Read Time:4 Minute, 54 Second

ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ: ನಮ್ಮಿಂದ ಎಷ್ಟು ಸಾಧ್ಯ?

0 0

ನಮ್ಮ ದೇಶದ ರಕ್ಷಣೆಗಾಗಿ, ನಮ್ಮ ಸೈನಿಕರ ರಕ್ಷಣೆಗಾಗಿ ಇದುವರೆಗೆ ನಾವು ಆಮದು ಮಾಡಿಕೊಳ್ಳುತ್ತಿದ್ದ 101 ಶಸ್ತ್ರೋಪಕರಣಗಳನ್ನು ಇನ್ನು ಮುಂದೆ ಭಾರತದಲ್ಲೇ ತಯಾರಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಚ್ಚಿದೆ. ಇದು ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಮಹತ್ವಾಕಾಂಕ್ಷೆಯ ಯೋಜನೆ. ರಾಜನಾಥ್ ಸಿಂಗ್ ಅವರು ಆ.9ರ ಭಾನುವಾರ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಮುಂದಿನ ಡಿಸೆಂಬರ್ ತಿಂಗಳಿಂದಾರಂಭಿಸಿ, 2025ರ ಡಿಸೆಂಬರ್‌ವರೆಗಿನ ಅವಧಿಯಲ್ಲಿ 101 ಶಸ್ತ್ರೋಪಕರಣಗಳ ಆಮದು ನಿಲ್ಲಲಿವೆ.

ಇವುಗಳಲ್ಲಿ ಸೈನಿಕರಿಗಾಗಿರುವ ಗುಂಡುನಿರೋಧಕ ಜಾಕೆಟ್, ಸ್ನಿಪರ್ ರೈಫಲ್‌ಗಳು, ಕ್ಷಿಪಣಿಗಳು, ಹೋವಿಟ್ಜರ್ ಗನ್, ಹಗುರ ಯುದ್ಧ ವಿಮಾನ ಹಾಗೂ ಹೆಲಿಕಾಪ್ಟರ್, ಜಲಾಂತರ್ಗಾಮಿಗಳು ಮುಂತಾದವು ಸೇರಿವೆ. (ಪೂರ್ಣ ಪಟ್ಟಿ ಇಲ್ಲಿದೆ ಓದಿ.).

ಈ ಯೋಜನೆಯಿಂದಾಗಿ ದೇಶಕ್ಕೆ 4 ಲಕ್ಷ ಕೋಟಿ ರೂಪಾಯಿಗಳ ವಿದೇಶೀ ವಿನಿಮಯ ಉಳಿತಾಯವಾಗಲಿದ್ದು, ಅದೇ ಹಣವನ್ನು ದೇಶೀ ತಯಾರಿಕರಿಗಾಗಿ ಬಳಸಿದರೆ, ದೇಶೀಯ ಕಂಪನಿಗಳು ಉದ್ಧಾರವಾಗುತ್ತವೆ ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ.

ಪಟ್ಟಿಯಲ್ಲಿರುವ 101ರಲ್ಲಿ 60 ಶಸ್ತ್ರೋಪಕರಣಗಳ ಆಮದನ್ನು ಈ ಡಿಸೆಂಬರ್ ತಿಂಗಳಿಂದಲೇ ಹಂತಹಂತವಾಗಿ ಸ್ಥಗಿತಗೊಳಿಸಲಾಗುತ್ತದೆ. ಪಟ್ಟಿಯಲ್ಲಿರುವ ಹೋವಿಟ್ಜರ್ ಗನ್ ಹಾಗೂ ಜಲಾಂತರ್ಗಾಮಿ ಮುಂತಾದ ಕೆಲವು ಈಗಾಗಲೇ ಭಾರತದಲ್ಲಿ ತಯಾರಾಗುತ್ತಿವೆ ಎಂಬುದು ಗಮನಿಸಬೇಕಾದ ಅಂಶ. ಡೀಸೆಲ್ ಎಂಜಿನ್ ಚಾಲಿತ ಸಾಂಪ್ರದಾಯಿಕ ಸಬ್‌ಮೆರಿನ್‌ಗಳಲ್ಲದೆ, ಐಎನ್ಎಸ್ ಅರಿಹಂತ್ ಮುಂತಾದ ಅಣುಶಕ್ತಿ ಚಾಲಿತ ಜಲಾಂತರ್ಗಾಮಿಗಳನ್ನೂ ಭಾರತವು ರಷ್ಯಾದ ಸಹಭಾಗಿತ್ವದಲ್ಲಿ ನಿರ್ಮಿಸಿದೆ ಎಂಬುದು ಉಲ್ಲೇಖಾರ್ಹ.

ಭಾರತದ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರ ರಾಷ್ಟ್ರವಾಗಿರುವ ಭಾರತವು, ಪ್ರಮುಖ ರಫ್ತುದಾರ ರಾಷ್ಟ್ರವಾಗಿಯೂ ಬೆಳೆಯುತ್ತಿದೆ (23ನೇ ಸ್ಥಾನ). ಆದರೆ ಇಲ್ಲೊಂದು ಸಮಸ್ಯೆಯಿದೆ. ಭಾರತದ ತಯಾರಕರು ಹೇಳಿದ ಸಮಯಕ್ಕೆ ಉತ್ಪನ್ನಗಳನ್ನು ಒಪ್ಪಿಸುವುದಿಲ್ಲ. ವಿಳಂಬ ನೀತಿ ಅನುಸರಿಸುತ್ತಿದ್ದಾರೆ.

ಉದಾಹರಣೆಗೆ, ಫ್ರೆಂಚ್ ನೌಕಾ ಸಂಸ್ಥೆಯೊಂದಿಗಿನ ಸಹಯೋಗದಲ್ಲಿ ಈ ವರ್ಷದೊಳಗೆ 6 ಸ್ಕಾರ್ಪೀನ್ ದರ್ಜೆಯ ಜಲಾಂತರ್ಗಾಮಿಗಳನ್ನು ಭಾರತವು ನಿರ್ಮಿಸಿ ಕೊಡಬೇಕಿತ್ತು. ಆದರೆ ಮಜಗಾಂವ್ ಡಾಕ್‌ನಿಂದ ತಯಾರಾಗಿ ವಿತರಿಸಲಾಗಿದ್ದು ಐಎನ್ಎಸ್ ಕಲವರಿ ಹಾಗೂ ಐಎನ್ಎಸ್ ಖಂಡೇರಿ ಎಂಬ ಎರಡು ನೌಕೆಗಳನ್ನು ಮಾತ್ರ. ಉಳಿದ ನಾಲ್ಕು, ನಿಗದಿತ ಸಮಯಕ್ಕಿಂತ ತೀರಾ ಹಿಂದೆ ಇವೆ. ಅಲ್ಲದೆ, ಹಿಂದಿನ ಆರು ವರ್ಷಗಳಲ್ಲಿ, ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಯಾವುದೇ ಪ್ರಮುಖ ರಕ್ಷಣಾ ಯೋಜನೆಯು ಕಾರ್ಯಗತಗೊಂಡಿಲ್ಲ ಎಂಬುದೂ ಗಮನಿಸಬೇಕು.

ವಿಳಂಬ ಎಲ್ಲ ಒತ್ತಟ್ಟಿಗರಲಿ. ಗುಣಮಟ್ಟದ ಬಗ್ಗೆಯೂ ಸಾಕಷ್ಟು ಗದ್ದಲ ಎಬ್ಬಿದೆ. ಕಳೆದ ವರ್ಷವೇ ಶಸ್ತ್ರಾಸ್ತ್ರ ಉತ್ಪಾದನಾ ಮಂಡಳಿಯು ಕಳೆದ ವರ್ಷ ವಿತರಿಸಿದ ಶಸ್ತ್ರಾಸ್ತ್ರಗಳು ಸರಿ ಇಲ್ಲ ಎಂದು ಭಾರತೀಯ ಸೇನೆಯು ಕೆಂಪು ನಿಶಾನೆ ತೋರಿಸಿತು. ಈ ಕಳಪೆ ಗುಣಮಟ್ಟದಿಂದಾಗಿ ಟ್ಯಾಂಕುಗಳು ಮತ್ತು ಫೀಲ್ಡ್ ಗನ್‌ಗಳಿಗೆ ಹಾನಿಯಾಗುತ್ತಿತ್ತಷ್ಟೇ ಅಲ್ಲ, ಪ್ರಾಣಹಾನಿಯೂ ಆಗುತ್ತಿದ್ದವು. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ತಯಾರಿಸುವ ಉತ್ಪನ್ನಗಳ ದರ್ಜೆಯೂ ಉತ್ತಮವಾಗಿಲ್ಲ ಎಂದು ಭಾರತೀಯ ವಾಯುಪಡೆ ಈಗಾಗಲೇ ಗುಲ್ಲೆಬ್ಬಿಸಿದೆ. ವಾಯುಪಡೆಯು ಹೆಚ್ಎಎಲ್‌ಗೆ ರಿಯಾಯಿತಿ ತೋರಿಸುತ್ತಿದೆ ಎಂದು ಭಾರತೀಯ ವಾಯುಪಡೆ ಮಾಜಿ ಮುಖ್ಯಸ್ಥ ಬಿ.ಎಸ್.ಧನೋವಾ ಅವರು ಆಗಲೇ ಅಸಮಾಧಾನ ವ್ಯಕ್ತಪಡಿಸಿದ್ದರು.

ರಫೇಲ್ ಮುಂತಾದ ಸಮರ ವಿಮಾನಗಳ ಉತ್ಪಾದನೆಗೆ ಹೆಚ್ಎಎಲ್‌ನಂತಹಾ ಸಂಸ್ಥೆಗಳಿಗೆ ಗುತ್ತಿಗೆ ಕೊಟ್ಟಿಲ್ಲದಿರುವುದಕ್ಕೂ ಈ ಗುಣಮಟ್ಟ ಮತ್ತು ವಿಳಂಬ – ಎರಡು ಸಮಸ್ಯೆಗಳೇ ಕಾರಣವಾಗಿದ್ದರೂ, ಈ ಬಗ್ಗೆ ರಾಜಕೀಯ ನಡೆದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಉತ್ಪಾದಕರು ಮೈಚಳಿ ಬಿಟ್ಟು, ಶ್ರಮಿಕರಾದರಷ್ಟೇ ಆತ್ಮನಿರ್ಭರ ಭಾರತದ ಪರಿಕಲ್ಪನೆ ಸಾಕಾರಗೊಂಡೀತು. ವಿಳಂಬ ಮಾಡಿದರೆ, ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡರೆ ಭವಿಷ್ಯ ಕಷ್ಟ ಕಷ್ಟ ಕಷ್ಟ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

One thought on “ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ: ನಮ್ಮಿಂದ ಎಷ್ಟು ಸಾಧ್ಯ?

  1. Bogaluva naayigaliruvaaga Modi enu maadidroo urkoltaave. Avugalanna Matta haakade deshada abhivriddhi saadhyave illa.

Leave a Reply

Your email address will not be published. Required fields are marked *

Previous post 1 ಲಕ್ಷ ಕೋಟಿ ಕೃಷಿಗೆ, ಒಂದೇ ಕ್ಲಿಕ್‌ನಲ್ಲಿ ಕೃಷಿಕರ ಖಾತೆಗೆ 17,000 ಕೋಟಿ ರೂ.: ಮೋದಿ ಸರ್ಕಾರ ಕೊಡುಗೆ
Next post ಪ್ರವಾದಿ ಅವಹೇಳನ: ಕಾಂಗ್ರೆಸ್ ಶಾಸಕರ ಸಂಬಂಧಿಕ ಸೆರೆ, ದೊಂಬಿಯಲ್ಲಿ ಅಪಾರ ಹಾನಿ; 110 ಮಂದಿ ಬಂಧನ

ಸುದ್ದಿ ಸಂಚಯ

ಇವುಗಳನ್ನೂ ನೋಡಿ