ಭಾರತದ ಸೇನಾ ಸಾಮರ್ಥ್ಯದ ಹೆಮ್ಮೆ ರಫೇಲ್ ಯುದ್ಧ ವಿಮಾನಗಳ ಆಗಮನಕ್ಕೆ ಇಡೀ ದೇಶವೇ ಕಾತರಿಸುತ್ತಿದ್ದು, ಹರ್ಯಾಣದ ಅಂಬಾಲ ವಾಯುನೆಲೆಯಲ್ಲಿ ಇಂದು (ಜು.29) ಫೈಟರ್ ಜೆಟ್ಗಳು ಬಂದಿಳಿದಾಗ ಭಾರತೀಯರ ಹೆಮ್ಮೆಗೆ ಪಾತ್ರವಾದವು.
ವಾಯು ಸೇನಾ ಮುಖ್ಯಸ್ಥ ಆರ್.ಕೆ.ಎಸ್.ಭದಾರಿಯಾ ಅವರು ಸ್ಥಳದಲ್ಲಿ ಹಾಜರಿದ್ದು, ಐದು ರಫೇಲ್ ಸಮರ ವಿಮಾನಗಳಿಗೆ ಜಲಸಂಪ್ರೋಕ್ಷಣೆಯ ಮೂಲಕ ಗೌರವದಿಂದ ಬರಮಾಡಿಕೊಳ್ಳಲಾಯಿತು. ಇದೊಂದು ಐತಿಹಾಸಿಕ ದಿನವಾಗಿದ್ದು, ಕೋವಿಡ್-19 ಬಾಧೆ ಇಲ್ಲದೇ ಹೋಗಿದ್ದರೆ, ರಾಜ್ಯದ ಜನತೆ ಸಾವಿರ ಸಂಖ್ಯೆಯಲ್ಲಿ ಹಾಜರಿದ್ದು, ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಬಹುದಾಗಿತ್ತು ಎಂದು ಹರ್ಯಾಣದ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ವಾಯುಮಾರ್ಗದಲ್ಲೇ ಇಂಧನ ತುಂಬುವ ಚಾಕಚಕ್ಯತೆಯೊಂದಿಗೆ, ಸೋಮವಾರ ಫ್ರಾನ್ಸ್ನಿಂದ ಹೊರಟಿರುವ ಈ ರಫೇಲ್ ವಿಮಾನಗಳು, 7000 ಕಿ.ಮೀ. ದೂರ ಕ್ರಮಿಸಿ ಬುಧವಾರ ಅಪರಾಹ್ನ ತಲುಪಿತು. ಮೂರು ವಿಮಾನಗಳಲ್ಲಿ ಒಂದೊಂದೇ ಸೀಟು ಇದ್ದರೆ, ಎರಡರಲ್ಲಿ ತಲಾ ಎರಡು ಸೀಟುಗಳಿವೆ.
ವಿಮಾನಗಳ ಆಗಮನದ ಹಿನ್ನೆಲೆಯಲ್ಲಿ ಅಂಬಾಲ ವಾಯುನೆಲೆಯ ಸುತ್ತಮುತ್ತ ನಿಷೇಧಾಜ್ಞೆ ವಿಧಿಸಲಾಗಿತ್ತು.
ರಫೇಲ್ ವಿಮಾನಗಳನ್ನು ಗೋಲ್ಡನ್ ಏರೋಸ್ (ಸುವರ್ಣ ಬಾಣಗಳು) ಎಂಬ ಹೆಸರಿನ ನಂ.17 ಸ್ಕ್ವಾಡ್ರನ್ಗೆ ಸೇರಿಸಲಾಗುತ್ತಿದೆ. ಫ್ರಾನ್ಸ್ನಿಂದ 36 ವಿಮಾನಗಳು ಬರಲಿದ್ದು, ಅವುಗಳಲ್ಲಿ 30 ಫೈಟರ್ ವಿಮಾನಗಳು ಮತ್ತು ಆರು ತರಬೇತಿ ವಿಮಾನಗಳಾಗಿರುತ್ತವೆ.

Average Rating