ಅಯೋಧ್ಯೆ: 22 ಜನವರಿ 2024 – ಭಾರತದ ಇತಿಹಾಸದಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಈ ದಿನ ತನ್ನದೇ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ, ಐದು ಶತಮಾನಗಳ ಹಿಂದೆ ಮೊಘಲರ ಬರ್ಬರ ದಾಳಿಗೀಡಾಗಿ ಅವಸಾನಗೊಂಡಿದ್ದ ಕ್ಷೇತ್ರದಲ್ಲಿಯೇ ಮತ್ತೆ ರಾಮನು ವಿರಾಜಮಾನನಾಗಿದ್ದಾನೆ. ಇದೀಗ Ayodhya Ram Mandir ಇಡೀ ದೇಶದ ಉಸಿರಾಗಿಬಿಟ್ಟಿದೆ. ಈ ಪುಣ್ಯ ದಿನದಂದು ರಾಮ ಜನ್ಮಭೂಮಿ ಅಯೋಧ್ಯೆಯ ಚಿತ್ರಣ ಹೇಗಿತ್ತು? ಒಂದು ಝಲಕ್ ಇಲ್ಲಿದೆ.
ಒಂದಷ್ಟು ಜಾನಪದ ನೃತ್ಯ ಕಲಾವಿದರ ದಂಡು, ಭೋಪಾಲದಿಂದ ಬಂದ ತಂಡವೊಂದರಿಂದ ಪಲ್ಲಕ್ಕಿ ಯಾತ್ರೆ, ಎಲ್ಲೆಲ್ಲಿಂದಲೋ ಬಂದ ಭಕ್ತರೆಲ್ಲರ ಬಾಯಲ್ಲಿ ಜೈ ಶ್ರೀ ರಾಮ್ ಎಂಬ ಜಯಘೋಷ, ಉತ್ತರ ಪ್ರದೇಶದ ಪ್ರಾಂತೀಯ ಸಶಸ್ತ್ರ ದಳ (ಪಿಎಸಿ)ದ ಕಲಾವಿದರು ‘ರಾಮ್ ಆಯೇಂಗೇ’ ಎಂಬ ಜನಪ್ರಿಯ ಹಾಡನ್ನು, ಜೊತೆಗೆ ರಾಷ್ಟ್ರಭಕ್ತಿ ಸಾರುವ ‘ಸಾರೇ ಜಹಾಂ ಸೇ ಅಚ್ಛಾ’ ಹಾಡನ್ನು ಅಯೋಧ್ಯೆಯ ಬೀದಿ ಬೀದಿಗಳಲ್ಲಿ ನುಡಿಸುತ್ತಿದ್ದರು. ಈ ದೃಶ್ಯಗಳು ಸೋಮವಾರ (ಜ.22) ಅಯೋಧ್ಯಾ ನಗರಿಯ ಕಣ ಕಣದಲ್ಲೂ ಕಂಡು ಬಂದವು.
ಅಯೋಧ್ಯೆಯ ಸುಂದರ ರಾಮ ಮಂದಿರದ ವಿಡಿಯೊ ನೋಡಿ:
ಭೋಪಾಲದ ಬಾಬಾ ನಾಗೇಶ್ವರ ನಾಥ ಮಂದಿರದಿಂದ 111 ಮಂದಿ ಭಕ್ತರು ರಾಮಪಥದಲ್ಲಿ ಪಲ್ಲಕ್ಕಿ ಯಾತ್ರೆಯನ್ನು ನಡೆಸಿದರು. ಡಮರು, ಮೃದಂಗ, ನಗಡಾ ಮುಂತಾದ ವಾದ್ಯಗಳನ್ನು ಅವರು ನುಡಿಸುತ್ತಿದ್ದರು. ಪಲ್ಲಕ್ಕಿಯಲ್ಲಿ ಮರದ ಪ್ರತಿಮೆಗಳೊಂದಿಗೆ ರಾಮ ದರ್ಬಾರನ್ನು ಬಿಂಬಿಸುತ್ತಿದ್ದವು.
ಮರಗಟ್ಟಿಸುವ ಚಳಿಯಲ್ಲೂ ಜನರ ಉತ್ಸಾಹವಂತೂ ಮೇರೆ ಮೀರಿತ್ತು. ಜೈ ಶ್ರೀರಾಮ್ ಎಂಬುದು ಅವರೆಲ್ಲರ ನೋವನ್ನು, ಚಳಿಯನ್ನು ಮರೆಸಿತ್ತು. ಎಲ್ಲೆಡೆ ರಾಮ ನಾಮ ಜಪ, ರಾಮ ಮಂತ್ರ ಪಠಣ, ರಾಮನ ಭಜನೆ, ಗೀತೆಗಳೇ ಅನುರಣಿಸುತ್ತಿದ್ದವು.
ರಾಮ ಪಥದ ಎರಡೂ ಪಾರ್ಶ್ವಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಲತಾ ಮಂಗೇಶ್ಕರ್ ಚೌಕ್ನಲ್ಲಂತೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಶ್ರೀ ರಾಮನ ಕಟೌಟ್ಗಳು, ಹೊಸ ರಾಮ ಮಂದಿರ ಹಾಗೂ ರಾಮ ಲಲ್ಲನ ಪ್ರತಿಕೃತಿಗಳು ರಾಮ ಪಥ ಹಾಗೂ ಧರ್ಮ ಪಥದ ಇಕ್ಕೆಲಗಳಲ್ಲಿ ರಾರಾಜಿಸುತ್ತಿದ್ದವು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 11 ದಿನಗಳ ಕಾಲ ನಿರಶನ ಸಹಿತ ಉಪವಾಸ ಹಾಗೂ ಇತರ ನೇಮ-ನಿಷ್ಠೆಗಳನ್ನೊಳಗೊಂಡ ವ್ರತ ಆಚರಿಸಿ, ಬಾಲ ರಾಮನ ಮಂದಿರವನ್ನು ಲೋಕಾರ್ಪಣೆಗೊಳಿಸಿದರು. ಇದೇ ಸಂದರ್ಭದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಅನುಸಾರ ಬಾಲ ರಾಮನ ಪ್ರಾಣ ಪ್ರತಿಷ್ಠೆ ನೆರವೇರಿತು.
ಸಾಯಂಕಾಲದ ಹೊತ್ತಿಗೆ ಇಡೀ ಅಯೋಧ್ಯೆಯೇ ಹಣತೆ, ದೀಪಗಳಿಂದ ಬೆಳಗಿ, ದೀಪೋತ್ಸವವೇ ಜರುಗಿದಂತಾಯಿತು.
ಅಯೋಧ್ಯೆಯ ಈ ರಮ್ಯ, ದಿವ್ಯ ರಾಮ ಮಂದಿರವು ಉತ್ತರ ಭಾರತದ ನಾಗರ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ದಕ್ಷಿಣದ (ಮೈಸೂರಿನ ಯೋಗಿರಾಜ್ ಅವರಿಂದ ನಿರ್ಮಿತವಾದ) ಪ್ರತಿಮೆಯು ವಿರಾಜಮಾನವಾಗುವ ಮೂಲಕ ದಕ್ಷಿಣೋತ್ತರ ಸಂಸ್ಕೃತಿ-ಸಂಸ್ಕಾರಗಳ ಸಂಗಮವಾಗಿದೆ. ಪೂರ್ವ-ಪಶ್ಚಿಮಕ್ಕೆ 380 ಅಡಿ ಉದ್ದ, 250 ಅಡಿ ಅಗಲದಲ್ಲಿ ಮಂದಿರವಿದ್ದು, 161 ಅಡಿ ಎತ್ತರದಲ್ಲಿ ಶಿಖರ ಸ್ಥಾಪನೆಯಾಗಿದೆ. ಇಲ್ಲಿ 392 ಸ್ತಂಭಗಳಿದ್ದು, 44 ಬಾಗಿಲುಗಳಿವೆ.

Average Rating