CWC ಸಭೆಯ ಹಿಂದೆ-ಮುಂದೆ
ಅಂಥ ಪತ್ರವೇ ಇಲ್ಲ ಎಂದಿದ್ದ ಕಾಂಗ್ರೆಸ್ ಯು-ಟರ್ನ್
ಪತ್ರ ಬರೆದವರಿಗೆ ಬಿಜೆಪಿ ನಂಟು ಎಂಬ Rahul Gandhi ಹೇಳಿಕೆ
ಆಕ್ರೋಶದಿಂದ ರಾಹುಲ್ ವಿರುದ್ಧ ಟ್ವೀಟ್ ಮಾಡಿ, ನಂತರ ಅಳಿಸಿದ ಕಪಿಲ್ ಸಿಬಲ್
ರಾಜೀನಾಮೆಗೆ ಸಿದ್ಧ ಎಂದ ಗುಲಾಂ ನಬೀ ಆಜಾದ್
ಪಕ್ಷಾಧ್ಯಕ್ಷತೆ ಬೇಡವೆಂದ ಸೋನಿಯಾ ಗಾಂಧಿ
ಗಾಂಧಿ ಕುಟುಂಬದವರಿಲ್ಲದಿದ್ದರೆ ಪಕ್ಷ ಹೋಳು ಎನ್ನುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು
ನವದೆಹಲಿ: ಕಾಂಗ್ರೆಸ್ನೊಳಗೊಳಗೇ ಕುದಿಯುತ್ತಿದ್ದ ಆಕ್ರೋಶವೊಂದು ಸೋಮವಾರ ಸ್ಫೋಟಗೊಂಡಿದೆ. ಪತ್ರ ಯಾರೂ ಬರೆದಿಲ್ಲ ಎನ್ನುತ್ತಲೇ ಇದ್ದ ಕಾಂಗ್ರೆಸ್, ಇದೀಗ ಕಾಂಗ್ರೆಸ್ ನಾಯಕತ್ವ ಬದಲಾವಣೆ ಮತ್ತು ಚುನಾವಣೆ ಆಗ್ರಹಿಸಿ ಈ ಪತ್ರ ಬರೆದವರ ವಿರುದ್ಧ ಕಿಡಿ ಕಾರಿದೆ.
ಇದರೊಂದಿಗೆ ಸೋಮವಾರ ಹೈಡ್ರಾಮಾ ನಡೆದಿದ್ದು, “ಪತ್ರ ಬರೆದವರು ಬಿಜೆಪಿ ಜೊತೆ ಕೈಜೋಡಿಸಿದವರು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆಂಬುದೂ ವಿವಾದಕ್ಕೆ ಕಾರಣವಾಗಿದ್ದು, ಹಿರಿಯ ನಾಯಕ ಕಪಿಲ್ ಸಿಬಲ್ ಬಹಿರಂಗವಾಗಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿ, ಕೊನೆಗೆ ಟ್ವೀಟ್ ಅಳಿಸಿ ಹಾಕಿದ್ದಾರೆ.
ಬಿಜೆಪಿ ಜೊತೆ ಕೈಜೋಡಿಸಿದವರು ನಾಯಕತ್ವ ಬದಲಾವಣೆಗೆ ಆಗ್ರಹಿಸುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಹಿರಿಯರಾದ ಕಪಿಲ್ ಸಿಬಲ್, ಗುಲಾಂ ನಬೀ ಆಜಾದ್ ಆಕ್ರೋಶಗೊಂಡಿದ್ದಾರೆ. ಇದಕ್ಕೆ ಸಾಕ್ಷಿ ನೀಡಿ, ರಾಜೀನಾಮೆ ನೀಡಿ ಹೊರ ನಡೆಯುತ್ತೇನೆ ಎಂದು ಗುಲಾಂ ನಬಿ ಆಜಾದ್ ಹೇಳಿದರೆ, ಕಪಿಲ್ ಸಿಬಲ್ ಟ್ವೀಟ್ನಲ್ಲಿ ರಾಹುಲ್ಗೆ ಕುಟುಕಿದ್ದಾರೆ.
ರಾಹುಲ್ ಅವರು ಸಂಕ್ಷಿಪ್ತ ಭಾಷಣದ ವೇಳೆ, ಅಧಿನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆ ಸೇರಿರುವ ಸಂದರ್ಭ ಪತ್ರ ಬರೆದಿರುವ ಸಮಯವನ್ನು ಪ್ರಶ್ನಿಸಿದರು.
ಆದರೆ, ಈ ಪತ್ರದಲ್ಲೇನಿದೆ ಎಂಬುದನ್ನು ಓದಿ ಹೇಳಿದ ಆಜಾದ್, ಯಾರು ಕೂಡ ಸೋನಿಯಾ ನಾಯಕತ್ವವನ್ನು ಪ್ರಶ್ನಿಸಿಲ್ಲ, ಪಕ್ಷದ ಹಿತದೃಷ್ಟಿಯಿಂದ ಸಾಂಸ್ಥಿಕವಾಗಿ ಸುಧಾರಣೆಯಾಗಬೇಕು ಎಂದರು.
ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಸೋಮವಾರ ನಡೆಯುತ್ತಿದ್ದು, ಚರ್ಚೆ ಮುಂದುವರಿದಿದೆ.
ಕಪಿಲ್ ಏನಂದರು?
ಈಗ ಅಳಿಸಿರುವ ಟ್ವೀಟ್ನಲ್ಲಿ ಕಪಿಲ್ ಸಿಬಲ್ ಹೀಗೆ ಬರೆದಿದ್ದರು: “ನಾವು ಬಿಜೆಪಿ ಜೊತೆ ಕೈಜೋಡಿಸಿದ್ದೇವೆ ಅಂತ ರಾಹುಲ್ ಗಾಂಧಿ ಹೇಳ್ತಿದಾರೆ. ರಾಜಸ್ಥಾನ ಹೈಕೋರ್ಟಲ್ಲಿ ಪಕ್ಷವನ್ನು ಸಮರ್ಥಿಸಿಕೊಂಡು ಯಶಸ್ವಿಯಾಗಿದ್ದೇವೆ. ಮಣಿಪುರದಲ್ಲಿ ಬಿಜೆಪಿ ಸರ್ಕಾರ ಬೀಳಿಸುವಲ್ಲಿ ಪಕ್ಷವನ್ನು ಸಮರ್ಥಿಸಿಕೊಂಡಿದ್ದೇವೆ. ಕಳೆದ 30 ವರ್ಷಗಳಲ್ಲಿ ಎಂದಿಗೂ ಯಾವುದೇ ವಿಷಯದಲ್ಲಿ ಬಿಜೆಪಿ ಪರ ಒಂದೇ ಒಂದು ಹೇಳಿಕೆಯನ್ನೂ ನೀಡಿಲ್ಲ. ಆದರೂ ನಾವು ಬಿಜೆಪಿ ಜೊತೆ ಕೈಜೋಡಿಸಿದ್ದೇವೆ!”
ಈ ಟ್ವೀಟ್ ದೇಶಾದ್ಯಂತ ಸದ್ದು ಮಾಡಿದ ತಕ್ಷಣ, ಕಪಿಲ್ ಸಿಬಲ್ ಮತ್ತೊಂದು ಟ್ವೀಟ್ ಮಾಡಿ, ತನ್ನಲ್ಲಿ ರಾಹುಲ್ ಗಾಂಧಿ ಮಾತನಾಡಿ ಸಮಜಾಯಿಷಿ ನೀಡಿದ್ದಾರೆ. ಹೀಗಾಗಿ ಈ ಟ್ವೀಟ್ ಅಳಿಸಿದ್ದೇನೆ ಎಂದು ಹೇಳಿದರು.
ಗಾಂಧಿಗಳಿಲ್ಲದಿದ್ದರೆ ಸರ್ವನಾಶ
ಇದೇ ವೇಳೆ, ಕಾಂಗ್ರೆಸ್ ಕಾರ್ಯಕರ್ತರು ಎಐಸಿಸಿ ಮುಖ್ಯಾಲಯದ ಹೊರಗೆ ಜಮಾಯಿಸಿ, ಗಾಂಧಿ ಕುಟುಂಬವರಲ್ಲದೆ ಪಕ್ಷಾಧ್ಯಕ್ಷತೆಗೆ ಯಾರೂ ಸ್ವೀಕಾರಾರ್ಹವಲ್ಲ ಎಂದು ಕೂಗಿದರು. ಗಾಂಧಿ ಕುಟುಂಬದ ಹೊರತಾದವರು ಅಧ್ಯಕ್ಷರಾದರೆ, ಪಕ್ಷವು ಒಡೆಯುತ್ತದೆ ಎಂಬ ಪ್ಲೆಕಾರ್ಡ್ ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಕೂಗುತ್ತಿದ್ದರು.
ಮೂಲಗಳ ಪ್ರಕಾರ, 400ರಷ್ಟು ಕಾಂಗ್ರೆಸ್ ನಾಯಕರು ಪಕ್ಷದಲ್ಲಿ ಸುಧಾರಣೆಯಾಗಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ ಮತ್ತು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ.
ಪತ್ರ ಬರೆದವರಾರು
ಕಪಿಲ್ ಸಿಬಲ್, ಗುಲಾಂ ನಬೀ ಆಜಾದ್, ಆನಂದ್ ಶರ್ಮಾ, ಮನೀಷ್ ತಿವಾರಿ, ಮಿಲಿಂದ್ ದೇವ್ರಾ, ಮುಕುಲ್ ವಾಸ್ನಿಕ್, ಜಿತಿನ್ ಪ್ರಸಾದ, ಭೂಪಿಂದರ್ ಸಿಂಗ್ ಹೂಡಾ, ಪೃಥ್ವಿರಾಜ್ ಚವಾಣ್ ಮುಂತಾದವರು ಪತ್ರ ಬರೆದ 23 ಮಂದಿಯಲ್ಲಿ ಸೇರಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಪತ್ರ ಬರೆಸಿದ ಇಬ್ಬರು ಹಿರಿಯ ಕಾಂಗ್ರೆಸ್ ಮುಖಂಡರು ಈಗ ಎರಡೂ ಬಣಗಳಿಂದ ದೂರವುಳಿದಿದ್ದಾರೆ ಮತ್ತು ಅವರು ಸಹಿ ಹಾಕಿರಲಿಲ್ಲ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ.
ಸೋಮವಾರ ಸಿಡಬ್ಲ್ಯುಸಿ ಸಭೆ ಆರಂಭವಾದಾಗ, ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮನ್ನು ಅಧಿಕಾರಮುಕ್ತರಾಗಿಸುವಂತೆ ವಿನಂತಿಸಿ ರಾಜೀನಾಮೆ ಸಲ್ಲಿಸಿದರು. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ರಕ್ಷಣಾ ಸಚಿವ್ ಎ.ಕೆ.ಆ್ಯಂಟನಿ, ಆಪ್ತ ಅಹ್ಮದ್ ಪಟೇಲ್ ಮುಂತಾದವರು ಇದನ್ನು ವಿರೋಧಿಸಿದರು.
ಮೂಲಗಳ ಪ್ರಕಾರ, ಸೋಮವಾರ ನಡೆದ ವರ್ಚುವಲ್ ಮೀಟಿಂಗ್ನಲ್ಲಿ ರಾಹುಲ್ ಗಾಂಧಿ ಅವರು ಈ ಆಪಾದನೆ ಮಾಡಿದ ತಕ್ಷಣ, ನಾಲ್ಕು ಮಂದಿ ಕಾಂಗ್ರೆಸ್ ಹಿರಿಯ ಮುಖಂಡರು, ಲಾಗೌಟ್ ಆಗಿ ಹೊರನಡೆದರು.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ. ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .

Average Rating