ಸ್ವಾತಂತ್ರ್ಯ ದೊರೆತು ಎಪ್ಪತ್ತೈದು ವರ್ಷಗಳೇ ಆಗುತ್ತಾ ಬಂದರೂ ನಮ್ಮನ್ನಾಳುವ ಸರ್ಕಾರಗಳು ಇದುವರೆಗೆ ಯುವಜನರ ಈ ಆಕಾಂಕ್ಷೆಯನ್ನು ತಣಿಸುವ ಸಮರ್ಥವಾದ ಯೋಜನೆಯೊಂದನ್ನು ರೂಪಿಸಿಲ್ಲ ಎಂಬುದಕ್ಕೆ, ಇಷ್ಟು ವರ್ಷಗಳ ಬಳಿಕವೂ ಯುವಜನರಿಗೆ ಉದ್ಯೋಗ ಇಲ್ಲ ಎಂಬ ಟೀಕೆಗಳೇ ಸಾಕ್ಷಿ. ಸ್ವತಃ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೇ ಈಗ ಆರು ವರ್ಷದ ಹಿಂದಷ್ಟೇ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಪ್ರಧಾನ ನರೇಂದ್ರ ಮೋದಿಗೆ ಪದೇ ಪದೇ ಈ ಬಗ್ಗೆ ಪ್ರಶ್ನೆಗಳಿಂದ ಚುಚ್ಚುತ್ತಲೇ ಇದ್ದಾರೆ.
ಆದರೆ, ಈ ರೀತಿಯಾಗಿ ವೈವಿಧ್ಯಮಯ ಪ್ರಶ್ನೆಗಳನ್ನು ಎತ್ತುತ್ತಾ ಮೋದಿ ಏನು ಮಾಡಿದ್ದಾರೆ ಎಂದು ಕೇಳುತ್ತಲೇ ಇರುವ ಇಂಥ ಪ್ರತಿಪಕ್ಷಗಳಿಗೆ ಮೋದಿ ಸರ್ಕಾರ ಸದ್ದಿಲ್ಲದೇ ಒಂದೊಂದಾಗಿಯೇ ಏಟು ನೀಡುತ್ತಲೇ ಇದೆ. ಇತ್ತೀಚೆಗಷ್ಟೇ ಶಿಕ್ಷಣ ನೀತಿಯ ಸಮಗ್ರ ಬದಲಾವಣೆಗೊಂದು ವೇದಿಕೆ ರೂಪಿಸಿದ್ದ ಮೋದಿ ಸರ್ಕಾರ, ಇದೀಗ ಯುವಜನರ ಆಶೋತ್ತರಗಳಿಗೆ ಹೊಸ ನಿರೀಕ್ಷೆ ಹುಟ್ಟಿಸಬಹುದಾದ ಉದ್ಯೋಗ ನೀತಿಯೊಂದನ್ನು ಜಾರಿಗೊಳಿಸಲು ಮುಂದಾಗಿದೆ. ಬುಧವಾರ ಕೇಂದ್ರ ಸಂಪುಟವು ಈ ಕುರಿತ ರಾಷ್ಟ್ರೀಯ ನೇಮಕಾತಿ ಏಜೆನ್ಸಿ ರೂಪಿಸುವ ನಿರ್ಧಾರಕ್ಕೆ ಅನುಮೋದನೆ ನೀಡಿದೆ. ಇದು ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ನಿರೀಕ್ಷೆಯನ್ನೂ, ಏನಿದು ಎಂದು ತಿಳಿದುಕೊಳ್ಳುವ ಕುತೂಹಲವನ್ನೂ ಸೃಷ್ಟಿಸಿದೆ.
ಏನಿದು:
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಕೇಂದ್ರ ಸಂಪುಟವು, ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನು (ಎನ್ಆರ್‌ಎ) ರೂಪಿಸುವ ಯೋಜನೆಗೆ ಬುಧವಾರ ಸೈ ಎಂದಿತು. ಈ ಏಜೆನ್ಸಿಯೇ ಗ್ರೂಪ್ ಬಿ ಮತ್ತು ಗ್ರೂಪ್ ಸಿ (ತಾಂತ್ರಿಕೇತರ) ಸೇರಿದಂತೆ ಎಲ್ಲ ಗೆಜೆಟೇತರ ಹುದ್ದೆಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (Common Eligibility Test – CET) ನಡೆಸಲಿದೆ.
ಇದು ಕೋಟ್ಯಂತರ ಯುವಕರಿಗೆ ವರದಾನವಾಗಲಿದೆ. ಸಾಮಾನ್ಯ ಅರ್ಹತಾ ಪರೀಕ್ಷೆಯ ಮೂಲಕವಾಗಿ, ಹಲವಾರು ಪರೀಕ್ಷೆಗಳನ್ನು ಎದುರಿಸಲು ತ್ರಾಸಪಡುವ ಯುವಜನರ ಸಮಯ ಹಾಗೂ ಸಂಪನ್ಮೂಲವನ್ನೂ ಉಳಿಸಲಿದೆ. ಇದು ಪಾರದರ್ಶಕತೆಗೂ ಉತ್ತೇಜನ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು.
ಈ ನೇಮಕಾತಿ ಏಜೆನ್ಸಿಯಲ್ಲಿ ರೈಲ್ವೇ, ವಿತ್ತ ಸಚಿವಾಲಯಗಳ ಪ್ರತಿನಿಧಿಗಳು, ಸಿಬ್ಬಂದಿ ನೇಮಕಾತಿ ಆಯೋಗ (ಸ್ಟಾಫ್ ಸೆಲೆಕ್ಷನ್ ಕಮಿಶನ್ – SSC), ರೈಲ್ವೇ ನೇಮಕಾತಿ ಮಂಡಳಿ (RRB) ಮತ್ತು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಪ್ರತಿನಿಧಿಗಳೂ ಇರುತ್ತಾರೆ.
ಹಲವಾರು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮತ್ತು ಪ್ರತೀ ಹುದ್ದೆಗೂ ಪ್ರತ್ಯೇಕ ಪರೀಕ್ಷೆಗಳಿಗೆ ಹಾಜರಾಗುವ ಸುಮಾರು 2.5 ಕೋಟಿಗೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಗೆ NRA ವರದಾನವಾಗಲಿದೆ.
ಪ್ರತ್ಯೇಕ ಪರೀಕ್ಷೆಗಳಿಗೆ, ಪ್ರತ್ಯೇಕ ಶುಲ್ಕ, ಪ್ರತ್ಯೇಕ ಪ್ರಯಾಣ – ಈ ತೊಡಕುಗಳು ನಿವಾರಣೆಯಾಗಲಿವೆ. ಇವೆಲ್ಲವೂ ಸಂಪಾದನೆಯಿಲ್ಲದಿರುವ ಅಭ್ಯರ್ಥಿಗಳಿಗೆ ದೊಡ್ಡ ಹೊರೆಯೇ ಸರಿ. ನೇಮಕಾತಿ ಏಜೆನ್ಸಿಗಳಿಗೂ ಅದೊಂದು ಹೆಚ್ಚುವರಿ ಖರ್ಚಿನ ಶ್ರಮ. ಇದಕ್ಕಾಗಿ ಭದ್ರತೆ ಏರ್ಪಡಿಸುವುದು, ಸಿಬ್ಬಂದಿ ನಿಯೋಜಿಸುವುದು – ಅವರ ಸಮಯ – ಹೀಗೆ ಎಲ್ಲವೂ ಈ ಏಕೈಕ ಪರೀಕ್ಷೆಯ ಮೂಲಕ ಉಳಿತಾಯವಾಗಲಿದೆ.
ತಿಳಿಯಲೇಬೇಕಾದ 10 ಪ್ರಮುಖ ಅಂಶಗಳು:
- ಹಲವಾರು ನೇಮಕಾತಿ ಪರೀಕ್ಷೆಗಳಿಗೆ ಪ್ರತ್ಯೇಕವಾಗಿ ಅರ್ಜಿ ಹಾಕಬೇಕಿಲ್ಲ. ಒಂದು ಅಥವಾ ಹಲವು ಹುದ್ದೆಗಳಿಗೆ ಒಂದೇ ಬಾರಿಗೆ ಅರ್ಜಿ ಸಲ್ಲಿಸಿ, ಸಾಮಾನ್ಯ ಅರ್ಹತಾ ಪರೀಕ್ಷೆಗೆ ಹಾಜರಾಗಬಹುದು. CET ಎಂಬುದು ಪ್ರಾಥಮಿಕ ಪರೀಕ್ಷಾ ಹಂತವಾಗಿರುತ್ತದೆ. ಅದರ ಅಂಕಗಳಿಗೆ 3 ವರ್ಷಗಳ ವಾಯಿದೆ ಇರುತ್ತದೆ. ಸಿಇಟಿ ಬಳಿಕ ಏಜೆನ್ಸಿಯೇ ಸಂಬಂಧಪಟ್ಟ ಇಲಾಖೆಗಳಿಗೆ ಅಭ್ಯರ್ಥಿಯ ಅಂಕಪಟ್ಟಿ ಕಳುಹಿಸುತ್ತದೆ. ಆಯಾ ಇಲಾಖೆಗಳು ಮುಂದಿನ ನೇಮಕಾತಿ ಪ್ರಕ್ರಿಯೆಗೆ ಮುಂದಾಗುತ್ತವೆ. ಹೀಗಾಗಿ, ಸಿಇಟಿ ಹಾಜರಾದವರು ಮುಂದಿನ ಪ್ರಧಾನ ಅಥವಾ ಎರಡನೇ ಹಂತದ ನೇಮಕಾತಿ ಪ್ರಕ್ರಿಯೆಗೆ ಹಾಜರಾಗಬೇಕಾಗುತ್ತದೆ.
- ಸಿಇಟಿ ಪಾಸಾದವರಿಗೆ ಆಯಾ ಇಲಾಖೆಗಳು ಅಗತ್ಯವಿದ್ದರೆ ನೇರವಾಗಿ ಮುಂದಿನ ಹಂತದ ದೈಹಿಕ ಅಥವಾ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ಹೇಳಬಹುದು. ಇದು ನೇಮಕಾತಿಯ ಈ ಹಂತದ ವೇಗವನ್ನು ಹೆಚ್ಚಿಸಲು ನೆರವಾಗುತ್ತದೆ.
- ಪದವೀಧರರು, 12ನೇ ತರಗತಿ ಪಾಸಾದವರು ಹಾಗೂ ಮೆಟ್ರಿಕ್ (10ನೇ ತರಗತಿ) ಪಾಸಾದವರಿಗೆ ಪ್ರತ್ಯೇಕ ಹಂತದ ಸಿಇಟಿ ಇರುತ್ತದೆ.
- ಸಿಇಟಿ ಪಾಸಾದವರು ಮೂರು ವರ್ಷ ಕಾಲ ಪ್ರತೀ ವರ್ಷಕ್ಕೊಮ್ಮೆ ಎರಡನೇ (ಅಥವಾ ಪ್ರಧಾನ) ಹಂತಕ್ಕೆ ಪ್ರಯತ್ನ ಮಾಡಲು ಅರ್ಹತೆ ಪಡೆಯುತ್ತಾರೆ. ಇದುವರೆಗೆ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಪುನಃ ಶುರುವಿನಿಂದ ಪ್ರಾಥಮಿಕ ಪರೀಕ್ಷೆಗೆ ಹಾಜರಾಗಬೇಕಾಗುತ್ತಿತ್ತು.
- ವಯೋಮಿತಿಗೆ ಒಳಪಟ್ಟು, ಅಭ್ಯರ್ಥಿಯೊಬ್ಬ ಸಿಇಟಿ ಪ್ರಯತ್ನಿಸುವುದಕ್ಕೆ ಯಾವುದೇ ಸಂಖ್ಯಾ ಮಿತಿಗಳಿಲ್ಲ. ಇಲ್ಲೂ SC/ST/OBC ಮತ್ತಿತರ ವರ್ಗದವರಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
- ಲಭ್ಯತೆಯ ಆಧಾರದಲ್ಲಿ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ, ಅವಕಾಶವಿದ್ದಾಗ ಪರೀಕ್ಷೆಯ ಸಮಯವನ್ನೂ ಅಭ್ಯರ್ಥಿಗಳೇ ನಿರ್ಣಯಿಸಬಹುದು.
- ರಾಷ್ಟ್ರೀಯ ನೇಮಕಾತಿ ಏಜೆನ್ಸಿಗಾಗಿ ಸರ್ಕಾರವು ಮೂರು ವರ್ಷಗಳಿಗೆ 1517.57 ಕೋಟಿ ರೂ. ಅನುಮೋದನೆ ನೀಡಿದೆ. ಉದ್ಯೋಗಾಕಾಂಕ್ಷಿಗಳು ಹೆಚ್ಚಿರುವ ಆದ್ಯತೆಯ ಜಿಲ್ಲೆಗಳೆಂದು ಗುರುತಿಸಲಾದ 117 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲು ಬೇಕಾದ ಮೂಲಸೌಕರ್ಯಕ್ಕಾಗಿ ಈ ಹಣವನ್ನು ಬಳಸಲಾಗುತ್ತದೆ. ಇದು ಉದ್ಯೋಗಾಕಾಂಕ್ಷಿಗಳು ಇರುವ ಅಥವಾ ಹತ್ತಿರದ ಗ್ರಾಮೀಣ ಪ್ರದೇಶದಲ್ಲೇ ಪರೀಕ್ಷೆ ಎದುರಿಸುವ ಸೌಕರ್ಯವನ್ನು ಒದಗಿಸಲಿದೆ.
- ಪರೀಕ್ಷಾ ಕೇಂದ್ರಗಳಿಗೆ ತೆರಳಲು ಪ್ರಯಾಣ, ಊಟ, ವಸತಿ ಇತ್ಯಾದಿಗಳಿಗೆ ಅಭ್ಯರ್ಥಿಗಳು ಜಾಸ್ತಿ ಹಣ ಖರ್ಚು ಮಾಡಬೇಕಾಗಿರುವುದಿಲ್ಲ. ಒಂದೇ ಪರೀಕ್ಷೆಯು ಅವರ ಆರ್ಥಿಕ ಹೊರೆಯನ್ನೂ ಕಡಿಮೆ ಮಾಡಲಿದೆ.
- ಪ್ರತಿಯೊಂದು ಜಿಲ್ಲೆಯಲ್ಲೂ ಇರುವ ಪರೀಕ್ಷಾ ಕೇಂದ್ರಗಳು ವಿಶೇಷವಾಗಿ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ಪರೀಕ್ಷೆಗೆ ಯಾರಾದರೂ ಪೋಷಕರೊಂದಿಗೆ ದೂರ ಪ್ರಯಾಣ ಮಾಡಬೇಕಾಗುತ್ತಿತ್ತು. ಈಗ ಈ ತ್ರಾಸ ಇಲ್ಲ.
- ಸಿಇಟಿಯನ್ನು ವಿಭಿನ್ನ ಭಾಷೆಗಳಲ್ಲಿಯೂ ನಡೆಸಲಾಗುತ್ತದೆ. ಇದು ದೇಶದ ವಿಭಿನ್ನ ಪ್ರದೇಶದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ. ಪ್ರಸ್ತುತ ಹೆಚ್ಚಿನ ಪರೀಕ್ಷೆಗಳು ಹಿಂದಿ ಅಥವಾ ಇಂಗ್ಲಿಷಿನಲ್ಲಿ ನಡೆಯುತ್ತಿವೆ.

Average Rating