೆ ವಿರುದ್ಧ ಸಶಕ್ತವಾಗಿ ಮತ್ತು ಬದ್ಧತೆಯಿಂದ ರಾತ್ರಿ ಹಗಲೆನ್ನದೆ ಹೋರಾಟ ಮಾಡುತ್ತಿದೆ. ಮೊದಲ ಬಾರಿಗೆ ಈಗ ಕೋವಿಡ್ ಹೊಸ ಪ್ರಕರಣಗಳ ಇಳಿಕೆಯೂ ಕಾಣಿಸಲಾರಂಭಿಸಿದೆ. ವೈದ್ಯಕೀಯ ಬೇಡಿಕೆಗಳೆಲ್ಲವೂ (ಆಮ್ಲಜನಕ ಮತ್ತಿತರ ಔಷಧಿ) ಪೂರೈಕೆಯಾಗತೊಡಗಿವೆ. ಉತ್ತರ ಪ್ರದೇಶ, ಮಹಾರಾಷ್ಟ್ರಗಳಲ್ಲಿ ಮಾಡಿರುವ ಕಠಿಣ ನಿರ್ಬಂಧಗಳು ಫಲ ನೀಡಲಾರಂಭಿಸಿವೆ. ಸದ್ಯೋಭವಿಷ್ಯದಲ್ಲೇ ಕೊರೊನಾ ಎರಡನೇ ಅಲೆಯ ಸಂಕಷ್ಟದ ದಿನಗಳನ್ನು ಭಾರತವು ದಾಟುವ ಬಗ್ಗೆ ಆಶಾವಾದ ಮೂಡಿದೆ.
ಈ ಕೊರೊನಾ ಕಾಲದಲ್ಲಿ ಭರ್ಜರಿಯಾಗಿ ಹೋರಾಟ ನಡೆಸುತ್ತಿರುವವರು ವೈದ್ಯಕೀಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರು. ಅವರ ಸೇವಾ ಬದ್ಧತೆಗೆ ಖಂಡಿತ ಫಲ ದೊರೆಯುವ ಸಾಧ್ಯತೆಗಳಿವೆ. ನರೇಂದ್ರ ಮೋದಿ ಅವರ ಕ್ರಮಗಳು ಫಲ ನೀಡುತ್ತಿವೆ. ಸರ್ಕಾರಕ್ಕೆ ಬೆನ್ನು ಕೊಡಬೇಕಾಗಿದ್ದ ವಿರೋಧ ಪಕ್ಷಗಳು ಬಾಯಿ ಮಾತಲ್ಲೇ ಚುಚ್ಚಿ ಮಾತನಾಡುತ್ತಾ, ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂಬ ಪ್ರಲಾಪದ ಮೂಲಕ ದೇಶದ ಜನರೆದುರು ಬೆತ್ತಲಾಗುತ್ತಿವೆ.

Average Rating