ಕಾಶಿ ವಿಶ್ವನಾಥ ಮಂದಿರ | ಮಂದಿರದ ಅವಶೇಷದ ಮೇಲೆ ಜ್ಞಾನವಾಪಿ ಮಸೀದಿ: ಕನ್ನಡದ ಕೆತ್ತನೆಯೂ ಇದೆ
Read Time:7 Minute, 38 Second

ಕಾಶಿ ವಿಶ್ವನಾಥ ಮಂದಿರ | ಮಂದಿರದ ಅವಶೇಷದ ಮೇಲೆ ಜ್ಞಾನವಾಪಿ ಮಸೀದಿ: ಕನ್ನಡದ ಕೆತ್ತನೆಯೂ ಇದೆ

0 0

ಲಖನೌ: ಅಯೋಧ್ಯೆಯಲ್ಲಿ ಮೊಘಲ್ ದೊರೆ ಬಾಬರ್ ದಾಳಿ ಸಂದರ್ಭದಲ್ಲಿ ಮಂದಿರ ಕೆಡವಿ ಮಸೀದಿ ಕಟ್ಟಲಾಗಿದ್ದುದು ಖಚಿತವಾಗಿ, ಶತಮಾನಗಳ ಹೋರಾಟದ ಬಳಿಕ ಶ್ರೀ ರಾಮನ ಜನ್ಮಸ್ಥಾನದಲ್ಲೀಗ ಬಾಲರಾಮನು ಪ್ರತಿಷ್ಠಾಪನೆಯಾಗಿದ್ದಾನೆ. ಅಲ್ಲಿ ನ್ಯಾಯ ದೊರೆತಿರುವಂತೆಯೇ, ಕಾಶಿ ವಿಶ್ವನಾಥ ಮಂದಿರವನ್ನು ಕೂಡ ಅಂದಿನ ದಾಳಿಕೋರರು ಕೆಡವಿ ಮಸೀದಿ ಕಟ್ಟಿದ್ದರೆಂಬ ಅಂಶವು ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಸರ್ವೇಕ್ಷಣೆಯಿಂದ ಶ್ರುತಪಟ್ಟಿರುವುದು ಭಾರತೀಯರಲ್ಲಿ ಹೊಸ ಹುರುಪು ಮೂಡಿಸಿದೆ.

ಕಾಶಿ ವಿಶ್ವನಾಥ ಮಂದಿರ ಹಾಗೂ ಜ್ಞಾನವಾಪಿ ಮಸೀದಿ ನಡುವಿನ ವಿವಾದದಲ್ಲಿ ಹಿಂದುಗಳ ಪರ ನ್ಯಾಯಾಲಯದಲ್ಲಿ ವಾದಿಸುತ್ತಿರುವ ವಕೀಲ ವಿಷ್ಣು ಶಂಕರ್ ಜೈನ್ ಅವರು ವೈಜ್ಞಾನಿಕ ಸಮೀಕ್ಷೆಯ ವರದಿಯಲ್ಲಿದ್ದ ವಿವರಗಳನ್ನು ಮಾಧ್ಯಮಗಳೆದುರು ಬಿಚ್ಚಿಟ್ಟಿದ್ದಾರೆ.

ವಿಶೇಷವೆಂದರೆ, ಮಸೀದಿಗಿಂತ ಮೊದಲು ಅಲ್ಲಿದ್ದ ಮಂದಿರದಲ್ಲಿ ಕನ್ನಡ ಸಹಿತ ವಿವಿಧ ಲಿಪಿಗಳಲ್ಲಿದ್ದ ಕೆತ್ತನೆಯ ಅಂಶವೂ ಇತ್ತು ಎಂಬ ಮಾಹಿತಿ.

ವಾರಾಣಸಿಯ ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸಿದ್ದ ಎಎಸ್ಐ, ತನ್ನ ವರದಿಯನ್ನು ಲಖನೌದ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ. ಅದರ ಪ್ರಕಾರ, 17ನೇ ಶತಮಾನದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ ಅದರ ಮೇಲೆ ಮಸೀದಿ ಕಟ್ಟಲಾಗಿದೆ.

ಈಗಿರುವ ಮಸೀದಿಯ ಜಾಗದಲ್ಲಿ ಹಿಂದೆ ಹಿಂದೂ ದೇವಾಲಯವಿತ್ತು ಎಂದು ವಾರಾಣಸಿ ನ್ಯಾಯಾಲದ ಆದೇಶಾನುಸಾರ, ಎಎಸ್ಐ ವರದಿಯ ದೃಢೀಕೃತ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿರುವ ವಿಷ್ಣುಶಂಕರ್ ಜೈನ್ ಗುರುವಾರ (ಜ.25, 2024) ಹೇಳಿದ್ದಾರೆ.

ರುದ್ರ, ಜನಾರ್ದನ ಹಾಗೂ ವಿಶ್ವೇಶ್ವರ ಕುರಿತು ಕನ್ನಡ, ದೇವನಾಗರಿ ಮತ್ತು ತೆಲುಗು ಭಾಷೆಯ ಲಿಪಿಗಳ ಕೆತ್ತನೆಯೂ ಮಸೀದಿಯೊಳಗಿದೆ ಎಂಬ ಅಂಶವು 839 ಪುಟಗಳ ವರದಿಯಲ್ಲಿದೆ ಎಂದು ಜೈನ್ ಹೇಳಿದ್ದಾರೆ.

ಜ್ಞಾನವಾಪಿ ಮಸೀದಿಯ ಪಶ್ಚಿಮದ ಗೋಡೆಯು ಹಿಂದೂ ಮಂದಿರದ ಭಾಗವಾಗಿದ್ದು, ಸುಲಭವಾಗಿ ಗುರುತಿಸಬಹುದಾಗಿದೆ. ಇದಲ್ಲದೆ, ಒಂದು ಕಡೆ ‘ಮಹಾಮುಕ್ತಿ ಮಂಟಪಂ’ ಎಂದು ಬರೆಯಲಾಗಿದ್ದು, ಇದು ಹಿಂದೆ ದೇವಸ್ಥಾನವಿತ್ತು ಎಂಬುದಕ್ಕೆ ಅತ್ಯಂತ ಸ್ಪಷ್ಟವಾಗ ಸಂಕೇತವಾಗಿದೆ ಎಂದು ಜೈನ್ ವಿವರಿಸಿದ್ದಾರೆ. ಇದಲ್ಲದೆ, ಧ್ವಂಸಗೊಳಿಸಲಾದ ಮಂದಿರದ ಸ್ತಂಭಗಳನ್ನೇ ಮಸೀದಿ ಕಟ್ಟಲು ಬಳಸಲಾಗಿದೆ.

ಎಎಸ್ಐ ವರದಿಯ ದೃಢೀಕೃತ ಪ್ರತಿಗಳನ್ನು ಉಭಯ ವಾದಿಗಳ ವಕೀಲರು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಬುಧವಾರ ವಾರಾಣಸಿ ನ್ಯಾಯಾಲಯವು ಸೂಚಿಸಿತ್ತು. ಹಿಂದು ಮತ್ತು ಮುಸ್ಲಿಂ – ಎರಡೂ ಬಣದವರು ಎಎಸ್ಐ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಕೇಳಿದ್ದವು.

ಎಎಸ್ಐ ಕಳೆದ ತಿಂಗಳು ಮುಚ್ಚಿದ ಎರಡು ಲಕೋಟೆಗಳಲ್ಲಿ ನ್ಯಾಯಾಲಯಕ್ಕೆ ಈ ವರದಿಯನ್ನು ನೀಡಿತ್ತು. ಆಗಸ್ಟ್ 4ರಂದು ವೈಜ್ಞಾನಿಕ ಸಮೀಕ್ಷೆ ಆರಂಭಿಸಿದ್ದ ಪುರಾತತ್ವ ಸರ್ವೇಕ್ಷಣಾ ಇಲಾಖೆಯು, ಈಗಿನ ಜ್ಞಾನವಾಪಿ ಮಸೀದಿಯ ನೆಲದೊಳಗೆ ರೆಡಾರ್ ಮತ್ತಿತರ ವೈಜ್ಞಾನಿಕ ಉಪಕರಣಗಳನ್ನು ಬಳಸಿ ಸರ್ವೇಕ್ಷಣೆ ನಡೆಸಿತ್ತು. ಒಳ ಮತ್ತು ಹೊರ ಗೋಡೆಗಳು, ಸೆಲ್ಲಾರ್ ಮತ್ತಿತರ ಪ್ರದೇಶಗಳನ್ನು ಸಮೀಕ್ಷೆ ಮಾಡಲಾಗಿತ್ತು. ಆದರೆ ವುಜುಖಾನಾ (ಪ್ರಾರ್ಥನೆ ಸಲ್ಲಿಸಲು ಹೋಗುವ ಮುನ್ನ ಮುಸ್ಲಿಮರು ಕೈಕಾಲು ತೊಳೆಯುವ ಸ್ಥಳ) ಹೊರತುಪಡಿಸಿ ಬೇರೆಲ್ಲ ಕಡೆ ಪರಿಶೀಲನೆ ನಡೆಸಲಾಗಿತ್ತು.

ಈ ಹಿಂದೆ, ಎಎಸ್ಐ ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂಬ ವಾರಾಣಸಿ ನ್ಯಾಯಾಲಯದ ಆದೇಶಕ್ಕೆ ತಡೆಯೊಡ್ಡಬೇಕೆಂದು ಮುಸ್ಲಿಮರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ ಬಳಿಕ ಜ್ಞಾನವಾಪಿ ಮಸೀದಿಯ ಸರ್ವೇಕ್ಷಣೆಗೆ ಹಾದಿ ಸುಗಮವಾಗಿತ್ತು.

ಶತಮಾನಗಳಿಂದ ಕಾಶಿಯಲ್ಲಿರುವ ಈ ಜಾಗವು ಹಿಂದು ಹಾಗೂ ಮುಸ್ಲಿಮರ ಮಧ್ಯೆ ದೊಡ್ಡ ಕಂದಕ ಸೃಷ್ಟಿಸಿತ್ತು. ಅಯೋಧ್ಯೆಯಲ್ಲೂ ರಾಮ ಜನ್ಮಭೂಮಿಯಲ್ಲಿದ್ದ ಮಸೀದಿಯನ್ನು ತೆರವುಗೊಳಿಸಿ, ಮರಳಿ ಹಿಂದೂ ದೇವಸ್ಥಾನ ಕಟ್ಟಲು ನ್ಯಾಯಾಲಯ ಅನುಮತಿ ನೀಡಿದ ಬಳಿಕ, ಕಾಶಿ ವಿಶ್ವನಾಥ ಮಂದಿರದ ಜಾಗವನ್ನೂ ಮರಳಿ ಪಡೆಯಬೇಕೆಂಬ ಬಗ್ಗೆ ಭಾರತೀಯರ ಧ್ವನಿ ಜೋರಾಗಿತ್ತು.

17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬನು ಕಾಶಿಯಲ್ಲಿದ್ದ ಮಂದಿರವನ್ನು ಧ್ವಂಸಗೊಳಿಸಿ, ಅಲ್ಲಿ ಮಸೀದಿ ನಿರ್ಮಿಸಿದ ಎಂಬುದು ಹಿಂದೂ ಅರ್ಜಿದಾರರ ವಾದವಾಗಿತ್ತು. ಆದರೆ, ಔರಂಗಜೇಬನ ಕಾಲಕ್ಕಿಂತಲೂ ಮೊದಲೇ ಅಲ್ಲಿ ಮಸೀದಿ ಇತ್ತು ಎಂಬುದು ಮುಸ್ಲಿಂ ಅರ್ಜಿದಾರರ ವಾದ.

ಎಎಸ್ಐ ನಡೆಸಿದ ವೈಜ್ಞಾನಿಕ ಪರೀಕ್ಷೆಯ ವರದಿಯಲ್ಲೇನಿದೆ?

  • 17ನೇ ಶತಮಾನದಲ್ಲಿ ಮೊಘಲ್ ಆಕ್ರಮಣಕಾರ ಔರಂಗಜೇಬನ ಕಾಲದಲ್ಲಿ ದಿವ್ಯವೂ ಭವ್ಯವೂ ಆಗಿದ್ದ ಕಾಶಿ ವಿಶ್ವನಾಥ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಲಾಗಿತ್ತು.
  • ಈಗಿನ ವಿಶ್ವನಾಥ ಮಂದಿರಕ್ಕೆ ತಾಗಿಕೊಂಡಂತಿರುವ ಈ ಮಸೀದಿಯ ಸ್ಥಳದಲ್ಲಿ ಹಿಂದೆ ಮಂದಿರವು ಇದ್ದಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳು ಪತ್ತೆಯಾಗಿವೆ.
  • ಹಿಂದೂ ದೇವರ ಪ್ರತಿಮೆಗಳ ಅವಶೇಷಗಳು ಎರಡು ನೆಲಮಹಡಿಗಳಲ್ಲಿ ಪತ್ತೆಯಾಗಿವೆ. ಹಿಂದಿನ ಮಂದಿರದ ಕೆಲವು ಭಾಗಗಳನ್ನು, ವಿಶೇಷವಾಗಿ ಕಂಬಗಳನ್ನು ಈಗಿನ ಮಸೀದಿ ಕಟ್ಟಲು ಬಳಸಲಾಗಿತ್ತು.
  • ಮಂದಿರ ಕೆಡಹುವುದಕ್ಕೆ ಸಂಬಂಧಿಸಿದ ಆದೇಶ ಮತ್ತು ದಿನಾಂಕವನ್ನು ಪರ್ಷಿಯನ್ ಭಾಷೆಯಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ.
  • ಮಸೀದಿಯೊಳಗೆ ಕಲ್ಲಿನಲ್ಲಿ “ಮಹಾಮುಕ್ತಿ ಮಂಟಪ” ಎಂದು ಬರೆದ ಕೆತ್ತನೆಯೂ ಸಿಕ್ಕಿದೆ.
  • ಮಸೀದಿ ಹಿಂಭಾಗದಲ್ಲಿ ಪಶ್ಚಿಮ ದಿಕ್ಕಿನಲ್ಲಿರುವ ಗೋಡೆಯು ಹಿಂದಿನ ಮಂದಿರದ ಗೋಡೆಯೇ ಆಗಿದೆ. ಈ ಗೋಡೆಯಲ್ಲಿ ಘಂಟೆ ಮತ್ತು ಸ್ವಸ್ತಿಕ್ ಚಿಹ್ನೆಗಳನ್ನು ಕೆತ್ತಲಾಗಿದೆ.
  • ನಗರ ಶೈಲಿಯಲ್ಲೇ ಈ ದೇವಸ್ಥಾನವಿದ್ದು, ಅದರ ಕಂಬಗಳನ್ನೇ ಬಳಸಿ ನೆಲಮಹಡಿಯ ಚಾವಣಿ ಕೂರಿಸಲಾಗಿದೆ.
  • 17ನೇ ಶತಮಾನದಲ್ಲಿ ಆದಿ ವಿಶ್ವೇಶ್ವರನ ಮಂದಿರವನ್ನು ಔರಂಗಜೇಬ ಕೆಡವಿದಾಗ, ಅಲ್ಲೊಂದು ಭವ್ಯವಾದ ಮಂದಿರವಿತ್ತೆಂಬುದಕ್ಕೆ ಇವುಗಳು ಸಾಕ್ಷ್ಯಾಧಾರದಂತಿವೆ.

ಇದೀಗ, ಮುಸಲ್ಮಾನರು ನಮಾಜ್ ಮಾಡುವ ಮುನ್ನ ಕೈಕಾಲು ತೊಳೆಯುವ ಜಾಗವಾದ ವಾಜು ಖಾನದ ಸಮೀಕ್ಷೆಗೂ ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರುವುದಾಗಿ ಜೈನ್ ತಿಳಿಸಿದ್ದಾರೆ.

ಫೆಬ್ರವರಿ 6ರಂದು ಮುಂದಿನ ವಿಚಾರಣೆ ನಡೆಯುವಾಗ, ಸಾಕ್ಷ್ಯಾಧಾರಗಳೊಂದಿಗೆ ತಮ್ಮ ವಾದವನ್ನು ಮಂಡಿಸುವುದಾಗಿ ಅವರು ಹೇಳಿದ್ದಾರೆ.

Avatar for Web Desk

About Post Author

Web Desk

Kannada News Enthusiasts | Professional Journalists | ಕನ್ನಡದ ಸುದ್ದಿ ಜೀವಿಗಳು
Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post Ayodhya Ram Mandir: ಸುಂದರ ಬಾಲ ರಾಮನಿಗೆ ಪ್ರಾಣ ಪ್ರತಿಷ್ಠೆ: ಹೇಗಿತ್ತು ಅಯೋಧ್ಯೆ?
Bangla Unrest: Hasina Leaves in Helicopter Next post Bangla | ದೇಶ ಭ್ರಷ್ಟರಾದ ಪ್ರಧಾನಿ ಹಸೀನಾ: ಈ ಪ್ರತಿಭಟನೆಯು ಪಿತೂರಿ ಹೇಗೆ?

ಸುದ್ದಿ ಸಂಚಯ

ಇವುಗಳನ್ನೂ ನೋಡಿ