ನವದೆಹಲಿ: 130 ಕೋಟಿ ಭಾರತೀಯ ಸಾಮರ್ಥ್ಯವನ್ನೊಮ್ಮೆ ನೋಡಿ. ಸುತ್ತಮುತ್ತಲಿನ ದೇಶಗಳಲ್ಲಿ ಅದೆಷ್ಟೋ ವೈಪರೀತ್ಯಗಳು, ಗಂಡಾಂತರಗಳು ಘಟಿಸಿದರೂ ಧೃತಿಗೆಡಲಿಲ್ಲ. ಭಾರತೀಯರು ಎಚ್ಚೆತ್ತುಕೊಂಡಿದ್ದಾರೆ, ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಕೋವಿಡ್-19 ತಂದಿತ್ತ ತಾತ್ಕಾಲಿಕ ಹಿನ್ನಡೆಯನ್ನು ಮೀರಿ ನಿಲ್ಲುವಲ್ಲಿ ಶ್ರಮಿಸುತ್ತಿದ್ದಾರೆ ಎಂದು, ಈಗಾಗಲೇ ಎಲ್ಲ ಪ್ರತಿಪಕ್ಷಗಳ ನೆಗೆಟಿವ್ ಭಾವನೆಗಳನ್ನೇ ಬಿಂಬಿಸುವ ಅಭಿಯಾನದಿಂದ ಮನಸ್ಸು ಮುದುಡಿದ್ದ ಭಾರತೀಯರಿಗೆ ಧೈರ್ಯ ತುಂಬಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
74ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಏಳನೇ ಬಾರಿಗೆ ದೇಶಕ್ಕೆ ಸಂದೇಶ ನೀಡಿದ ನರೇಂದ್ರ ಮೋದಿ, ದೇಶದೆದುರು ಲಕ್ಷಾಂತರ ಸವಾಲುಗಳು ಎದುರಾಗಿವೆ, ಆದರೆ ಅದಕ್ಕೆ ಕೋಟ್ಯಂತರ ಪರಿಹಾರಗಳನ್ನೂ ನೀಡುವ ಸಾಮರ್ಥ್ಯ ಭಾರತೀಯರಿಗಿದೆ. ಆತ್ಮನಿರ್ಭರತೆಯೇ (ಸ್ವಾವಲಂಬನೆ) ಸ್ವತಂತ್ರ ಭಾರತದ ಮಾನಸಿಕತೆಯಾಗಬೇಕಿದೆ. ವೋಕಲ್ ಫಾರ್ ಲೋಕಲ್ – ಸ್ಥಳೀಯವಾದುದನ್ನೇ ಬೆಳೆಸಿ, ಬಳಸಿ ಎಂದು ಅವರು ದೇಶದ ಜನತೆಗೆ ಕರೆ ನೀಡಿದರು.
ಹಿರಿಯರು, ಅಪ್ಪ-ಅಮ್ಮಂದಿರೆಲ್ಲ ‘ಮಗೂ, ನಿನ್ನ ಕಾಲಲ್ಲೇ ನೀನು ನಿಲ್ಲುವಂತಾಗಬೇಕು’ ಎಂದು ಆಗಾಗ್ಗೆ ನೆನಪಿಸುತ್ತಿದ್ದರು. ಇದನ್ನೇ ಅಲ್ಲವೇ ನಾವು ಪಾಲನೆ ಮಾಡ್ತಿರೋದು, ಭಾರತವೂ ಸ್ವಂತ ಕಾಲಲ್ಲಿ ನಿಲ್ಲೋದು ಬೇಡವೇ ಎಂದು ಕೇಳಿದ ಅವರು, ಇದಕ್ಕಾಗಿ, ನಮ್ಮದೇ ಉತ್ಪನ್ನಗಳನ್ನು ಬೆಳೆಸಿ, ಬಳಸುವ ಸಂಕಲ್ಪ ಮಾಡೋಣ ಎಂದರು.
ಹಿಂದೆ, ಗೋಧಿಯನ್ನೂ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಈಗ ಭಾರತದ ಅನ್ನದಾಗ ಅದ್ಭುತವಾಗಿ ಚೇತರಿಸಿಕೊಂಡಿದ್ದಾನೆ, ಆತ ಭಾರತಕ್ಕಷ್ಟೇ ಅಲ್ಲ, ಇಡೀ ಜಗತ್ತಿಗೇ ಅನ್ನದಾತನಾಗುವ ಸಾಮರ್ಥ್ಯ ತೋರಿಸುತ್ತಿದ್ದಾನೆ. ಇದಕ್ಕೆ ತಕ್ಕಂತೆ ಮೂಲಸೌಕರ್ಯವೂ ಅಭಿವೃದ್ಧಿಯಾಗುತ್ತಿದೆ ಎಂದು ಕೃಷಿಕ ಸಮುದಾಯದಲ್ಲೂ ವಿಶ್ವಾಸ ತುಂಬಿದರು.
ನಮ್ಮ ದೇಶದಲ್ಲಿ ಏನೆಲ್ಲಾ ಕಮಾಲ್ ಆಗ್ತಿದೆ, ಮಧ್ಯವರ್ತಿಗಳ ಕಾಟವಿಲ್ಲದೆ, ಸೋರಿಕೆಯಾಗದೆ ಕೃಷಿಕರ ಖಾತೆಗೆ ನೇರವಾಗಿ ಹಣ ಜಮಾವಣೆಯಾಗುತ್ತಿದೆ. ಎಪಿಎಂಸಿ ಕಾಯ್ದೆ ಈ ಪರಿ ಬದಲಾಗಿ, ಕೃಷಿಕರಿಗೆ ಜೀವ ತುಂಬುತ್ತಿದೆ, ರಾಷ್ಟ್ರೀಯ ಶಿಕ್ಷಣ ನೀತಿ ರೂಪುಗೊಂಡಿದೆ, ಒಂದು ನೇಷನ್, ಒಂದು ರೇಷನ್ ವ್ಯವಸ್ಥೆ ಬಂದಿದೆ. ಭಾರತದಲ್ಲಿ ನಡೆಯುತ್ತಿರುವ ಈ ಪರಿಯ ಸುಧಾರಣೆಗಳನ್ನು ಇಡೀ ಜಗತ್ತೇ ಕಣ್ಣುಬಿಟ್ಟು ನೋಡುತ್ತಿದೆ. ವಿದೇಶೀ ಕಂಪನಿಗಳು ಹೂಡಿಕೆಗೂ ಮುಂದಾಗುತ್ತಿದ್ದಾರೆ. ಶೇ.18ರಷ್ಟು ವಿದೇಶೀ ನೇರ ಹೂಡಿಕೆಯಲ್ಲಿ ವೃದ್ಧಿಯಾಗಿದೆ. ದೊಡ್ಡ ದೊಡ್ಡ ಕಂಪನಿಗಳು ಭಾರತದತ್ತ ನೋಡತೊಡಗಿವೆ ಎಂದು ಕೊರೊನಾ ಸಂಕಷ್ಟ ಕಾಲದಲ್ಲಿ ಮ್ಲಾನವದನರಾಗಿರುವ ಭಾರತೀಯರಿಗೆ ನರೇಂದ್ರ ಮೋದಿ ಧೈರ್ಯ ತುಂಬಿದರು.
ಮೋದಿ ಭಾಷಣದ ಇನ್ನಷ್ಟು ಮುಖ್ಯಾಂಶಗಳು:
- ವಿಸ್ತರಣಾವಾದಕ್ಕೆ ಮುಂದಾಗುವ ದೇಶಗಳಿಗೆ ಭಾರತ ಸಮರ್ಥ ಸವಾಲು
- ಮೇಕ್ ಇನ್ ಇಂಡಿಯಾಕ್ಕೆ ಒತ್ತು ನೀಡಿ ಆತ್ಮನಿರ್ಭರರಾಗುವ ಅಗತ್ಯವಿದೆ
- ಆತ್ಮನಿರ್ಭರತೆ (ಸ್ವಾವಲಂಬನೆ) ಎಂಬುದು ಒಂದು ಪದವಲ್ಲ, ಇದೊಂದು ಮಂತ್ರ.
- ಇನ್ನೆಷ್ಟು ಕಾಲ ನಾವು ಕಚ್ಚಾ ವಸ್ತುಗಳನ್ನು ರಫ್ತು ಮಾಡಿ, ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು? ನಾವು ಸ್ವಾವಲಂಬಿಗಳಾಗಬೇಕು.
- ಸ್ವಾವಲಂಬನೆ ಎಂಬುದು ಆಮದಿಗೆ ಕಡಿವಾಣ ಹಾಕುವುದಷ್ಟೇ ಅಲ್ಲ, ನಮ್ಮ ಕೌಶಲ್ಯ, ನಮ್ಮ ಕ್ರಿಯಾಶೀಲತೆಗಳನ್ನು ವಿಸ್ತರಿಸಿಕೊಳ್ಳುವುದೂ ಆಗಿದೆ.
- ನಮ್ಮ ಚಿಂತನೆ ಮೇಕ್ ಇನ್ ಇಂಡಿಯಾಕ್ಕಿಂತಲೂ ಮುಂದೆ ಹೋಗಿ, ‘ಮೇಕ್ ಫಾರ್ ವರ್ಲ್ಡ್’, ಜಗತ್ತಿಗೇ ನಾವು ನೀಡುವಂತಾಗಬೇಕು.
- ಮೂಲಸೌಕರ್ಯದಲ್ಲಿ ಕ್ರಾಂತಿ ತರುವುದಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿ ಸುಮಾರು 7 ಸಾವಿರ ಯೋಜನೆಗಳನ್ನು ಗುರುತಿಸಲಾಗಿದೆ.
- 90 ಸಾವಿರ ಕೋಟಿ ರೂ. ಹಣವನ್ನು ಬಡವರ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ, 80 ಕೋಟಿಗೂ ಹೆಚ್ಚು ಮಂದಿಗೆ ಉಚಿತ ಆಹಾರ ಧಾನ್ಯ ವಿತರಿಸಲಾಗಿದೆ.
- 7 ಕೋಟಿ ಕುಟುಂಬಗಳಿಗೆ ಉಚಿತ ಅನಿಲ ಸಿಲಿಂಡರ್ ಒದಗಿಸಲಾಗಿದೆ.
- ಕೃಷಿ ಕ್ಷೇತ್ರದ ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂ. ನಿಧಿ ನಿರ್ಮಿಸಲಾಗಿದೆ.
- ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಜಲ ಜೀವನ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಒದಗಿಸಲಾಗಿದೆ.
- 1000 ದಿನಗಳೊಳಗೆ ಎಲ್ಲ 6 ಲಕ್ಷ ಹಳ್ಳಿಗಳನ್ನು ಆಪ್ಟಿಕಲ್ ಫೈಬರ್ ಜಾಲದ ಮೂಲಕ ಸಂಪರ್ಕಿಸಲು ನಿರ್ಧರಿಸಿದ್ದೇವೆ.
- ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಷನ್ ದೇಶದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಉಂಟು ಮಾಡಲಿದೆ
- ದೇಶದಲ್ಲಿ ಮೂರು ಕೊರೊನಾ ಲಸಿಕೆ ಯೋಜನೆಗಳು ಪ್ರಯೋಗಕ್ಕೆ ಒಳಗಾಗುತ್ತಿವೆ. ದೃಢಪಟ್ಟ ಬಳಿಕ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಲಾಗುತ್ತದೆ.
- ಜಮ್ಮು ಮತ್ತು ಕಾಶ್ಮೀರ ಹೊಸ ಅಭಿವೃದ್ಧಿಯ ದಿಕ್ಕಿನಲ್ಲಿ ಒಂದು ವರ್ಷ ಪೂರೈಸಿದ್ದು, ಸಾಧ್ಯವಾದಷ್ಟು ಬೇಗ ಚುನಾವಣೆ ನಡೆಸಲಾಗುತ್ತದೆ.
- ದೇಶದ 100 ನರಗಳಲ್ಲಿ ಮಾಲಿನ್ಯ ತಗ್ಗಿಸುವ ಯೋಜನೆ ರೂಪುಗೊಳ್ಳುತ್ತಿದೆ.
- ಎಲ್ಒಸಿ (ಪಾಕ್ ಗಡಿಯ ಗಡಿ ನಿಯಂತ್ರಣ ರೇಖೆ) ಇರಲಿ, ಎಲ್ಎಸಿಯೇ (ಚೀನಾ ಗಡಿಯ ವಾಸ್ತವ ಗಡಿ ರೇಖೆ) ಇರಲಿ, ದುಸ್ಸಾಹಸ ಮಾಡುವವರಿಗೆ ನಾವು ನಮ್ಮದೇ ಭಾಷೆಯಲ್ಲಿ ತಕ್ಕ ಉತ್ತರ ನೀಡಿದ್ದೇವೆ. ಭಾರತದ ಸಾರ್ವಭೌಮತೆಯ ರಕ್ಷಣೆಯೇ ನಮ್ಮ ಪರಮೋಚ್ಚ ಗುರಿ.
- ಕೊರೊನಾ ವೈರಸ್ ದೊಡ್ಡ ಸವಾಲು ಒಡ್ಡಿರಬಹುದು, ಆದರೆ, ಭಾರತದ ಸ್ವಾವಲಂಬನೆಯೆಡೆಗಿನ ಧಾವಂತವನ್ನು ತಡೆಯುವಷ್ಟು ದೊಡ್ಡ ಸವಾಲು ಅಲ್ಲ.

Average Rating