ನವದೆಹಲಿ: ದೇಶದಲ್ಲಿ ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ ಸಾಮಾಜಿಕ ಜಾಲತಾಣಗಳನ್ನು ಬಿಜೆಪಿ ಹಾಗೂ ಆರೆಸ್ಸೆಸ್ ನಿಯಂತ್ರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿ, ಮತ್ತೊಮ್ಮೆ ತಮ್ಮ ನಾಯಕತ್ವದ ಗುಣವನ್ನು ಸಾಬೀತುಪಡಿಸಿದ್ದಾರೆ.
ಈ ರೀತಿಯ ಬಾಲಿಶ ಆರೋಪ ಮಾಡಿರುವ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿರುವ ಬಿಜೆಪಿ, “ತಮ್ಮ ಪಕ್ಷದೊಳಗಿನ ಜನರ ಮೇಲೆಯೇ ಪ್ರಭಾವ ಬೀರಲು ಅಸಮರ್ಥರಾಗಿರುವ ಲೂಸರ್ಗಳು (ಪರಾಜಿತರು) ಈಗ ಇಡೀ ಜಗತ್ತನ್ನೇ ಬಿಜೆಪಿ, ಆರೆಸ್ಸೆಸ್ ನಿಯಂತ್ರಿಸುತ್ತಿದೆ ಎಂದು ಹೇಳತೊಡಗಿದ್ದಾರೆ” ಎಂದು ಲೇವಡಿ ಮಾಡಿದೆ.
ಈ ಹಿಂದೆ ಚುನಾವಣೆಗೆ ಮೊದಲು ದತ್ತಾಂಶವನ್ನು ಸಂಗ್ರಹಿಸಲು ಕೇಂಬ್ರಿಜ್ ಅನಲಿಟಿಕ ಹಾಗೂ ಫೇಸ್ಬುಕ್ ಜೊತೆಗೆ ಮಾಡಿಕೊಂಡ ಅಪವಿತ್ರ ಮೈತ್ರಿಯ ಬಗ್ಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನೀವು ಈಗ ನಮ್ಮನ್ನು ಪ್ರಶ್ನಿಸುತ್ತಾ ಗದ್ದಲ ಮಾಡುತ್ತಿದ್ದೀರಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಟ್ವೀಟ್ನಲ್ಲಿ ಕಿಡಿ ಕಾರಿದ್ದಾರೆ.
ಇದಲ್ಲದೆ, ಈಗ ಮಾಹಿತಿ ತಿಳಿಯುವ ಅವಕಾಶ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವು ಹೆಚ್ಚು ಪ್ರಜಾಸತ್ತಾತ್ಮಕವಾಗಿದೆ. ಅದನ್ನೀಗ ನಿಮ್ಮ ಕುಟುಂಬಿಕರು ನಿಯಂತ್ರಿಸುತ್ತಿಲ್ಲ ಮತ್ತು ಇದಕ್ಕಾಗಿ ನೋವಾಗುತ್ತಿದೆಯೇ ಎಂದವರು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ, ಬೆಂಗಳೂರು ಗಲಭೆ ಬಗ್ಗೆ ಇನ್ನೂ ಖಂಡಿಸಿಲ್ಲವಲ್ಲ! ನಿಮ್ಮ ಧೈರ್ಯ ಎಲ್ಲಿ ಉಡುಗಿ ಹೋಗಿದೆ ಎಂದು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. ಫೇಸ್ಬುಕ್ ಪೋಸ್ಟ್ ಒಂದರಿಂದ ರೊಚ್ಚಿಗೆದ್ದ ಮುಸ್ಲಿಮರು ಬೆಂಗಳೂರಲ್ಲಿ ಕಾಂಗ್ರೆಸ್ ಪಕ್ಷದ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ್ದಲ್ಲದೆ, ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಗಳಲ್ಲಿ ಬೆಂಕಿ ಹಚ್ಚಿ, ಸಾಕಷ್ಟು ಆಸ್ತಿಪಾಸ್ತಿ ಹಾನಿ ಮಾಡಿದ್ದರು. ಪೊಲೀಸ್ ಠಾಣೆಯ ಮೇಲೂ ದಾಳಿ ನಡೆದಿತ್ತು, 300ಕ್ಕೂ ಹೆಚ್ಚು ಮಂದಿ ಈಗ ಜೈಲಿನಲ್ಲಿದ್ದಾರೆ.
ಇದಕ್ಕೆ ಮೊದಲು, ಭಾರತದಲ್ಲಿ ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ ಅನ್ನು ಬಿಜೆಪಿ-ಆರೆಸ್ಸೆಸ್ ನಿಯಂತ್ರಿಸುತ್ತಿದೆ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮೂಲಕ ಆರೋಪಿಸಿದ್ದರು. ಇದಕ್ಕೆ ಅವರು ಅಮೆರಿಕದ ಮಾಧ್ಯಮವೊಂದು ನೀಡಿದ ವರದಿಯನ್ನು ಉಲ್ಲೇಖಿಸಿ, ಬಿಜೆಪಿ-ಆರೆಸ್ಸೆಸ್ಗಳು ಫೇಕ್ ಸುದ್ದಿ ಹರಡುತ್ತಾ ಮತದಾರರ ಮೇಲೆ ಪ್ರಭಾವ ಬೀರುತ್ತಿದೆ ಎಂದು ಆರೋಪಿಸಿದ್ದರು. ವಾಲ್ ಸ್ಟ್ರೀಟ್ ಜರ್ನಲ್ ಎಂಬ ಭಾರತ ವಿರೋಧಿ ಸುದ್ದಿಗಳಿಗೇ ಪ್ರಾಮುಖ್ಯತೆ ನೀಡುವ ಪತ್ರಿಕಾ ವರದಿಯನ್ನು ಅವರು ಉಲ್ಲೇಖಿಸಿದ್ದರು.
ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ಗಳಲ್ಲಿ ಎಲ್ಲರೂ ತಮ್ಮ ಅಭಿಪ್ರಾಯ ಸ್ವಾತಂತ್ರ್ಯವನ್ನು ಆನಂದಿಸುತ್ತಾ, ಯಾವುದೇ ಮಾಹಿತಿಯನ್ನೂ ಹಂಚಿಕೊಳ್ಳಬಲ್ಲರು ಮತ್ತು ಕಾಂಗ್ರೆಸ್ ಮುಖಂಡರು, ಅವರ ಬೆಂಬಲಿಗರು ಸಿಎಎ ವಿರುದ್ಧದ ಹೋರಾಟ, ರಾಫೇಲ್ ಸಮರವಿಮಾನ ಖರೀದಿಯಷ್ಟೇ ಅಲ್ಲದೆ, ಇತ್ತೀಚೆಗೆ ಹಿಂದೂ ದೇವರು, ಮುಸಲ್ಮಾನ ದೇವರ ವಿರುದ್ಧವೂ ಸಾಕಷ್ಟು ಪೋಸ್ಟ್ಗಳನ್ನು ಮಾಡಿದ್ದಾರೆ. ತಪ್ಪಿದ್ದರೆ ಹೋರಾಡಲು ಕಾನೂನು ಇದೆ ಎಂಬುದನ್ನು ಒಂದೊಮ್ಮೆ ಪ್ರಧಾನಿ ಹುದ್ದೆಗೇರುವ ಪ್ರಯತ್ನದಲ್ಲಿರುವ ರಾಹುಲ್ ಗಾಂಧಿ ಮರೆತಿರುವ ಬಗ್ಗೆ ನೆಟ್ಟಿಗರು ಲೇವಡಿ ಮಾಡಲಾರಂಭಿಸಿದ್ದಾರೆ.
ಅಲ್ಲದೆ, ಫೇಸ್ಬುಕ್ ಇಂಡಿಯಾದ ಮುಖ್ಯಸ್ಥರನ್ನೇ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ವಿಭಾಗಕ್ಕೆ ನೇಮಿಸಿಕೊಂಡಿರುವುದನ್ನೂ ಹಲವು ನೆಟ್ಟಿಗರು ನೆನಪಿಸಿದ್ದಾರೆ.

Average Rating