2047ರೊಳಗೆ ಭಾರತದ ಇಸ್ಲಾಮೀಕರಣ: ಪಿಎಫ್ಐನಿಂದ ‘ಸೇವಾ ತಂಡ, ಕಿಲ್ಲರ್ ಸ್ಕ್ವಾಡ್ಸ್’
Read Time:5 Minute, 28 Second

2047ರೊಳಗೆ ಭಾರತದ ಇಸ್ಲಾಮೀಕರಣ: ಪಿಎಫ್ಐನಿಂದ ‘ಸೇವಾ ತಂಡ, ಕಿಲ್ಲರ್ ಸ್ಕ್ವಾಡ್ಸ್’

1 0

ಹೊಸದಿಲ್ಲಿ: ಭಾರತಕ್ಕೆ ಸ್ವಾತಂತ್ರ್ಯ ದೊರೆತ 100 ವರ್ಷಗಳೊಳಗೆ ದೇಶವನ್ನು ಇಸ್ಲಾಮ್ ಆಡಳಿತಕ್ಕೆ ಒಳಪಡಿಸುವ ಗುರಿಯೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಮತ್ತು ಇತರ ಸಂಘಟನೆಗಳು ಕೆಲಸ ಮಾಡುತ್ತಿರುವುದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಮೂಲಕ ದೃಢಪಟ್ಟಿದೆ.

ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಆರೋಪ ಪಟ್ಟಿಯಲ್ಲಿ ಈ ವಿಷಯ ದೃಢಪಟ್ಟಿದ್ದು, ಭಾರತದಲ್ಲಿ 2047ರೊಳಗೆ ಇಸ್ಲಾಂ ಆಳ್ವಿಕೆ ಜಾರಿಗೊಳಿಸುವ ನಿಟ್ಟಿನಲ್ಲಿ, ಭಯೋತ್ಪಾದಕ ಕೃತ್ಯ ನಡೆಸುವುದು, ಕೋಮು ವಿದ್ವೇಷ ಹರಡುವುದು ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಅಜೆಂಡಾವನ್ನು ಪಿಎಫ್ಐ ಇರಿಸಿಕೊಂಡಿದ್ದು, ಇದಕ್ಕಾಗಿ “ಸೇವಾ ತಂಡ (ಸರ್ವಿಸ್ ಟೀಮ್ಸ್)” ಹಾಗೂ “ಹಂತಕ ಪಡೆ (ಕಿಲ್ಲರ್ ಸ್ಕ್ವಾಡ್ಸ್)”ಗಳನ್ನು ರಚಿಸಲಾಗಿದೆ.

ಕಳೆದ ವರ್ಷದ ಜುಲೈ 26ರಂದು ಸುಳ್ಯದ ಬೆಳ್ಳಾರೆ ಸಮೀಪ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ನಡೆಸಲಾಗಿತ್ತು. ಶುಕ್ರವಾರ (ಜ.20, 2023) ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ಮಂಡಳಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, ಜನರೆದುರೇ ಮಾರಕಾಯುಧಗಳಿಂದ ಕೊಂದುಹಾಕುವ ಮೂಲಕ ಹಿಂದೂ ಸಮುದಾಯದ ಮಂದಿಯಲ್ಲಿ ಭೀತಿ ಉಂಟುಮಾಡುವುದೇ ಪ್ರಧಾನ ಉದ್ದೇಶ ಎಂದು ವಿವರಿಸಲಾಗಿದೆ.

20 ಪಿಎಫ್ಐ ಸದಸ್ಯರ ವಿರುದ್ಧ ಚಾರ್ಜ್‌ಶೀಟ್ (ಆರೋಪಪಟ್ಟಿ) ಸಲ್ಲಿಸಲಾಗಿದೆ. ಅದರಲ್ಲಿರುವ ಮಾಹಿತಿ ಪ್ರಕಾರ, “ಈ ಸೇವಾ ತಂಡಗಳ ಸದಸ್ಯರಿಗೆ ಶಸ್ತ್ರಾಸ್ತ್ರ ಮತ್ತು ದಾಳಿ ನಡೆಸುವ ತರಬೇತಿಯನ್ನೂ, ನಿರ್ದಿಷ್ಟ ಸಮುದಾಯದ ವ್ಯಕ್ತಿಗಳು ಮತ್ತು ನಾಯಕರನ್ನು ಗುರುತಿಸಲು, ಪಟ್ಟಿ ಮಾಡಲು ಮತ್ತು ಹದ್ದಿನ ಕಣ್ಣಿಡಲು ಬೇಹುಗಾರಿಕೆಯ ತಂತ್ರಗಳನ್ನೂ ಕಲಿಸಲಾಗಿತ್ತು.”

ಇಷ್ಟೇ ಅಲ್ಲದೆ, ಹಿರಿಯ ಪಿಎಫ್ಐ ನಾಯಕರ ಸೂಚನೆಗಳ ಅನುಸಾರ, ಗುರುತಿಸಲಾದ ಗುರಿಗಳ ಮೇಲೆ ದಾಳಿ ನಡೆಸುವ ಮತ್ತು ಕೊಲ್ಲುವ ಕುರಿತಾದ ತರಬೇತಿಯನ್ನೂ ನೀಡಲಾಗಿತ್ತು ಎಂದು ಎನ್ಐಎ ತನ್ನ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

ಬೆಂಗಳೂರು ನಗರ, ಸುಳ್ಯ ಪಟ್ಟಣ ಮತ್ತು ಬೆಳ್ಳಾರೆ ಗ್ರಾಮಗಳಲ್ಲಿ ಪಿಎಫ್ಐ ಸದಸ್ಯರು ಮತ್ತು ಮುಖಂಡರು ಸಂಚು ರೂಪಿಸುವ ಸಭೆಗಳನ್ನು ನಡೆಸಿದ್ದರು. ಜಿಲ್ಲಾ ಸೇವಾ ತಂಡದ ಮುಖ್ಯಸ್ಥ ಮುಸ್ತಫಾ ಪೈಚಾರುವಿಗೆ, ಸ್ಥಳ ಪರಿಶೀಲನೆಗೆ ಮತ್ತು ನಿರ್ದಿಷ್ಟ ಸಮುದಾಯದ ಪ್ರಮುಖ ಸದಸ್ಯನೊಬ್ಬನನ್ನು ಗುರುತಿಸಿ, ಗುರಿ ಇಡುವಂತೆ ಸೂಚಿಸಲಾಗಿತ್ತು ಎಂದು ಎನ್ಐಎ ಹೇಳಿದೆ.

20 ಮಂದಿ ಆರೋಪಿಗಳಲ್ಲಿ 6 ಮಂದಿ ತಲೆ ಮರೆಸಿಕೊಂಡಿದ್ದಾರೆ ಮತ್ತು ಅವರ ಕುರಿತು ಸುಳಿವು ನೀಡಿದವರಿಗೆ ಲಕ್ಷಾಂತರ ರೂಪಾಯಿ ಇನಾಮನ್ನು ಎನ್ಐಎ ಘೋಷಿಸಿದೆ.

ಮಹಮದ್ ಶಿಯಾಬ್, ಅಬ್ದುಲ್ ಬಶೀರ್, ರಿಯಾಝ್, ಮುಸ್ತಫಾ ಪೈಚಾರ್, ಮಸೂದ್ ಕೆ.ಎ., ಕೊಡಾಜೆ ಮೊಹಮದ್ ಶರೀಫ್, ಅಬೂಬಕರ್ ಸಿದ್ದಿಕ್, ನೌಫಾಲ್ ಎಂ, ಇಸ್ಮಾಯಿಲ್ ಶಫಿ ಕೆ., ಕೆ.ಮಹಮ್ಮದ್ ಇಕ್ಬಾಲ್, ಶಹೀದ್ ಎಂ, ಮಹಮ್ಮದ್ ಶಫೀಕ್ ಜಿ., ಉಮ್ಮರ್ ಫಾರೂಕ್, ಎಂ.ಆರ್., ಅಬ್ದುಲ್ ಕಬೀರ್ ಸಿಎ, ಮುಹಮ್ಮದ್ ಇಬ್ರಾಹಿಂ ಶಾ, ಸೈನುಲ್ ಅಬೀದ್ ವೈ., ಶೇಖ್ ಸದ್ದಾಮ್ ಹುಸೇನ್, ಝಕೀರ್ ಎ., ಎನ್.ಅಬ್ದುಲ್ ಹ್ಯಾರಿಸ್, ತುಫೈಲ್ ಎಂ.ಎಚ್ ವಿರುದ್ಧ ಚಾರ್ಜ್‌ಶೀಟ್ ದಾಖಲಾಗಿದೆ.

ಅವರಲ್ಲಿ ಮುಸ್ತಫಾ ಪೈಚಾರ್, ಮಸೂದ್ ಕೆಎ, ಕೊಡಾಜೆ ಮೊಹಮ್ಮದ್ ಶರೀಫ್, ಅಬೂಬಕರ್ ಸಿದ್ದಿಕ್, ಉಮ್ಮರ್ ಫಾರೂಕ್ ಮತ್ತು ತುಫೈಲ್ ಎಂ.ಎಚ್. ಅವರು ತಲೆ ಮರೆಸಿಕೊಂಡಿದ್ದು, ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

ಜುಲೈ 27ರಂದು ಬೆಳ್ಳಾರೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಆಗಸ್ಟ್ 4ರಂದು ಎನ್ಐಎ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು.

ಸೆಪ್ಟೆಂಬರ್ ತಿಂಗಳಲ್ಲಿ ಅಕ್ರಮ ಚಟುವಟಿಕೆ (ತಡೆ)ಕಾಯ್ದೆ -ಯುಎಪಿಎ- ಅಡಿಯಲ್ಲಿ ಪಿಎಫ್ಐಗೆ ಐದು ವರ್ಷ ನಿಷೇಧ ಹೇರಲಾಗಿದೆ.

ನೆಟ್ಟಾರು ಹತ್ಯೆಯಷ್ಟೇ ಅಲ್ಲದೆ ಪಿಎಫ್ಐ ಸದಸ್ಯರು ದೇಶಾದ್ಯಂತ, ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹಲವಾರು ಭಯೋತ್ಪಾದಕ ಚಟುವಟಿಕೆ, ಕೊಲೆ, ಹಿಂಸಾಚಾರ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಪ್ರಧಾನವಾಗಿ, ಸಂಜಿತ್ (ಕೇರಳ, ನವೆಂಬರ್ 2021), ವಿ.ರಾಮಲಿಂಗಂ (ತಮಿಳುನಾಡು, 2019), ನಂದು (ಕೇರಳ 2021), ಅಭಿಮನ್ಯು (ಕೇರಳ 2018), ಬಿಬಿನ್ (ಕೇರಳ 2017), ಶರತ್ ಮಡಿವಾಳ (ಕರ್ನಾಟಕ 2017), ಆರ್.ರುದ್ರೇಶ್ (ಕರ್ನಾಟಕ 2016), ಪ್ರವೀಣ್ ಪೂಜಾರಿ (ಕರ್ನಾಟಕ 2016) ಹಾಗೂ ಶಶಿ ಕುಮಾರ್ (ತಮಿಳುನಾಡು 2016) ಮುಂತಾದವರ ಹತ್ಯೆಯಲ್ಲಿ ಪಿಎಫ್ಐ ಪಾತ್ರವಿತ್ತೆಂದು ಹೇಳಲಾಗಿದೆ.

Avatar for Web Desk

About Post Author

Web Desk

Kannada News Enthusiasts | Professional Journalists | ಕನ್ನಡದ ಸುದ್ದಿ ಜೀವಿಗಳು
Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
100 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ರಾಹುಲ್ ಗಾಂಧಿ ವಿರುದ್ಧ ಯದ್ವಾತದ್ವಾ ಟೀಕೆ: ಗುಲಾಂ ನಬಿ ಆಜಾದ್ ಪತ್ರದಲ್ಲೇನಿದೆ?
Next post Rahul Gandhi Disqualification: ಲೋಕಸಭೆ ಅಧಿಸೂಚನೆಗೆ ಕಾರಣ ಇದು | ಪೂರ್ಣ ವಿವರ ಇಲ್ಲಿದೆ

ಸುದ್ದಿ ಸಂಚಯ

ಇವುಗಳನ್ನೂ ನೋಡಿ