ನವದೆಹಲಿ: ಕೇಂದ್ರ ಸಂಪುಟವು ಜು.29ರ ಬುಧವಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಮೋದನೆ ನೀಡಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಬದಲು, ನೇರವಾಗಿ ಶಿಕ್ಷಣ ಸಚಿವಾಲಯ ಎಂದು ನಾಮಕರಣ ಮಾಡುವ ಪ್ರಸ್ತಾಪಕ್ಕೆ ಸಮ್ಮತಿ ಸೂಚಿಸಿತು.
ಹೊಸ ಶಿಕ್ಷಣ ಕರಡು ನೀತಿಯಲ್ಲಿದ್ದ ಶಿಫಾರಸುಗಳ ಅನ್ವಯವೇ ಈ ಹೆಸರು ಬದಲಾವಣೆಯೂ ಆಗಿದೆ. National Education Policy 2020 ಅಂತ ಕರೆಯಲಾಗುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೇನಿವೆ? ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ. ಈ ಕರಡು ನೀತಿಯು ಜಾರಿಗೆ ಸಂಪೂರ್ಣವಾಗಿ ಜಾರಿಗೆ ಬರಲು 2030ರವರೆಗೆ ಕಾಯಬೇಕಾಗಬಹುದು. ಶಿಕ್ಷಕರ ಸುಧಾರಣಾ ವ್ಯವಸ್ಥೆಯು 2023ರಿಂದಲೇ ಜಾರಿಗೊಳ್ಳುವ ಸಾಧ್ಯತೆಗಳಿವೆ.
ನೀತಿಯ ಅವಲೋಕನ – ಮುಖ್ಯ ಅಂಶಗಳು
- ಶಾಲಾ ಶಿಕ್ಷಣ
ಪ್ರಾರಂಭಿಕ ಬಾಲ್ಯ ಶಿಕ್ಷಣ: ಈ ನೀತಿಯು ಪ್ರಾರಂಭಿಕ ಬಾಲ್ಯ ಶಿಕ್ಷಣದ ಮಹತ್ವಕ್ಕೆ ಬಹಳ ಒತ್ತು ನೀಡುತ್ತದೆ ಮತ್ತು 3-6 ವರ್ಷಗಳ ವಯೋಮಾನದ ಎಲ್ಲಾ ಮಕ್ಕಳಿಗೆ 2025ರ ವೇಳೆಗೆ ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ನೀಡುವ ಧ್ಯೇಯವನ್ನು ಹೊಂದಿದೆ. ಈ ದಿಕ್ಕಿನಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವ ಗುರಿಯನ್ನು ಹೊಂದಿದೆ.
ಸಾಕ್ಷರತೆ ಮತ್ತು ಗಣಿತ ಕೌಶಲಗಳ ಕಲಿಕೆಗೆ ಸುಭದ್ರ ಅಡಿಪಾಯ: 1 ರಿಂದ 5ನೇ ತರಗತಿಯವರೆಗಿನ ಮಕ್ಕಳಿಗೆ ಪ್ರಾರಂಭಿಕ ಮಟ್ಟದ ಭಾಷಾ ಕಲಿಕೆ ಮತ್ತು ಗಣಿತ ಕೌಶಲಗಳನ್ನು ಕಲಿಸುವ ಬಗ್ಗೆ ವಿಶೇಷ ಗಮನವನ್ನು ನೀಡಲಾಗುತ್ತದೆ. 2025ರ ವೇಳೆಗೆ 5ನೇ ತರಗತಿಯಲ್ಲಿ ಮತ್ತು ಅದಕ್ಕಿಂತ ಮೇಲಿನ ತರಗತಿಗಳಲ್ಲಿ ಓದುತ್ತಿರುವ ಪ್ರತಿ ವಿದ್ಯಾರ್ಥಿಯೂ ಕೂಡ ಪ್ರಾರಂಭಿಕ ಭಾಷಾ ಸಾಮರ್ಥ್ಯ ಮತ್ತು ಗಣಿತ ಕೌಶಲಗಳನ್ನು ಹೊಂದಿರುವಂತೆ ಮಾಡುವುದು ಈ ನೀತಿಯ ಧ್ಯೇಯವಾಗಿದೆ.
ಪಠ್ಯಕ್ರಮ ಹಾಗೂ ಶಿಕ್ಷಣ ಕ್ರಮ: ಮಕ್ಕಳ ಮೆದುಳಿನ ಬೆಳವಣಿಗೆಗೆ ಹಾಗೂ ಕಲಿಕೆಗೆ ಸೂಕ್ತವಾದ ಶೈಕ್ಷಣಿಕ ಕ್ರಮ ಮತ್ತು ಪಠ್ಯಕ್ರಮವನ್ನು 5 + 3+3+4 ರ ಮಾದರಿಯಲ್ಲಿ ವಿನ್ಯಾಸಗೊಳಿಸುವುದು. ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳು, ಕಲೆ ಮತ್ತು ಕ್ರೀಡೆಗಳಿಗೆ ಸಮಾನ ಒತ್ತು ನೀಡಲಾಗುವುದು. ಹಾಗೆಯೇ, ಶೈಕ್ಷಣಿಕ ಮತ್ತು ಔದ್ಯೋಗಿಕ ಶಿಕ್ಷಣಗಳನ್ನು ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಒಂದಾಗಿ ಬೆಸೆಯುವುದು ಈ ನೀತಿಯ ಗುರಿಯಾಗಿದೆ.
ಸಾರ್ವತ್ರಿಕ ಲಭ್ಯತೆ: ಹಲವಾರು ಕ್ರಮಗಳ ಮುಖಾಂತರ 2030ರ ವೇಳೆಗೆ ನೂರಕ್ಕೆ ನೂರರಷ್ಟು ಶಾಲಾ ದಾಖಲಾತಿಯನ್ನು ಹೊಂದುವುದು ಈ ನೀತಿಯ ಉದ್ದೇಶವಾಗಿದೆ.
ಸಮಾನ ಹಾಗೂ ಎಲ್ಲರನ್ನೂ ಒಳಗೊಂಡ ಶಿಕ್ಷಣ: ಯಾವುದೇ ಮಗವೂ ಕೂಡ ತನ್ನ ಹುಟ್ಟು ಮತ್ತು ಸಾಮಾಜಿಕ ಹಾಗೂ ಆರ್ಥಿಕ ಹಿನ್ನೆಲೆಗಳ ಕಾರಣದಿಂದಾಗಿ ಕಲಿಕೆಯ ಅವಕಾಶದಿಂದ ವಂಚಿತವಾಗದಿರಲು ನೀತಿಯು ಅನೇಕ ಕ್ರಮಗಳನ್ನು ಸೂಚಿಸುತ್ತದೆ.
ಶಾಲಾ ಶಿಕ್ಷಕರನ್ನು ಒಂದು ಉತ್ತಮ ಹಾಗೂ ಸಂಪೂರ್ಣವಾಗಿ ಪಾರದರ್ಶಕ ಪ್ರಕ್ರಿಯೆಯ ಮೂಲಕ ನೇಮಕ ಮಾಡಲಾಗುವುದು. ಅರ್ಹತೆಯ ಮೇರೆಗೆ ಅವರಿಗೆ ಮುಂಬಡ್ತಿಯನ್ನು ನೀಡಲಾಗುವುದು ಮತ್ತು ಶಿಕ್ಷಕರು ಶಿಕ್ಷಣ ತಜ್ಞರಾಗಿ ಮತ್ತು ಶಿಕ್ಷಣ ಆಡಳಿತಗಾರರಾಗಿ ಕಾರ್ಯ ವಹಿಸಲು ನೆರವಾಗುವಂತೆ ಕಾಲ ಕಾಲಕ್ಕೆ ಬಹುಮೂಲಗಳಿಂದ ಮೌಲ್ಯಮಾಪನ ಮಾಡಲಾಗುವುದು.
ಶಾಲಾ ಆಡಳಿತ: ಶಾಲೆಗಳನ್ನು ಒಂದೊಂದು ಗುಂಪುಗಳನ್ನಾಗಿ ಮಾಡಿ ಶಾಲಾ ಸಂಕೀರ್ಣಗಳನ್ನು (10 ರಿಂದ 20 ಸಾರ್ವಜನಿಕ ಶಾಲೆಗಳ ಗುಂಪು/ಕ್ಲಸ್ಟರ್) ನಿರ್ಮಿಸಲಾಗುವುದು. ಇದು ಶಾಲಾ ಆಡಳಿತದ ಮೂಲ ಘಟಕವಾಗಿದ್ದು, ಉತ್ತಮ ವೃತ್ತಿಪರ ಶಿಕ್ಷಕರ ಜೊತೆಗೆ ಮೂಲಭೂತ ಸೌಕರ್ಯಗಳು ಮತ್ತು ಶೈಕ್ಷಣಿಕ (ಉದಾ, ಗ್ರಂಥಾಲಯ) ಮತ್ತು ಮಾನವ ಸಂಪನ್ಮೂಲಗಳ (ಉದಾ. ಶಲೆ ಮತ್ತು ಸಂಗೀತ ಶಿಕ್ಷಕರು) ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳುತ್ತದೆ.
ಶಾಲೆಗಳ ನಿಯಂತ್ರಣ: ಶಾಲಾ ಕಾರ್ಯನಿರ್ವಹಣೆ ಹಾಗೂ ನಿಯಂತ್ರಣಗಳನ್ನು ಭಿನ್ನ ಭಿನ್ನ ಸಂಸ್ಥೆಗಳ ಮೂಲಕ ಜಾರಿಗೊಳಿಸಲಾಗುವುದು. ಇದು ಹಿತಾಸಕ್ತಿಗಳ ಸಂಘರ್ಷವನ್ನು ತಪ್ಪಿಸಲು ನೆರವಾಗುತ್ತದೆ. ನೀತಿ ನಿರೂಪಣೆ, ನಿಯಂತ್ರಣ, ಕಾರ್ಯಾಚರಣೆ ಮತ್ತು ಶೈಕ್ಷಣಿಕ ವಿಷಯಗಳನ್ನು ನಿರ್ವಹಿಸಲು ಭಿನ್ನ ಭಿನ್ನವಾದ ಹಾಗೂ ಸ್ಪಷ್ಟವಾದ ವ್ಯವಸ್ಥೆಗಳನ್ನು ರೂಪಿಸಲಾಗುತ್ತದೆ.
- ಉನ್ನತ ಶಿಕ್ಷಣ
ಹೊಸ ಸಂರಚನೆ: ಬೃಹತ್ ಗಾತ್ರದ, ಉತ್ತಮ ಸಂಪನ್ಮೂಲಗಳನ್ನು ಹೊಂದಿರುವ ಬಹುಶಿಸ್ತೀಯ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ನಿಟ್ಟಿನಲ್ಲಿ ಹೊಸ ಮುನ್ನೋಟ ಮತ್ತು ಸಂರಚನೆಗಳನ್ನು ರೂಪಿಸಲಾಗಿದೆ. ಈಗ ಅಸ್ತಿತ್ವದಲ್ಲಿರುವ 800 ವಿಶ್ವವಿದ್ಯಾಲಯಗಳು ಮತ್ತು 40,000 ಕಾಲೇಜುಗಳನ್ನು 15,000 ಅತ್ಯುತ್ತಮ ಗುಣಮಟ್ಟದ ಶೈಕ್ಷಣಿಕ ಸಂಸ್ಥೆಗಳನ್ನಾಗಿ ಪರಿವರ್ತಿಸಲಾಗುತ್ತದೆ.
ಉದಾರವಾದಿ ಶಿಕ್ಷಣ: ವಿಜ್ಞಾನ, ಕಲೆ, ಗಣಿತಶಾಸ್ತ್ರ, ಮಾನವಿಕಗಳು ಮತ್ತು ವೃತ್ತಿಪರ ಕ್ಷೇತ್ರಗಳನ್ನು ಒಟ್ಟಾಗಿ ಬೆಸೆದ ಸ್ಥೂಲವಾಗಿ ಉದಾರವಾದಿಯಾದ ಪದವಿ ಶಿಕ್ಷಣವನ್ನು ಜಾರಿಗೊಳಿಸಲಾಗುವುದು. ಈ ಶಿಕ್ಷಣಕ್ರಮವು ಕಲ್ಪನಾ ಶಕ್ತಿಯನ್ನು ವರ್ಧಿಸುವ ಮತ್ತು ಎಲ್ಲದ್ದಕ್ಕೂ ಸುಲಭವಾಗಿ ಹೊಂದಿಕೊಳ್ಳುವ ಪಠ್ಯಕ್ರಮವನ್ನು ಹೊಂದಿದ್ದು, ಸೃಜನಶೀಲ ಅಧ್ಯಯನ ಕ್ರಮ ಹಾಗೂ ಔದ್ಯಮಿಕ ಶಿಕ್ಷಣವನ್ನು ಒಳಗೊಂಡಿರುತ್ತದೆ. ಈ ಕೋರ್ಸುಗಳಿಗೆ ಅನೇಕ ರೀತಿಯಲ್ಲಿ ನೀವು ದಾಖಲಾಗಬಹುದು ಮತ್ತು ನಿರ್ಗಮಿಸಬಹುದು.
ಆಡಳಿತ: ಈ ಸಂಸ್ಥೆಗಳನ್ನು ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಸ್ವಾಯತ್ತತೆಯ ಆಧಾರದ ಮೇಲೆ ನಡೆಸಲಾಗುವುದು. ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯ ಆಡಳಿತವನ್ನು ಸ್ವತಂತ್ರವಾದ ಮಂಡಳಿಯು ನೋಡಿಕೊಳ್ಳುತ್ತದೆ.
ನಿಯಂತ್ರಣ: ಸಂಸ್ಥೆಗಳ ಸಾರ್ವಜನಿಕ ಹಿತಾಸಕ್ತಿ ಮತ್ತು ಆರ್ಥಿಕ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ನೆರವಾಗುವಂತೆ ನಿಯಂತ್ರಣವು ಹಗುರವೆನಿಸಿದರೂ, ಬಿಗಿಯಾಗಿರುತ್ತದೆ. ಪ್ರಮಾಣಗಳನ್ನು ಜಾರಿಗೊಳಿಸುವುದರಲ್ಲಿ, ಹಣಕಾಸು ನಿಧಿಗಳ ವಿಚಾರದಲ್ಲಿ, ಮಾನ್ಯತೆಗೆ ಸಂಬಂಧಿಸಿದಂತೆ ಎಲ್ಲ ವಿಷಯಗಳನ್ನೂ ಯಾವುದೇ ಹಿತಾಸಕ್ತಿ ಸಂಘರ್ಷಕ್ಕೆ ಎಡೆ ಇಲ್ಲದಂತೆ ನಿರ್ವಹಿಸಲು ಅವುಗಳನ್ನು ಸ್ವತಂತ್ರ ಸಂಸ್ಥೆಗಳ ಮೂಲಕ ನಿರ್ವಹಿಸಲಾಗುತ್ತವೆ.
- ಶಿಕ್ಷಕರ ಶಿಕ್ಷಣ ಮತ್ತು ತರಬೇತಿ
ಶಿಕ್ಷಕರ ತರಬೇತಿ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿದ್ದು, ಬಹುಶಿಸ್ತೀಯವಾಗಿ, ಲವಲವಿಕೆಯಿಂದ ಕೂಡಿದ್ದು ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ನಡೆಸಲಾಗುತ್ತದೆ. ಶಿಕ್ಷಕರನ್ನು ರೂಪಿಸಲು 4 ವರ್ಷಗಳ ಸಂಯೋಜಿತ, ಸ್ತರನಿರ್ದಿಷ್ಟ, ವಿಷಯ ನಿರ್ದಿಷ್ಟ ಶಿಕ್ಷಣ ಪದವಿ ಕೋರ್ಸುಗಳನ್ನು ಬಹುಶಿಸ್ತೀಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಲಾಗುತ್ತದೆ. ಕಳಪೆ ಗುಣಮಟ್ಟದ ಮತ್ತು ಸಮರ್ಪಕವಾಗಿ ಕೆಲಸ ನಿರ್ವಹಿಸದ ಶಿಕ್ಷಕರ ತರಬೇತಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುವುದು. - ವೃತ್ತಿಪರ ಶಿಕ್ಷಣ
ವೃತ್ತಿಪರ ಶಿಕ್ಷಣವು ಉನ್ನತ ಶಿಕ್ಷಣ ಕ್ರಮದ ಅವಿಭಾಜ್ಯ ಅಂಗವಾಗಿರುತ್ತದೆ. ಪ್ರತ್ಯೇಕವಾದ ತಾಂತ್ರಿಕ ವಿಶ್ವವಿದ್ಯಾಲಯಗಳು, ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯಗಳು, ಕಾನೂನು. ಮತ್ತು ಕೃಷಿ ವಿಶ್ವವಿದ್ಯಾಲಯಗಳು ಅಥವಾ ಈ ಕ್ಷೇತ್ರಗಳಲ್ಲಿ ಅಥವಾ ಇತರ ಕ್ಷೇತ್ರಗಳಲ್ಲಿರುವ ಸಂಸ್ಥೆಗಳನ್ನು ರದ್ದುಪಡಿಸಲಾಗುತ್ತದೆ. - ಔದ್ಯೋಗಿಕ ಶಿಕ್ಷಣ
ಇದು ಸಾಮಾನ್ಯ ಶಿಕ್ಷಣದ ಅವಿಭಾಜ್ಯ ಅಂಗವಾಗಿರುತ್ತದೆ. ಈ ನೀತಿಯು 2025ರ ವೇಳೆಗೆ ಕನಿಷ್ಟ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಔದ್ಯೋಗಿಕ ಶಿಕ್ಷಣದ ಸೌಲಭ್ಯವನ್ನು ನೀಡುವ ಗುರಿಯನ್ನು ಹೊಂದಿರುತ್ತದೆ. - ರಾಷ್ಟ್ರೀಯ ಸಂಶೋಧನಾ ಸಂಸ್ಥೆ (National Research Foundation): ದೇಶಾದ್ಯಂತ ಸಂಶೋಧನೆ ಮತ್ತು ಆವಿಷ್ಕಾರಗಳ ವೇಗವರ್ಧಿಸಲು ಮತ್ತು ವಿಸ್ತರಿಸಲು ಹೊಸ ಘಟಕವನ್ನು ಸ್ಥಾಪಿಸಲಾಗುವುದು.
- ಶಿಕ್ಷಣದಲ್ಲಿ ತಂತ್ರಜ್ಞಾನ
ಈ ನೀತಿಯು ತರಗತಿಯ ಪ್ರಕ್ರಿಯೆಗಳನ್ನು ಸುಧಾರಿಸಲು, ಶಿಕ್ಷಕರ ವೃತ್ತಿಪರ ಬೆಳವಣಿಗೆಯನ್ನು ಬೆಂಬಲಿಸಲು, ಅನುಕೂಲಕರ ಗುಂಪುಗಳಿಗೆ ಶೈಕ್ಷಣಿಕ ಪ್ರವೇಶವನ್ನು ಹೆಚ್ಚಿಸಲು ಮತ್ತು ಶೈಕ್ಷಣಿಕ ಯೋಜನೆ, ಆಡಳಿತ ಮತ್ತು ನಿರ್ವಹಣೆಯನ್ನು ಸುವ್ಯವಸ್ಥಿತಗೊಳಿಸಲು ಎಲ್ಲಾ ಹಂತದ ಶಿಕ್ಷಣಕ್ಕೆ ತಂತ್ರಜ್ಞಾನವನ್ನು ಸೂಕ್ತವಾಗಿ ಸಂಯೋಜಿಸುವ ಗುರಿಯನ್ನು ಹೊಂದಿದೆ. - ವಯಸ್ಕರ ಶಿಕ್ಷಣ
ಈ ನೀತಿಯು 2030ರ ವೇಳೆಗೆ ಶೇ. 100ರಷ್ಟು ಯುವಕರ ಮತ್ತು ವಯಸ್ಕರ ಸಾಕ್ಷರತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. - ಭಾರತೀಯ ಭಾಷೆಗಳಿಗೆ ಉತ್ತೇಜನ
ಎಲ್ಲಾ ಭಾರತೀಯ ಭಾಷೆಗಳನ್ನು ಸಂರಕ್ಷಿಸಿ, ಅವುಗಳ ಬೆಳವಣಿಗೆ ಮತ್ತು ಜೀವಂತಿಕೆಯನ್ನು ಕಾಪಾಡುವುದನ್ನು ಈ ನೀತಿಯು ಖಾತ್ರಿಪಡಿಸುತ್ತದೆ. - ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ
ಸಾರ್ವಜನಿಕ ಶಿಕ್ಷಣವನ್ನು ವಿಸ್ತರಿಸಲು ಮತ್ತು ಬಲಗೊಳಿಸಲು ಸಾಕಷ್ಟು ಮಟ್ಟದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಮಾಡಲಾಗುವುದು. - ರಾಷ್ಟ್ರೀಯ ಶಿಕ್ಷಣ ಆಯೋಗ:
ಮಾನ್ಯ ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಶಿಕ್ಷಣ ಆಯೋಗವನ್ನು ಸ್ಥಾಪಿಸಲಾಗುವುದು. ಇದು ಭಾರತದಲ್ಲಿ ಶೈಕ್ಷಣಿಕ ಮುನ್ನೋಟವನ್ನು ಜಾರಿಗೊಳಿಸಲು ಬದ್ಧವಾಗಿರುತ್ತದೆ.

Average Rating