Read Time:4 Minute, 33 Second

Ganesh Chaturthi: ಸರಳ ಪೂಜೆಗೆ ಒಲಿಯುವಾತ ಕೊರೊನಾ ಕಾಲದಲ್ಲಿ ಕಲಿಸಿದ ಪಾಠ

0 0

ಕೊರೊನಾ ಕಾಲದಲ್ಲಿ ಇಡೀ ಜಗತ್ತೇ ವರ್ಚುವಲ್ ಜಗತ್ತಿಗೆ ಒಗ್ಗಿಕೊಂಡಿದ್ದರೆ, ಬೀದಿ ಬೀದಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗುತ್ತಿದ್ದ ಗಣೇಶನ ಹಬ್ಬವು ಕೂಡ ಈಗ ಮನೆಯೊಳಗೆ, ಮನದೊಳಗಿನ ಭಾವಕ್ಕೆ ಸೀಮಿತವಾಗಿದೆ. ಮತ್ತೆ ಕೆಲವರು ವರ್ಚುವಲ್ ಜಗತ್ತಿನಲ್ಲೇ ಗಣೇಶನನ್ನು ಕಂಡು ಬಲವಂತವಾಗಿ ಸಂತೃಪ್ತ ಭಾವದಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ.

ಝೂಮ್, ಫೇಸ್‌ಬುಕ್, ಗೂಗಲ್, ವಾಟ್ಸ್ಆ್ಯಪ್ ಮುಂತಾದ ಎಲ್ಲ ಸಾಮಾಜಿಕ ವೇದಿಕೆಗಳಲ್ಲಿ ಗಣೇಶನದ್ದೇ ಕೊಂಡಾಟ. ಹತ್ತಾರು ದಿನಗಳ ಕಾಲ ನಡೆಯುತ್ತಿದ್ದ ಗಣೇಶೋತ್ಸವವು ಈ ಬಾರಿಯ ಕೋವಿಡ್ ಕಾಟದಿಂದಾಗಿ ಒಂದೆರಡು ದಿನಕ್ಕಷ್ಟೇ ಸೀಮಿತವಾಗುತ್ತಿದೆ. ನಾಡ ಹಬ್ಬವನ್ನಾಗಿ ಆಚರಿಸುತ್ತಿದ್ದ ಮಹಾರಾಷ್ಟ್ರದಲ್ಲಿ ಗಣೇಶ ವೈಭವವು ಈ ಬಾರಿ ಕಳೆಗುಂದಿದೆ.

ಪ್ರತಿ ವರ್ಷದ ಆಗಸ್ಟ್ ತಿಂಗಳಿಡೀ ಜನರಿಗೆ ಗಣೇಶನನ್ನು ಮನೆಗೆ ತಂದು ಪೂಜಿಸುವ ಸಡಗರ. ಹಣವಿದ್ದವರು, ಅದ್ಧೂರಿಯಿಂದ ಮಾಡಬೇಕು, ನಾಲ್ಕು ಜನಕ್ಕೆ ಗೊತ್ತಾಗಬೇಕು ಎಂದೆಲ್ಲಾ ವೈಭವೋಪೇತವಾಗಿ ಚಿಂತನೆ ಮಾಡುವವರು, ಕೇರಿ ಕೇರಿಗಳಲ್ಲಿ, ಬೀದಿ ಬೀದಿಗಳಲ್ಲಿ ಗದ್ದಲದ ಮೈಕಾಸುರ, ಪಟಾಕಿ ಮುಂತಾಗಿ ಆಚರಿಸುತ್ತಿದ್ದರೆ, ಭಕ್ತಿ ಭಾವದಿಂದ ಗಣೇಶೋತ್ಸವವನ್ನು ಆಚರಿಸುವವರು ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೊರೆ ಹೋಗುತ್ತಾರೆ. ಮತ್ತೊಂದು ವರ್ಗ, ಗಣೇಶನಿಗೆ ಹತ್ತಿರ. ಗಣೇಶ ನಮ್ಮ ಮನೆಯಲ್ಲೇ ಇದ್ದಾನೆ, ಊರಿಗೆಲ್ಲಾ ನಮ್ಮ ಆಡಂಬರದ ಭಕ್ತಿಯನ್ನೇಕೆ ತೋರ್ಪಡಿಸಬೇಕು ಎಂದುಕೊಳ್ಳುತ್ತಾ ಮನೆಯಲ್ಲೇ ಸಂಭ್ರಮಿಸುತ್ತಾರೆ.

ಗರಿಕೆ ಹುಲ್ಲಿನ ಸರಳ ಪೂಜೆಗೆ ಒಲಿಯುವ ಗಣಪನನ್ನು ಪೂಜಿಸುವುದಕ್ಕೂ ಒಂದು ವಿಧಿಯಿದೆ, ವಿಧಾನವಿದೆ ಎಂದು ಗೊತ್ತಿದ್ದರೂ ಆಡಂಬರಕ್ಕೆ ಮನಬಂದಂತೆ ಗಣೇಶ ವಿಗ್ರಹ ಕೂರಿಸಿ, ಸಾರ್ವಜನಿಕ ಗಣೇಶೋತ್ಸವ ಹೆಸರಿನಲ್ಲಿ ಹಣ ಸುಲಿಯುವ ದಂಧೆಯೂ ನಡೆಯುತ್ತಿದ್ದುದು ಸುಳ್ಳಲ್ಲ. ಗಣೇಶನ್ ಕೂರಿಸ್ತೀವಿ, ದುಡ್ ಕೊಡಿ ಅಂತ ನೇರವಾಗಿ ಧಮಕಿಯ ಧ್ವನಿಯಲ್ಲಿ ಕೇಳುವ ದೊಡ್ಡವರು ಒತ್ತಟ್ಟಿಗಿರಲಿ, ಕೆಲ ಮಕ್ಕಳೂ ಕೂಡ ಕೈಯಲ್ಲಿ ಡಬ್ಬಿ ಹಿಡಿದು ಇದೇ ಹಾದಿಯನ್ನು ಅನುಸರಿಸುತ್ತಿರುವುದು ಗಣೇಶನ ಹಬ್ಬವು ದಾರಿ ತಪ್ಪಿದುದರ ಸಂಕೇತ.

ಗಣಪನಿಗೆ ಭಕ್ತಿಯೇ ಮುಖ್ಯ. ಆತ ನಿರಾಡಂಬರ, ನಿರಾಕಾರ, ನಿರ್ಗುಣ. ವಿಘ್ನ ಕರ್ತನೂ ಹೌದು, ವಿಘ್ನ ಹರ್ತನೂ ಹೌದು. ಈ ಗಣಪನನ್ನು ಅರ್ಥ ಮಾಡಿಕೊಳ್ಳದೆ ಜನರು ಮಾಡುತ್ತಿರುವ ಆಟಕ್ಕೆಲ್ಲಾ ಬಹುಶಃ ವಿಘ್ನಕರ್ತನೇ ಸಂಕಲ್ಪ ತೊಟ್ಟು, ಭಕ್ತಿಯಿಂದ ಮನೆ ಮನಗಳಲ್ಲಿ ಉತ್ಸವ ಆಚರಿಸಿ ಎಂಬ ಪಾಠವೊಂದನ್ನು ಕಲಿಸಿದ್ದು ಸುಳ್ಳಲ್ಲ.

ನಿರಾಡಂಬರ ಮೂರ್ತಿ ಗಣೇಶನನ್ನು ಸಾರ್ವಜನಿಕವಾಗಿ ಕೂರಿಸಿ, ಭಕ್ತಿ ಭಾವದಿಂದ, ಜನರ ಸಹಭಾಗಿತ್ವದಲ್ಲಿ ಅತ್ಯುತ್ತಮವಾಗಿ ಉತ್ಸವವನ್ನು ನಡೆಸುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳೂ ಇರುವುದು ಒಂದು ಆಶಾವಾದ. ಈಗ ನೋಡಿ, ಈ ಬಾರಿಯ ಗಣೇಶೋತ್ಸವ ಯಾವುದೇ ಆಡಂಬರವಿಲ್ಲದೆ ನಡೆಯುವಂತಾಗಿದೆ. ಗಣೇಶನಿಗೆ ತೃಪ್ತಿಯಾಗುವುದಿಲ್ಲವೇ? ಸದ್ದು, ಗದ್ದಲ, ಸಿನಿಮಾ ಹಾಡುಗಳ ನರ್ತನ, ಅರಚಾಟ, ಮೈಕಾಸುರ, ಸುಡುಮದ್ದು – ಇವೆಲ್ಲವೂ ಗಣೇಶೋತ್ಸವಕ್ಕೆ ಅಗತ್ಯವೇ ಇಲ್ಲ. ಅಂತರಂಗದ ಭಕ್ತಿ, ಬಹಿರಂಗದ ಸೇವಾ ಭಾವವಷ್ಟೇ ಮುಖ್ಯ.

ಜನರನ್ನು ಸಂಘಟಿಸಲೆಂದು ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸಲು ವೇದಿಕೆ ಕಲ್ಪಿಸಿಕೊಟ್ಟ ಲೋಕಮಾನ್ಯ ಬಾಲಗಂಗಾಧರ ತಿಲಕರ ನೂರನೇ ಪುಣ್ಯ ವರ್ಷಾಚರಣೆಯೂ ಇದೇ ಹೊತ್ತಿಗೆ ಸದ್ದಿಲ್ಲದೇ ನಡೆಯುತ್ತಿದೆ. ಸಂಘಟನೆಯೇ ಶಕ್ತಿ ಎಂಬ ನಿಸ್ವಾರ್ಥ, ನಿರಾಡಂಬರ ಮನೋಭಾವವನ್ನು ವಿಘ್ನ ನಿವಾರಕನೂ, ವಿಘ್ನ ವಿನಾಯಕನೂ ಆಗಿರುವ ಗಣೇಶನು ಎಲ್ಲರಿಗೂ ದಯಪಾಲಿಸಲಿ ಮತ್ತು ಈ ಬಾರಿ ಅನಿರೀಕ್ಷಿತವಾಗಿ ಇದನ್ನು ಅರ್ಥ ಮಾಡಿಕೊಳ್ಳಲು ದೊರೆತ ಅವಕಾಶವು ಭವಿಷ್ಯದ ಉತ್ಸವಗಳಿಗೆ ಸದ್ವಿನಿಯೋಗವಾಗಲಿ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post National Recruitment Agency: ಏನಿದು? ನೀವು ತಿಳಿಯಬೇಕಾದ 10 ಅಂಶಗಳು
Next post Health Tips: ಧೂಮಪಾನಿಗಳಿಂದ Social Distance ಕಾಯ್ದುಕೊಳ್ಳಿ!

ಸುದ್ದಿ ಸಂಚಯ

ಇವುಗಳನ್ನೂ ನೋಡಿ