ಹೊಸದಿಲ್ಲಿ: ₹2000 ಮುಖಬೆಲೆಯ ನೋಟು ಚಲಾವಣೆಗೆ ಬರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇಷ್ಟವಿರಲಿಲ್ಲ. ಆದರೆ ಹಿಂಜರಿಕೆಯಿಂದಲೇ ಈ ನಿರ್ಧಾರಕ್ಕೆ ಒಪ್ಪಿದ್ದರು ಎಂದು ಅವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿರುವುದು ಸಂಚಲನ ಸೃಷ್ಟಿಸಿದೆ.
2016ರಲ್ಲಿ ನೋಟು ಅಮಾನ್ಯಗೊಳಿಸುವ ಪ್ರಕ್ರಿಯೆಯನ್ನು ಸೀಮಿತ ಅವಧಿಯಲ್ಲಿ ಜಾರಿಗೊಳಿಸಬೇಕಾಗಿದ್ದುದರಿಂದಾಗಿ, ಸಣ್ಣ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಮುದ್ರಿಸಲು ಸಾಕಷ್ಟು ಸಾಮರ್ಥ್ಯ ಸಾಲುವುದಿಲ್ಲ. ಹೀಗಾಗಿ ತತ್ಕ್ಷಣದ ಅಗತ್ಯ ಪೂರೈಸುವುದಕ್ಕಾಗಿ ₹2000 ನೋಟುಗಳು ಅನಿವಾರ್ಯ ಎಂದು ಅವರಿಗೆ ಅಧಿಕಾರಿಗಳು ಹೇಳಿದ ಬಳಿಕವಷ್ಟೇ ಒಲ್ಲದ ಮನಸ್ಸಿನಿಂದಲೇ ಅವರು ಒಪ್ಪಿಗೆ ಸೂಚಿಸಿರುವುದಾಗಿ ಸಂದರ್ಶನದಲ್ಲಿ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.
ಸೆಪ್ಟೆಂಬರ್ 30ರೊಳಗೆ ಎಲ್ಲ ₹2000 ಮುಖಬೆಲೆಯ ನೋಟುಗಳನ್ನು ಜನರು ವಿನಿಮಯ ಮಾಡಿಕೊಳ್ಳಬೇಕು ಅಥವಾ ಬ್ಯಾಂಕುಗಳಲ್ಲಿ ಠೇವಣಿ ಇರಿಸಬೇಕು ಎಂದು ಕೇಂದ್ರ ಸರಕಾರವು ಕಳೆದ ಶುಕ್ರವಾರ ಘೋಷಣೆ ಮಾಡಿದ ಬಳಿಕ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
₹2000ದ ನೋಟು ಬಡವರಿಗಾಗಿರುವುದಲ್ಲ, ಇದು ವಹಿವಾಟಿಗಿಂತಲೂ ಹಣ ಬಚ್ಚಿಡುವುದಕ್ಕೇ ಹೆಚ್ಚು ಉಪಯೋಗವಾಗುತ್ತದೆ ಎಂಬ ಬಗ್ಗೆ ಮೋದಿಯವರಿಗೆ ಆತಂಕವಿತ್ತು. 500, 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ, ಅದನ್ನು ಸೀಮಿತ ಅವಧಿಯೊಳಗೆ ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಆ ಬೆಲೆಯ ನೋಟುಗಳನ್ನು ಅಷ್ಟು ಪ್ರಮಾಣದಲ್ಲಿ ಮುದ್ರಿಸುವುದು ಸಾಧ್ಯವಿರಲಿಲ್ಲ. ಹೀಗಾಗಿ ದೊಡ್ಡ ಮುಖಬೆಲೆಯ ನೋಟುಗಳನ್ನು ಪರಿಚಯಿಸಬೇಕು ಎಂದು ಈ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ತಂಡವು ಮೋದಿಗೆ ಮನವರಿಕೆ ಮಾಡಲು ಪ್ರಯತ್ನಿಸಿತ್ತು. ಆದರೆ ಮೋದಿ ಅವರಿಗೆ ಇದು ಸರ್ವಥಾ ಇಷ್ಟವಿರಲಿಲ್ಲ ಎಂದು ಮಿಶ್ರಾ ವಿವರಿಸಿದ್ದಾರೆ.
ಈ ಕಾರಣಕ್ಕಾಗಿಯೇ, 2018ರಿಂದೀಚೆಗೆ ₹2000 ಮುಖಬೆಲೆಯ ನೋಟುಗಳನ್ನು ಮುದ್ರಿಸಲೇ ಇಲ್ಲ..
ನೋಟುಗಳ ಬದಲಾವಣೆಗೆ ಯಾವುದೇ ದಾಖಲೆಗಳಾಗಲೀ, ಗುರುತಿನ ಪತ್ರವಾಗಲೀ ಬೇಕಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆಯನ್ನೂ ನೀಡಿದೆ.
₹2000 ನೋಟುಗಳ ವಾಪಸಾತಿ ನಿರ್ಧಾರಕ್ಕಾಗಿ ಪ್ರತಿಪಕ್ಷಗಳು ತೀವ್ರವಾಗಿ ಕೇಂದ್ರ ಸರಕಾರವನ್ನು, ವಿಶೇಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸಿವೆ.
ಆದರೆ, ಕೇಂದ್ರದ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸಿ ಅಚ್ಚರಿಗೆ ಕಾರಣರಾಗಿದ್ದಾರೆ. 2016ರಲ್ಲಿ ₹2000ದ ನೋಟುಗಳನ್ನು ಜಾರಿಗೆ ತಂದದ್ದೇ ಮೂರ್ಖತನದ ನಡೆ. ಕಪ್ಪು ಹಣವನ್ನು ಸಂಗ್ರಹಿಸಿಟ್ಟುಕೊಳ್ಳುವವರಿಗೆ ಇದು ಸುಲಭದ ಹಾದಿ ಮಾಡಿಕೊಟ್ಟಿತ್ತು ಎಂದು ಚಿದಂಬರಂ ಹೇಳಿದ್ದಾರೆ.
ಇದೇ ವೇಳೆ, ಯಾವುದೇ ಗುರುತು ಪತ್ರಗಳಿಲ್ಲದೆಯೇ ₹2000ದ ನೋಟು ವಿನಿಮಯಕ್ಕೆ ಅವಕಾಶ ಕೊಟ್ಟಿರುವ ಕೇಂದ್ರದ ನಿರ್ಧಾರ ಪ್ರಶ್ನಿಸಿ ವಕೀಲ ಅಶ್ವಿನಿ ಕುಮಾರ್ ಎಂಬವರು ದೆಹಲಿ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರವಾಗಿ ಕೇಂದ್ರವು, ಇದು ನೋಟು ಅಮಾನ್ಯಗೊಳಿಸುವ ಪ್ರಕ್ರಿಯೆಯಲ್ಲ, ಬದಲಾಗಿ ಶಾಸನಾತ್ಮಕವಾಗಿ ನಡೆಸಿದ ಒಂದು ಪ್ರಕ್ರಿಯೆಯಷ್ಟೇ ಎಂದು ವಾದಿಸಿತು. ಈ ಕುರಿತು ನ್ಯಾಯಾಲಯವು ತನ್ನ ನಿರ್ಧಾರ ಕಾಯ್ದಿರಿಸಿದೆ.
ಈ ಕುರಿತು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರತಿಕ್ರಿಯಿಸಿ, ನೋಟು ಹಿಂತೆಗೆತದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ, ಸೆಪ್ಟೆಂಬರ್ 30ರ ಬಳಿಕವೂ ₹2000 ನೋಟು ಚಲಾವಣೆಯಲ್ಲಿರುತ್ತದೆಯೇ ಎಂಬ ಪ್ರಶ್ನೆಗೆ, ಈ ಕುರಿತು ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.

Average Rating