ಕಾನ್ಪುರ: ನಮ್ಮನ್ನು ನಾವು ಅರಿಯಲು, ಮನಶ್ಶಾಂತಿಗಾಗಿ, ನೆಮ್ಮದಿಗಾಗಿ Bhagavad Gita ಸಹಿತ ಧಾರ್ಮಿಕ ಗ್ರಂಥಗಳ ಪಠಣ ಮಾಡಬೇಕೆಂದು ನಮಗೆ ಹಿರಿಯರು ಹೇಳುತ್ತಾ ಇರುತ್ತಾರೆ. ಇದು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೂ ಪೂರಕ ಮತ್ತು ಆತ್ಮವಿಶ್ವಾಸ ವೃದ್ಧಿಗೆ ಅನುಕೂಲಕರ.
ಅದಕ್ಕೆ ಅನುಗುಣವಾಗಿ, ಕಾನ್ಪುರದಲ್ಲೊಬ್ಬ ವೈದ್ಯರು ಇದೀಗ ತಮ್ಮ ಚಿಕಿತ್ಸೆಯ ಭಾಗವಾಗಿ ಈ Bhagavad Gita ಸಹಿತ ಧರ್ಮಗ್ರಂಥಗಳನ್ನು ಓದಲು ರೋಗಿಗಳಿಗೆ ನೀಡುತ್ತಿದ್ದಾರೆ!
ಇವರು ಡಾ.ನೀರಜ್ ಕುಮಾರ್. ಕಾನ್ಪುರದ ಲಕ್ಷ್ಮೀಪತ್ ಸಿಂಘಾನಿಯಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ & ಕಾರ್ಡಿಯಾಕ್ ಸರ್ಜರಿ ಸಂಸ್ಥೆಯ ಹೃದ್ರೋಗ ತಜ್ಞ ಇವರು. ಅವರ ಹೃದಯವೈಶಾಲ್ಯ ದೊಡ್ಡದು.
ಅವರು ಯಾವುದೇ ಶಸ್ತ್ರಚಿಕಿತ್ಸೆ ಅಥವಾ ದೀರ್ಘಕಾಲಿಕ ಚಿಕಿತ್ಸೆಗೆ ಮುನ್ನ ಭಗವದ್ಗೀತೆ, ಹನೂಮಾನ್ ಚಾಲೀಸಾ, ರಾಮಾಯಣ ಮತ್ತು ಅದರ ಸುಂದರಕಾಂಡ ಗ್ರಂಥಗಳನ್ನು ಓದಲು ರೋಗಿಗಳಿಗೆ ನೀಡುತ್ತಾರೆ ಮತ್ತು ಓದುವಂತೆಯೂ ಸೂಚಿಸುತ್ತಾ, ರೋಗಿಗಳ ಹೃದಯ ಗೆಲ್ಲುವ ಹೃದಯ ತಜ್ಞ ಅವರು.
ಇದಕ್ಕೇನು ಕಾರಣ? ಕಾರಣ ಬೇರೇನಿಲ್ಲ, ನಮ್ಮ ಭಾರತೀಯ ಸಂಸ್ಕಾರದಲ್ಲೇ ಅದು ಇದೆ. “ಧಾರ್ಮಿಕ ಗ್ರಂಥಗಳನ್ನು ಓದಿದರೆ ಮಾನವರಿಗೆ, ವಿಶೇಷವಾಗಿ ಕಾಯಿಲೆ ಪೀಡಿತರಿಗೆ ಮಾನಸಿಕವಾಗಿ ದೃಢತೆ ಸಿಗುತ್ತದೆ. ಚಿಕಿತ್ಸೆಯ ವೇಳೆ ಅವರ ಆತ್ಮಶಕ್ತಿಯನ್ನೂ ಅದು ಉತ್ತೇಜಿಸುವ ಮೂಲಕ ಚಿಕಿತ್ಸೆಗೆ ಶೀಘ್ರ ಸ್ಪಂದಿಸುತ್ತಾರೆ” ಎಂದು ಟೈಮ್ಸ್ ಆಫ್ ಇಂಡಿಯಾದ ಜೊತೆ ಮಾತನಾಡುತ್ತಾ ಡಾ. ನೀರಜ್ ಕುಮಾರ್ ಹೇಳುತ್ತಾರೆ.
ಅದು ಹೃದಯದ ಕಾಯಿಲೆ ಅಥವಾ ಬೇರಾವುದೇ ಕಾಯಿಲೆಯೇ ಆಗಿರಲಿ, ಚಿಕಿತ್ಸೆಯಲ್ಲಿ ರೋಗಿಯ ರೋಗನಿರೋಧಕ ಶಕ್ತಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ, ವಿಷ್ಣು ಸಹಸ್ರನಾಮ ಪಠಣದಿಂದ ರೋಗನಿರೋಧಕತೆಯೂ ಹೆಚ್ಚಾಗುತ್ತದೆ ಎಂದು ಹೇಳುವುದನ್ನು ಕೇಳಿದ್ದೇವೆ.
ರೋಗ ಇದೆ ಎಂದು ಗೊತ್ತಾದಾಗ ರೋಗಿಗಳು ಮಾನಸಿಕವಾಗಿ ಕುಸಿದುಹೋಗುತ್ತಾರೆ. ಚಿಕಿತ್ಸೆ ಮಾಡಬೇಕು, ಕುಟುಂಬಿಕರಿಗೆ ಯಾರು ಗತಿ ಎಂದೆಲ್ಲ ಚಿಂತೆ ಹತ್ತಿಸಿಕೊಂಡಿರುತ್ತಾರೆ. ಭಗವದ್ಗೀತೆ, ಸುಂದರಕಾಂಡ, ಹನೂಮಾನ್ ಚಾಲೀಸಾ, ರಾಮಾಯಣ ಇತ್ಯಾದಿ ಓದಿದರೆ, ರೋಗಿಗಳ ಮನಸ್ಸು ಬೇರೆಡೆಗೆ ಹರಿಯುತ್ತದೆ. ಇದು ಆ ಚಿಂತೆಯನ್ನು ತಾತ್ಕಾಲಿಕವಾಗಿ ದೂರ ಮಾಡಿ, ಆತನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಡಾ.ಕುಮಾರ್.
ಆರಂಭದಲ್ಲಿ ಪತ್ರಿಕೆಗಳನ್ನು ಕೊಡ್ತಿದ್ದರು. ಅದನ್ನು ಓದಲು ಯಾರೂ ಅಷ್ಟೊಂದು ಆಸಕ್ತಿ ತೋರದ ಕಾರಣ, ಈ ಪುಸ್ತಕಗಳನ್ನು ನೀಡಲು ಆರಂಭಿಸಿದರು ಈ ವೈದ್ಯರು.

Average Rating