ನವದೆಹಲಿ: ನ್ಯಾಯಾಂಗ ನಿಂದನೆ ಕೇಸಿನ ಬಗ್ಗೆ ಹಿಂದೆಲ್ಲಾ ವಕಾಲತ್ತು ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್, ಇದೀಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಪರಮೋಚ್ಚ ನ್ಯಾಯಾಲಯದ ವಿರುದ್ಧ ಮಾಡಿರುವ ಟ್ವೀಟ್‌ಗೆ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಇದರೊಂದಿಗೆ ಅವರಿಗೆ ಶಿಕ್ಷೆ ಘೋಷಣೆಯಾಗುವುದು ಖಚಿತವಾಗಿದೆ.
ತಾನು ಮಾಡಿದ ಹೇಳಿಕೆಗಳು ತನ್ನ ನಂಬಿಕೆಗಳ ಪ್ರತೀಕ ಮತ್ತು ಇದಕ್ಕಾಗಿ ಕ್ಷಮೆ ಯಾಚಿಸುವುದು “ಅಪ್ರಾಮಾಣಿಕ” ಆಗುತ್ತದೆ ಎಂಬ ಕಾರಣವನ್ನು ಅವರು ಸುಪ್ರೀಂ ಕೋರ್ಟಿನ ಮುಂದೆ ಸೋಮವಾರ ನೀಡಿದ್ದಾರೆ.
ನ್ಯಾಯಾಂಗ ನಿಂದಕರ ವಿರುದ್ಧ ಧ್ವನಿಯೆತ್ತಿದ್ದ ಭೂಷಣ್
“ನಾನು ನಂಬಿಕೆ, ವಿಶ್ವಾಸದಿಂದಲೇ ನನ್ನ ಮನಸ್ಸಿನಲ್ಲಿದ್ದುದನ್ನು ಅಭಿವ್ಯಕ್ತಿಸಿದ್ದೇನೆ. ಸುಪ್ರೀಂ ಕೋರ್ಟ್ ಅಥವಾ ನಿರ್ದಿಷ್ಟ ಮುಖ್ಯ ನ್ಯಾಯಮೂರ್ತಿಗಳನ್ನು ಅವಮಾನಿಸುವ ಉದ್ದೇಶ ಹೊಂದಿರಲಿಲ್ಲ. ಸಂವಿಧಾನದ ಹಾಗೂ ಜನರ ಹಕ್ಕುಗಳ ರಕ್ಷಕನೆಂಬ ದೀರ್ಘಕಾಲದ ಹೆಸರಿಗೆ ಚ್ಯುತಿಯಾಗುವ ಮಾರ್ಗದಲ್ಲಿ ಹೋಗದ ರೀತಿಯಲ್ಲಿ ಸುಪ್ರೀಂ ಕೋರ್ಟ್ ಯಾವುದೇ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲಿ ಎಂಬುದಕ್ಕಾಗಿ ರಚನಾತ್ಮಕ ಟೀಕೆ ಮಾಡಿದ್ದೇನೆ.” ಎಂದು ಕೋರ್ಟಿಗೆ ಸಲ್ಲಿಸಿದ ಪೂರಕ ಹೇಳಿಕೆಯಲ್ಲಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
“ಅಪ್ರಾಮಾಣಿಕ ಕ್ಷಮೆಯಾಚನೆಯು ನನ್ನ ಸ್ವಪ್ರಜ್ಞೆಗೆ ಅಪಚಾರವೆಸಗಿದಂತಾಗುತ್ತದೆ” ಎಂದೂ ಭೂಷಣ್ ಬರೆದಿರುವುದಾಗಿ ವರದಿಗಳು ತಿಳಿಸಿವೆ.
ಕಳೆದ ವಾರ, ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಕೇಸಿನ ಕುರಿತ ವಿಚಾರಣೆ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್, ಪ್ರಶಾಂತ್ ಭೂಷಣ್‌ಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸುವುದನ್ನು ಮುಂದೂಡಿ, ಕ್ಷಮೆ ಯಾಚಿಸಿದರೆ ಪ್ರಕರಣಕ್ಕೆ ಮಂಗಳ ಹಾಡಲು ಸೋಮವಾರದವರೆಗೆ ಅವಕಾಶ ಒದಗಿಸಿತ್ತು.

ಆದರೆ, “ಈ ಐತಿಹಾಸಿಕ ಕ್ಷಣದಲ್ಲಿ” ಕ್ಷಮೆ ಕೇಳುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದರು ಅವರು.
ಟ್ವೀಟ್‌ನಲ್ಲಿ ಅವರು ನ್ಯಾಯಾಲಯಕ್ಕೆ ನಿಂದಿಸಿದ್ದಲ್ಲದೆ, ಸುಪ್ರೀಂ ಕೋರ್ಟನ್ನೇ ಲಾಕ್‌ಡೌನ್ ಮಾಡಿ ಮುಖ್ಯ ನ್ಯಾಯಮೂರ್ತಿಗಳು ಹೆಲ್ಮೆಟ್ ಇಲ್ಲದೆ ಬಿಜೆಪಿಯವರ 50 ಲಕ್ಷದ ಬೈಕಿನಲ್ಲಿ ಸವಾರಿ ಮಾಡಿದರು ಎಂದೆಲ್ಲ ಬರೆದಿದ್ದರು. ಈ ವಿಷಯವು ನ್ಯಾಯಾಲಯದಲ್ಲಿರುವುದರಿಂದ ಟ್ವಿಟರ್ ಇಂಡಿಯಾ ಈ ಟ್ವೀಟ್‌ಗಳನ್ನು ಈಗ ಅಮಾನತಿನಲ್ಲಿರಿಸಿದೆ.
ಇದೀಗ ಅವರಿಗೆ ಆರು ತಿಂಗಳ ಸಾದಾ ಸೆರೆವಾಸ ಮತ್ತು/ಅಥವಾ 2000 ರೂ.ವರೆಗೆ ದಂಡ ವಿಧಿಸಬಹುದಾಗಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .

Average Rating