Read Time:13 Minute, 48 Second

ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿದ್ದರೂ PM Cares ಫಂಡ್ ಯಾಕೆ? ನಿರ್ಮಲಾ ಸೀತಾರಾಮನ್ ವಾದಕ್ಕೆ ಕಾಂಗ್ರೆಸ್ ಗಪ್‌ಚುಪ್!

0 0

ಪಕ್ಷದ ಸೊತ್ತಾಗಿರುವ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ಬಗ್ಗೆ ಕೇಂದ್ರ ವಿತ್ತ ಸಚಿವರೇನು ಹೇಳಿದರು ಗೊತ್ತೇ?

ಮುಖ್ಯಾಂಶಗಳು

ಪಿಎಂ ಕೇರ್ಸ್ ನೋಂದಾಯಿತ ಸಂಸ್ಥೆ, ಕಾಂಗ್ರೆಸ್ ಸರ್ಕಾರ ತಂದಿರುವ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ನೋಂದಣಿಯಾಗಿಲ್ಲ

ಪಿಎಂ ಕೇರ್ಸ್ ನಿಧಿಯಲ್ಲಿ ಪ್ರಧಾನಿ, ಗೃಹ ಸಚಿವ, ರಕ್ಷಣಾ ಸಚಿವರು, ವಿತ್ತ ಸಚಿವರು ಮತ್ತಿತರರು ಟ್ರಸ್ಟಿಗಳು, PMNRFನಲ್ಲಿ ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷರು ಟ್ರಸ್ಟಿಗಳು.

ಪಿಎಂ ಕೇರ್ಸ್ ಏನೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಸಭೆ ನಡೆಸಿ, ನಡಾವಳಿ ದಾಖಲಾಗುತ್ತದೆ: PMNRF ನಲ್ಲಿ 1985ರ ಬಳಿಕ ಮೀಟಿಂಗ್ ನಡೆದೇ ಇಲ್ಲ.

ಪಿಎಂ ಕೇರ್ಸ್ ಹಾಗೂ PMNRF ಎರಡರ ಲೆಕ್ಕಪತ್ರ ನೋಡಿಕೊಳ್ಳುವುದು ಒಂದೇ ಸಂಸ್ಥೆ, ಪಿಎಂ ಕೇರ್ಸ್ ವಿವರ ವೆಬ್‌ಸೈಟ್‌ನಲ್ಲಿ ಎಲ್ಲರಿಗೂ ಸಿಗುತ್ತದೆ, PMNRF ಮಾಹಿತಿ ಇಲ್ಲ.

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್‌ಗೆ ಮುಟ್ಟಿಕೊಂಡು ನೋಡುವಂತಹಾ ಆಘಾತ ನೀಡಿದ್ದಾರೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ಇರುವಾಗ, ನರೇಂದ್ರ ಮೋದಿ ಸರ್ಕಾರ PM Cares (Prime Minister’s Citizen Assistance and Relief in Emergency Situations) ನಿಧಿ ಸ್ಥಾಪಿಸಿದ್ದೇಕೆ, ಪಾರದರ್ಶಕತೆಯೇ ಇಲ್ಲ ಎಂದು ಆರೋಪಿಸಿದ ಕಾಂಗ್ರೆಸ್ಸಂತೂ, ನಿರ್ಮಲಾ ಕೊಟ್ಟ ಏಟಿನಿಂದ ಮುಖ ಮುಚ್ಚಿಕೊಳ್ಳುವಂತಾಗಿದೆ.

ನಿರ್ಮಲಾ ನೀಡಿದ ವಿವರಣೆಯಿಂದ, ಕಾಂಗ್ರೆಸ್ ಸ್ಥಾಪಿಸಿದ ಪ್ರಧಾನಿ ಪರಿಹಾರ ನಿಧಿಯು ಅಮಾನ್ಯವಾಗಿದ್ದು, ಲೆಕ್ಕಪತ್ರವೂ ಸರಿಯಾಗಿಲ್ಲ. ಈ ಕಾರಣಕ್ಕಾಗಿಯೇ ನೋಂದಾಯಿತವಾದ, ಲೆಕ್ಕಪತ್ರವೆಲ್ಲವೂ ವೆಬ್‌ಸೈಟಿನಲ್ಲಿ ಲಭ್ಯವಿರುವ ಪಿಎಂ ಕೇರ್ಸ್ ಸ್ಥಾಪಿಸಬೇಕಾಯಿತು ಎಂಬುದು ತಿಳಿಯುತ್ತದೆ.

ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ಇರುವಾಗಲೂ ಪಿಎಂ ಕೇರ್ಸ್ ನಿಧಿ ಸ್ಥಾಪಿಸಿದೆ, ಇದರ ಲೆಕ್ಕಪತ್ರ ಪಾರದರ್ಶಕವಾಗಿಲ್ಲ ಎಂದು ಕಾಂಗ್ರೆಸ್ ಸದನ ನಾಯಕ ಅಧೀರ್ ರಂಜನ್ ಚೌಧುರಿ ಅವರು ಸೆ.19ರ ಶನಿವಾರ ಸಂಸತ್ತಿನಲ್ಲಿ ಆಕ್ಷೇಪಿಸಿದ್ದರು. ಎರಡೂ ಸಂಸ್ಥೆಗಳ ಗುರಿ ಒಂದೇ ಇರುವಾಗ, ಪಿಎಂ ಕೇರ್ಸ್ ಸ್ಥಾಪಿಸಿದ್ದೇಕೆ ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಸೌಗತ ರಾಯ್ ಪ್ರಶ್ನಿಸಿದ್ದರು. ಸದನದ ಹೊರಗೂ ಪಿಎಂ ಕೇರ್ಸ್ ನಿಧಿ ಬಗ್ಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸಾಕಷ್ಟು ಅಪಪ್ರಚಾರ ನಡೆಸಿದ್ದವು.

ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.

ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

ಅಂದು ಸಂಸತ್ತಿನಲ್ಲಿ ಈ ಕುರಿತ ಚರ್ಚೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್ ಎರಡೂ ಫಂಡ್‌ಗಳ ವ್ಯತ್ಯಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟಾಗ ಜನರಿಗೂ ಸತ್ಯದ ಅರಿವಾಗಲಾರಂಭಿಸಿದ್ದರೆ, ಕಾಂಗ್ರೆಸ್ ಸ್ಥಾಪಿಸಿದ ರಾಷ್ಟ್ರೀಯ ಪರಿಹಾರ ನಿಧಿಯ ಬಳಕೆಯ ಬಗ್ಗೆ ಸಂದೇಹದ ಕಾರ್ಮೋಡ ಗೋಚರಿಸಲಾರಂಭಿಸಿದೆ.

ಕೋವಿಡ್ ಸಂಕಷ್ಟ ಕಾಲದಲ್ಲಿ ಸ್ಥಾಪಿಸಲಾಗಿದ್ದ PM Cares ನಿಧಿಯಿಂದ ಏನೆಲ್ಲಾ ಪ್ರಯೋಜನಗಳಾಗಿವೆ, 3100 ಕೋಟಿ ರೂ. ಹೇಗೆ ವ್ಯಯಿಸಲಾಗುತ್ತದೆ ಎಂದು ಪ್ರಧಾನಿಯವರು ಇಲ್ಲಿ ವಿವರಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೊ ತುಣುಕು

ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ರಿಜಿಸ್ಟ್ರೇಶನ್ ಬಗ್ಗೆ
ನರೇಂದ್ರ ಮೋದಿ ಸರ್ಕಾರದ ಪಿಎಂ ಕೇರ್ಸ್ ಫಂಡ್, ನೋಂದಣಿಯಾಗಿರುವ ಅಧಿಕೃತ ಸಂಸ್ಥೆ. ಆದರೆ, ಕಾಂಗ್ರೆಸ್ ಸರ್ಕಾರವು ಆರಂಭಿಸಿದ್ದ ಪಿಎಂ ನ್ಯಾಷನಲ್ ರಿಲೀಫ್ ಫಂಡ್, ಯಾವತ್ತೂ ನೋಂದಣಿಯಾಗಿಲ್ಲ. ಹಾಗಿದ್ದರೆ, ಎಲ್ಲಿ ಹೋಯಿತು ನಿಮ್ಮ ಪಾರದರ್ಶಕತೆ? ನಮ್ಮದು ಪಾರದರ್ಶಕವಾದ ನಿಧಿ ಎನ್ನುತ್ತಾ ನಿರ್ಮಲಾ ಎಲ್ಲವನ್ನೂ ತೆರೆದಿಟ್ಟರು. ಅವರ ಮಾತುಗಳಲ್ಲೇ ಕೇಳಿ.

ಚಾರಿಟಿಯಂತೆಯೇ ಪಾರದರ್ಶಕತೆಯೂ ನಮ್ಮ ಮನೆಯಿಂದಲೇ ಆರಂಭವಾಗಬೇಕು. ಮೊದಲು ನಿಮ್ಮ ಮನೆಯನ್ನು ಸುಸೂತ್ರವಾಗಿಟ್ಟುಕೊಳ್ಳಿ. ಹಾಗಿದ್ದರೆ ಇಲ್ಲಿ ಇಷ್ಟೊಂದು ಕೂಗಾಟ, ಅರಚಾಟ ಯಾಕೆ? ಇದೋ ಇಲ್ಲಿದೆ ಸತ್ಯ ಸಂಗತಿ.

ಕುಟುಂಬದ ನೇತೃತ್ವವಿರುವ ಒಂದು ಪಕ್ಷಕ್ಕೆ ಮಾತ್ರ ಇದರಲ್ಲಿ ಸ್ಥಾನವಿದೆ. ಬೊಬ್ಬಿಡಬೇಡಿ. ಇನ್ನು ಬೊಬ್ಬೆ ಹಾಕುವುದಂತೂ ಸಾಧ್ಯವೇ ಇಲ್ಲ. ನಮ್ಮ ಪ್ರಶ್ನೆಗೆ ನಿಮ್ಮಿಂದ ಉತ್ತರ ಎಲ್ಲಿಯವರೆಗೆ ಸಿಗುವುದಿಲ್ಲವೋ, ನಮ್ಮಲ್ಲಿ ಒಂದೇ ಒಂದು ಪ್ರಶ್ನೆ ಕೇಳುವ ಅಧಿಕಾರ ನಿಮಗೆ ಇಲ್ಲವೇ ಇಲ್ಲ.

ಪಿಎಂ ಕೇರ್ಸ್ ಬಗ್ಗೆ ಪಾರದರ್ಶಕವಾಗಿರಬೇಕು ಅಂತ ಕೇಳಿದ್ದೀರಲ್ಲಾ, ನಮಗಂತೂ ತುಂಬಾ ಖುಷಿಯಿದೆ ಈ ಬಗ್ಗೆ.

1948ರಲ್ಲಿ ಅಂದಿನ ಪ್ರಧಾನಿಯವರು ಕಾಂಗ್ರೆಸ್ ಅಧ್ಯಕ್ಷರನ್ನು ಈ ನೋಂದಣಿಯಾಗದಿರುವ ನಿಧಿ (ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿ)ಯಲ್ಲಿ ಶಾಶ್ವತ ಸದಸ್ಯತ್ವ ನೀಡಿ ನೇಮಕ ಮಾಡುತ್ತಾರೆ. ಇಂದಿಗೂ ಕೂಡ ಅದನ್ನು ನೋಂದಾಯಿಸಬೇಕೆಂದು ನೀವ್ಯಾರೂ ಕೇಳಿಲ್ಲದಿರುವುದು ವಿಷಾದನೀಯ. ಯಾಕೆಂದು ನನಗರ್ಥವಾಗುತ್ತಿಲ್ಲ. ನೀವು ಕೇಳಬೇಕಿತ್ತಲ್ಲ, ‘ಅರೆ, ನಾವು ಟ್ರಸ್ಟ್ ನಡೆಸುತ್ತಿದ್ದೇವೆ. ನೀವ್ಯಾಕೆ ಅದನ್ನು ನೋಂದಾಯಿಸಿಲ್ಲ? ನೋಂದಾಯಿಸಿಬಿಡಿಯಲ್ಲ!’ ಅಂತ ನೀವೇ ಕೇಳಬೇಕಿತ್ತಲ್ಲಾ…

ಇಲ್ಲ, ಆ ಪಕ್ಷದಿಂದ ಒಂದೇ ಒಂದು ಧ್ವನಿಯೂ ಹೊರಗೆ ಬರಲೇ ಇಲ್ಲ. ಈಗ 50 ವರ್ಷಗಳ ನಂತರ, 23 ಸಂಸದರು ಪತ್ರ ಬರೆಯಬೇಕಾಯಿತು. ಆದರೆ, ನೀವು ಈಗಲೂ ನೋಂದಾಯಿಸಲು ಕೇಳಿಲ್ಲ. ಇದಕ್ಕಾಗಿಯೇ ಎಲ್ಲ ವಿರೋಧ ಪಕ್ಷಗಳಿಗೆ ನಾನು ಬಲವಾಗಿ ಹೇಳಲಿಚ್ಛಿಸುವ ಒಂದು ಅಂಶವಿದೆ; ಸಮಾಜಸೇವೆಯಂತೆಯೇ ಪಾರದರ್ಶಕತೆಯೂ ನಮ್ಮ ಮನೆಯೊಳಗಿನಿಂದಲೇ ಆರಂಭವಾಗಬೇಕು. ನಿಮ್ಮ ಮನೆಯನ್ನು ಮೊದಲು ವ್ಯವಸ್ಥಿತವಾಗಿಟ್ಟುಕೊಳ್ಳಿ.

ನೋಂದಣಿ? ಪಿಎಂ ಕೇರ್ಸ್ ಫಂಡ್ ನೋಂದಾಯಿತ ಸಂಸ್ಥೆ. ಆದರೆ, ಕಾಂಗ್ರೆಸ್‌ನ ಪಿಎಂ ನ್ಯಾಷನಲ್ ರಿಲೀಫ್ ಫಂಡ್, ನೋಂದಣಿಯೇ ಆಗದ ಸಂಸ್ಥೆ! ಎಲ್ಲಿ ಹೋಯಿತು ನಿಮ್ಮ ಪಾರದರ್ಶಕತೆ?

ಎರಡನೆಯದು. ಯಾವ ಉದ್ದೇಶಕ್ಕಾಗಿ ರಚಿಸಲಾಗಿದೆ? ಅದನ್ನು ಓದುತ್ತಾ ಹೋದರೆ, ಎರಡೂ ನಿಧಿಗಳ ಉದ್ದೇಶ ಒಂದೇ. ಯಾವುದೇ ರೀತಿಯ ತುರ್ತು ಸ್ಥಿತಿಗಳು ಅಥವಾ ಈಗ ಬಾಧಿಸುತ್ತಿರುವ ಕೋವಿಡ್‌ನಂತಹಾ ಆತಂಕಕಾರಿ ಪರಿಸ್ಥಿತಿಗಳ ನಿಭಾವಣೆಗೆ ಅಂತ ಪಿಎಂ ಕೇರ್ಸ್ ಫಂಡ್ ಹೇಳುತ್ತಿದೆ.

ಪಿಎಂ ರಾಷ್ಟ್ರೀಯ ಪರಿಹಾರ ನಿಧಿಯಲ್ಲಿ ಹೀಗಿದೆ- ನಿಧಿಯನ್ನು ಪ್ರಧಾನಿಯವರು ಘೋಷಿಸುವ ವಿವಿಧ ಯೋಜನೆಗಳಿಗೆ ಬಳಸಬೇಕು. ಅಲ್ಲದೆ, ವೈದ್ಯಕೀಯ ನೆರವು, ಪ್ರವಾಹ, ಬರ, ಭಯೋತ್ಪಾದಕತೆಯ ಹಿಂಸಾಚಾರ ಇತ್ಯಾದಿಗಳ ಪರಿಹಾರಕ್ಕೂ ಉಪಯೋಗಿಸುವುದು ಅಂತ ಇದೆ. ಎರಡರ ಉದ್ದೇಶವೂ ಒಳ್ಳೆಯದೇ.

ಅಷ್ಟಾಗಿಯೂ ಅಲ್ಲೊಂದು ಪ್ರಶ್ನೆ ಬಂತು. ಸಚಿವರು ಅದನ್ನೇ ನಿಮ್ಮಲ್ಲಿ ಕೇಳಿದರು. ದೇಶದ ಐದಾರು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿಯಿದೆ. ಆದರೆ, ಅದನ್ನು ಉದಾರವಾಗಿ ವಿತರಿಸಬೇಡಿ, ಯಾಕೆಂದ್ರೆ, ಜವಾಹರಲಾಲ್ ನೆಹರೂ ಮ್ಯೂಸಿಯಂಗೆ ಹಣ ಕಡಿಮೆಯಾಗಬಹುದು! ಅದು ನಿಜವೋ ಸುಳ್ಳೋ? ಸುಳ್ಳಾದರೆ ಹೇಳಿಬಿಡಿ, ಆದರೆ ನಿರಾಕರಿಸಿಬಿಡಿ. ಸುಮ್ಮನೇ ಕುಳಿತಿರಬೇಡಿ. ಅದು ಪ್ರತಿಪಕ್ಷ ನಾಯಕನಲ್ಲ, ವಿಶೇಷವಾಗಿ ಎಲ್ಲ ಪ್ರತಿಪಕ್ಷಗಳ ಸದನ ನಾಯಕನಿಗೆ ಈ ರೀತಿ ಮೌನವಾಗಿರುವುದು, ಉತ್ತರಿಸದಿರುವುದು ಶೋಭೆಯಲ್ಲ.

ನೀವು ನಿರ್ದಿಷ್ಟವಾಗಿ ಪಾರದರ್ಶಕತೆಯ ಬಗ್ಗೆ ಕೇಳುತ್ತೀರೆಂದಾದರೆ, ಆ ಪ್ರಶ್ನೆಗಳಿಗೆ ಉತ್ತರ ಕೊಡಿ. ಉತ್ತರ ಕೊಡದಿದ್ದರೆ, ನಮ್ಮನ್ನು ಪ್ರಶ್ನಿಸುವ ಅಧಿಕಾರ ನಿಮಗಂತೂ ಖಂಡಿತಾ ಇರುವುದಿಲ್ಲ.

ಇನ್ನು ಆಡಿಟ್ (ಲೆಕ್ಕಪತ್ರ) ಬಗ್ಗೆ. ಎರಡೂ ಸಂಸ್ಥೆಗಳ ಆಡಿಟ್ ನಡೆಸುವುದು SARC ಆ್ಯಂಡ್ ಅಸೋಸಿಯೇಟ್ಸ್. ಹಾಗಿದ್ದರೆ, ಪಾರದರ್ಶಕತೆ ಬಗ್ಗೆ ನಿಮಗೇಕೆ ಚಿಂತೆ? ಹೌದು, ನಿಮಗೆ ಚಿಂತೆಯಾಗಬೇಕು. ಯಾಕಂದ್ರೆ, ಆಡಿಟ್ ಆದ ಬಳಿಕ, ಸಹಾಯಕ ಸಚಿವರು ಹೇಳಿದಂತೆ, ಲೆಕ್ಕಪತ್ರ ವಿಚಾರವೆಲ್ಲವನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಆದರೆ, ಕಾಂಗ್ರೆಸ್ಸಿನ ಪ್ರಧಾನಿ ಪರಿಹಾರ ನಿಧಿಯಲ್ಲಿ ಹಿಂದಿನ ಅದೆಷ್ಟೋ ವರ್ಷಗಳಿಂದ ಒಂದೇ ಒಂದು ಸಭೆಯೂ ನಡೆದಿಲ್ಲವಲ್ಲ! 1985ರಿಂದೀಚೆಗೆ, ಒಂದೇ ಒಂದು ಸಭೆಯೂ ಆಗಿಲ್ಲ. ಇದೊಂದು ಸಾರ್ವಜನಿಕ ನಿಧಿಯಾಗಿರುವುದರಿಂದ, ಅವರಲ್ಲಿಯೂ ಸ್ವಲ್ಪ ಕೇಳಿರಲ್ಲಾ! ದಯವಿಟ್ಟು ಸಭೆ ಕರೆಯಿರಿ, ದಯವಿಟ್ಟು ಲೆಕ್ಕಪತ್ರ ತೋರಿಸಿ, ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಅಂತ!

ನಿರ್ಮಲಾ ಸೀತಾರಾಮನ್ ಹೀಗೆ ಹೇಳುತ್ತಿದ್ದಂತೆಯೇ, ಕಾಂಗ್ರೆಸ್ ಬೆಂಚುಗಳು ಗಪ್‌ಚುಪ್.

ದೊಡ್ಡ ವ್ಯತ್ಯಾಸವೇನು?
ಮುಂದುವರಿದು ವಿವರ ನೀಡಿದರು ನಿರ್ಮಲಾ. ಪಿಎಂ ಕೇರ್ಸ್ ಫಂಡ್ – ಪ್ರಧಾನಿಯೇ ನಿರ್ವಾಹಕರಾಗಿರುತ್ತಾರೆ ಮತ್ತು ಇತರ ಎಲ್ಲ ಟ್ರಸ್ಟಿಗಳು ಅವರ ಹುದ್ದೆಯ ಆಧಾರದಲ್ಲಿ ಇರುತ್ತಾರೆ, ಅಂದರೆ ಗೃಹ ಸಚಿವರು, ರಕ್ಷಣಾ ಸಚಿವರು, ವಿತ್ತ ಸಚಿವರು ಮತ್ತು ವಿಭಿನ್ನ ಕ್ಷೇತ್ರಗಳ ಹಿರಿಯ ತಜ್ಞರು ನಾಮನಿರ್ದೇಶಿತರಾಗಿರುತ್ತಾರೆ. (ಯಾವುದೇ ಸರ್ಕಾರ ಬಂದರೂ ಆಯಾ ಸರ್ಕಾರಗಳ ಸಚಿವರಿರುತ್ತಾರೆ). ಎಲ್ಲ ನಿರ್ಧಾರಗಳನ್ನು ಸಭೆ ನಡೆಸಿಯೇ ಕೈಗೊಳ್ಳಲಾಗುತ್ತದೆ ಮತ್ತು ಸಭೆಯ ನಡಾವಳಿಯನ್ನು ದಾಖಲಿಸಿಕೊಳ್ಳಲಾಗಿರುತ್ತದೆ.

ಕಾಂಗ್ರೆಸಿನ ಪಿಎಂ ನ್ಯಾಷನಲ್ ರಿಲೀಫ್ ಫಂಡ್‌ನ ಮ್ಯಾನೇಜ್‌ಮೆಂಟ್ ಹೇಗಿದೆ? ಪ್ರಧಾನ ಮಂತ್ರಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರು ಮಾತ್ರ ಇದರಲ್ಲಿದ್ದಾರೆ! ಒಂದು ಪಕ್ಷ ಮಾತ್ರ. ಮತ್ತು ಒಂದೇ ಪಕ್ಷ ಇದೆಯೆಂದಾದರೆ, ಇಲ್ಲಿ ಪಾರದರ್ಶಕತೆ ಆಯಿತೆಂದರ್ಥವೇ? ಆ ಕಾಲದಲ್ಲಿ ಜನಸಂಘ ಇತ್ತಲ್ಲಾ, ಅದರ ಹಿರಿಯ ಮುಖಂಡ ಶ್ಯಾಮಪ್ರಸಾದ ಮುಖರ್ಜಿಗೂ ಸ್ಥಾನ ನೀಡಬಹುದಿತ್ತಲ್ಲಾ? ಸಮಾಜವಾದಿಗಳಿದ್ದರು, ರಾಮ ಮನೋಹರ ಲೋಹಿಯಾರನ್ನು ಸೇರಿಸಿಕೊಳ್ಳಬಹುದಿತ್ತು. ಎಲ್ಲಿ ಹೋಯಿತು ನಿಮ್ಮ ಪಾರದರ್ಶಕತೆ?

ಈ ದೇಶದಲ್ಲಿ ಸಾವಿರಾರು ರಾಜಕೀಯ ಪಕ್ಷಗಳಿವೆಯಲ್ಲವೇ? ಜೀವನಪೂರ್ತಿ ಕಾಂಗ್ರೆಸ್ ಪಕ್ಷವೊಂದಕ್ಕೇ ಈ ಪರಿಹಾರ ನಿಧಿಯ ಆಜೀವ ಸದಸ್ಯತ್ವ! ಇದೇನು ಪಾರದರ್ಶಕತೆಯ ಮಾದರಿಯೇ? ಅವರನ್ನು ಸೇರಿಸಿಕೊಂಡಿದ್ದರೆ ಪಾರದರ್ಶಕ ಎನ್ನಬಹುದಿತ್ತು. ನನ್ನ ಕಾಂಗ್ರೆಸ್ ಅಧ್ಯಕ್ಷರು ಇದ್ದಾರೆ ಎಂದಾದರೆ ಮಾತ್ರವೇ ಪಾರದರ್ಶಕವಲ್ಲ!

ಕೊನೆಯಲ್ಲಿ, ತೆರಿಗೆ ಕಡಿತದ ಬಗ್ಗೆ. ಆದಾಯ ತೆರಿಗೆ ರಿಯಾಯಿತಿ ಹೇಗೆ ನೀಡಲಾಗುತ್ತದೆ? ಎರಡೂ ನಿಧಿಗೆ 80G ಅಡಿಯಲ್ಲಿ ತೆರಿಗೆ ರಿಯಾಯಿತಿಯಿದೆ. ಕಾರ್ಪೊರೇಟ್ ಕಂಪನಿಗಳ ಸಿಎಸ್ಆರ್ ನಿಧಿಯ ದೇಣಿಗೆಗಳು ಎರಡೂ ನಿಧಿಗಳಿಗೆ ಅನ್ವಯವಾಗುತ್ತವೆ.

ಹಾಗಿದ್ದರೆ ಇಷ್ಟೊಂದು ಕೂಗಾಟ, ಅರಚಾಟ ಯಾಕೆ?

ಯಾಕೆ ಎಂದರೆ, ಕುಟುಂಬ ರಾಜಕಾರಣದ ನೇತೃತ್ವದ ಒಂದೇ ಒಂದು ಪಕ್ಷ ಇಲ್ಲಿ ಸ್ಥಾನ ಪಡೆದಿದೆ, ಬೇರೆ ಯಾರಿಗೂ ಅವಕಾಶ ಇಲ್ಲ. ಅದನ್ನು ಕವರ್-ಅಪ್ ಮಾಡಿಕೊಳ್ಳುವುದು ಹೇಗೆ? ಇನ್ನೊಬ್ಬರ ಮೇಲೆ ಆರೋಪ ಹೊರಿಸಿ, ಇನ್ನೊಬ್ಬರ ವಿರುದ್ಧ ಕೂಗಾಡುತ್ತಾ ಇರಿ!

ಈ ವಿವರಗಳನ್ನು ನೋಡಿದರೆ, ಕಾಂಗ್ರೆಸ್‌ನ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಗೆ (PMNRF) ಸಂಗ್ರಹವಾಗಿರುವ ಹಣದ ಲೆಕ್ಕಾಚಾರ ಎಲ್ಲೂ ಇಲ್ಲ, ಈಗ ಪಿಎಂ ಕೇರ್ಸ್‌ಗೇ ದೇಣಿಗೆಗಳು ಹೋಗುವುದರಿಂದ ಅವರ ನಿಧಿ ಬಡವಾಯಿತು, ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ ಈ ರೀತಿ ಕೂಗಾಡುತ್ತಿದೆ ಎಂದು ತರ್ಕಿಸಲಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷರು ಟ್ರಸ್ಟಿಯಾಗಿರುವ ರಾಷ್ಟ್ರೀಯ ಪರಿಹಾರ ನಿಧಿಗೇ ಪಿಎಂ ಕೇರ್ಸ್‌ಗೆ ಬಂದಿರುವ ಹಣವನ್ನು ವರ್ಗಾಯಿಸುವಂತೆ ಕಾಂಗ್ರೆಸ್ ಯಾಕೆ ಆಗ್ರಹಿಸುತ್ತಿದೆ ಎಂಬ ಕಾರಣ ಈಗ ಗೊತ್ತಾಯಿತಲ್ಲಾ?

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಲಾಕ್‌ಡೌನ್ ದಿನಗಳಲ್ಲೂ ಉದ್ಯೋಗ: ಯೋಗಿ ಆದಿತ್ಯನಾಥ್ ಸರ್ಕಾರ ನಂ.1
Next post Farmer Protest | ಯುಪಿಎ ಕಾಲದ ರೈತರ ಚಿತ್ರ ಬಳಸಿ ಮೋದಿ ಕೃಷಿ ನೀತಿ ಟೀಕಿಸುತ್ತಿದೆ ಕಾಂಗ್ರೆಸ್

ಸುದ್ದಿ ಸಂಚಯ

ಇವುಗಳನ್ನೂ ನೋಡಿ