ಮುಂಬಯಿ: ಹಿಂದಿ ಚಿತ್ರರಂಗದಲ್ಲಿ ಸ್ವಜನ ಪಕ್ಷಪಾತತನ ಜೊತೆಗೆ ಡ್ರಗ್ಸ್ ಮಾಫಿಯಾದ ಇಂಚಿಂಚು ಮಾಹಿತಿಯನ್ನು ಹೊರಗೆಡಹಲು ಸಿದ್ಧವಾಗಿರುವ ನಟಿ ಕಂಗನಾ ರಾಣಾವತ್ ವಿರುದ್ಧ ತಿರುಗಿಬಿದ್ದಿರುವ ಆಡಳಿತಾರೂಢ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಕೂಟವು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದೆ.
ದುಷ್ಟಕೂಟದ ರಹಸ್ಯಗಳನ್ನು ಹೊರಗೆಡಲು ನಿರ್ಧರಿಸಿರುವ ಒಬ್ಬ ಮಹಿಳೆಯ ವಿರುದ್ಧ ಎಲ್ಲರೂ ತಿರುಗಿಬಿದ್ದಿರುವುದು ಒಂದೆಡೆ ಚರ್ಚೆಗೆ ಕಾರಣವಾಗುತ್ತಿದ್ದರೆ, ಶಿವಸೇನೆಯು ಬಾಲಿವುಡ್‌ನಲ್ಲಿನ ಕರಾಳ ದಂಧೆಗಳಿಗೆ ಬೆಂಬಲ ನೀಡುತ್ತಿದೆಯೇ ಎಂಬುದು ಮತ್ತೊಂದು ಕಡೆ ಚರ್ಚೆಯಾಗುತ್ತಿರುವ ಸಂಗತಿ.
ಈ ಬೆಳವಣಿಗೆಗಳ ಮಧ್ಯೆ ಆಘಾತಕಾರಿ ಘಟನೆಯೊಂದರಲ್ಲಿ ಶಿವಸೇನೆಯ ಆರು ಮಂದಿ ಗೂಂಡಾಗಳು ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್ ಶರ್ಮಾ (62) ಎಂಬವರ ಮೇಲೆ ಹಲ್ಲೆ ನಡೆಸಿರುವುದು ಹಾಗೂ ಅದನ್ನು ಶಿವಸೇನೆ ಸಮರ್ಥಿಸಿಕೊಂಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ನಿವೃತ್ತ ಸೇನಾಧಿಕಾರಿ ಮೇಲೆಯೇ ಹಲ್ಲೆ ನಡೆಸಿದವರನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರಾದರೂ, ಆರು ಮಂದಿಗೆ 24 ಗಂಟೆಗಳೊಳಗೆ ಜಾಮೀನು ಸಿಕ್ಕಿರುವುದು ಮುಂಬಯಿ ಪೊಲೀಸರು ಈ ಹಲ್ಲೆ ಪ್ರಕರಣದ ಬಗ್ಗೆ ಎಷ್ಟು ಗಂಭೀರವಾದ ಕೇಸುಗಳನ್ನು ಹಾಕಿದ್ದಿರಬಹುದು ಎಂಬ ಚರ್ಚೆ ಹುಟ್ಟುಹಾಕಿದೆ.
ಇಬ್ಬರು ಪ್ರಧಾನ ಆರೋಪಿಗಳಾದ ಶಿವಸೇನೆಯ ಶಾಖಾ ಪ್ರಮುಖರಾದ ಕಮಲೇಶ್ ಕದಂ ಹಾಗೂ ಸಂಜಯ್ ಮಾಂಜ್ರೆ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದ್ದು, ಉಳಿದ ನಾಲ್ವರೂ ಸೆರೆಯಾಗಿದ್ದು, ಈಗ ಜಾಮೀನಿನ ಮೇಲೆ ಹೊರಬಂದಿದ್ದಾರೆ.
ವಾಟ್ಸ್ಆ್ಯಪ್‌ನಲ್ಲಿ ಸಂದೇಶವೊಂದನ್ನು ಫಾರ್ವರ್ಡ್ ಮಾಡಿದರೆಂಬ ಕ್ಷುಲ್ಲಕ ಕಾರಣಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನ ನಡೆದಿದೆ. ಮದನ್ ಶರ್ಮಾ ಅವರು ಕಾಂದೀವಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೂಂಡಾಗಳು ಶರ್ಮಾ ಅವರನ್ನು ಎಳೆದಾಡುತ್ತಿರುವುದು, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಪಾಳ ಮೋಕ್ಷ ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .
ಶಿವಸೇನಾ ಮುಖ್ಯಸ್ಥ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಅವರ ಮಿತ್ರ ಪಕ್ಷಗಳ ಮುಖ್ಯಸ್ಥರಾದ ಶರದ್ ಪವಾರ್ ಹಾಗೂ ಸೋನಿಯಾ ಗಾಂಧಿಯವರ ಕುರಿತ ಕಾರ್ಟೂನ್ ಒಂದನ್ನು ಶರ್ಮಾ ಶೇರ್ ಮಾಡಿದ್ದರು.
ಈ ಬಗ್ಗೆ ಟಿವಿಗೆ ಪ್ರತಿಕ್ರಿಯಿಸಿರುವ ಶರ್ಮಾ ಅವರ ಪುತ್ರ ಸನ್ನಿ, ಮಹಾರಾಷ್ಟ್ರದಲ್ಲಿ ಪರಿಸ್ಥಿತಿಯೇ ವಿಚಿತ್ರವಾಗಿ ಬದಲಾಗಿದೆ ಮತ್ತು ಆತಂಕಕಾರಿಯಾಗಿದೆ. ಯಾರೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೂ ಅವರನ್ನು ಬೆದರಿಸಲಾಗುತ್ತಿದೆ ಮತ್ತು ಥಳಿಸಲಾಗುತ್ತಿದೆ. ಅರುವತ್ತೈದು ವರ್ಷದವರಿಗೇ ಹೊಡೆಯುತ್ತಾರೆ, ಯಾರದ್ದೋ ಮನೆಗೆ ಹೋಗಿ, ಹೊರಗೆ ಬರುವಂತೆ ಕರೆದು ಥಳಿಸುತ್ತಾರೆ ಎಂದಾದರೆ, ಇದು ಕೂಡ ಪಾಕ್ ಆಕ್ರಮಿತ ಕಾಶ್ಮೀರದ ಮಾದರಿಯಲ್ಲೇ ಇದ್ದಂತಾಗಿದೆ ಎಂದವರು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶರ್ಮಾ ಅವರ ಪುತ್ರಿ, ತಮ್ಮ ತಂದೆಗೆ 10-15 ಬೆದರಿಕೆ ಕರೆಗಳು ಬಂದಿವೆ. ಹಲ್ಲೆ ನಡೆದ ಬಳಿಕ ನಮ್ಮ ತಂದೆಯನ್ನು ಬಂಧಿಸಲೆಂದು ಪೊಲೀಸರೂ ಬಂದಿದ್ದರು. ಸ್ಥಳೀಯ ರಾಜಕೀಯ ಮುಖಂಡರೊಬ್ಬರನ್ನು ಸಂಪರ್ಕಿಸಿದ ಬಳಿಕವಷ್ಟೇ ನಮಗೆ ಸಹಾಯ ದೊರೆಯಿತು ಎಂದಿರುವ ಅವರು, ಮಹಾರಾಷ್ಟ್ರದಲ್ಲಿ ಯಾರಿಗೂ ಸುರಕ್ಷೆಯಿಲ್ಲ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗಿದೆ ಎಂದು ಆಗ್ರಹಿಸಿದರು.
ಇದೂ ಓದಿ: ಅಹಂಕಾರಕ್ಕೂ ಇದೇ ಶಾಸ್ತಿಯಾಗಲಿದೆ: ಉದ್ಧವ್ ಠಾಕ್ರೆಗೆ Kangana Ranaut ಎಚ್ಚರಿಕೆ
ವೃದ್ಧರನ್ನೂ ಹೊಡೆಯುವ ನಾಚಿಕೆಗೇಡಿನ ವಿಷಯಕ್ಕೆ ಸಮರ್ಥನೆ
ಆದರೆ, ಈ ನಾಚಿಕೆಗೇಡಿನ ವಿಷಯವನ್ನು ಕಾಂಗ್ರೆಸ್, ಎನ್‌ಸಿಪಿ ಬೆಂಬಲ ಪಡೆದು ಅಚಾನಕ್ಕಾಗಿ ಅಧಿಕಾರ ಪಡೆದುಕೊಂಡಿರುವ ಶಿವಸೇನೆ ಸಮರ್ಥಿಸಿಕೊಂಡಿದೆ.
ನಿವೃತ್ತ ಸೇನಾಧಿಕಾರಿ ಮೇಲೆ ನಡೆಸಿದ ದಾಳಿಗೆ ದಿಢೀರ್ ಕೋಪವೇ ಕಾರಣವಾಗಿತ್ತು. ಯಾಕೆಂದರೆ ಸಿಎಂ ಉದ್ಧವ್ ಠಾಕ್ರೆಯನ್ನು ಅವಮಾನಿಸುವಂಥ ಕಾರ್ಟೂನ್ ಅದು ಎಂದು ಶಿವಸೇನಾ ವಕ್ತಾರ, ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಅಷ್ಟೇ ಅಲ್ಲ, “ಮಹಾರಾಷ್ಟ್ರಕ್ಕೆ ತನ್ನದೇ ಆದ ಕಾನೂನಿದೆ. ಕಾನೂನು ಕೈಗೆತ್ತಿಕೊಂಡವರನ್ನು ಯಾರನ್ನೂ ಬಿಡುವುದಿಲ್ಲ. ಇದು ಉದ್ಧವ್ ಠಾಕ್ರೆ ನೀತಿ” ಎಂದೂ ಹೇಳಿದ್ದಾರೆ.
ಈ ಹಿಂದೆ, ಬಾಲಿವುಡ್ ಅನ್ಯಾಯಗಳ ಬಗ್ಗೆ ಧ್ವನಿಯೆತ್ತಿರುವ ನಟಿ ಕಂಗನಾ ಮನೆಯನ್ನೇ ಧ್ವಂಸ ಮಾಡಿಸುವ ಪ್ರಯತ್ನ ಮಾಡಲಾಗಿತ್ತು. ಬಾಲಿವುಡ್‌ನ ದುಷ್ಟಶಕ್ತಿಗಳ ಜೊತೆಗೆ ಠಾಕ್ರೆ ಕುಟುಂಬದ ನಂಟು ಇದೆ ಎಂಬ ಆರೋಪಗಳೂ ಕೇಳಿಬಂದಿದ್ದು, ಇದಕ್ಕಾಗಿಯೇ ಕಂಗನಾ ಬಾಯಿ ಮುಚ್ಚಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

Average Rating