ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸಬೇಕು, ಈ ಮೂಲದ ಭಾರತದ ಹೆಸರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಸಿ ಬಳಿಯಬೇಕು ಎಂಬ ಏಕೈಕ ಉದ್ದೇಶದಿಂದ ನಡೆದ ಹಿಂಸಾಚಾರ, ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕೊನೆಗೂ ‘ಟುಕ್ಡೇ ಟುಕ್ಡೇ ಗ್ಯಾಂಗ್’ನ, ಉಮರ್ ಖಾಲಿದ್ನನ್ನು ಬಂಧಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಯಿಂದ ಭಾರತದ ಪ್ರಜೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದು ಎಂದು ಗೊತ್ತಿದ್ದರೂ, ಭಾರತದ ಹೆಸರು ಕೆಡಿಸುವುದಕ್ಕಾಗಿ ಬೆಂಕಿ ಹಚ್ಚಿ, ಗಲಭೆಗೆ ಪ್ರಚೋದಿಸಿ, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳುಗೆಡಹಲಾಗಿತ್ತು.
ಜವಾಹರಲಾಲ್ ನೆಹರು ಯುನಿವರ್ಸಿಟಿಯ (JNU) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ನನ್ನು ಭಾನುವಾರ ದೆಹಲಿ ಪೊಲೀಸರ ವಿಶೇಷ ದಳವು ಕಾನೂನುವಿರೋಧಿ ಚಟುವಟಿಕೆ ತಡೆ (UAPA) ಕಾಯ್ದೆಯಡಿ ಬಂಧಿಸಿದ್ದು, ಆತನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆದ ಗಲಭೆ/ಹಿಂಸಾಚಾರವು ಪೂರ್ವಯೋಜಿತವಾಗಿದ್ದು, ಇದನ್ನು ಯೋಜಿಸಿದವರಲ್ಲಿ ಖಾಲಿದ್, ಡ್ಯಾನಿಷ್ ಮತ್ತು ಇತರ ಸಂಘಟನೆಯ ಇಬ್ಬರು ಸೇರಿದ್ದರು ಎಂದು ಪೊಲೀಸರ ಎಫ್ಐಆರ್ನಲ್ಲಿ ತಿಳಿಸಲಾಗಿದೆ. ಆರೋಪಿಗಳ ವಿರುದ್ಧ ರಾಜದ್ರೋಹ, ಕೊಲೆ, ಕೊಲೆಯತ್ನ, ಧರ್ಮದ ಆಧಾರದಲ್ಲಿ ಗುಂಪುಗಳ ನಡುವೆ ದ್ವೇಷ ಮೂಡಿಸಿರುವುದು ಮತ್ತು ದಂಗೆಯ ಆರೋಪಗಳನ್ನು ದಾಖಲಿಸಲಾಗಿದೆ.
ಈಶಾನ್ಯ ದೆಹಲಿಯಲ್ಲಿ ಮೋದಿ ಸರ್ಕಾರವನ್ನು ವಿರೋಧಿಸಿ, ದೇಶಕ್ಕೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶಕ್ಕಾಗಿ ಸಿಎಎ-ವಿರೋಧದ ನೆಪದಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ದಂಗೆಯು ಕೋಮುದಂಗೆಗೆ ತಿರುಗಿತ್ತು ಮತ್ತು 53 ಜನರು ಸಾವನ್ನಪ್ಪಿದ್ದರು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಉಮರ್ ಖಾಲಿದ್ ಎರಡು ಕಡೆಗಳಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ಸಂದರ್ಭದಲ್ಲಿ ಜನರು ಬೀದಿಗೆ ಬಂದು ರಸ್ತೆ ತಡೆ ನಡೆಸುವಂತೆ ಜನರಿಗೆ ಪ್ರಚೋದನೆ ನೀಡಿದ್ದ. ಭಾರತದಲ್ಲಿ ಅಲ್ಪಸಂಖ್ಯಾತರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನು ಅಂತರರಾಷ್ಟ್ರೀಯ ಸಮುದಾಯದ ಎದುರು ತೋರಿಸುವುದಕ್ಕಾಗಿಯೇ ಈ ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy .
ಈ ಒಳಸಂಚಿನ ಭಾಗವಾಗಿ, ಮದ್ದುಗುಂಡುಗಳು, ಪೆಟ್ರೋಲ್ ಬಾಂಬ್ಗಳು, ಆ್ಯಸಿಡ್ ಬಾಟಲಿಗಳು ಮತ್ತು ಕಲ್ಲುಗಳನ್ನು ಕರ್ದಮ್ಪುರ್, ಜಾಫ್ರಾಬಾದ್, ಚಾಂದ್ ಬಾಗ್, ಗೋಕುಲ್ಪುರಿ, ಶಿವ ವಿಹಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಆರೋಪಿ ಡ್ಯಾನಿಷ್ಗೆ ವಿವಿಧ ಭಾಗಗಳಲ್ಲಿ ಜನರನ್ನು ಒಟ್ಟುಗೂಡಿಸಿ, ಹಿಂಸಾಚಾರದಲ್ಲಿ ಭಾಗವಹಿಸುವಂತೆ ಮಾಡುವ ಜವಾಬ್ದಾರಿ ವಹಿಸಲಾಗಿತ್ತು.
ಫೆ.23ರಂದು ಅಕ್ಕಪಕ್ಕದ ಜನರಲ್ಲಿ ಆತಂಕ ಉಂಟು ಮಾಡುವ ಸಲುವಾಗಿ ಜಾಫ್ರಾಬಾದ್ ಮೆಟ್ರೋ ಸ್ಟೇಶನ್ನಲ್ಲಿ ಮಹಿಳೆಯರು, ಮಕ್ಕಳನ್ನೂ ಸೇರಿಸಿ, ರಸ್ತೆ ತಡೆ ನಡೆಸಲಾಗಿತ್ತು. ಅದೇ ದಿನ ಅಲ್ಪಸಂಖ್ಯಾತ ಮಕ್ಕಳಿರುವ ಶಾಲೆಗಳನ್ನು ಮೊದಲೇ ಯೋಜಿಸಿದಂತೆ ಖಾಲಿ ಮಾಡಲಾಗಿತ್ತು ಎಂದು ಎಫ್ಐಆರ್ ಹೇಳಿದೆ.
ಈ ಗಲಭೆ ನಡೆಯುವ ಒಂದು ತಿಂಗಳಿಗೂ ಮೊದಲೇ ಅಂದರೆ 2020ರ ಜನವರಿ 8ರಂದು, ದೆಹಲಿಯ ಕೌನ್ಸಿಲರ್ (ಈಗ ಆಮ್ ಆದ್ಮೀ ಪಕ್ಷದಿಂದ ಅಮಾನತುಗೊಂಡ) ತಾಹಿರ್ ಹುಸೇನ್ ಕೂಡ ಉಮರ್ ಖಾಲಿದ್ ಮತ್ತು ಖಾಲಿದ್ ಸೈಫಿ ಎಂಬಾತನನ್ನು ಭೇಟಿಯಾಗಿದ್ದ. ಇವರೆಲ್ಲರೂ ಶಾಹಿನ್ ಬಾಗ್ ಸಿಎಎ-ವಿರೋಧಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದವರು.
ಟ್ರಂಪ್ ಭೇಟಿಯ ವೇಳೆ ಏನಾದರೂ ‘ದೊಡ್ಡ ಮಟ್ಟದ’/ದಂಗೆಗೆ ಸಿದ್ಧವಾಗುವಂತೆ ತಾಹಿರ್ಗೆ ಈ ಉಮರ್ ಖಾಲಿದ್ ಹೇಳಿದ್ದ. ಇದಕ್ಕೆ ತಾಹಿರ್ ಹುಸೇನ್ಗೆ ಪಿಎಫ್ಐ ಸದಸ್ಯರು ಹಣಕಾಸು ನೆರವು ನೀಡುತ್ತಾರೆ ಎಂದೂ ಭರವಸೆ ನೀಡಲಾಗಿತ್ತು ಎಂದುದೆಹಲಿ ಪೊಲೀಸರು ತಾಹಿರ್ ಹುಸೇನ್ ವಿರುದ್ಧ ಕಲ್ಕದ್ರುಮ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಚಾರ್ಜ್ಶೀಟ್ನಲ್ಲಿ ಹೇಳಿದ್ದರು.
53 ಮಂದಿಯ ವೃಥಾ ಸಾವಿಗೆ ಕಾರಣವಾಗಿದ್ದ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 1575 ಮಂದಿಯನ್ನು ಬಂಧಿಸಿದ್ದು, 1153 ಮಂದಿ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದೆ. ಇಬ್ಬರು ಪೊಲೀಸರೂ ಈ ಗಲಭೆಯಲ್ಲಿ ಬಲಿಯಾಗಿದ್ದು, ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿದ್ದವು.

Average Rating