ನವದೆಹಲಿ: ದೇಶ ಕಂಡ ಅಪರೂಪದ ರಾಜಕಾರಣಿ, ಈ ದೇಶವನ್ನು ಮುನ್ನಡೆಸುವ ಎಲ್ಲ ಸಾಮರ್ಥ್ಯವಿದ್ದೂ, ರಾಜಕೀಯಕ್ಕಾಗಿ ಪ್ರಧಾನಿ ಹುದ್ದೆಯಿಂದ ವಂಚಿತರಾಗಿದ್ದ ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಸ್ತಂಗತರಾಗಿದ್ದಾರೆ.
ಪ್ರಣಬ್ ಮುಖರ್ಜಿ (ಜನನ: 11 ಡಿಸೆಂಬರ್ 1935, ಮರಣ: 31 ಆಗಸ್ಟ್ 2020) ಅವರು ಕೇಂದ್ರದಲ್ಲಿ ವಿದೇಶಾಂಗ, ಹಣಕಾಸು, ರಕ್ಷಣೆ ಮುಂತಾದ ಖಾತೆಗಳ ಸಚಿವರಾಗಿ ದೇಶಕ್ಕೊಂದು ಹೊಸ ಹೊಳಹು ಕೊಟ್ಟಿದ್ದರು. ಪ್ರಧಾನಿ ಪದವಿಗೆ ಹತ್ತಿರವಾದಾಗ, ಪಕ್ಷದೊಳಗಿನ ಆಂತರಿಕ ವೈರುಧ್ಯಗಳಿಂದಾಗಿ ಅವರು ದೂರ ಸರಿಯಬೇಕಾಗಿ ಬಂದಿತ್ತು. ಇಂದಿರಾ ಗಾಂಧಿಯವರಿಗೆ ಆಪ್ತರಾಗಿದ್ದ ಪ್ರಣಬ್, ಇಂದಿರಾ ಸಾವಿನ ಸಂದರ್ಭದಲ್ಲಿ ಸಮರ್ಥ ನಾಯಕರಾಗಿ ಬೆಳೆದಿದ್ದರು. ಆದರೆ ಅವರನ್ನು ಮೂಲೆಗುಂಪು ಮಾಡಲಾಗಿತ್ತು.
ಕೋವಿಡ್-19 ಬಾಧೆಯೊಂದಿಗೆ ವಯೋಸಹಜ ಆರೋಗ್ಯ ವೈಪರೀತ್ಯಗಳೂ ಸೇರಿಕೊಂಡು, ಆಗಸ್ಟ್ 10ರಿಂದ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಸಂಜೆ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು.
2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದ ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಬ್ಯಾನರ್ಜಿ ಅವರು ಭಾರವಾದ ಹೃದಯದಿಂದ ಈ ವಿಷಯವನ್ನು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಕೋವಿಡ್ ಸೋಂಕಿರುವುದು ಖಚಿತವಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಕೋಮಾಕ್ಕೆ ಜಾರಿದ್ದ ಅವರು ಜೀವರಕ್ಷಕ ಉಪಕರಣಗಳ ಮೂಲಕ ಉಸಿರಾಡುತ್ತಿದ್ದರು. ಆದರೆ, ಶ್ವಾಸಕೋಶದ ಸೋಂಕು ವಿಷಮಿಸಿ ಅವರು ಗುರುವಾರ ಸಂಜೆ ಇಹಲೋಕ ತ್ಯಜಿಸಿದರು.

Average Rating