ಹೊಸದಿಲ್ಲಿ: ನಮ್ಮ ಹೆಮ್ಮೆಯ ರಾಷ್ಟ್ರ ಲಾಂಛನದ ಬಗ್ಗೆ ಮತ್ತು ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಹೊಸ ಕಟ್ಟಡದಲ್ಲಿ ಅಳವಡಿಸಿದರೆಂಬ ಏಕೈಕ ಕಾರಣಕ್ಕೆ ಪ್ರತಿಪಕ್ಷಗಳು ಅವರನ್ನು ದೇಶವಿರೋಧಿ ಎಂಬಂತೆ ಬಿಂಬಿಸುತ್ತಿವೆ. ಕಟ್ಟಾ ದೇಶಭಕ್ತರೊಬ್ಬರನ್ನು ದೇಶವಿರೋಧಿ ಎಂಬಂತೆ ಬಿಂಬಿಸಿ ನಗೆಪಾಟಲಿಗೀಡಾಗಿರುವ ಪ್ರತಿಪಕ್ಷಗಳು, ತಮ್ಮ ಕರ್ತವ್ಯ ಮರೆತು ವಿರೋಧಿಸುವುದೇ ಏಕೈಕ ಕಾಯಕ ಎಂಬಂತೆ ‘ವಿರೋಧ’ ಪಕ್ಷಗಳಾಗಿವೆ.
ಇದಕ್ಕೆ ಸಣ್ಣ ಉದಾಹರಣೆಯೆಂದರೆ, ನವೀನ ಸಂಸತ್ ಭವನದಲ್ಲಿ, ಹಿಂದೂ ಧರ್ಮಾಚರಣೆಯ ಅನುಸಾರ ಭಕ್ತಿ ಶ್ರದ್ಧೆಯಿಂದ ಪ್ರತಿಷ್ಠಾಪಿಸಲಾಗಿರುವ ರಾಷ್ಟ್ರೀಯ ಲಾಂಛನ.
ಲಾಂಛನದಲ್ಲಿ ಸಿಂಹಗಳ ಮುಖಗಳು ವ್ಯಗ್ರವಾಗಿವೆ, ದೇಶಕ್ಕೆ ವಿರೋಧ, ಅವಮಾನವಾಗಿದೆ ಎಂದೆಲ್ಲಾ ಪ್ರತಿಪಕ್ಷಗಳು ಕೂಗಾಡುತ್ತಿದ್ದು, ಮೋದಿ, ಬಿಜೆಪಿ ಮತ್ತು ಎನ್ಡಿಎ ಸರಕಾರದ ವಿರುದ್ಧದ ಅವುಗಳ ಸುಳ್ಳಿನ ಸರಮಾಲೆಗೆ ಹೊಸ ಸೇರ್ಪಡೆಯಿದು. ಇದಕ್ಕೇ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರು ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ: ಯಾವುದೇ ಕಲಾಕೃತಿಗಳ ಸೌಂದರ್ಯ ಇರುವುದು ನೋಡುಗರ ಕಣ್ಣಿನಲ್ಲಿ ಅಂತ! ಒಳಮನಸ್ಸಿನ ಅನುಸಾರವೇ ಸೌಂದರ್ಯವೂ ಕಾಣಿಸುತ್ತದೆ. ಒಳಗೆ ವ್ಯಗ್ರತೆಯಿದ್ದರೆ ಈ ರೀತಿಯಾಗಿ ಗಂಭೀರವಾಗಿರುವ, ದೇಶಭಕ್ತಿ ಪ್ರಚೋದಿಸುವ, ಆತ್ಮವಿಶ್ವಾಸದ ಪ್ರತೀಕವಾಗಿರುವ ಸಿಂಹಗಳು ಕೂಡ ವ್ಯಗ್ರವಾಗಿಯೇ ಕಾಣಿಸುತ್ತವೆ.
ಆದರೆ, ಇಡೀ ಪ್ರಪಂಚವೇ ಹೆಮ್ಮೆ ಪಡುವ ನಾಲ್ಕು ಸಿಂಹಗಳ ಮುಖಗಳಿರುವ ಈ ಮಹಾನ್ ಲಾಂಛನದ ಕುರಿತು ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.
ಇದನ್ನು ಮಾಡಿದ್ದು ದೇಶದ ವಿವಿಧ ಭಾಗಗಳಿಂದ ಬಂದು ಒಟ್ಟುಗೂಡಿದ ದೇಶಭಕ್ತ ಶಿಲ್ಪಿಗಳು. ಇವರ ಸಂಖ್ಯೆ ನೂರಕ್ಕೂ ಹೆಚ್ಚು.
ಒಂಭತ್ತು ತಿಂಗಳ ಸತತ ಪರಿಶ್ರಮದ ಬಳಿಕ ಈ ಅದ್ಭುತವಾದ ಮತ್ತು ಬೃಹತ್ ರಾಷ್ಟ್ರಲಾಂಛನವನ್ನು ನಿರ್ಮಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು 2022 ಜು.11ರ ಸೋಮವಾರ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.

ಅತ್ಯುನ್ನತ ಗುಣಮಟ್ಟದ, ಪರಿಶುದ್ಧ ಹಿತ್ತಾಳೆ ಲೋಹದಿಂದ ಮಾಡಲಾಗಿರುವ ಈ ಲಾಂಛನವನ್ನು, ಈಗ ನಿರ್ಮಾಣ ಹಂತದಲ್ಲಿರುವ ಹೊಸ ಸಂಸತ್ ಕಟ್ಟಡದ ಕೇಂದ್ರ ಭಾಗದಲ್ಲಿ ಅಳವಡಿಸಲಾಗಿದೆ.
ನೆಲಮಟ್ಟದಿಂದ 33 ಮೀಟರ್ ಎತ್ತರದಲ್ಲಿ ಇಷ್ಟು ತೂಕದ ಲಾಂಛನವನ್ನು ಅಳವಡಿಸುವುದು ಸುಲಭದ ಕೆಲಸವಾಗಿರಲಿಲ್ಲ.




ಸಾರಾನಾಥದಲ್ಲಿರುವ ಅಶೋಕ ಚಕ್ರವರ್ತಿಯ ವಸ್ತುಸಂಗ್ರಹಾಲಯದಲ್ಲಿರುವ ಲಯನ್ ಕ್ಯಾಪಿಟಲ್ನಲ್ಲಿರುವ ಮೂಲ ಲಾಂಛನವನ್ನೇ ಇದು ಹೋಲುತ್ತದೆ. ಇದರಲ್ಲಿ ಹಿಂಭಾಗದಲ್ಲಿ ಅಂಟಿಕೊಂಡಿರುವಂತೆ ನಾಲ್ಕು ಸಿಂಹಗಳನ್ನು ವೃತ್ತಾಕಾರದಲ್ಲಿ ಕೂರಿಸಲಾಗಿದೆ. ಇದರಲ್ಲಿ ಆನೆ, ಕುದುರೆ, ಹೋರಿ ಮತ್ತು ಧರ್ಮಚಕ್ರಗಳ ಕೆತ್ತನೆಗಳೂ ಇವೆ.
ಈ ಲಾಂಛನದ ಎತ್ತರ 6.5 ಮೀಟರ್ ಹಾಗೂ ಒಟ್ಟು ತೂಕ ಬರೋಬ್ಬರಿ 16 ಸಾವಿರ ಕಿಲೋ. (ರಾಷ್ಟ್ರೀಯ ಲಾಂಛನದ ತೂಕ 9500 ಕೆಜಿ ಹಾಗೂ ಅದಕ್ಕೆ ಆಧಾರವಾಗಿರುವ ಆಕೃತಿಗಳ ತೂಕ 6500 ಕೆಜಿ). ಇದನ್ನು ಭಾರತೀಯ ಕಲಾಕಾರರು ತಮ್ಮ ಕರಕೌಶಲ್ಯದಿಂದಲೇ ರೂಪಿಸಿದ್ದಾರೆ.
ಕರಕುಶಲತೆ ಮತ್ತು ಮೂಲಸಾಮಗ್ರಿಗೆ ಸಂಬಂಧಿಸಿದಂತೆ ಇಡೀ ಭಾರತ ದೇಶದ ಬೇರೆಲ್ಲೂ ಕಾಣದ ವಿಶೇಷತೆ ಈ ಲಾಂಛನದಲ್ಲಿದೆ. ದೇಶದಾದ್ಯಂತದಿಂದ 100ಕ್ಕೂ ಹೆಚ್ಚು ಕಲಾಕಾರರು ಇದರ ವಿನ್ಯಾಸ, ಕೆತ್ತನೆ ಮತ್ತು ಲೋಹದ ಮಿಶ್ರಣ-ಮೆರುಗು ಮುಂತಾದ ಕಾರ್ಯಗಳಲ್ಲಿ 9 ತಿಂಗಳ ಕಾಲ ದಣಿವರಿಯದೆ ಅವಿರತವಾಗಿ ತೊಡಗಿಸಿಕೊಂಡಿದ್ದರು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಹೊಸ ಸಂಸತ್ ಭವನದ ಚಾವಣಿಯ ಮೇಲೆ ಸ್ಥಾಪಿಸಲಾಗಿರುವ ಈ ಹೆಮ್ಮೆಯ ರಾಷ್ಟ್ರೀಯ ಲಾಂಛನವು, ಆವೆಮಣ್ಣಿನ ಮಾಡೆಲ್, ಕಂಪ್ಯೂಟರ್ ಗ್ರಾಫಿಕ್ಸ್ ಅಳವಡಿಕೆಯಿಂದ ಹಿತ್ತಾಳೆಯ ಲೋಹ ಬೆಸೆಯುವಿಕೆ ಮತ್ತು ಪಾಲಿಶಿಂಗ್ ಮುಂತಾದ ಎಂಟು ಹಂತಗಳನ್ನು ದಾಟಿ ಈ ರೂಪ ತಳೆದಿದೆ.
ಇದರ ಆರಂಭಿಕ ಕಾನ್ಸೆಪ್ಟ್ ವಿನ್ಯಾಸ ಮಾಡಿದ್ದು ಅಹಮದಾಬಾದ್ನ HCP. ಬಳಿಕ ಆವೆಮಣ್ಣಿನ ಹಾಗೂ ಥರ್ಮೋಕೋಲ್ ಮಾದರಿಗಳನ್ನು ತಯಾರಿಸಿದ್ದು ಔರಂಗಾಬಾದ್ನ ಸುನಿಲ್ ಡಿಯೋರೆ. ಇವರ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಮೂಲಕ ಡಿಯೋರೆ ಅಸೋಸಿಯೇಟ್ಸ್ ಈ ಕಾರ್ಯ ನೆರವೇರಿಸಿದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭೆಯ ಉಪ ಸಭಾಪತಿ ಹರಿವಂಶ ಹಾಗೂ ಕೇಂದ್ರ ವಸತಿ-ನಗರ ವ್ಯವಹಾರಗಳ ಸಚಿವ ಹರದೀಪ್ ಸಿಂಗ್ ಪುರಿ ಅವರು ಈ ಲಾಂಛನದ ಲೋಕಾರ್ಪಣೆ ವೇಳೆ ನರೇಂದ್ರ ಮೋದಿಯ ಜೊತೆಗಿದ್ದರು.
ಭಾರತೀಯ ಸಂಪ್ರದಾಯದ ಪ್ರಕಾರ, ಪುರೋಹಿತರು ನಡೆಸಿದ ಧಾರ್ಮಿಕ ವಿಧಿ ವಿಧಾನಗಳ ಬಳಿಕವೇ ಈ ಲಾಂಛನವನ್ನು ಅನಾವರಣಗೊಳಿಸಲಾಯಿತು.
ಇದೇ ಸಂದರ್ಭ ಮೋದಿ ಅವರು ಕೆತ್ತನೆ ಕೆಲಸ ಮಾಡಿದ ಮತ್ತು ಇದಕ್ಕಾಗಿ ದುಡಿದ ಕಾರ್ಮಿಕರೊಂದಿಗೆ ಆತ್ಮೀಯ ಸಂವಾದ ನಡೆಸಿ, ಈ ದೇಶದ ಇತಿಹಾಸ ಸೃಷ್ಟಿಯಲ್ಲಿ ಕೊಡುಗೆ ನೀಡಿದ್ದೀರಿ ಎಂದು ಶ್ಲಾಘಿಸಿದರು.
2020ರ ಡಿಸೆಂಬರ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಇದು 64,500 ಚದರ ಮೀಟರ್ ಸುತ್ತಳತೆಯ ವಿಶಾಲವಾದ ಕಟ್ಟಡ ಸಂಕೀರ್ಣ. ಪ್ರಸ್ತುತ ಸಂಸತ್ 560 ಅಡಿ ವ್ಯಾಸವಿರುವ ವೃತ್ತಾಕಾರದ ಬೃಹತ್ ಕಟ್ಟಡ.

Average Rating