ನಮ್ಮ ಜೀವನ ಶೈಲಿಯಲ್ಲಿ ನಾವು ಮಾಡಿಕೊಳ್ಳಲೇಬೇಕಾದ ಬದಲಾವಣೆಗಳಿಗೆ ತಕ್ಕಂತೆ ಸಕ್ಕರೆ ಕಾಯಿಲೆಯೂ ನಮ್ಮನ್ನು ಕಾಡುತ್ತದೆ. ಈಗಂತೂ ಒತ್ತಡದ ದಿನಗಳೇ, ಹೇಳಬೇಕಿಲ್ಲ. ಮನಸ್ಸಿಗೆ ನೋವಾಗುವುದು, ತತ್ಪರಿಣಾಮವಾಗಿ ಖಿನ್ನರಾಗುವುದು ಕೂಡ ಬೇಗ. ಇಂಥ ಸಮಯದಲ್ಲಿ ಅಮೆರಿಕದ ಮೆಡಿಕಲ್ ಅಸೋಸಿಯೇಶನ್‌ನ ನಿಯತಕಾಲಿಕದಲ್ಲಿ ಅಧ್ಯಯನ ವರದಿಯೊಂದು ಡಯಾಬಿಟಿಸ್ ಮತ್ತು ಖಿನ್ನತೆ ಚಿಕಿತ್ಸೆ ಬಗ್ಗೆ ಹೊಸ ಬೆಳಕು ಚೆಲ್ಲಿದೆ.
ದೈಹಿಕ ಮತ್ತು ಮಾನಸಿಕ ಲಕ್ಷಣಗಳನ್ನು ಆಧರಿಸಿ, ಸಂಯೋಜಿತ ಚಿಕಿತ್ಸೆಯ ಮೂಲಕ ಖಿನ್ನತೆಯೂ, ಸಕ್ಕರೆ ಕಾಯಿಲೆಯೂ ನಿಯಂತ್ರಣಕ್ಕೆ ಬರುವಲ್ಲಿ ಹೆಚ್ಚಿನ ವೇಗ ದೊರೆತಿದೆ ಎಂಬುದು ಈ ಅಧ್ಯಯನ ವರದಿಯ ಸಾರಾಂಶ.
ಈಗಿನ ಕೋವಿಡ್-19 ಸಂಕಷ್ಟದ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆಯಿದೆ ಈ ಅಧ್ಯಯನಕ್ಕೆ. ಕೊರೊನಾ ವೈರಸ್ ಹಾವಳಿಯಿಂದಾಗಿ ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ, ಬಂಧು ಬಾಂಧವರೊಂದಿಗೆ ಸೇರಲಾಗುವುದಿಲ್ಲ, ಮನೆಯಿಂದಲೇ ಕುಳಿತು ಕೆಲಸ ಮಾಡಬೇಕಾಗುತ್ತದೆ, ಉದ್ಯೋಗದಲ್ಲಿಯೂ ಹೆಚ್ಚಿನ ಒತ್ತಡ ಇರುತ್ತದೆ – ಇವೆಲ್ಲವುಗಳೂ ಖಿನ್ನತೆಗೆ ಪೂರಕ ವಾತಾವರಣ ನಿರ್ಮಿಸಿವೆ.
ಈ ಕಾರಣದಿಂದಾಗಿ, ದೈನಂದಿನ ಜೀವನದಲ್ಲಿ ಕ್ರಮಬದ್ಧ ನಿರ್ವಹಣೆಯ ಅಗತ್ಯವಿರುವ ಸಕ್ಕರೆ ಕಾಯಿಲೆಯೂ ಕೈಗೆ ಸಿಗದಂತೆ ಏರುಪೇರಾಗುತ್ತಿದೆ. ಇದನ್ನು ಗಮನಿಸಿದರೆ, ಸಂಯೋಜಿತ ಚಿಕಿತ್ಸೆಯು ಸಕ್ಕರೆ ಕಾಯಿಲೆಯನ್ನೂ, ಖಿನ್ನತೆಯನ್ನೂ ದೂರ ಮಾಡಬಲ್ಲುದು ಎಂಬುದು ತಜ್ಞರ ವಿಶ್ವಾಸ.
ಮುಖ್ಯವಾದ ಕಾರಣವೆಂದರೆ, ಡಯಾಬಿಟಿಸ್ ಇರುವವರಿಗೆ ಖಿನ್ನತೆ ಕಾಡುವ ಸಾಧ್ಯತೆ ಸಾಮಾನ್ಯ ಜನರಿಗಿಂತ ದುಪ್ಪಟ್ಟಾಗಿರುತ್ತದೆ. ಈ ಖಿನ್ನತೆಯಿಂದ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದರಲ್ಲಿಯೂ ಏರುಪೇರಾಗುತ್ತದೆ. ಇದರ ಪರಿಣಾಮವಾಗಿ ಕಾಯಿಲೆ ಸಂಕೀರ್ಣಗೊಳ್ಳುತ್ತಾ ಹೋಗುತ್ತದೆ ಮತ್ತು ಪ್ರಾಣಾಪಾಯಕ್ಕೂ ಎಡೆಮಾಡುತ್ತದೆ ಎನ್ನುತ್ತದೆ ವರದಿ.

Average Rating