ಬಲಿಯಾ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಬಾಲಕ ಶ್ರೀರಾಮನ (ರಾಮ ಲಲ್ಲಾ) ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ, ಉತ್ತರ ಪ್ರದೇಶದ ಬಲಿಯಾದಲ್ಲಿ ಮತ್ತೊಂದು ರಾಮ ಮಂದಿರ (Ram Mandir) ಸಿದ್ಧವಾಗುತ್ತಿದೆ ಮತ್ತು ಇದೇ ಜನವರಿ 22ರಂದೇ ಅಲ್ಲಿಯೂ ಪ್ರಾಣಪ್ರತಿಷ್ಠೆ ನಡೆಯಲಿದೆ. ವಿಶೇಷವೇನಂತೀರಾ? ಇಲ್ಲಿ ಮುಸಲ್ಮಾನರು ಈ ರಾಮ ಮಂದಿರದ ಕಟ್ಟೋಣದಲ್ಲಿ ತೊಡಗಿಸಿಕೊಂಡಿದ್ದು, ಅದಕ್ಕೆ ಅಂತಿಮ ಸ್ಪರ್ಶ ನೀಡುವಲ್ಲಿ ಬಿಝಿಯಾಗಿದ್ದಾರೆ.
ರಾಜಸ್ಥಾನದ ಮಕ್ರಾನದಿಂದ ಬಂದಿರುವ ಸಾಜಿದ್, ಸಾದತ್ ಮತ್ತು ಸಮೀರ್ ಅವರು ಈಗ ಬಲಿಯಾ ಪಟ್ಟಣದ ಪ್ರಖ್ಯಾತ ಭೃಗು ಮಂದಿರದ ಬಳಿ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಮ ಮಂದಿರಕ್ಕಾಗಿ ಸಾರ್ವಜನಿಕರ ದೇಣಿಗೆಯನ್ನೂ ಒಳಗೊಂಡಂತೆ, ದೇವಸ್ಥಾನ ನಿರ್ಮಾಣದ ಉಸ್ತುವಾರಿಯನ್ನು ಸಾಮಾಜಿಕ ಕಾರ್ಯಕರ್ತ ರಜನಿಕಾಂತ್ ಸಿಂಗ್ ವಹಿಸಿಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಂಗ್, ಜನವರಿ 22ರಂದು ಬಲಿಯಾದಲ್ಲಿರುವ ಹೊಸ ಮಂದಿರದಲ್ಲೇ ಕೂರಬೇಕೆಂಬುದು ಬಹುಶಃ ಪ್ರಭು ಶ್ರೀರಾಮನ ಅಪೇಕ್ಷೆ ಇದ್ದಿರಬಹುದು ಎಂದಿದ್ದಾರೆ.
ಮಂದಿರ ನಿರ್ಮಾಣಕ್ಕೆ ಬಳಸಿರುವ ಶ್ವೇತ ಶಿಲೆಯನ್ನು ರಾಜಸ್ಥಾನದ ಮಕ್ರಾನದಿಂದ ತರಿಸಲಾಗಿದೆ. ಗರ್ಭಗುಡಿಯನ್ನು ಈ ಅಮೃತ ಶಿಲೆಯಿಂದಲೇ ನಿರ್ಮಿಸಲಾಗುತ್ತಿದೆ. ಮಂದಿರದ ಶಿಖರವು 21 ಅಡಿ ಎತ್ತರವಿದ್ದು, 6 ಅಡಿ ಎತ್ತರದ ಕಲಶವನ್ನು ಇದರ ಮೇಲೆ ಸ್ಥಾಪಿಸಲಾಗುತ್ತದೆ.
ಜನವರಿ 22ರಂದು ಬಲಿಯಾದಲ್ಲಿರುವ ರಾಮ ಮಂದಿರದ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಜ.17ರಂದು ಬುಧವಾರ ಪಂಚಾಂಗ ಪೂಜೆ ಹಾಗೂ ಜ.18ರಂದು ವೇದಿ (ಪೀಠ) ಪೂಜೆ ನಡೆಯಲಿದೆ ಎಂದು ಸಿಂಗ್ ವಿವರಿಸಿದ್ದಾರೆ. ಜ.20ರಂದು ಮೂರ್ತಿಗಳಿಗೆ ಕಲಶಾಭಿಷೇಕ, ಜ.21ರಂದು ವಾಸ್ತು ಪೂಜೆ ನಡೆಯಲಿದೆ.
ಈ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾಮಾತೆಯ ವಿಗ್ರಹಗಳು ಸುಮಾರು 300 ವರ್ಷಗಳಷ್ಟು ಹಳೆಯವು ಎನ್ನಲಾಗುತ್ತಿದೆ. ಅವುಗಳು ಇದುವರೆಗೆ ಭೃಗು ಆಶ್ರಮದ ಒಳಗಿನ ಮಂದಿರದಲ್ಲಿದ್ದವು. ಈ ಆಶ್ರಮವು 1894 ಹಾಗೂ 1905 ಇಸವಿಯಲ್ಲಿ ಭಾರಿ ಪ್ರವಾಹಕ್ಕೆ ಸಿಲುಕಿ ನಾಶವಾಗಿತ್ತು.

Average Rating