ನವದೆಹಲಿ: ನೊಂದವರಿಗೆ, ದೀನರಿಗೆ ಮೋದಿ ಏನು ಮಾಡಿದ್ದಾರೆ ಎಂದು ಕೇಳುವವರಿಗೆ ಉತ್ತರಗಳಲ್ಲಿ ಒಂದು ಇಲ್ಲಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ದೇಶದ ಬೆನ್ನೆಲುಬಾದ ರೈತಾಪಿ ಸಮುದಾಯಕ್ಕೆ ಕೇಂದ್ರ ಸರ್ಕಾರವು ಈಗಾಗಲೇ ಭರವಸೆ ನೀಡಿದಂತೆ, 17 ಸಾವಿರ ಕೋಟಿ ರೂ. ಹಣವನ್ನು ತಲುಪಿಸಿದ್ದಾರೆ.
ಪಿಎಂ-ಕಿಸಾನ್ ಸಮ್ಮಾನ್ ನಿಧಿಯಿಂದ, ಯಾವುದೇ ಮಧ್ಯವರ್ತಿಗಳ ಕೈಗೆ ಸಿಗದಂತೆ, 8.5 ಕೋಟಿ ರೂ. ಮೊತ್ತವನ್ನು ರೈತರ ಬ್ಯಾಂಕು ಖಾತೆಗಳಿಗೆ ಒಂದೇ ಕ್ಲಿಕ್‌ನಲ್ಲಿ ನೇರವಾಗಿ ತಲುಪಿಸಿದ್ದಾರೆ. ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಅವರು ಭಾನುವಾರ ರೈತರ ಖಾತೆಗಳಿಗೆ ಹಣ ರವಾನಿಸಿದರು. ಪಿಎಂ ಕಿಸಾನ್ ನಿಧಿಯಲ್ಲಿ ಸರ್ಕಾರವು ದೇಶದ 14 ಕೋಟಿ ರೈತರಿಗೆ ಮೂರು ಕಂತುಗಳಲ್ಲಿ ವಾರ್ಷಿಕವಾಗಿ ತಲಾ 6,000 ರೂ. ಪ್ರೋತ್ಸಾಹ ಧನವನ್ನು ನೀಡುತ್ತಿದೆ.
ನೇರ ನಿಧಿ ವರ್ಗಾವಣೆ ಯೋಜನೆಯಲ್ಲಿ ಈ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೇ ಜಮಾ ಮಾಡಲಾಗುತ್ತದೆ.
“ಇಲ್ಲಿ ಮಧ್ಯವರ್ತಿಗಳಿಗೆ, ಕಮಿಷನ್ ಪಡೆಯುವವರಿಗೆ ಜಾಗವೇ ಇಲ್ಲ. ನೇರವಾಗಿ ರೈತರಿಗೇ ಸಿಗುತ್ತದೆ. ಈ ಯೋಜನೆಯ ಉದ್ದೇಶವು ಸಫಲವಾಗುತ್ತಿರುವುದರಿಂದ ನನಗೆ ಸಂತೋಷವಾಗಿದೆ” ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ನುಡಿದರು.
2018ರ ಡಿಸೆಂಬರ್ 1ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಘೋಷಿಸಲಾಗಿತ್ತು. ಅದು ಈಗಾಗಲೇ 9.9 ಕೋಟಿ ರೈತರಿಗೆ 75,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡಿದೆ.
ಕಷ್ಟ ಕಾಲದಲ್ಲಿ ಕುಟುಂಬದ ಅಗತ್ಯ ಪೂರೈಸಿಕೊಳ್ಳಲು ಇದು ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಆಧಾರ್ ದೃಢೀಕೃತ ಫಲಾನುಭವಿಗಳ ಬ್ಯಾಂಕು ಖಾತೆಗಳಿಗೇ ಹಣ ಜಮೆಯಾಗುತ್ತಿರುವುದರಿಂದ, ಮಧ್ಯೆ ಹಣ ಸೋರಿಕೆಯಾಗುವುದನ್ನು ತಡೆದಂತಾಗಿದ್ದು, ಯೋಜನೆಯು ಪೂರ್ಣ ಪ್ರಮಾಣದಲ್ಲಿ ರೈತರನ್ನೇ ತಲುಪುವಂತಾಗಿದೆ. ಕೋವಿಡ್-19 ಜಾಗತಿಕ ಪಿಡುಗಿನಿಂದಾಗಿ ಲಾಕ್‌ಡೌನ್ ಮಾಡಬೇಕಾದ ಸಂಕಷ್ಟ ಕಾಲದಲ್ಲಿ ರೈತರಿಗೆ ಸುಮಾರು 22 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು ಎಂದು ಸರ್ಕಾರವು ತಿಳಿಸಿದೆ.
1 ಲಕ್ಷ ಕೋಟಿ – ಕೃಷಿಕರು, ಕೃಷಿ ಉದ್ಯಮಿಗಳಿಗೆ
ಇದೇ ಸಂದರ್ಭ, ಕೃಷಿ ಉದ್ಯಮಿಗಳಿಗೆ, ಕೃಷಿ ಸ್ಟಾರ್ಟಪ್‌ಗಳಿಗೆ (ನವೋದ್ಯಮಗಳಿಗೆ), ಕೃಷಿ ತಂತ್ರಜ್ಞಾನ ಪೂರೈಸುವವರಿಗಾಗಿ ಮತ್ತು ಬೆಳೆ ಕೊಯ್ಲಿನ ನಂತರದ ನಿರ್ವಹಣೆ ಹಾಗೂ ಕೃಷಿ ಯಂತ್ರೋಪಕರಣಗಳ ಆರೈಕೆಗಾಗಿ ರೈತರ ಗುಂಪುಗಳಿಗೆ ಕೃಷಿ ಮೂಲಸೌಕರ್ಯ ನಿಧಿಯಿಂದ 1 ಲಕ್ಷ ಕೋಟಿ ರೂ. ಹಣಕಾಸು ನೆರವಿನ ಸೌಕರ್ಯವನ್ನೂ ಮೋದಿ ಘೋಷಿಸಿದರು.
ಕೊಯ್ಲಿನ ಬಳಿಕ ಶೈತ್ಯಾಗಾರಗಳು, ಸಂಗ್ರಹಣಾ ಕೇಂದ್ರಗಳು, ಸಂಸ್ಕರಣಾ ಘಟಕಗಳು ಮುಂತಾದವುಗಳಿಗಾಗಿ ವ್ಯವಸ್ಥೆ ಮಾಡುವುದಕ್ಕೆ ಈ ನಿಧಿಯಿಂದ ನೆರವಾಗಲಿದೆ.

Average Rating