ಇಡೀ ದೇಶಕ್ಕೇ ಕಾಂಗ್ರೆಸ್ ಬಗ್ಗೆ No Confidence ಎಂದ ಪ್ರಧಾನಿ | ಕಾಂಗ್ರೆಸ್ ವಿರೋಧಿಸಿದರೆ ಏಳಿಗೆ ಖಚಿತ!
ಹೊಸದಿಲ್ಲಿ: ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ಗೊತ್ತುವಳಿ ಕುರಿತ ಚರ್ಚೆಗೆ ಗುರುವಾರ (ಆಗಸ್ಟ್ 10, 2023) ಸದನದಲ್ಲಿ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿಪಕ್ಷಗಳಿಗೆ ಮುಟ್ಟಿನೋಡಿಕೊಳ್ಳುವಂತೆ ನೀಡಿದ ಪ್ರತ್ಯುತ್ತರದಲ್ಲಿ, 2024ರ ಮಹಾ ಚುನಾವಣೆಯ ವಿಷಯಕ್ಕೆ ಮುನ್ನುಡಿ ಹಾಡಿದ್ದಾರೆ.
ನರೇಂದ್ರ ಮೋದಿ ಸರಕಾರ ಬಂದು ದೇಶದ ಪ್ರತಿಷ್ಠಿತ ಸಂಸ್ಥೆಗಳಾದ HAL, LIC ಹಾಗೂ ಬ್ಯಾಂಕುಗಳು ನಷ್ಟಕ್ಕೊಳಗಾಗಿವೆ ಎಂದು ಸುಳ್ಳುಗಳನ್ನೇ ಹೇಳುತ್ತಾ ಬಂದಿದ್ದ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಿಗೆ ನರೇಂದ್ರ ಮೋದಿ ಸರಿಯಾದ ಉತ್ತರವನ್ನೇ ಕೊಟ್ಟಿದ್ದಾರೆ ಮತ್ತು ದೇಶದ ಪ್ರಜೆಗಳ ಮುಂದೆ ಸತ್ಯಾಂಶವನ್ನು ಬಿಚ್ಚಿಟ್ಟಿದ್ದಾರೆ.
ನಾವು ಈ ದೇಶವನ್ನು ಮುಂದಿನ ಐದು ವರ್ಷಗಳಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುವಲ್ಲಿ ಮುಂದಡಿಯಿಟ್ಟಿದ್ದೇವೆ ಎಂದು ಮೋದಿ ಅವರು ದೇಶದ ಜನತೆಯಲ್ಲಿ ವಿಶ್ವಾಸ ಮೂಡಿಸಿದ್ದಾರೆ. ಇದೇ ವೇಳೆ, ವಿರೋಧ ಪಕ್ಷಗಳು ಸರಿಯಾಗಿ ಹೋಂ ವರ್ಕ್ ಮಾಡಿಲ್ಲ ಎಂದೂ ಅವರು ಕುಟುಕುತ್ತಲೇ ದೇಶದ ಮುಂದೆ ಸತ್ಯಾಂಶಗಳನ್ನು ಬಿಚ್ಚಿಡುತ್ತಾ ಹೋದರು.
ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡುತ್ತೇವೆ ಎಂದು ನಾವು ಹೇಳಿದಾಗ, ಅದು ಹೇಗೆ ಸಾಧ್ಯ ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಇದನ್ನೂ ನಾನೇ ಹೇಳಿಕೊಡಬೇಕಾಗಿದೆ ಎಂದರು ಮೋದಿ.
ಕೇಳಲೇಬೇಕಾದ ಅದ್ಭುತ ಮಾತುಗಳು- ಇಲ್ಲಿವೆ ನೋಡಿ:
ಮೋದಿ ಹೇಳಿದ ರಹಸ್ಯ
ದೇಶದ ಅಭಿವೃದ್ಧಿಗಾಗಿ ತಾವಿಟ್ಟ ಪ್ರತಿಯೊಂದು ಹೆಜ್ಜೆಯನ್ನೂ ಟೀಕಿಸುತ್ತಲೇ ಬಂದ ವಿರೋಧ ಪಕ್ಷಗಳ ಬೆವರಳಿಸುವ ಯಾವುದೇ ಅವಕಾಶವನ್ನೂ ಪ್ರಧಾನಿ ನರೇಂದ್ರ ಮೋದಿ ಕೈಚೆಲ್ಲಲಿಲ್ಲ.
ನಾನು ನಿಮಗೊಂದು ರಹಸ್ಯ ವಿಚಾರವನ್ನು ಹೇಳುತ್ತೇನೆ, ಕೇಳಿ ಎಂದ ಮೋದಿ, “ಪ್ರತಿಪಕ್ಷಗಳಿಗೆ ಒಂದು ರಹಸ್ಯ ವರದಾನ ದೊರೆತಿದೆ. ಅದೆಂದರೆ, ಅವರು ಯಾರ ವಿರುದ್ಧ ಮಾತನಾಡುತ್ತಾರೋ, ಅವರು/ಅವುಗಳೆಲ್ಲವೂ ಅದ್ಭುತವಾಗಿ ಉದ್ಧಾರವಾಗುತ್ತಾರೆ. ಅದಕ್ಕೆ ಬಲವಾದ ಉದಾಹರಣೆ ನಾನೇ ನಿಮ್ಮ ಮುಂದಿದ್ದೇನೆ” ಎಂದು ತಮ್ಮನ್ನೇ ತೋರಿಸುತ್ತಾ ನುಡಿದರು. 20 ವರ್ಷದಿಂದ ನನಗೇನೂ ಆಗಲಿಲ್ಲ, ಒಳ್ಳೆಯದೇ ಆಗಿದೆ ಎಂದು ನರೇಂದ್ರ ಮೋದಿ ಹೇಳಿದಾಗ, ಆಡಳಿತ ಪಕ್ಷದ ಮಂದಿ ಸಂತಸದಿಂದ ಮೇಜು ಕುಟ್ಟಿ ಸಂಭ್ರಮಿಸಿದರು.
ಕಾಂಗ್ರೆಸ್ ಸುಳ್ಳುಗಳನ್ನು ಬಯಲು ಮಾಡಿದ ಮೋದಿ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ HAL ಸಂಸ್ಥೆಯೇ ನಾಶವಾಯಿತು ಎಂದಿತು ಕಾಂಗ್ರೆಸ್. ಹೆಚ್ಎಎಲ್ ನೌಕರರು ಉದ್ಯೋಗ ಕಳೆದುಕೊಳ್ಳುತ್ತಾರೆಂದು ಹೆದರಿಸಿ ಅವರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟಲಾಯಿತು. ಆದರೆ ಸತ್ಯಾಂಶ ಇಲ್ಲಿದೆ. ಹಿಂದೆಂದಿಗಿಂತಲೂ HAL ಅದ್ಭುತ ಆದಾಯ ಗಳಿಸಿದೆ ಅದು ಮತ್ತು ಈಗ ದೇಶದ ಹೆಮ್ಮೆಯಾಗಿ ಬೆಳೆದಿದೆ ಎಂದರು.
ದೇಶದ ಪ್ರತಿಷ್ಠಿತ ವಿಮಾ ಸಂಸ್ಥೆ ಎಲ್ಐಸಿ ಶೇರುಮಾರುಕಟ್ಟೆಗೆ ಐಪಿಒ ಮೂಲಕ ಕಾಲಿಟ್ಟಾಗ, ಅದರ ಸರ್ವನಾಶವಾಯ್ತು, ದೇಶದ ಬಡ ಜನರ ಹಣ ಮುಳುಗಿತು ಮುಂತಾಗಿ ಏನೇನೋ ಸುಳ್ಳು ಆರೋಪ ಮಾಡಿದರು ಕಾಂಗ್ರೆಸಿನವರು. ಆದರೆ, ಇದೇ ಜೀವ ವಿಮಾ ಸಂಸ್ಥೆ ಅದ್ಭುತ ಲಾಭಾಂಶ ದಾಖಲಿಸಿ ಮತ್ತಷ್ಟು ಸುದೃಢವಾಗಿ ನಿಂತಿದೆ ಎಂದರು ಮೋದಿ. ಅಷ್ಟೇ ಅಲ್ಲ, ಯಾವುದೇ ಸರಕಾರಿ ಸಸ್ಥೆಯ ವಿರುದ್ಧ ಈ ಕಾಂಗ್ರೆಸ್ ಮತ್ತು ಉಳಿದ ವಿರೋಧ ಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಲೇ ಹೋಗಲಿ, ಅವುಗಳಲ್ಲಿ ಹೂಡಿಕೆ ಮಾಡಿದರೆ ನಮಗೆ ಲಾಭವೇ ಹೆಚ್ಚಾಗುತ್ತದೆ ಎಂದು ಶೇರು ಮಾರುಕಟ್ಟೆ ಮಂದಿ ನಂಬಿಯೇಬಿಟ್ಟಿದ್ದಾರೆ ಎಂದು ಮೋದಿ ಕುಟುಕಿದರು.
ಬ್ಯಾಂಕಿಂಗ್ ವ್ಯವಸ್ಥೆ ಕುಲಗೆಟ್ಟುಹೋಗಿದೆ ಎಂದವರು ಕೂಗಾಡಿದರು. ಈಗ ನೋಡಿ, ಸರಕಾರಿ ಸ್ವಾಮ್ಯದ ಬ್ಯಾಂಕುಗಳು ದುಪ್ಪಟ್ಟು ಲಾಭದಲ್ಲಿವೆ ಎಂದು ವಿವರಿಸಿದರು ಪ್ರಧಾನಿ ಮೋದಿ.
ಇದೀಗ ಅವರು (ಕಾಂಗ್ರೆಸ್, ವಿರೋಧ ಪಕ್ಷಗಳು) ಈ ದೇಶದ ಪ್ರಜಾಪ್ರಭುತ್ವದ ಬಗ್ಗೆ ದೂರಲಾರಂಭಿಸಿದ್ದಾರೆ. ಅದು ಕೂಡ ಜಗತ್ತಿನಲ್ಲಿ ಬೆಳಗುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಮತ್ತಷ್ಟು ದೃಢವಾಗಲಿದೆ ಎಂದ ನರೇಂದ್ರ ಮೋದಿ, “ನಮ್ಮ ಸರ್ಕಾರದ ಮೂರನೇ ಅವಧಿಯಲ್ಲಿ” ಎನ್ನುತ್ತಾ, ಮುಂದಿನ ಚುನಾವಣೆಯಲ್ಲೂ ತಮ್ಮದೇ ಗೆಲುವು ಎಂಬುದನ್ನು ಉಲ್ಲೇಖಿಸುತ್ತಾ, ಭಾರತ 3ನೇ ಅತಿದೊಡ್ಡ ಅರ್ಥವ್ಯವಸ್ಥೆ ಆಗಿ ಮೂಡಿಬರಲಿದೆ ಎಂದು ಭರವಸೆ ನೀಡಿದರು.
ನಮ್ಮ ಮೇಲೆ ದೇಶಕ್ಕೆ ವಿಶ್ವಾಸವಿದೆ, ಕಾಂಗ್ರೆಸ್ ಮೇಲೆ ಅವಿಶ್ವಾಸ
ಅವಿಶ್ವಾಸ ನಿರ್ಣಯವನ್ನೇ ಹಿಡಿದುಕೊಂಡು ಅದನ್ನೇ ಕಾಂಗ್ರೆಸ್ನತ್ತ ತಿರುಗಿಸಿದ ಪ್ರಧಾನಿ ಮೋದಿ, ಕಳೆದ ಅವಧಿಯಲ್ಲೂ ಅವಿಶ್ವಾಸ ನಿರ್ಣಯ ಮಂಡಿಸಿದ್ದರವರು.ಆಗಲೇ ಹೇಳಿದ್ದೆ, ನೀವು ಮುಂದಿನ ಬಾರಿಯೂ ನಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತೀರೆಂದು. ಆ ಭವಿಷ್ಯವೀಗ ನಿಜವಾಗಿದೆ ಎಂದು ನೆನಪಿಸಿದರು.
ಆದರೆ, ಕಳೆದ ಎರಡು ದಶಕಗಳಲ್ಲಿ ಕಾಂಗ್ರೆಸ್ ವಿರುದ್ಧವೇ ದೇಶದ ಜನತೆಗೆ ಅವಿಶ್ವಾಸವಿದೆ. ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ವಿಶ್ವಾಸ ಕಳೆದುಕೊಂಡು, ಅಧಿಕಾರಗಳನ್ನು ಕಳೆದುಕೊಳ್ಳುತ್ತಾ ಬಂದಿದೆ. ತಮಿಳುನಾಡು, ಉತ್ತರ ಪ್ರದೇಶ, ಬಿಹಾರ, ತ್ರಿಪುರ, ಒಡಿಶಾ, ನಾಗಾಲ್ಯಾಂಡ್, ದೆಹಲಿ, ಆಂಧ್ರಪ್ರದೇಶ – ಈ ರಾಜ್ಯಗಳಲ್ಲೆಲ್ಲಾ ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಹೋಗಿ ದಶಕಗಳೇ ಕಳೆದವು. ಆ ರಾಜ್ಯಗಳಲ್ಲಿ ಕಾಂಗ್ರೆಸ್ ಕೈಗೆ ಅಧಿಕಾರ ನೀಡಲು ಜನರಿಗೆ ವಿಶ್ವಾಸವೇ ಬರಲಿಲ್ಲ ಎಂದು ಕಟಕಿಯಾಡಿದರು.
ತಮ್ಮ ವರ್ತನೆಯಿಂದ, ಕೆಲವು ವಿರೋಧ ಪಕ್ಷಗಳು ದೇಶಕ್ಕಿಂತಲೂ ಪಕ್ಷವೇ ಮುಖ್ಯ ಎಂಬುದನ್ನು ಸಾಬೀತುಪಡಿಸುತ್ತಿವೆ. ನಿಮಗೆ ಬಡವರ ಹಸಿವಿನ ಬಗ್ಗೆ ಕಾಳಜಿ ಇಲ್ಲ, ಅಧಿಕಾರದ ಹಸಿವೇ ನಿಮ್ಮ ಮನಸ್ಸಿನಲ್ಲಿ ಕಾಡುತ್ತಿದೆ ಎಂದ ನರೇಂದ್ರ ಮೋದಿ, ಭಾರತೀಯರಲ್ಲಿ ಕಾಂಗ್ರೆಸ್ನತ್ತ ಇರುವ ಅವಿಶ್ವಾಸವೇ ಬಲವಾಗಿ ಬೇರೂರಿದೆ ಎಂದರು.
ಅದೇ ರೀತಿ, ವಿದೇಶದ (ಕೊರೊನಾ) ಲಸಿಕೆಗಳ ಮೇಲೆ ನಿಮಗೆ ವಿಶ್ವಾಸ, ಆದರೆ ಭಾರತದಲ್ಲೇ ತಯಾರಾದ ಲಸಿಕೆಗಳ ಬಗ್ಗೆ ಅವಿಶ್ವಾಸ ಎಂದು ವಿರೋಧ ಪಕ್ಷಗಳ ಮೇಲೆ ನೇರವಾಗಿಯೇ ಮೋದಿ ಮುಗಿಬಿದ್ದರು.
ಒಂದು ಕಡೆ, ಕಾಶ್ಮೀರವು ಭಯೋತ್ಪಾದನೆಯ ಬೆಂಕಿಯಲ್ಲಿ ಉರಿಯುತ್ತಿದ್ದರೆ ಕಾಂಗ್ರೆಸ್ ಪಕ್ಷದವರು ಕಾಶ್ಮೀರಿಗಳ ಮೇಲೆ ಅವಿಶ್ವಾಸ ತೋರ್ಪಡಿಸಿದರು ಮತ್ತು ಹುರಿಯಲ್ ಮತ್ತಿತರ ಪ್ರತ್ಯೇಕತಾವಾದಿಗಳ ಮೇಲೆ ವಿಶ್ವಾಸವಿರಿಸಿದರು ಎಂದು ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಈ ಅವಿಶ್ವಾಸ ನಿರ್ಣಯವು ನಮಗೆ ದೇವರೇ ನೀಡಿದ ವರದಾನ. 2018ರಲ್ಲಿ ಕಾಂಗ್ರೆಸ್ ಪಕ್ಷವು ಅವಿಶ್ವಾಸ ನಿರ್ಣಯ ಮಂಡಿಸಿತು, ನಾವು ಹೆಚ್ಚು ಅಂತರದಿಂದ 2019ರಲ್ಲಿ ಪುನಃ ಅಧಿಕಾರಕ್ಕೇರಿದೆವು ಎಂದು ಮೋದಿ ನೆನಪಿಸಿದರಲ್ಲದೆ, ನೀವು 2028ರಲ್ಲಿ ಪುನಃ ಅವಿಶ್ವಾಸ ನಿರ್ಣಯ ಮಂಡಿಸುವ ಹೊತ್ತಿಗೆ ದೇಶವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಮೂಡಿ ಬರುತ್ತದೆ ಎಂದರು.
ಮಣಿಪುರ ಹಿಂಸಾಚಾರ ಕುರಿತು ಪ್ರಧಾನ ಮಂತ್ರಿಯವರೇ ಸದನಕ್ಕೆ ಬಂದು ಉತ್ತರಿಸಬೇಕೆಂದು ಆಗ್ರಹಿಸುತ್ತಿದ್ದ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು, ಪ್ರಧಾನಿ ಉತ್ತರಕ್ಕೆ ಅಡ್ಡಿ ಪಡಿಸಿದ್ದಲ್ಲದೆ, ಸಭಾತ್ಯಾಗವನ್ನೂ ಮಾಡಿದರು. ಪ್ರಧಾನಿಯ ಉತ್ತರ ಕೇಳಲೆಂದೇ ಅವಿಶ್ವಾಸ ನಿರ್ಣಯ ಮಂಡಿಸಿರುವುದಾಗಿ ಈ ಗೊತ್ತುವಳಿಯ ವ್ಯವಸ್ಥೆಯನ್ನು ಅಣಕಿಸಿದವರು, ಉತ್ತರ ಕೇಳಲು ಸಭೆಯಲ್ಲಿ ಇಲ್ಲದಿರುವುದು ವಿಚಿತ್ರವಾಗಿ ಕಂಡಿತು.

[…] ಇಂಡಿಯಾ ಹೆಸರಿಟ್ಟುಕೊಂಡ ಪ್ರತಿಪಕ್ಷಗಳ ಒಕ್ಕೂಟವು ದೇಶದ ಬಗ್ಗೆ, ದೇಶದ ಪ್ರಗತಿಯ ಬಗ್ಗೆ ಹಾಗೂ ಎನ್ಡಿಎ ಸರಕಾರದ ನಡೆಸಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸುಳ್ಳುಗಳನ್ನು ಹೆಣೆಯುತ್ತಾ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂಚಿಂಚಾಗಿ ಬಯಲುಗೊಳಿಸಿದ್ದರು. ಇಲ್ಲ… […]