ದೇಶದ ಜಿಡಿಪಿ ಇಳಿಕೆಯಾಯಿತು ಎಂದಾಕ್ಷಣ ಎಲ್ಲರೂ ಭಾರತವನ್ನೇ ದೂಷಿಸುವವರು. ಎಲ್ಲರೂ ಮುಗಿಬಿದ್ದದ್ದು ದೇಶದ ಚುಕ್ಕಾಣಿಯನ್ನು ಹಿಡಿದು ಈ ಸಂಕಷ್ಟ ಕಾಲದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಭಾರತವನ್ನು ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲೆಯೇ. ದೇಶಕ್ಕೆ ಏನೇ ಗಂಡಾಂತರ ಬಂದರೂ ಅದಕ್ಕೆ ಮೋದಿಯತ್ತ ಬೆರಳು ತೋರಿಸುತ್ತಿದ್ದಾರೆ. ಆದರೆ, ಮೋದಿ ಸ್ಥಾನದಲ್ಲಿ ಹಿಂದಿನ ನುಂಗಣ್ಣಗಳು, ಆರ್ಥಿಕ ತಜ್ಞರೆನಿಸಿಕೊಂಡು ಕೈಗೊಂಬೆಯಾದವರೆಲ್ಲ ಇದ್ದಿದ್ದರೆ, ದೇಶದ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.
ಗೋಡೆಗಳ ಒಳಗೆ ಕೊರೆದು, ಮಂಚದ ಅಡಿಯಲ್ಲಿ, ಮನೆಗಳ ನೆಲ ಮಾಳಿಗೆಯಲ್ಲಿ…. ಹೀಗೆ ಎಲ್ಲೆಂದರಲ್ಲಿ ಕೂಡಿಟ್ಟಿದ್ದ ಕಪ್ಪು ಹಣವೆಲ್ಲಾ ಕರಗುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿ, ದೇಶದ ಆರ್ಥಿಕತೆಗೆ ಅನುಕೂಲ ಮಾಡಿಕೊಟ್ಟಿದ್ದ ನೋಟುಗಳ ನಿಷೇಧವನ್ನೂ ದೇಶದ ಆರ್ಥಿಕ ಪರಿಸ್ಥಿತಿಗೆ ಕಾರಣ ಅಂತನೂ ಮೋದಿ ವಿರೋಧಿಗಳು ದೂಷಿಸುತ್ತಿದ್ದಾರೆ. ಇದಕ್ಕೆ ಕಾರಣ, ಅಂಥವರು ಕೂಡಿಟ್ಟಿದ್ದ ಕಪ್ಪು ಹಣವೆಲ್ಲವೂ ಬೆಲೆ ಕಳೆದುಕೊಂಡಿರುವುದು.
ಈ ಕೋವಿಡ್-19 ಸಂಕಷ್ಟ ಕಾಲದಲ್ಲಿ ಆರ್ಥಿಕತೆಯ ಕುಸಿತ ಎಂಬುದು ದೊಡ್ಡ ಪರಿಣಾಮವನ್ನೇ ಬೀರಿದ್ದಂತೂ ಸುಳ್ಳಲ್ಲ. ಇದಕ್ಕೂ ಹಿಂದೆಯೇ ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿತ್ತು ಎಂಬುದನ್ನು ಗಮನಿಸಬೇಕು. ಹನ್ನೆರಡು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಆರ್ಥಿಕ ಹಿಂಜರಿತ (Economic Slowdown) ಮರಳಿ ಕಾಣಿಸಿಕೊಳ್ಳಲಾರಂಭಿಸಿತ್ತು ಎಂಬುದು ಎಷ್ಟು ಸತ್ಯವೋ, ಜಾಗತಿಕವಾಗಿ ಈ ರೀತಿಯಾಗಲು ಮೋದಿ ಕಾರಣವಲ್ಲ ಎಂಬುದೂ ಅಷ್ಟೇ ಸತ್ಯ.
ಆದರೆ, ನಮ್ಮದೇ ದೇಶವನ್ನು ಹೀಗಳೆಯುತ್ತಲೇ ಕಾಲ ಕಳೆಯುವವರಿಗೆ ಇದು ಅರ್ಥವಾಗಬೇಕಲ್ಲಾ? ನೋಟ್ಬಂದಿಯಿಂದಾಗಿ, ಮೋದಿ ಸರ್ಕಾರದ ಆರ್ಥಿಕ ನಿರ್ವಹಣೆಯ ವಿಧಾನಗಳಿಂದ ಹೀಗಾಗಿದೆ ಎಂದೆಲ್ಲಾ ಸುಳ್ಳು ಸುದ್ದಿಯನ್ನೇ ಹರಡುತ್ತಿದ್ದಾರೆ. ರಫೇಲ್ನಲ್ಲಿ ಮೋದಿ ದುಡ್ಡು ಹೊಡೆದಿದ್ದಾರೆ ಎಂದು ಸುಳ್ಳು ಸುಳ್ಳೇ ಪ್ರಚಾರ ಮಾಡಿದವರಿಂದ ಮತ್ತೇನನ್ನು ನಿರೀಕ್ಷಿಸಬಹುದು?
ಒಟ್ಟಾರೆಯಾಗಿ ಮೋದಿ ವಿರೋಧ ಎಂಬುದು ಎಲ್ಲರ ಸಂಸ್ಕಾರವನ್ನೂ ಹೊರಗೆಡಹುತ್ತಿದೆ ಎಂಬುದಕ್ಕೆ ಉತ್ತಮ ಉದಾಹರಣೆ ಎಂದರೆ, ಒಂದು ರಾಜ್ಯದ ಹಣಕಾಸು ಸಚಿವನಾಗಿ ದುಡಿದಿದ್ದ ಅನುಭವ ಇರುವ ಮಾಜಿ ಮುಖ್ಯಮಂತ್ರಿ ಮಾತು. ಸಿದ್ದರಾಮಯ್ಯ ಹೇಳಿದ್ದೇನು? ಅಡ್ಡಕಸುಬಿ ಎಂಬ ಪದ ಪ್ರಯೋಗ ಮಾಡಿರುವುದು ಅವರ ಸಂಸ್ಕಾರವನ್ನೇ ಎತ್ತಿ ತೋರಿಸಿತು.
ಆದರೆ, ಈ ಜಿಡಿಪಿ ಕುಸಿತದ ಬಗ್ಗೆ ತಜ್ಞರು ಏನಂತಾರೆ? ಆರ್ಥಿಕ ತಜ್ಞರೂ, ಅಂಕಣಕಾರರೂ, ಪತ್ರಕರ್ತರೂ, ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಹಿರಿಯ ಎಸ್.ಗುರುಮೂರ್ತಿ ಅವರು ಏನಂತಾರೆ?
ಕೆಲವು ಮಾಧ್ಯಮಗಳು ಎರಡನೇ ತ್ರೈಮಾಸಿಕದ (Q2) ಜಿಡಿಪಿ ಬಗ್ಗೆ “ತೀರಾ ಕೆಟ್ಟ ಪತನ”, ಆರ್ಥಿಕತೆ ಐಸಿಯುನಲ್ಲಿದೆ ಎಂದೆಲ್ಲಾ ಹೇಳುತ್ತಿರುವುದು ನೋಡಿ ಅಚ್ಚರಿಯಾಗುತ್ತಿದೆ. ಇಲ್ಲಿ, ಸತ್ಯ ಎಲ್ಲಿದೆ?
ಕೋವಿಡ್ನಿಂದಾಗಿ ಇಡೀ ದೇಶದ ಚಟುವಟಿಕೆಯೇ ಸ್ತಬ್ಧವಾಗಿದೆ. ಉತ್ಪಾದನೆ ಇಲ್ಲ, ಆದಾಯ ಇಲ್ಲ, ಖರ್ಚು ಇಲ್ಲ. ದೇಶವೇ ಕೆಲಸ ಮಾಡುತ್ತಿದ್ದರೆ ಆದರೆ, ಗಳಿಕೆಯೇ ಇಲ್ಲದಿದ್ದರೆ, ಅದು ದೊಡ್ಡ ಪತನವೇ ಸರಿ. ಆದರೆ, ದೇಶದಲ್ಲಿ ದುಡಿಮೆಯೇ ಇರಲಿಲ್ಲವಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ, ಕೆಲಸ ಮಾಡದಿರುವುದಕ್ಕೆ ವೇತನ ಕಡಿತ ಮಾಡಿದಂತೆ.
ಜಾಗತಿಕವಾಗಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಜಿಡಿಪಿಯ ಕುಸಿತ ಹೇಗಿತ್ತು? ಇಲ್ಲಿದೆ ಒಂದು ಸಣ್ಣ ಪಟ್ಟಿ
US -33%,
UK -21%,
ಸಿಂಗಪುರ -42.9%,
ಜಪಾನ್ -27.8%,
ಫ್ರಾನ್ಸ್ -14%
ಕೆನಡಾ 38.7%
ಅಂದರೆ ಭಾರತ ಮಾತ್ರವಲ್ಲ ಎಂದಾಯಿತಲ್ಲ, ಇದೊಂದು ಜಾಗತಿಕ ಬಿಕ್ಕಟ್ಟು. ಇದಕ್ಕೂ ಎಕನಾಮಿಕ್ಸ್ಗೂ ಸಂಬಂಧವಿಲ್ಲ.
ಕೆಲವು ಮಂದಿ ಚೀನಾದ ಶೇ.6 ಕುಸಿತವನ್ನು ಹೋಲಿಸಿ, ಭಾರತದ್ದೇಕೆ ನಾಲ್ಕು ಪಟ್ಟು ಹೆಚ್ಚು ಅಂತ ಪ್ರಶ್ನಿಸಿದ್ದಾರೆ. ಚೀನಾ ಲಾಕ್ಡೌನ್ ಮಾಡಿದ್ದು ಕೇವಲ ವುಹಾನ್ ಮತ್ತು ಹುಬೈ ಪ್ರಾಂತ್ಯದ ಕೆಲವೆಡೆ ಮಾತ್ರ. ಇದರಲ್ಲಿ ಬಾಧೆಗೆ ಒಳಗಾದವರು ಚೀನಾ ಜನಸಂಖ್ಯೆ ಶೇ.5 ಮಂದಿ ಅಂದರೆ 6.80 ಕೋಟಿ ಮಂದಿಗೆ. ಕೇವಲ ಇಷ್ಟೇ ಜನಸಂಖ್ಯೆಯ ಮೇಲೆ ಪರಿಣಾಮವಾಗಿದ್ದರೂ ಶೇ.6 ಕುಸಿತ ದೊಡ್ಡದೇ. ಯಾಕೆಂದರೆ, ಇಡೀ ಭಾರತ ದೇಶವೇ ಎರಡು ತಿಂಗಳ ಕಾಲ ಲಾಕ್ಡೌನ್ ಮಾಡಬೇಕಾಗಿ ಬಂದಿದ್ದರೂ, ದೇಶಕ್ಕೆ ಭಾರಿ ಹೊಡೆತವೇನೂ (ಚೀನಾಕ್ಕೆ ಹೋಲಿಸಿದರೆ) ಬಿದ್ದಿಲ್ಲ.
ಗಣಿಗಾರಿಕೆ, ತಯಾರಿಕೆ, ನಿರ್ಮಾಣ, ವ್ಯಾಪಾರ, ಹೋಟೆಲ್, ಸಾರಿಗೆ, ಸಂಗ್ರಹಾಗಾರ, ವಿತ್ತೀಯ ಕೆಲಸ ಕಾರ್ಯಗಳೆಲ್ಲವೂ ಎರಡು ತಿಂಗಳು ಬಂದ್ ಆಗಿದ್ದವು. ಈ ಕ್ಷೇತ್ರಗಳ ವಾರ್ಷಿಕ ದುಡಿಮೆ 152 ಲಕ್ಷ ಕೋಟಿ ರೂ. ಎರಡು ತಿಂಗಳು ಬಂದ್ ಆಗಿದ್ದರಿಂದ ಸುಮಾರು 25 ಲಕ್ಷ ಕೋಟಿ ರೂ. ನಷ್ಟ. ಅದಕ್ಕೆ 5 ಲಕ್ಷ ಕೋಟಿ ರೂ. ಉತ್ತೇಜನ ಪ್ಯಾಕೇಜ್ ನೀಡಿದ ಕಾರಣ, ಒಟ್ಟು 20 ಲಕ್ಷ ಕೋಟಿ ರೂ. ನಷ್ಟ. ಒಟ್ಟು ಮೌಲ್ಯ ವರ್ಧನೆ (GVA) ನಷ್ಟವಾಗಿದ್ದು ಶೇ.23ರಷ್ಟು.
ಇದರರ್ಥವೇನೆಂದರೆ, ಇಷ್ಟರ ಮಟ್ಟಿಗೆ ಬಂದ್ ಮಾಡಲಾಗಿದ್ದರೂ, ಈ ಕ್ಷೇತ್ರಗಳು ಉತ್ತಮವಾಗಿಯೇ ನಿರ್ವಹಣೆ ತೋರಿವೆ ಎಂದಾಯಿತು. ಈ ರೀತಿ ಬೊಬ್ಬಿಡುವವರಿಗಾಗಿ, ಶಟ್ ಡೌನ್ ಅವಧಿಯ ಜಿಡಿಪಿಯನ್ನು ಪ್ರತ್ಯೇಕವಾಗಿಯೇ ಲೆಕ್ಕಾಚಾರ ಹಾಕಿ ತೋರಿಸಬೇಕು. ಇದರಿಂದಲಾದರೂ, ಒಂದು ಸೂಕ್ತ ಚರ್ಚೆಗೆ ಅದು ವೇದಿಕೆಯೊದಗಿಸಬಹುದು ಮತ್ತು ಪ್ರಸ್ತುತ ಅನಕ್ಷರಸ್ಥರಿಂದ ಒಂದಿಷ್ಟು ವಿನಾಯಿತಿ ದೊರೆಯಬಹುದು.
ಕೆಲವು ಮಾಧ್ಯಮಗಳು ಅನಕ್ಷರಸ್ಥರಂತೆ ವರ್ತಿಸುತ್ತಿವೆ. ಕೆಲವರಂತೂ ಕೋವಿಡ್ ಕಾಲಕ್ಕಿಂತ ಒಂದಿಷ್ಟು ಹಿಂದೆ ಹೋಗಿ, ಆಗೇನಾಗಿತ್ತು ಜಿಡಿಪಿಗೆ ಅಂತ ಕೇಳ್ತಿದಾರೆ. ಸರ್ಕಾರ ಮತ್ತು ಆರ್ಬಿಐ ನಡುವೆ ಸಣ್ಣ ತಿಕ್ಕಾಟದಿಂದ ಸ್ವಲ್ಪ ಹಿನ್ನಡೆಯಾಗಿದ್ದು ಹೌದಾದರೂ, ಭಾರತಕ್ಕಿಂತಲೂ, ಇಡೀ ಜಗತ್ತಿನ ಆರ್ಥಿಕತೆಯೇ ಕುಸಿದಿತ್ತು. 2019-20ರಲ್ಲಿ ಇಡೀ ಜಗತ್ತಿನಲ್ಲೇ ಹಣಕಾಸು ಪರಿಸ್ಥಿತಿ ಪತನ ಕಂಡಿತ್ತಲ್ಲಾ? ಇದು ಗುರುಮೂರ್ತಿಯವರ ಪ್ರಶ್ನೆ.
ಪರಿಸ್ಥಿತಿ ಹೀಗಿರುವಾಗ, ಮೋದಿಯನ್ನು ಟೀಕಿಸುವವರೆಲ್ಲರೂ ಒಂದು ದಿನ ಆರೋಗ್ಯ ತಜ್ಞರಾಗುತ್ತಿದ್ದಾರೆ, ಮತ್ತೊಂದು ದಿನ ಆರ್ಥಿಕ ತಜ್ಞರಾಗುತ್ತಾರೆ, ಇನ್ನೊಂದು ದಿನ ಕಾನೂನು ತಜ್ಞರಾಗುತ್ತಿದ್ದಾರೆ, ಮಗದೊಂದು ದಿನ ಶಿಕ್ಷಣ ತಜ್ಞರಾಗುತ್ತಾರೆ. ಎಲ್ಲವೂ ಮೋದಿಗಾಗಿ, ಐ ಮೀನ್ ಮೋದಿ ವಿರೋಧಕ್ಕಾಗಿ!

Average Rating