ಮಂಗಳೂರು: ಕನ್ನಡ ಕರಾವಳಿಯಲ್ಲಿ ದಶಕಗಳ ಹಿಂದೆ ನಡೆದ ಯುವತಿಯರ ಸಾವಿನ ನಿಗೂಢತೆ ಮತ್ತೆ ಮತ್ತೆ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾ ಇಲ್ಲದಿದ್ದ ಕಾಲದಲ್ಲಿ ಮುಚ್ಚಿಹೋಗಿದ್ದವುಗಳು ಮತ್ತೆ ಮೈಕೊಡವಿಕೊಂಡು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಲೇ ಇದೆ. ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಈಗ ಸದ್ದು ಮಾಡುತ್ತಿದ್ದರೆ, ಅದಕ್ಕೂ ಹಿಂದೆ ಪುತ್ತೂರಿನ ಸೌಮ್ಯಾ ಭಟ್ ಎಂಬಾಕೆಯ ನಿರ್ದಯ ಕೊಲೆ ಪ್ರಕರಣದಲ್ಲಿ ಆರೋಪಿ ಸಿಕ್ಕಿಬಿದ್ದರೂ ಮತ್ತೆ ತಪ್ಪಿಸಿಕೊಂಡಿದ್ದು, ಆ ದುರದೃಷ್ಟದ ಬಾಲೆಯ ಆತ್ಮವಿನ್ನೂ ನ್ಯಾಯಕ್ಕಾಗಿ ಕೂಗುತ್ತಿದೆ.
ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡ ಅಪರಾಧಿ ಮಿಲಿಟ್ರಿ ಅಶ್ರಫ್, ಈಗಲೂ ಎಲ್ಲಿದ್ದಾನೆಂಬ ಮಾಹಿತಿಯಿಲ್ಲದೆ, ಇದರ ಹಿಂದಿನ ರಾಜಕೀಯ ಕೈವಾಡದ ಕುರಿತಾಗಿಯೂ ಸಮುದಾಯದವರು ಹಿಡಿಶಾಪ ಹಾಕುತ್ತಿದ್ದಾರೆ, ಕೋಪದಿಂದ ಕುದಿಯುತ್ತಿದ್ದಾರೆ ಮತ್ತು ಆಘಾತ ಅನುಭವಿಸಿದ್ದಾರೆ.
ಏನಿದು ವದ್ಯ ಸೌಮ್ಯಾ ಭಟ್ ಕೊಲೆ ಪ್ರಕರಣ?
ಅದು 1997ರ ಆಗಸ್ಟ್ 7. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದ ಸೌಮ್ಯಾ ಭಟ್ ಎಂಬ ಮುಗ್ಧ ಹುಡುಕಿ ಕ್ರೂರಿಯ ಕೈಗೆ ಸಿಲುಕಿ ಒದ್ದಾಡಿ ಪ್ರಾಣಬಿಟ್ಟ ಕರಾಳ ದಿನವದು. ಅಂದು ಸಂಜೆ 5 ಗಂಟೆ ಸುಮಾರಿಗೆ, ಕಾಲೇಜು ದಿನಾಚರಣೆಯ ಸಂಭ್ರಮ ಮುಗಿಸಿ, ಕಬಕದಲ್ಲಿ ಬಸ್ಸಿಳಿದು, ಒಳರಸ್ತೆಯಲ್ಲಿ ರೈಲು ಹಳಿ ದಾಟಿ, ಕೆದಿಲದಲ್ಲಿರುವ ಮನೆಯತ್ತ ಸೌಮ್ಯಾ ಹೆಜ್ಜೆ ಹಾಕುತ್ತಿದ್ದಳು. ಅದಾಗಲೇ ಕತ್ತಲಾಗುತ್ತಿತ್ತು. ಅವಳನ್ನೇ ಹಿಂಬಾಲಿಸುತ್ತಿದ್ದ ಒಬ್ಬಾತ ಕ್ರೂರಿ, ಆಕೆಯ ಮೇಲೆರಗಿ ಲೈಂಗಿಕ ದೌರ್ಜನ್ಯಕ್ಕೆ ಮುಂದಾದ. ಈ ಹುಡುಗಿ ತೀವ್ರ ಪ್ರತಿರೋಧ ಒಡ್ಡಿ, ಆತನ ಹಿಡಿತದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಆದರೆ, ಆಕೆ ನಿಟ್ಟುಸಿರು ಬಿಡುವಷ್ಟರಲ್ಲಿ, ಮಿಲಿಟರಿಯಲ್ಲಿ ಕೆಲಸಕ್ಕಿದ್ದು, ಶಿಸ್ತಿನ ಸಿಪಾಯಿಯಾಗಬೇಕಿದ್ದ ಅಶ್ರಫ್ ಎಂಬ ರಾಕ್ಷಸೀ ವ್ಯಕ್ತಿ, ಆಕೆಯನ್ನು ಹಿಂಬಾಲಿಸಿದ್ದ. ಆಲದಗುಂಡಿ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಈ ಪಾಪಿಯು ಆಕೆಯ ಮೇಲೆರಗಿದ್ದಷ್ಟೇ ಅಲ್ಲದೆ 20 ಬಾರಿ ಚಾಕುವಿನಿಂದ ಇರಿದು ಅಬಲೆಯನ್ನು ಅಮಾನುಷವಾಗಿ, ಬರ್ಬರವಾಗಿ ಕೊಲೆಗೈದು ತನ್ನ ‘ಪೌರುಷ’ ಪ್ರದರ್ಶಿಸಿದ್ದ. ಈ ಘಟನೆ ಪುತ್ತೂರು ಮಾತ್ರವೇ ಅಲ್ಲದೆ, ಇಡೀ ರಾಜ್ಯವನ್ನೇ ನಡುಗಿಸಿತ್ತು.
ಬಂಧನವಾಯ್ತು, ಆದರೆ… ತಪ್ಪಿಸಿಕೊಂಡವನ ಪತ್ತೆ ಮಾಡಲೇ ಇಲ್ಲ!
ಈ ಅತ್ಯಂತ ರಾಕ್ಷಸೀ ಕೃತ್ಯದಿಂದ ಪುತ್ತೂರಿನ ಜನತೆ ಕೆರಳಿ ಕೆಂಡವಾದರು. ನ್ಯಾಯಕ್ಕಾಗಿ ಹೋರಾಟ ಆರಂಭವಾಯಿತು, ಪ್ರತಿಭಟನೆ ತಾರಕಕ್ಕೇರಿತು, ಇಡೀ ಪುತ್ತೂರು ಪಟ್ಟಣ ಬಂದ್ ಆಚರಿಸಿತು. ಕರ್ಫ್ಯೂ ಘೋಷಿಸಲಾಯಿತು. ಜನರ ಒತ್ತಡದಿಂದಾಗಿ, ಕೊನೆಗೂ ಆರೋಪಿ ಅಶ್ರಫ್‌ನನ್ನು ಬಂಧಿಸಲಾಯಿತು. ಎರಡೇ ತಿಂಗಳಲ್ಲಿ ಆತ ಮಂಗಳೂರಿನಲ್ಲಿ ಪೊಲೀಸರ ಕೈಯಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ! ತದನಂತರ, ಜನಾಕ್ರೋಶ ಜಾಸ್ತಿಯಾಗುತ್ತಿದ್ದಂತೆಯೇ ಆತನನ್ನು ಕೆಲವೇ ದಿನಗಳಲ್ಲಿ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ಮತ್ತೆ ಸೆರೆಹಿಡಿದರು ಪೊಲೀಸರು. ಅದಾಗಲೇ ಕುಖ್ಯಾತನಾಗಿದ್ದ ಅಶ್ರಫ್, ಎರಡು ವರ್ಷಗಳೊಳಗೆ, ಜೈಲಿನಿಂದಲೇ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ! ಈಗ ಆತ ಎಲ್ಲಿದ್ದಾನೆಂಬುದೇ ಜನರಿಗೆ ಅತ್ಯಂತ ನಿಗೂಢ, ಕುತೂಹಲದ ವಿಷಯ. ಇದು ಭಯದ ವಿಷಯವೂ ಆಗಿರುವುದೇಕೆಂದರೆ, ನಮ್ಮ ಸ್ಥಿತಿ ಇಷ್ಟೇನಾ ಎಂಬ ಅಸಹಾಯಕ ಪರಿಸ್ಥಿತಿ. ವಿದೇಶಕ್ಕೆ ಪರಾರಿಯಾಗಿರಬಹುದು ಎಂಬ ಶಂಕೆಯೂ ಇದೆ. ಆದರೆ ಎಲ್ಲಿದ್ದಾನೆಂಬ ವಿಚಾರವಂತೂ ತಿಳಿಯಲೇ ಇಲ್ಲ.
ಈ ಅಪರಾಧ ಕೃತ್ಯ ನಡೆದಾಗ ಅಶ್ರಫ್ ಮಿಲಿಟರಿಯಲ್ಲಿದ್ದ ಎನ್ನಲಾಗುತ್ತಿದೆ. ಈ ದುರಂತ ಪ್ರಕರಣ ಘಟಿಸುವ ಒಂದು ತಿಂಗಳ ಹಿಂದಷ್ಟೇ ಆತ ಪುತ್ತೂರಿಗೆ ಬಂದಿದ್ದ. ಘಟನೆ ನಡೆಯುವ ಎರಡು ದಿನದ ಹಿಂದಷ್ಟೇ ಅಶ್ರಫ್, ಸೌಮ್ಯಾಳ ತಂದೆಯನ್ನು ಭೇಟಿಯಾಗಿದ್ದ ಮತ್ತು ಅವಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ. ತಂದೆ ಗಣಪತಿ ಭಟ್, ತನ್ನ ಮಗಳ ಹಂತಕನೇ ಮುಂದಿದ್ದಾನೆಂಬುದನ್ನು ತಿಳಿಯದೆ, ಬಹುಶಃ ಸಹಪಾಠಿ ಇರಬೇಕೆಂದು ಭ್ರಮಿಸಿ, ಅವಳ ಕಾಲೇಜು ಜೀವನದ ಕುರಿತಾಗಿ, ಹೋಗುವ ಬರುವ ಸಮಯದ ಬಗೆಗೆ ಎಲ್ಲ ಮಾಹಿತಿಯನ್ನೂ ಹಂಚಿಕೊಂಡಿದ್ದರು. ತನ್ನ ಪೈಶಾಚಿಕ ಕೃತ್ಯಕ್ಕೆ ಪೂರ್ವ ಸಿದ್ಧತೆ ಇದಾಗಿತ್ತೆಂಬುದು ಪಾಪ ಗಣಪತಿ ಭಟ್ ಅವರಿಗೆ ತಿಳಿಯುವುದಾದರೂ ಹೇಗೆ? ಊರವನೇ ಎಂದು ನಂಬಿಬಿಟ್ಟಿದ್ದರು ಅವರು.
ಆರೋಪಿ ರಕ್ಷಣೆಗೆ ಅಂದೂ ಯತ್ನಿಸಲಾಗಿತ್ತು!
ಈ ಪ್ರಕರಣದ ಬಳಿಕ ಸೌಮ್ಯವಾಗಿದ್ದ ಪುತ್ತೂರು ಕೆಂಡವಾಗಿತ್ತು. ಹಿಂಸಾಚಾರ ಭುಗಿಲೆದ್ದಿತ್ತು. ನಾಗರ ಪಂಚಮಿ ಹಿಂದಿನ ದಿನ ನಡೆದ ಆ ಕೊಲೆಯ ಸಂದರ್ಭ ರಾಜ್ಯದಲ್ಲಿ ಇದ್ದದ್ದು ಜೆ.ಎಚ್.ಪಟೇಲ್ ಅವರ ಸಂಯುಕ್ತ ಜನತಾ ದಳ ಸರಕಾರ. ದಕ್ಷಿಣ ಕನ್ನಡ ಜಿಲ್ಲೆಗೆ ಉಸ್ತುವಾರಿ ಆಗಿದ್ದವರು ಮೊಯ್ದೀನ್ ಅವರು. ಆದರೆ, ಕೆಲವೇ ಗಂಟೆಗಳಲ್ಲಿ ಅಶ್ರಫ್ ಅನ್ನು ಪೊಲೀಸರು ಬಂಧಿಸಿದ್ದರೂ, ಆತನ ರಕ್ಷಣೆಗೆ ಜನ ನಿಂತಿದ್ದವರು ಹಲವರು. ಆತ ಮಾನಸಿಕ ಅಸ್ವಸ್ಥ, ಹುಚ್ಚ, ಸೈಕೋ ಎಂದೆಲ್ಲ ಬಿಂಬಿಸಲಾಯಿತು. ಅದೇ ರೀತಿ, ಆತ ತುಂಬಾ ಒಳ್ಳೆಯವನು, ಹೀಗೆ ಮಾಡಲಾರ ಎಂದೆಲ್ಲ ವಾದಿಸುವವರು ಅಂದು ಕೂಡ ಇದ್ದರು. ಹೀಗಾಗಿಯೇ ಪುತ್ತೂರಿನ ಜನರಿಗೆ ಆತಂಕ, ಶಂಕೆ ಶುರುವಾಗಿತ್ತು ಮತ್ತು ಪ್ರತಿಭಟನೆಯೂ ಜೋರಾಗಿ ನಡೆದಿತ್ತು.
ಪುತ್ತೂರಿಗೆ ಪುತ್ತೂರೇ ತಲೆ ತಗ್ಗಿಸುವ ಘಟನೆ ನಡೆದು ಆಗಸ್ಟ್ 7ಕ್ಕೆ ಇಪ್ಪತ್ತಾರು ವರ್ಷಗಳಾದವು. ಪುತ್ತೂರು ಜನರು ಇನ್ನೂ ಪಾಪಿಯ ಕೃತ್ಯವನ್ನು ಮರೆತಿಲ್ಲ. ನಿಷ್ಪಾಪಿ ಸೌಮ್ಯಾ ಭಟ್ ಸಾವಿಗೆ ನ್ಯಾಯ ಸಿಕ್ಕಿಲ್ಲ. ಘಟನೆಗೆ ಎರಡು ದಿನಗಳ ಮುಂಚೆಯೂ ಪುತ್ತೂರಿನ ಮನೆಯೊಂದಕ್ಕೆ ನುಗ್ಗಿ, ಹುಡುಗಿಯೊಬ್ಬಳ ಮೇಲೆ ಎಗರಿದ್ದ ಅಶ್ರಫ್, ಒಬ್ಬ ವಿಕೃತ ಕಾಮಿ ಎಂದೂ ಹೇಳಲಾಗುತ್ತಿತ್ತು. ಅತ್ಯಂತ ಶಾಂತಿಯುತ ಬಾಳ್ವೆ ನಡೆಸುತ್ತಿದ್ದ ಸಮುದಾಯವೊಂದು ಭಯದಲ್ಲೇ ಕತ್ತಲಲ್ಲೇ ಕಾಲ ಕಳೆಯುತ್ತಿದೆ. ಏನೇ ಮಾಡಿದರೂ ಆರೋಪಿ ಅಶ್ರಫ್ ಸಿಕ್ಕಿಲ್ಲ. ಸತ್ಯವಂತರಿಗಿದು ಕಾಲವಲ್ಲ ಎಂಬ ದಾಸವಾಣಿಯು ನಿಜವಾಗಿದೆ ಎಂಬುದನ್ನು ನಂಬಬೇಕೋ, ಬಿಡಬೇಕೋ ಎಂಬ ದುರಂತ ಜೀವನ ಪುತ್ತೂರು ಜನರದು. ಸೌಮ್ಯಾಳ ಸ್ಮಾರಕ, ಕಬಕ ಬಸ್ ನಿಲ್ದಾಣವಂತೂ ಮೌನವಾಗಿ ರೋದಿಸುತ್ತಲೇ ಇದೆ. ಅಶ್ರಫ್ ಬಂಧನದ ಗಂಭೀರ ಪ್ರಯತ್ನ ನಡೆಯಲೇ ಇಲ್ಲವೆಂಬುದು ಪುತ್ತೂರು ಮಂದಿಯ, ಆ ಮುಗ್ಧ ಮಗಳನ್ನು ಕಳೆದುಕೊಂಡು ಕತ್ತಲಲ್ಲೇ ಇರುವ ಕುಟುಂಬದ ನಿಟ್ಟುಸಿರು, ಹಿಡಿಶಾಪಕ್ಕೆ ಕಾರಣ.

Average Rating