ರಾಹುಲ್ ಗಾಂಧಿ ವಿರುದ್ಧ ಯದ್ವಾತದ್ವಾ ಟೀಕೆ: ಗುಲಾಂ ನಬಿ ಆಜಾದ್ ಪತ್ರದಲ್ಲೇನಿದೆ?
Read Time:18 Minute, 12 Second

ರಾಹುಲ್ ಗಾಂಧಿ ವಿರುದ್ಧ ಯದ್ವಾತದ್ವಾ ಟೀಕೆ: ಗುಲಾಂ ನಬಿ ಆಜಾದ್ ಪತ್ರದಲ್ಲೇನಿದೆ?

0 0

Gulam Nabi Azad ಅವರು ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ, ಕಾಂಗ್ರೆಸ್‌ನ ಇತಿಹಾಸವಿದೆ. ಅದು ಹೇಗೆ ನಿಧಾನವಾಗಿ ನಿರ್ನಾಮವಾಗುತ್ತಾ ಬಂತು ಎಂಬುದರ ಬಗೆಗೆ ಕಾಳಜಿಯಿದೆ, ರಾಹುಲ್ ಗಾಂಧಿಯ ಸುತ್ತ ಇರುವ ಭಟ್ಟಂಗಿಗಳ ಬಗೆಗೆ ಎಚ್ಚರಿಕೆ ಇದೆ.

ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿ, ಹಲವಾರು ಹುದ್ದೆಗಳನ್ನು ಅಲಂಕರಿಸುತ್ತಾ ಪಕ್ಷದ ಏಳಿಗೆಗೂ ಕಾರಣರಾಗಿದ್ದ ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ಈಗ ಕಾಂಗ್ರೆಸ್ ತೊರೆದಿದ್ದಾರೆ. ಪಕ್ಷದಲ್ಲಿ ನಾಯಕತ್ವದ ಕೊರತೆಯಿದೆ, ಪಕ್ಷವನ್ನು ಬಲಪಡಿಸದಿದ್ದರೆ ಉಳಿಗಾಲವಿಲ್ಲ ಎಂದು ಧ್ವನಿಯೆತ್ತಿದ್ದಕ್ಕಾಗಿ ಅವರು ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗಿದ್ದರು. ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಶುಕ್ರವಾರ ಅವರು ಪತ್ರ ಬರೆದು, ಪಕ್ಷ ತ್ಯಜಿಸುವ ವೇದನೆಯ ನಿರ್ಣಯದ ಹಿಂದಿನ ಕಾರಣಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಪತ್ರದ ಸಾರಾಂಶ ಇಲ್ಲಿದೆ.

ದಿನಾಂಕ 26 ಆಗಸ್ಟ್ 2022

ಆದರಣೀಯ ಸೋನಿಯಾ ಗಾಂಧಿ ಅವರೇ,
ನಾನು 1970ರ ಮಧ್ಯಭಾಗದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರಿದೆ. 1953ರ ಆಗಸ್ಟ್ 8ರ ಶೇಖ್ ಮೊಹಮ್ಮದ್ ಅಬ್ದುಲ್ಲಾ ಬಂಧನದ ನಂತರದ ಬೆಳವಣಿಗೆಗಳಿಂದ ಕಾಂಗ್ರೆಸ್ ಬಗ್ಗೆ ಒಳ್ಳೆ ಅಭಿಪ್ರಾಯಗಳಿರಲಿಲ್ಲ. ಇದನ್ನು ಲೆಕ್ಕಿಸದೆ, ಗಾಂಧಿ, ನೆಹರು, ಪಟೇಲ್, ಮೌಲಾನ ಅಬುಲ್ ಕಲಂ ಆಜಾದ್, ಬೋಸ್ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರರ ಕುರಿತು ವಿದ್ಯಾರ್ಥಿ ದಿನಗಳಿಂದಲೇ ತಿಳಿದುಕೊಂಡು, ಪ್ರಭಾವಿತನಾಗಿದ್ದೆ, ಕಾಂಗ್ರೆಸ್ ಸೇರಿದೆ. ದಿವಂಗತ ಸಂಜಯ್ ಗಾಂಧಿಯವರ ವೈಯಕ್ತಿಕ ಆಗ್ರಹಕ್ಕೆ ಮನ್ನಣೆ ನೀಡಿ, ಜಮ್ಮು ಮತ್ತು ಕಾಶ್ಮೀರ ಯುವ ಕಾಂಗ್ರೆಸ್ ಅಧ್ಯಕ್ಷನ ಪದವಿ (1975-76) ಹೆಗಲಿಗೇರಿಸಿಕೊಂಡೆ. ಕಾಶ್ಮೀರ ವಿವಿಯಿಂದ ಪದವಿ ಪೂರೈಸಿದ ಕ್ಷಣದಿಂದ 1973-1975ರವರೆಗೆ ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೆ.

ಸಂಜಯ್ ಗಾಂಧಿ ನೇತೃತ್ವದ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಅವರೊಂದಿಗೆ ಹಲವು ಬಾರಿ ಜೈಲಿಗೂ ಹೋಗಿಬಂದೆ. ಇಂದಿರಾ ಗಾಂಧಿಯನ್ನು ದೆಹಲಿ ಜಾಮಾ ಮಸೀದಿಯಿಂದ ಬಂಧಿಸಿದ್ದನ್ನು ವಿರೋಧಿಸಿದ್ದಕ್ಕೆ ಬಂಧಿತನಾಗಿ ತಿಹಾರ್ ಜೈಲಲ್ಲಿ ಸುದೀರ್ಘ ಕಾಲ 1978ರ ಡಿಸೆಂಬರ್ 20ರಿಂದ 1979ರ ಜನವರಿ ಅಂತ್ಯದವರೆಗೂ ಇದ್ದೆ. ಜನತಾ ಪಾರ್ಟಿಯ ಆಡಳಿತದ ಕ್ರಮಗಳನ್ನು ವಿರೋಧಿಸಿ ಹೋರಾಡಿದೆವು. ಇಂದಿರಾ ಗಾಂಧಿ ಸ್ಥಾಪಿಸಿದ್ದ ಪಕ್ಷದ ಪುನಶ್ಚೇತನಕ್ಕೆ ದುಡಿದೆ. ನಮ್ಮ ದುಡಿತದ ಪರಿಣಾಮವಾಗಿ 1980ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂತು.

ಸಂಜಯ್ ಗಾಂಧಿ ದಾರುಣ ಸಾವಿನ ಬಳಿಕ 1980ರಲ್ಲಿ ಯುವ ಕಾಂಗ್ರೆಸ್ ನೇತೃತ್ವ ವಹಿಸಿದೆ. ಅಧ್ಯಕ್ಷನಾಗಿ, ನಿಮ್ಮ ಪತಿ, ದಿ. ರಾಜೀವ್ ಗಾಂಧಿಯವರನ್ನು ಯುವ ಕಾಂಗ್ರೆಸ್ ರಾಷ್ಟ್ರೀಯ ಮಂಡಳಿಯ ಸದಸ್ಯನಾಗಿ ಗೌರವದಿಂದ ಸೇರಿಸಿಕೊಂಡೆ (ಸಂಜಯ್ ಗಾಂಧಿ ಮರಣದ ಮೊದಲ ಪುಣ್ಯತಿಥಿಯಂದು 1981ರ ಜೂ.23). ನಂತರ ರಾಜೀವ್ ಗಾಂಧಿ ಅವರು ಬೆಂಗಳೂರಿನಲ್ಲಿ ಅದೇ ವರ್ಷ (1981) ಡಿಸೆಂಬರ್ 29-30ರಂದು ನಡೆದ ಐವೈಸಿ ವಿಶೇಷ ಅಧಿವೇಶನದಲ್ಲಿ ನನ್ನದೇ ಅಧ್ಯಕ್ಷತೆಯಲ್ಲಿ ಯುವ ಕಾಂಗ್ರೆಸ್ ನಾಯಕರಾಗಿ ಪದಗ್ರಹಣ ಮಾಡಿದರು.

1982ರಿಂದ 2014ರವರೆಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್, ಡಾ.ಮನಮೋಹನ್ ಸಿಂಗ್ – ಹೀಗೆ ಎಲ್ಲ ಕಾಂಗ್ರೆಸ್ ಪ್ರಧಾನಿಗಳ ಸಂಪುಟದಲ್ಲಿ ಸಚಿವನಾಗಿ ಕಾರ್ಯನಿರ್ವಹಿಸಿದ ಹೆಮ್ಮೆ ನನ್ನದು. 1980ರ ಮಧ್ಯಭಾಗದಿಂದ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಎಲ್ಲ ಅಧ್ಯಕ್ಷರ ಕೈಕೆಳಗೆ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುವ ಅವಕಾಶವೂ ದೊರೆಯಿತು.

1991ರ ಮೇ ತಿಂಗಳಲ್ಲಿ ರಾಜೀವ್ ಗಾಂಧಿ ಅವರು ದಾರುಣವಾಗಿ ಹತ್ಯೆಗೀಡಾಗುವವರೆಗೂ ಅವರ ನೇತೃತ್ವದ ಕಾಂಗ್ರೆಸ್ ಸಂಸದೀಯ ಮಂಡಳಿಯ ಸದಸ್ಯನಾಗಿದ್ದೆ. ಬಳಿಕವೂ 1992ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಸಂಸದೀಯ ಮಂಡಳಿಯ ಪುನಾರಚನೆ ಮಾಡದಿರಲು ನರಸಿಂಹ ರಾವ್ ನಿರ್ಧರಿಸುವವರೆಗೂ ಸದಸ್ಯನಾಗಿಯೇ ಮುಂದುವರಿದಿದ್ದೆ.

ಬಹುತೇಕ ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯನಾಗಿ ಕೆಲಸ ಮಾಡಿದ್ದೆ. ಕಳೆದ 35 ವರ್ಷಗಳಲ್ಲಿ ಒಂದಲ್ಲ ಒಂದು ಸಮಯದಲ್ಲಿ ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ನಾನು ಉಸ್ತುವಾರಿಯಲ್ಲಿದ್ದ ಶೇ.90 ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಿತ್ತು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ.

ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನಾಗಿ ನನ್ನ ಅತ್ಯಂತ ಇಷ್ಟದ ಮಹಾನ್ ಸಂಸ್ಥೆಯಾಗಿರುವ ಕಾಂಗ್ರೆಸ್‌ಗೆ ಇತ್ತೀಚೆಗಿನ 7 ವರ್ಷಗಳ ಕಾಲ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ನನ್ನ ಆರೋಗ್ಯ, ಕುಟುಂಬ – ಇವೆಲ್ಲವನ್ನೂ ಬದಿಗಿಟ್ಟು ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೆ ನನ್ನ ಯೌವನದ ಕಾಲವನ್ನೆಲ್ಲ ಮುಡಿಪಾಗಿಟ್ಟಿದ್ದೇನೆ.

ಯುಪಿಎ-1 ಹಾಗೂ ಯುಪಿಎ-2 ಸರಕಾರಗಳ ರಚನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೀವು ನಿಸ್ಸಂದೇಹವಾಗಿ ಅತ್ಯದ್ಭುತ ಕೆಲಸ ಮಾಡಿದ್ದೀರಿ. ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು ಎಂದರೆ, ಜಾಣ್ಮೆಯ ಹಿರಿಯ ಮುಖಂಡರ ನಿರ್ಣಯಗಳನ್ನು ನೀವು ಒಪ್ಪುತ್ತಾ, ಅವರಿಗೆ ಅಧಿಕಾರ ನೀಡುತ್ತಾ ನೀವು ಅವರ ಮಾತುಗಳನ್ನು ನೀವು ಕೇಳುತ್ತಿದ್ದಿರಿ ಮತ್ತು ಅವರಿಗೆ ಸೂಕ್ತ ಅಧಿಕಾರಗಳನ್ನೂ ನೀಡುತ್ತಿದ್ದಿರಿ.

ರಾಹುಲ್ ಗಾಂಧಿ ಎಂಟ್ರಿ, ಭಟ್ಟಂಗಿಗಳ ಆರ್ಭಟ
ಆದರೆ, ದುರದೃಷ್ಟವಶಾತ್ ರಾಜಕೀಯಕ್ಕೆ ರಾಹುಲ್ ಗಾಂಧಿಯವರ ಪ್ರವೇಶವಾಯಿತು, ನಿರ್ದಿಷ್ಟವಾಗಿ 2013ರ ಜನವರಿಯಲ್ಲಿ ಅವರನ್ನು ನೀವು ಪಕ್ಷದ ಉಪಾಧ್ಯಕ್ಷರಾಗಿ ನೇಮಿಸಿದ ಬಳಿಕ, ಸಲಹೆ ಕೇಳಿ ಮುಂದುವರಿಯುವ ಪ್ರಕ್ರಿಯೆಯೇ ಅವರಿಂದ ನಾಶವಾಯಿತು. ಎಲ್ಲ ಹಿರಿಯ ಮತ್ತು ಅನುಭವಿ ಮುಖಂಡರನ್ನು ಮೂಲೆಗುಂಪು ಮಾಡಲಾಯಿತು ಮತ್ತು ಅನನುಭವಿ ಭಟ್ಟಂಗಿಗಳೇ ಪಕ್ಷವನ್ನು ಚಲಾಯಿಸಲು ಶುರುಹಚ್ಚಿಕೊಂಡರು.

ಪ್ರಧಾನಿ, ಭಾರತ ಸರಕಾರಕ್ಕೆ ಅವಮಾನ ಮಾಡಿದ ರಾಹುಲ್ ಗಾಂಧಿ
ಈ ಅಪ್ರಬುದ್ಧತೆಯ ಪ್ರಮುಖ ಉದಾಹರಣೆಗಳಲ್ಲೊಂದು ಎಂದರೆ, ಸರಕಾರದ ಅಧ್ಯಾದೇಶವನ್ನೇ ರಾಹುಲ್ ಗಾಂಧಿಯವರು ಮಾಧ್ಯಮಗಳ ಮುಂದೆಯೇ ಹರಿದುಹಾಕಿದರು. ಇದೇ ಸುಗ್ರೀವಾಜ್ಞೆಯ ಕುರಿತು ಕಾಂಗ್ರೆಸ್ ಪ್ರಮುಖರ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಗಿತ್ತು ಮತ್ತು ಭಾರತದ ಪ್ರಧಾನ ಮಂತ್ರಿ ನೇತೃತ್ವದಲ್ಲೇ ಕೇಂದ್ರ ಸಂಪುಟವು ಅದನ್ನು ಅಂಗೀಕರಿಸಿತ್ತು ಹಾಗೂ ರಾಷ್ಟ್ರಪತಿಯವರೂ ಅದಕ್ಕೆ ಅಂಗೀಕಾರ ಮುದ್ರೆ ನೀಡಿದ್ದರು. ಈ ‘ಬಾಲಿಶ’ ವರ್ತನೆಯು ಭಾರತದ ಪ್ರಧಾನ ಮಂತ್ರಿಯ ಹಾಗೂ ಭಾರತ ಸರಕಾರದ ಅಧಿಕಾರವನ್ನೇ ಬುಡಮೇಲು ಮಾಡಿದಂತಾಯಿತು.

ಇದೊಂದೇ ಘಟನೆ ಸಾಕಾಯಿತು 2014ರ ಚುನಾವಣೆಗಳಲ್ಲಿ ಯುಪಿಎಗೆ ಹೀನಾಯ ಸೋಲು ಕಾಣಲು. ಬಲಪಂಥೀಯರು ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳು ಈ ಘಟನೆಗಳನ್ನು ಚೆನ್ನಾಗಿಯೇ ಬಳಸಿಕೊಂಡವು.

ಸೀತಾರಾಮ ಕೇಸರಿ ಅವರನ್ನು ಕೆಳಗಿಳಿಸಿ ನೀವು ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಏರಿದಾಗ, 1998ರ ಅಕ್ಟೋಬರ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷವು ಪಂಚಮಡಿಯಲ್ಲಿ ಅಧಿವೇಶನ ನಡೆಸಿತು. 2003ರಲ್ಲಿ ಶಿಮ್ಲಾದಲ್ಲಿ ಹಾಗೂ 2013ರಲ್ಲಿ ಜೈಪುರದಲ್ಲಿ ಇಂಥದ್ದೇ ಅಧಿವೇಶನಗಳು ನಡೆದವು ಎಂಬುದನ್ನು ನೆನಪಿಸಲು ಬಯಸುತ್ತೇನೆ. ಮೂರೂ ಸಂದರ್ಭಗಳಲ್ಲಿ ಸಾಂಸ್ಥಿಕ ವ್ಯವಹಾರಗಳ ಕಾರ್ಯಾನುಷ್ಠಾನ ತಂಡದ ಮುಖ್ಯಸ್ಥನಾಗಿ ಕೆಲಸ ಮಾಡಿದ್ದ ಹೆಮ್ಮೆ ನನ್ನದು.

ಆದರೆ, ಈ ಅಧಿವೇಶನಗಳ ಯಾವುದೇ ನಿರ್ಣಯವನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವುದು ತೀರಾ ವಿಷಾದನೀಯ. 2013ರ ಜನವರಿಯಲ್ಲಿ ಜೈಪುರದ ಅಧಿವೇಶನದಲ್ಲಿ, 2014ರ ಮಹಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು, ಪುನಶ್ಚೇತನಕ್ಕಾಗಿ ಇತರ ಸದಸ್ಯರ ನೆರವಿನಿಂದ ವಿವರವಾದ ಕ್ರಿಯಾಯೋಜನೆಯೊಂದನ್ನು ಸಲ್ಲಿಸಿದ್ದೆ. ಇದನ್ನು ಸಿಡಬ್ಲ್ಯುಸಿ ಅಂಗೀಕರಿಸಿತ್ತು.

ಚುನಾವಣೆಗಳಿಗೆ ಮುನ್ನ ಹಂತಹಂತವಾಗಿ ಅನುಷ್ಠಾನಗೊಳ್ಳಬೇಕಿದ್ದ ಈ ಶಿಫಾರಸುಗಳು ಕಳೆದ 9 ವರ್ಷಗಳಿಂದ ಎಐಸಿಸಿ ಉಗ್ರಾಣದಲ್ಲಿ ಕೊಳೆಯುತ್ತಾಬಿದ್ದಿದೆ. ನಿಮಗೆ ಮತ್ತು ಅಂದಿನ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಈ ಕುರಿತು ಪದೇ ಪದೇ ನೇರವಾಗಿಯೇ ನೆನಪಿಸಿದ್ದರೂ, ಅವುಗಳನ್ನು ಗಂಭೀರವಾಗಿ ಪರಿಶೀಲಿಸುವ ಪ್ರಯತ್ನವೂ ಆಗಲಿಲ್ಲ.

ಕೇವಲ 2 ರಾಜ್ಯಗಳಲ್ಲಿದೆ ಕಾಂಗ್ರೆಸ್ ಸರಕಾರ
2014ರಿಂದೀಚೆಗೆ ನಿಮ್ಮ ಹಾಗೂ ರಾಹುಲ್ ಮುಂದಾಳುತ್ವದಲ್ಲಿ ಕಾಂಗ್ರೆಸ್ ಎರಡು ಲೋಕಸಭಾ ಚುನಾವಣೆಗಳನ್ನು ಅವಮಾನಕರವಾಗಿ ಸೋತಿದೆ. 2014ರಿಂದ 2022ರವರೆಗೆ ನಡೆದ 49 ಅಸೆಂಬ್ಲಿ ಚುನಾವಣೆಗಳಲ್ಲಿ ಅದು 39ನ್ನೂ ಸೋತಿದೆ. ಪಕ್ಷವು ಕೇವಲ ನಾಲ್ಕು ರಾಜ್ಯಗಳನ್ನಷ್ಟೇ ಗೆದ್ದುಕೊಂಡಿತು ಮತ್ತು ಆರು ಸಂದರ್ಭಗಳಲ್ಲಿ ಸಮ್ಮಿಶ್ರ ಸರಕಾರ ರಚಿಸಬೇಕಾಯಿತು. ದುರದೃಷ್ಟವಶಾತ್, ಇಂದು ಕಾಂಗ್ರೆಸ್ ಪಕ್ಷವು ಕೇವಲ ಎರಡು ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ ಮತ್ತು ಇನ್ನೆರಡು ರಾಜ್ಯಗಳಲ್ಲಿ ಬೇರೆ ಪಕ್ಷಗಳೊಂದಿಗೆ ಪಾಲುದಾರಿಕೆಯೊಂದಿಗೆ ಸರಕಾರದಲ್ಲಿದೆ.

2019ರ ಚುನಾವಣೆಗಳಿಂದೀಚೆಗೆ, ಪಕ್ಷದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ವಿಸ್ತೃತ ಕಾರ್ಯಕಾರಿ ಸಮಿತಿಯ ಸಭೆಯೊಂದರಲ್ಲಿ ಪಕ್ಷಕ್ಕಾಗಿ ಜೀವ ತೇದಿದ್ದ ಹಿರಿಯ ಮುಖಂಡರನ್ನು ಅವಮಾನಿಸಿದ ಬಳಿಕ ‘ಅವಸರದಿಂದ’ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ರಾಹುಲ್ ಗಾಂಧಿ ಪದತ್ಯಾಗ ಮಾಡಿದ ಬಳಿಕ, ನೀವು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರಿ.

ಹೇಯ ‘ರಿಮೋಟ್ ಕಂಟ್ರೋಲ್’ ಮಾದರಿ
ಯುಪಿಎ ಸರಕಾರದ ಸಾಂಸ್ಥಿಕ ಸಾರ್ವಭೌಮತೆಯನ್ನೇ ನಾಶಪಡಿಸಿದ ‘ರಿಮೋಟ್ ಕಂಟ್ರೋಲ್ ಮಾದರಿಯು’ ಈಗ ಭಾರತ ರಾಷ್ಟ್ರೀಯ ಕಾಂಗ್ರೆಸ್‌ಗೂ ಅನ್ವಯವಾಗಿರುವುದು ಅತ್ಯಂತ ಹೇಯ ವಿಚಾರ. ನೀವು ನಾಮಕೇವಾಸ್ತೇ ಮುಖ್ಯಸ್ಥರಾಗಿದ್ದರೂ, ಎಲ್ಲ ಪ್ರಮುಖ ನಿರ್ಣಯಗಳನ್ನು ರಾಹುಲ್ ಗಾಂಧಿ ಅಥವಾ ಅದಕ್ಕಿಂತಲೂ ಹೀನಾಯವಾಗಿ ಅವರ ಸೆಕ್ಯುರಿಟಿ ಗಾರ್ಡ್‌ಗಳು, ಪಿಎಗಳು ತೆಗೆದುಕೊಳ್ಳುತ್ತಿದ್ದಾರೆ.

“ಭಟ್ಟಂಗಿಗಳಿಂದ” ಅವಮಾನ
202ರ ಆಗಸ್ಟ್ ತಿಂಗಳಲ್ಲಿ ನಾನು ಮತ್ತು ಮಾಜಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳೂ ಸೇರಿದಂತೆ ಇತರ 22 ಮಂದಿ ಸಹೋದ್ಯೋಗಿಗಳು ಸೇರಿ, ಪಕ್ಷದ ಸೈದ್ಧಾಂತಿಕ ಬುಡ ಅಲುಗಾಡುತ್ತಿರುವ ಬಗ್ಗೆ ಪತ್ರ ಬರೆದು ಎಚ್ಚರಿಸಿದ ಸಂದರ್ಭದಲ್ಲಿ, “ಭಟ್ಟಂಗಿಗಳು” ನಮ್ಮ ಮೇಲೆ ಮುಗಿಬಿದ್ದರು, ದಾಳಿ ಮಾಡಿದರು, ಎಷ್ಟು ಸಾಧ್ಯವೋ ಅಷ್ಟು ಹೀನಾಯವಾಗಿ ಅವಮಾನಿಸಿದರು.

ನನ್ನ ಶವಯಾತ್ರೆ ಮಾಡಿದವರಿಗೆ ಕಾಂಗ್ರೆಸ್ ಗೌರವ
ವಾಸ್ತವವಾಗಿ, ಈಗ ಎಐಸಿಸಿಯನ್ನು ಚಲಾಯಿಸುತ್ತಿರುವ ಭಟ್ಟಂಗಿಗಳ ನಿರ್ದೇಶನದ ಮೇರೆಗೆ, ಜಮ್ಮುವಿನಲ್ಲಿ ನನ್ನ ಅಣಕು ಶವಯಾತ್ರೆಯನ್ನೂ ಮಾಡಿಸಲಾಯಿತು. ಈ ರೀತಿ ಅಶಿಸ್ತು ತೋರಿದವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಹುಲ್ ಗಾಂಧಿಯವರೇ ವೈಯಕ್ತಿಕವಾಗಿ ದೆಹಲಿಯಲ್ಲಿ ಸನ್ಮಾನಿಸಿದರು.

ಸಿಡಬ್ಲ್ಯುಸಿ ಸಭೆಯಲ್ಲೇ ಅವಮಾನ, ನಿಂದನೆ
ನಂತರ ಇದೇ ಭಟ್ಟಂಗಿಗಳು ತನ್ನ ಗೂಂಡಾಗಳ ಪಡೆಯನ್ನು ಛೂಬಿಟ್ಟು, ನಿಮ್ಮನ್ನು ಮತ್ತು ನಿಮ್ಮ ಬಂಧುಗಳನ್ನು ಆರೋಪಿತ ಅಕ್ರಮಗಳಿಂದ ನ್ಯಾಯಾಲಯದಲ್ಲಿ ರಕ್ಷಿಸಲು ಹೆಣಗಾಡುತ್ತಿರುವ ಮಾಜಿ ಸಚಿವ ಕಪಿಲ್ ಸಿಬಲ್ ಅವರ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸಲಾಯಿತು.

ಪಕ್ಷಕ್ಕಾಗಿ ಕಾಳಜಿ ತೋರಿಸಿ ಆ ಪತ್ರ ಬರೆದಿದ್ದ 23 ಮಂದಿ ಹಿರಿಯ ಮುಖಂಡರು ಮಾಡಿದ ಏಕೈಕ ಅಪರಾಧ ಎಂದರೆ, ಪಕ್ಷದ ದೌರ್ಬಲ್ಯಕ್ಕೆ ಕಾರಣಗಳು ಮತ್ತು ಅದಕ್ಕೆ ಪರಿಹಾರಗಳನ್ನು ಎತ್ತಿ ತೋರಿಸಿದ್ದು. ದುರದೃಷ್ಟವಶಾತ್, ಈ ಶಿಫಾರಸುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಬದಲು, ಸಿಡಬ್ಲ್ಯುಸಿ ವಿಸ್ತರಿತ ಸಭೆಗೆ ನಮ್ಮನ್ನು ಕರೆದು ನಿಂದಿಸಲಾಯಿತು, ಅವಮಾನಿಸಲಾಯಿತು.

ಕಾಂಗ್ರೆಸ್ ನಿರ್ನಾಮವಾಗಿಬಿಟ್ಟಿದೆ
ದುರದೃಷ್ಟವಶಾತ್, ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಯಾವ ರೀತಿ ಮರಳಿ ಬಾರದಂತಹಾ ಹಂತ ತಲುಪಿದೆಯೆಂದರೆ, ಪಕ್ಷದ ನಾಯಕತ್ವ ವಹಿಸಲು “ಪ್ರಾಕ್ಸಿ”ಗಳ ಹೆಸರುಗಳನ್ನು ಹರಿಬಿಡಲಾಗುತ್ತಿದೆ. ಈ ಪ್ರಯೋಗವು ವಿಫಲವಾಗುತ್ತದೆ, ಯಾಕೆಂದರೆ, ಪಕ್ಷವನ್ನು ಯಾವ ರೀತಿ ಸಮಗ್ರವಾಗಿ ನಿರ್ನಾಮ ಮಾಡಲಾಗಿದೆ ಎಂದರೆ, ಅದನ್ನು ದುರಸ್ತಿ ಮಾಡುವುದು ಸಾಧ್ಯವೇ ಇಲ್ಲ. ಈಗ ಆಯ್ಕೆಯಾಗಿರುವ ವ್ಯಕ್ತಿ ಕೈಗೊಂಬೆಯಾಗಿರಬೇಕಾಗುತ್ತದಷ್ಟೇ.

ದುರದೃಷ್ಟವಶಾತ್, ರಾಷ್ಟ್ರಮಟ್ಟದಲ್ಲಿ ನಮಗೆ ದೊರೆತಿದ್ದ ರಾಜಕೀಯ ಅವಕಾಶವನ್ನೆಲ್ಲ ಬಿಜೆಪಿಗೆ ರಾಜ್ಯಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಟ್ಟಿದ್ದೇವೆ. ಕಳೆದ 8 ವರ್ಷಗಳಲ್ಲಿ ನಾಯಕತ್ವವು ಪಕ್ಷದ ಮುಖ್ಯಸ್ಥನ ಸ್ಥಾನದಲ್ಲಿ ಗಂಭೀರತೆಯೇ ಇಲ್ಲದ ನಾಯಕನನ್ನು ಕೂರಿಸಿದ್ದೇ ಕಾರಣ.

ವ್ಯವಸ್ಥಿತವಾಗಿ ಪಕ್ಷ ನಿರ್ನಾಮ
ಇಡೀ ಸಾಂಸ್ಥಿಕ ಚುನಾವಣೆಯೇ ವ್ಯಂಗ್ಯವಾಗಿಬಿಟ್ಟಿದೆ. ದೇಶದ ಯಾವುದೇ ಭಾಗದಲ್ಲಿಯೂ ಯಾವುದೇ ಸಾಂಸ್ಥಿಕ ಮಟ್ಟದ ಚುನಾವಣೆ ಆಗುತ್ತಿಲ್ಲ. ಎಐಸಿಸಿಯ ಆಯ್ದ ಭಟರು, 24 ಅಕ್ಬರ್ ರೋಡ್‌ನ ಎಐಸಿಸಿ ಮುಖ್ಯಾಲಯದಲ್ಲಿ ಕುಳಿತಿರುವ ಭಟ್ಟಂಗಿಗಳು ತಯಾರು ಮಾಡಿದ ಸಹಿ ಹಾಕಬೇಕಾಗುತ್ತದೆ. ಬೂತ್, ಬ್ಲಾಕ್, ಜಿಲ್ಲಾ ಅಥವಾ ರಾಜ್ಯ ಮಟ್ಟದಲ್ಲಿ ಮತದಾರರ ಪಟ್ಟಿ ಪ್ರಕಟವಾಗಿಲ್ಲ, ನಾಮಪತ್ರಕ್ಕೆ ಆಹ್ವಾನಿಸಲೂ, ಚುನಾವಣಾ ಬೂತ್ ಇಲ್ಲ, ಚುನಾವಣೆಯೂ ಇಲ್ಲ. ಒಂದು ಕಾಲದಲ್ಲಿ ರಾಷ್ಟ್ರದ ಆಂದೋಲನವಾಗಿದ್ದ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷವೊಂದನ್ನು ಹಾಳುಗೆಡಹಲು ದೊಡ್ಡ ವಂಚನಾತ್ಮಕ ಆಟ ಆಡುತ್ತಿರುವ ಎಐಸಿಸಿ ನಾಯಕತ್ವವೇ ಇದಕ್ಕೆಲ್ಲ ನೇರ ಹೊಣೆಗಾರ. ದೇಶಕ್ಕೆ ಸ್ವಾತಂತ್ರ್ಯ ದೊರೆತ 75ನೇ ವರ್ಷದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಈ ಅವಸ್ಥೆ ಬೇಕಿತ್ತೇ ಎಂದು ಎಐಸಿಸಿ ನಾಯಕತ್ವವು ತನಗೆ ತಾನೇ ಕೇಳಿಕೊಳ್ಳಬೇಕಿದೆ.

ದಿವಂಗತ ಇಂದಿರಾ ಗಾಂಧಿ, ದಿ.ಸಂಜಯ ಗಾಂಧಿ, ದಿ.ರಾಜೀವ್ ಗಾಂಧಿಯವರ ಕಾಲದಿಂದಲೂ ನಿಮ್ಮ ಕುಟುಂಬದೊಂದಿಗೆ ನನಗೆ ಅತ್ಯಂತ ಆಪ್ತ ಬಾಂಧವ್ಯವಿತ್ತು ಎಂಬುದು ನಿಮಗೆ ತಿಳಿದೇ ಇದೆ. ಅದರಿಂದಾಗಿಯೇ ನಿಮ್ಮ ಬಗ್ಗೆ ನನಗೆ ಗೌರವಾದರಗಳು ಇದ್ದೇ ಇವೆ.

ನಾವು ಯಾವ ಕಾರಣಕ್ಕೆ ನಮ್ಮ ಇಡೀ ತಾರುಣ್ಯ ಕಾಲವನ್ನು ಸವೆಸಿದೆವೋ, ಅದೇ ತತ್ವ ಸಿದ್ಧಾಂತಗಳನ್ನು ನಾನು ಮತ್ತು ನನ್ನ ಕೆಲವು ಸಹೋದ್ಯೋಗಿಗಳು ಪಕ್ಷದ ಹೊರಗಿದ್ದುಕೊಂಡೇ ಮುಂದುವರಿಸಲು ಶ್ರಮಿಸುತ್ತೇವೆ.

ಭಾರತ್ ಜೋಡೋ ಮುನ್ನ ಕಾಂಗ್ರೆಸ್ ಜೋಡೋ ಯಾತ್ರೆಯಾಗಬೇಕಿತ್ತು
ಮೇಲೆ ಹೇಳಿದ ಎಲ್ಲ ಕಾರಣಗಳಿಂದಾಗಿ, ವಿಶೇಷವಾಗಿ ಎಐಸಿಸಿಯನ್ನು ಚಲಾಯಿಸುತ್ತಿರುವ ಭಟ್ಟಂಗಿಗಳ ಪಡೆಯಿಂದಾಗಿ, ಭಾರತಕ್ಕೆ ಯಾವುದು ಸರಿಯೋ ಅದಕ್ಕಾಗಿ ಹೋರಾಡುವ ಮನೋಬಲವನ್ನಾಗಲಿ, ಸಾಮರ್ಥ್ಯವನ್ನಾಗಲೀ ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಳೆದುಕೊಂಡಿದೆ. ವಾಸ್ತವವಾಗಿ, ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳುವ ಮೊದಲು ಕಾಂಗ್ರೆಸ್ ಜೋಡೋ ಯಾತ್ರೆಯನ್ನು ದೇಶಾದ್ಯಂತ ಕೈಗೊಳ್ಳಬೇಕಿತ್ತು.

ಈ ಕಾರಣಗಳಿಂದ, ತೀರಾ ವಿಷಾದದೊಂದಿಗೆ ಮತ್ತು ಅತ್ಯಂತ ಭಾರವಾದ ಹೃದಯದೊಂದಿಗೆ, ಭಾರತ ರಾಷ್ಟ್ರೀಯ ಕಾಂಗ್ರೆಸ್ ಜೊತೆಗಿನ ನನ್ನ ಅರ್ಧ ಶತಮಾನದ ಸುದೀರ್ಘ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದೇನೆ ಮತ್ತು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವವೂ ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ.

ಆದರಪೂರ್ವಕವಾಗಿ,
ನಿಮ್ಮ ವಿಧೇಯ
-ಗುಲಾಂ ನಬಿ ಆಜಾದ್

ಇವರಿಗೆ,
ಶ್ರೀಮತಿ ಸೋನಿಯಾ ಗಾಂಧಿ, ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷೆ, 10- ಜನಪಥ್, ನವದೆಹಲಿ

Avatar for Web Desk

About Post Author

Web Desk

Kannada News Enthusiasts | Professional Journalists | ಕನ್ನಡದ ಸುದ್ದಿ ಜೀವಿಗಳು
Happy
Happy
100 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಬಿಜೆಪಿ ಶಾಸಕ ರಾಜಾ ಸಿಂಗ್ ಬಂಧನ: ಕಾಮಿಡಿಯನ್ ಮುನಾವರ್ ಫಾರೂಕಿ ರಾಮ-ಸೀತೆಗೆ ಅವಮಾನ ಮಾಡಿದ್ದೇನು?
Next post 2047ರೊಳಗೆ ಭಾರತದ ಇಸ್ಲಾಮೀಕರಣ: ಪಿಎಫ್ಐನಿಂದ ‘ಸೇವಾ ತಂಡ, ಕಿಲ್ಲರ್ ಸ್ಕ್ವಾಡ್ಸ್’

ಸುದ್ದಿ ಸಂಚಯ

ಇವುಗಳನ್ನೂ ನೋಡಿ