ನವದೆಹಲಿ: ವಿಘ್ನ ನಿವಾರಕನ ಆಚರಣೆಯ ಸಡಗರದಲ್ಲಿರುವ ಭಾರತಕ್ಕೆ ದೊಡ್ಡ ವಿಘ್ನವೊಂದು ನಿವಾರಣೆಯಾಗಿದೆ. ಪಂಜಾಬಿನ ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ಶನಿವಾರ ನಸುಕಿನ ಜಾವದಲ್ಲಿ ದೇಶದೊಳಗೆ ನುಸುಳಲು ಪ್ರಯತ್ನಿಸಿದ ಐವರು ಉಗ್ರಗಾಮಿಗಳನ್ನು ಕೆಚ್ಚೆದೆಯ ಭಾರತೀಯ ಗಡಿ ಭದ್ರತಾ ಪಡೆಯ ಸೈನಿಕರು ಸಂಹಾರ ಮಾಡಿದ್ದರೆ, ದೆಹಲಿಯಲ್ಲಿ ಐಸಿಸ್ ಉಗ್ರನೊಬ್ಬನನ್ನು ಬಂಧಿಸುವ ಮೂಲಕ ಭಾರಿ ಗಂಡಾಂತರವೊಂದನ್ನು ತಪ್ಪಿಸಿದ್ದಾರೆ.
103ನೇ ಬೆಟಾಲಿಯನ್ನ ಯೋಧರು ಪಂಜಾಬ್ನ ತಾರಣ್ ತರಣ್ ಜಿಲ್ಲೆಯ ಗಡಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಶಂಕಾಸ್ಪದ ಚಲನವಲನ ಕಂಡುಬಂದಿತ್ತು. ಪ್ರಶ್ನಿಸಿದಾಗ ಅತ್ತಕಡೆಯಿಂದ ಗುಂಡಿನ ಮಳೆ ಸುರಿಯಿತು. ಬಿಎಸ್ಎಫ್ ಯೋಧರು ಸುಮ್ಮನಿರಬೇಕೇ? ಐವರು ನುಸುಳುಕೋರರ ಮೇಲೆ ಗುಂಡಿನ ಮಳೆಗರೆದರು.
ಐವರು ನುಸುಳುಕೋರರು ಸಾವನ್ನಪ್ಪಿದ್ದು, ಅವರಿಂದ ಎಕೆ 47 ರೈಫಲ್, ಮೂರು ಪಿಸ್ತೂಲ್, ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ದೇಹಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸುತ್ತಿಕೊಂಡಿದ್ದು, ಭಾರಿ ದಾಳಿ ಸಂಘಟಿಸುವುದಕ್ಕಾಗಿಯೇ ಬಂದಿರಬೇಕೆಂದು ಶಂಕಿಸಲಾಗಿದೆ. ಅವರ ಹತ್ಯೆಯೊಂದಿಗೆ, ಬಲು ದೊಡ್ಡ ಗಂಡಾಂತರವೊಂದು ತಪ್ಪಿದಂತಾಗಿದೆ.
ಇತ್ತ, ರಾಜಧಾನಿ ದೆಹಲಿಯಲ್ಲಿ ಮತ್ತೊಂದು ವಿಘ್ನ ನಿವಾರಣೆಯಾಗಿದೆ. ಭಾರತದ ಅನ್ನ ತಿಂದು ದೇಶಕ್ಕೇ ದ್ರೋಹ ಬಗೆಯುವ ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಐಸಿಸ್ ಸಂಪರ್ಕವಿರುವ ವೈದ್ಯನ ಮಾದರಿಯಲ್ಲಿ, ದೆಹಲಿಯಲ್ಲೂ ಒಬ್ಬಾತ ಸೆರೆ ಸಿಕ್ಕಿದ್ದಾನೆ. ಮೊಹಮ್ಮದ್ ಮುಸ್ತಕೀಮ್ ಖಾನ್ ಅಲಿಯಾಸ್ ಅಬು ಯೂಸುಫ್ ಎಂಬಾತ ಉತ್ತರ ಪ್ರದೇಶದ ಬಲರಾಂಪುರದವನು. ಆತನಿಂದ ದೊರೆತ ಸ್ಫೋಟಕ ವಸ್ತುವನ್ನು ನಿಷ್ಕ್ರಿಯಗೊಳಿಸಲಾಯಿತು.
ಧೌಲಾ ಕುಂವಾ ಮತ್ತು ಕರೋಲ್ ಬಾಘ್ ನಡುವಿನ ರಿಡ್ಜ್ ರೋಡ್ನಲ್ಲಿ ಶುಕ್ರವಾರ ರಾತ್ರಿ ದೆಹಲಿ ಪೊಲೀಸರ ವಿಶೇಷ ಪಡೆಯೊಂದು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಮುನ್ನ ಪಾತಕಿ ಶಂಕಿತ ಉಗ್ರಗಾಮಿ ಜೊತೆ ಗುಂಡಿನ ಚಕಮಕಿಯೂ ನಡೆದಿತ್ತು.
ಖಾನ್ ಆಗಸ್ಟ್ 15ರಂದೇ ರಾಜಧಾನಿಯಲ್ಲಿ ಭಯೋತ್ಪಾದನಾ ದಾಳಿಗೆ ಯೋಜಿಸಿದ್ದ. ಆದರೆ, ಭಾರಿ ಭದ್ರತಾ ವ್ಯವಸ್ಥೆಯಿಂದಾಗಿ ಆತನಿಗೆ ಸಾಧ್ಯವಾಗಿರಲಿಲ್ಲ ಎಂದು ದೆಹಲಿ ಪೊಲೀಸ್ ವಿಶೇಷ ಸೆಲ್ ಡಿಸಿಪಿ ಪ್ರಮೋದ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ. ಆತನಿಂದ ಪಿಸ್ತೂಲ್ ಹಾಗೂ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಳ್ಳಲಾಗಿದೆ. ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಐಸಿಸ್ನ ಆದೇಶದಡಿ ಈ ಖಾನ್ ಕೆಲಸ ಮಾಡುತ್ತಿದ್ದ.
ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿದ್ದುಕೊಂಡು, ಉನ್ನತ ವೈದ್ಯಕೀಯ ಶಿಕ್ಷಣ ಮುಂದುವರಿಸುತ್ತಲೇ, 2014ರಿಂದಲೂ ಸಿರಿಯಾದಲ್ಲಿ ಐಸಿಸ್ ಉಗ್ರಗಾಮಿಗಳಿಗಾಗಿ ಆ್ಯಪ್ ಮಾಡಿಕೊಡುತ್ತಾ ನೆರವಾಗುತ್ತಿದ್ದ ಅಬ್ದುರ್ ರೆಹಮಾನ್ (28) ಎಂಬಾತನನ್ನು ಬೆಂಗಳೂರಿನಲ್ಲಿ ಆಗಸ್ಟ್ 17ರಂದು ರಾಷ್ಟ್ರೀಯ ತನಿಖಾ ದಳ ಎನ್ಐಎ ಬಂಧಿಸಿತ್ತು. ಈತ ಜಮ್ಮು ಮತ್ತು ಕಾಶ್ಮೀರದ ಜಹಾನ್ಜೇಬ್ ಸಮಿ ವಾನಿ ಜೊತೆ ಕೈಜೋಡಿಸಿ ಸಿರಿಯಾದಲ್ಲಿ ಐಸಿಸ್ ಉಗ್ರರಿಗೆ ನೆರವಾಗುತ್ತಿದ್ದ. ವಾನಿ ಮತ್ತು ಆತನ ಪತ್ನಿ ಬಾಷಿರ್ ಬೇಗ್ಳನ್ನು ಎನ್ಐಎ ಈಗಾಗಲೇ ನವದೆಹಲಿಯಿಂದ ಬಂಧಿಸಿತ್ತು.
ರೆಹಮಾನ್ ಸರ್ಕಾರಿ ಕೋಟಾದಲ್ಲೇ ವೈದ್ಯಕೀಯ ಸೀಟು ಪಡೆದು, ಅನ್ನ ತಿಂದ ದೇಶದ ವಿರುದ್ಧವೇ ಸಂಚು ರೂಪಿಸುತ್ತಿದ್ದ ಎಂಬ ಆರೋಪ ಎದುರಿಸುತ್ತಿದ್ದಾನೆ. ಈತನಂತೆಯೇ, ಸಾಕಷ್ಟು ಚೆನ್ನಾಗಿರುವ ಮನೆತನದ ಇನ್ನಷ್ಟು ಮಂದಿ ಯುವಕರು 2013-14ರ ಅವಧಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಹುಟ್ಟಿಕೊಂಡ ಸಂದರ್ಭದಲ್ಲಿ ಸಿರಿಯಾಕ್ಕೆ ತೆರಳಿದ್ದರು ಎಂಬ ಮಾಹಿತಿ ದೊರೆತಿದ್ದು, ಮತ್ತಷ್ಟು ದೇಶದ್ರೋಹಿಗಳು ಬಲೆಗೆ ಬೀಳುವ ಸಾಧ್ಯತೆಗಳಿವೆ.
ಅಬ್ದುರ್ ರಹಮಾನ್ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿರುವ ಅಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾವಿನ್ಸ್ (ಐಎಸ್ಕೆಪಿ) ಘಟಕಕ್ಕಾಗಿ ಸಾಫ್ಟ್ವೇರ್ ಅಪ್ಲಿಕೇಶನ್ ಸಿದ್ಧಪಡಿಸಲು ನೆರವಾಗುತ್ತಿದ್ದ. ಈತ ಆರುವರ್ಷಗಳ ಹಿಂದೆ 20ರ ಆಸುಪಾಸಿನಲ್ಲಿರುವ ಒಬ್ಬ ಡಾಕ್ಟರ್ ಹಾಗೂ ಒಬ್ಬ ಎಂಜಿನಿಯರ್ ಜೊತೆಗೆ ಸಿರಿಯಾಕ್ಕೆ ತೆರಳಿದ್ದ. ಅವರಿಬ್ಬರೂ ಸಿರಿಯಾದಿಂದ ಹಿಂತಿರುಗಿದ್ದರಾದರೂ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷ್ಯಾಧಾರ ಸಿಗದ ಕಾರಣ ಅವರನ್ನು ವಿಚಾರಣೆಗೊಳಪಡಿಸಿ ಬಿಡುಗಡೆ ಮಾಡಲಾಗಿದೆ.

Average Rating