ನವದೆಹಲಿ: ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಮುಂದುವರಿಸಲು ಲಾಂಚ್ ಪ್ಯಾಡ್ ಆಗಿರುವ ಜೆಇಇ, ನೀಟ್ (JEE, NEET) ಪ್ರವೇಶ ಪರೀಕ್ಷೆಗಳನ್ನು ನಡೆಸಲು ರಾಜಕಾರಣಿಗಳು ವಿರೋಧಿಸುತ್ತಿರುವಂತೆಯೇ, ದಾರಿ ತಪ್ಪಿದ ವಿದೇಶೀ ಬಾಲಕಿಯೊಬ್ಬಳು, ತಾನು ಶಾಲೆಗೆ ಹೊರಟು, ಭಾರತೀಯ ವಿದ್ಯಾರ್ಥಿಗಳು ಕಲಿಯಬಾರದು ಎಂಬ ಹೇಳಿಕೆ ನೀಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುವ ಎಲ್ಲ ಪ್ರಗತಿಯ ಪರವಾಗಿ ಕೈಗೊಂಡಿರುವ ಎಲ್ಲ ಕೆಲಸಗಳನ್ನೂ ವಿರೋಧಿಸುತ್ತಿರುವ, ದೇಶ ವಿರೋಧಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ಪ್ರತಿಪಕ್ಷಗಳು ಕೂಡ ಈಗ ಕೂಗೆಬ್ಬಿಸುತ್ತಿವೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್, ರಾಜಸ್ಥಾನ, ಛತ್ತೀಸಗಢ, ಪುದುಚೇರಿ, ಕಾಂಗ್ರೆಸ್ ಮೈತ್ರಿ ಸರ್ಕಾರ ಇರುವ ಮಹಾರಾಷ್ಟ್ರ, ಜಾರ್ಖಂಡ್, ಕಾಂಗ್ರೆಸ್ಸೇತರ, ಮೋದಿ ವಿರೋಧಿ ಸರ್ಕಾರವಿರುವ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಗಳು ನೀಟ್ ಮತ್ತು ಜೆಇಇ ಪರೀಕ್ಷೆ ನಡೆಸಕೂಡದು ಎಂದು ಯುವಜನವಿರೋಧಿ ನಿರ್ಧಾರ ಕೈಗೊಂಡು, ಸುಪ್ರೀಂ ಕೋರ್ಟ್ ಕದ ತಟ್ಟಲು ನಿರ್ಧರಿಸಿವೆ.
ಸೆ.1ರಿಂದ ಈ ಪರೀಕ್ಷೆಗಳನ್ನು ನಡೆಸುವುದಾಗಿ ಕೇಂದ್ರ ಶಿಕ್ಷಣ ಇಲಾಖೆ ಪ್ರಕಟಿಸಿದ ಹಿನ್ನೆಲೆಯಲ್ಲಿ, ಕೋವಿಡ್-19 ಜಾಸ್ತಿ ಇದೆ, ಸೋಂಕು ತಗುಲುತ್ತದೆ ಎಂದೆಲ್ಲಾ ನೆಪವೊಡ್ಡಿ, ವಿರೋಧಿಸಲೇಬೇಕೆಂದು ಪಣ ತೊಟ್ಟಿರುವ ಈ ರಾಜಕಾರಣಿಗಳು, ಈಗ ವಿದ್ಯಾರ್ಥಿಗಳ, ಯುವಜನರ ಹಿತದೃಷ್ಟಿ ನೆಪದಲ್ಲಿ ಪರೀಕ್ಷೆಗಳನ್ನು ಮುಂದೂಡಲು ಒತ್ತಾಯಿಸುತ್ತಿವೆ.
ಪರೀಕ್ಷೆ ನಡೆಸುವುದಕ್ಕೆ ಅಡ್ಡಿಯಿಲ್ಲ ಎಂದು ಸುಪ್ರೀಂ ಕೋರ್ಟೇ ಹೇಳಿದ್ದರೂ, ಮಾಡಬಾರದು ಎಂದು ಈ 7 ಮುಖ್ಯಮಂತ್ರಿಗಳು ಹೇಳುತ್ತಿದ್ದು, ಇದಕ್ಕೆ ದೆಹಲಿಯ ಆಮ್ ಆದ್ಮೀ ಸರ್ಕಾರ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿರುವ ಎಐಎಡಿಎಂಕೆ ಸರ್ಕಾರವೂ ವಿರೋಧ ವ್ಯಕ್ತಪಡಿಸಿದೆ.
ಆದರೆ, ಪರೀಕ್ಷೆ ನಡೆಸುವಂತೆ ಕೇಂದ್ರದಿಂದ ಸೂಚನೆ ಪಡೆದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ), ಈ ಪರೀಕ್ಷೆಗಳು ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳುವಂತೆ ರಾಜ್ಯಗಳಿಗೆ ಸೂಚಿಸಿದೆ. ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಅಂತರ್ರಾಜ್ಯ ಸಂಚಾರ ನಿರ್ಬಂಧ ಸಡಿಲಿಸುವಂತೆಯೂ ಏಜೆನ್ಸಿಯು ಬುಧವಾರ ರಾಜ್ಯದ ಎಲ್ಲ ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ವಿನಂತಿಸಿದೆ. ಇದಕ್ಕೆ ಎಲ್ಲ ರಾಜ್ಯಗಳ ಡಿಜಿಪಿಗಳು, ಪೊಲೀಸರು, ಆರೋಗ್ಯ ಇಲಾಖೆ, ಜಿಲ್ಲಾಧಿಕಾರಿಗಳ ಸಹಕಾರವನ್ನೂ ಕೋರಲಾಗಿದೆ.
ಜಾಗತಿಕ ಪಿಡುಗಿನ ಈ ಸಂದರ್ಭದಲ್ಲಿ ಸುರಕ್ಷಿತ ರೀತಿಯಲ್ಲಿ, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪರೀಕ್ಷೆ ನಡೆಸಲು ಸಿದ್ಧ ಎಂದು ಎನ್ಟಿಎ ಸ್ಪಷ್ಟವಾಗಿ ಹೇಳಿದೆ. ಈಗಾಗಲೇ ಕರ್ನಾಟಕದಲ್ಲಿ 10ನೇ ತರಗತಿ, ಪಿಯುಸಿ ಹಾಗೂ ಸಿಇಟಿ ಪರೀಕ್ಷೆಗಳು ಯಾವುದೇ ಸಮಸ್ಯೆಯಿಲ್ಲದೆ ನಡೆದಿರುವುದು ಇಲ್ಲಿ ಉಲ್ಲಾಖಾರ್ಹ.
ಪರಿಸರ ಹೋರಾಟಗಾರ್ತಿ ಎಂದು ಜಾಗತಿಕವಾಗಿ ಗುರುತಿಸಿಕೊಂಡಿರುವ ಗ್ರೆಟಾ ಥನ್ಬರ್ಗ್ ಎಂಬ ಬಾಲಕಿ ಇದೀಗ, ತಾನು ಶಾಲೆಗೆ ಮರಳಲು ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾಳೆ.
ಆದರೆ, ಕೋವಿಡ್ ಕಾಲದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರುವಂತೆ ಮಾಡುವುದು ಅನ್ಯಾಯ ಎಂದು ಅಲವತ್ತುಕೊಂಡಿದ್ದಾಳೆ.
ಇದನ್ನು ಸಾಕಷ್ಟು ಮಂದಿ ಭಾರತೀಯತೆಯ ಬಗ್ಗೆ ಹೆಮ್ಮೆ ಪಡುವ ಮನಸ್ಥಿತಿಯವರು ಟೀಕಿಸಿದ್ದಾರೆ. ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸಬೇಡ ಅಂತ ಸಾಕಷ್ಟು ಮಂದಿ ಆಕೆಗೆ ಸಲಹೆ ನೀಡಿದ್ದಾರೆ.
ಎಷ್ಟು ಮಂದಿ, ಎಷ್ಟು ಪರೀಕ್ಷಾ ಕೇಂದ್ರಗಳು? ದೇಶದ 155 ನಗರಗಳ 3846 ಪರೀಕ್ಷಾ ಕೇಂದ್ರಗಳಲ್ಲಿ NEET ಪರೀಕ್ಷೆ ನಡೆಯಲಿದೆ. ಅದೇ ರೀತಿ, 234 ನಗರಗಳ 615 ಪರೀಕ್ಷಾ ಕೇಂದ್ರಗಳಲ್ಲಿ JEE ಪರೀಕ್ಷೆ ನಡೆಯಲಿದೆ. ಜೆಇಇಗೆ 9.5 ಲಕ್ಷಕ್ಕೂ ಹೆಚ್ಚು ಮಂದಿ ಹಾಜರಾಗಲಿದ್ದರೆ, ನೀಟ್ ಪರೀಕ್ಷೆಗೆ 15 ಲಕ್ಷದಷ್ಟು ಮಂದಿ ಹಾಜರಾಗಲಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .

Average Rating