ನವದೆಹಲಿ: ವಕೀಲರೂ, ರಾಜಕೀಯ ಹೋರಾಟಗಾರನೂ ಆಗಿರುವ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂ ಕೋರ್ಟ್ ಬಿಸಿ ಮುಟ್ಟಿಸಿದೆ. “ನಾನು ಟ್ವೀಟ್ ಮಾಡಿದ್ದು ಕೋಪದ ಸಂದರ್ಭದಲ್ಲಿ” ಹಾಗೂ “ಮುಖ್ಯ ನ್ಯಾಯಮೂರ್ತಿಗಳೇ ಸುಪ್ರೀಂ ಕೋರ್ಟ್ ಅಲ್ಲ” ಎಂಬ ವಾದವನ್ನು ತಿರಸ್ಕರಿಸಿದ (ಆ.14 ಶುಕ್ರವಾರ 2020) ಸರ್ವೋಚ್ಚ ನ್ಯಾಯಾಲಯವು, ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಆರೋಪದಲ್ಲಿ ತಪ್ಪಿತಸ್ಥ ಎಂದು ಸಾರಿದೆ.
ಇಷ್ಟಕ್ಕೂ ಪ್ರಶಾಂತ್ ಭೂಷಣ್ ಮಾಡಿದ್ದೇನು?
ಕಳೆದ ತಿಂಗಳು ಅವರು ಮಾಡಿದ್ದ ಟ್ವೀಟ್‌ನಲ್ಲಿ, ನಾಗರಿಕರಿಗೆ ಮೂಲಭೂತ ಹಕ್ಕಾಗಿರುವ ನ್ಯಾಯ ನಿರಾಕರಿಸುತ್ತಾ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟನ್ನೇ ಲಾಕ್‌ಡೌನ್ ಮೋಡ್‌ನಲ್ಲಿರಿಸಿ, ನಾಗ್ಪುರದ ರಾಜಭವನದ ಬಿಜೆಪಿ ಮುಖಂಡರಿಗೆ ಸೇರಿದ 50 ಲಕ್ಷ ಬೆಲೆಯ ಮೋಟಾರ್ ಸೈಕಲ್‌ನಲ್ಲಿ ಮಾಸ್ಕ್ ಅಥವಾ ಹೆಲ್ಮೆಟ್ ಧರಿಸದೇ ಹೋಗುತ್ತಾರೆ ಎಂದಿದ್ದರು. ಅಷ್ಟೇ ನರೇಂದ್ರ ಮೋದಿ ಸರ್ಕಾರದ ವಿರುದ್ಧವೂ ಆಕ್ರೋಶ ಹೊರಗೆಡಹುತ್ತಾ, ಭವಿಷ್ಯದ ಇತಿಹಾಸಕಾರರು ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಅಧಿಕೃತ ತುರ್ತು ಪರಿಸ್ಥಿತಿ ಇಲ್ಲದೆಯೇ ಪ್ರಜಾಪ್ರಭುತ್ವವನ್ನು ಹೇಗೆ ನಾಶಪಡಿಸಲಾಯಿತು ಎಂದು ನೋಡಿದರೆ, ಈ ಹಾನಿಯಲ್ಲಿ ಸುಪ್ರೀಂ ಕೋರ್ಟಿನ, ಅಷ್ಟೇ ಅಲ್ಲ ನಿರ್ದಿಷ್ಟವಾಗಿ ಕಳೆದ ನಾಲ್ಕು ಮುಖ್ಯ ನ್ಯಾಯಮೂರ್ತಿಗಳ ಪಾತ್ರವನ್ನು ಅವರು ನಿರ್ದಿಷ್ಟವಾಗಿ ಗುರುತಿಸುತ್ತಾರೆ ಎಂದು ಟೀಕಿಸಿದ್ದರು.
ನ್ಯಾಯಾಂಗ ಅಥವಾ ನ್ಯಾಯಾಧೀಶರ ಬಗ್ಗೆ ವಿದ್ವೇಷದ ಟೀಕೆಯು ನ್ಯಾಯಾಲಯಕ್ಕೇ ಕಳಂಕವುಂಟು ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಅರುಣ್ ಮಿಶ್ರಾ, ಬಿ.ಆರ್.ಗವಯಿ ಹಾಗೂ ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠವು, ಸುಪ್ರೀಂ ಕೋರ್ಟ್ ಬೇಸಿಗೆ ರಜಾಕಾಲದಲ್ಲಿಯೂ ಕಾರ್ಯನಿರ್ವಹಿಸಿದೆ, ಇದರಲ್ಲಿ ಆರೋಪಿ ಭೂಷಣ್ ಸ್ವತಃ ನ್ಯಾಯವಾದಿಯಾಗಿಯಷ್ಟೇ ಅಲ್ಲದೆ, ಅರ್ಜಿದಾರರಾಗಿಯೂ ಹಾಜರಾಗಿದ್ದರು ಎಂಬುದನ್ನು ನೆನಪಿಸಿದೆ. ಕೋರ್ಟಿನ ಹಲವಾರು ಪೀಠಗಳು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಿರಂತರವಾಗಿ ಕಾರ್ಯನಿರ್ವಹಿಸುತ್ತಾ, ತಮ್ಮ ಕರ್ತವ್ಯ ನಿಭಾಯಿಸುತ್ತಿವೆ. ಲಾಕ್‌ಡೌನ್ ಅವಧಿಯಲ್ಲೇ ಸುಪ್ರೀ ಕೋರ್ಟ್ ಇದುವರೆಗೆ 12,748 ಕೇಸುಗಳ ವಿಚಾರಣೆ ನಡೆಸಿದೆ ಎಂದೂ ನೆನಪಿಸಿದೆ.
ಭೂಷಣ್‌ಗೆ ಏನಾಗಲಿದೆ?
ಸುಪ್ರೀಂ ಕೋರ್ಟ್ ಶುಕ್ರವಾರದ ವಿಚಾರಣೆ ವೇಳೆ ಭೂಷಣ್ ತಪ್ಪಿತಸ್ಥ ಎಂದು ಘೋಷಿಸಿದೆ. ಅವರಿಗೆ ಆರು ತಿಂಗಳ ಸಾದಾ ಸೆರೆವಾಸ ಶಿಕ್ಷೆ ಮತ್ತು/ಅಥವಾ 2000 ರೂ.ವರೆಗೆ ದಂಡ ವಿಧಿಸಬಹುದಾಗಿದೆ. ಮುಂದಿನ ವಾರ ಶಿಕ್ಷೆ ಘೋಷಣೆಯಾಗಲಿದೆ.

Average Rating