ನವದೆಹಲಿ/ಲಖನೌ: ಕೌಟುಂಬಿಕ ಕಲಹವೊಂದು ಅತ್ಯಾಚಾರವಾಗಿ ಪರಿವರ್ತನೆಗೊಂಡು, ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಸದ್ದು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಕೈಗೊಂಡ ದಿಟ್ಟ ಕ್ರಮಗಳು, ಸ್ವತಃ ವಿರೋಧ ಪಕ್ಷಗಳ ದಿಕ್ಕೆಡಿಸಿವೆ.
ಹಾತ್ರಸ್ನಲ್ಲಿ 19 ವರ್ಷದ ದಲಿತ ಮಹಿಳೆಯ ಸಾವಿನ ಘಟನೆ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಬೇಕೆಂದು ಯಾರ ಒತ್ತಾಯಕ್ಕೂ ಕಾಯದೆ ಸ್ವತಃ ಯೋಗಿ ಆದಿತ್ಯನಾಥ್ ಅವರೇ ಘೋಷಣೆ ಮಾಡಿರುವ ನಡೆಯು, ಯೋಗಿ ಮತ್ತು ಮೋದಿ ಸರ್ಕಾರಕ್ಕೆ, ವಿಶೇಷವಾಗಿ ಭಾರತದ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿರುವವರಿಗೆ ತೀವ್ರ ಅಚ್ಚರಿ, ಆಘಾತ ಮೂಡಿಸಿದೆ.
ಈಗಾಗಲೇ ಹಾತ್ರಸ್ ಘಟನೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿಯೆತ್ತುವಂತೆ ಮಾಡುವಲ್ಲಿ ವಿರೋಧ ಪಕ್ಷಗಳು ಸಫಲವಾಗಿದ್ದವು. ವಿದೇಶೀ ಎಡ ಪಂಥೀಯರು ಮತ್ತು ಭಾರತದ ವಿರುದ್ಧ ಬರೆಯಲು ಕಾತರಿಸುತ್ತಿರುವ ವಿದೇಶೀ ಮಾಧ್ಯಮಗಳ ಸಹಾಯದಿಂದ ಭಾರತದ ಹೆಸರಿಗೆ ಮಸಿ ಬಳಿಯುವ ಯತ್ನಕ್ಕೆ ಭಾರಿ ಚಾಲನೆ ಸಿಕ್ಕಿರುವಂತೆಯೇ ಯೋಗಿ ಕೈಗೊಂಡ ಈ ಕೆಚ್ಚೆದೆಯ ಕ್ರಮ ಎಲ್ಲರನ್ನೂ ಆಘಾತದಲ್ಲಿ ಕೆಡವಿದೆ.
ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ವಿರೋಧಿಸಿ, ಸುಳ್ಳು ಹೇಳಿಯೇ ಅನವಶ್ಯವಾಗಿ ದೇಶಾದ್ಯಂತ ಗಲಭೆ ಎಬ್ಬಿಸಿದ್ದ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ವಿರುದ್ಧ ಕೆಂಡ ಕಾರಿರುವ ಯೋಗಿ ಆದಿತ್ಯನಾಥ್, ಈ ಘಟನೆಯಲ್ಲೂ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಸುಳ್ಳು ಪ್ರಚಾರ ಮಾಡಿ ಗಲಭೆಗೆ ಕುಮ್ಮಕ್ಕು ನೀಡುವವರ ವಿರುದ್ಧ ಸಿಎಎ-ವಿರೋಧಿ ದಂಗೆ ನಡೆಸಿದವರ ಮೇಲೆ ಕೈಗೊಂಡಂತೆಯೇ ಕಠಿಣ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮಹಿಳೆ ಪರ ಹೋರಾಡಲು ರಾಜಕೀಯ ಹಂಗೇಕೆ?
ಹಾತ್ರಸ್ನಲ್ಲಿ ದಲಿತ ಯುವತಿಯ ಅತ್ಯಾಚಾರವಾಗಿದೆ ಎಂದು ಆರೋಪಿಸಿರುವ ಕುಟುಂಬಿಕರು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ಇದಕ್ಕೆ ಯೋಗಿ ಸರ್ಕಾರ ಸಮ್ಮತಿ ಸೂಚಿಸುವ ಮೂಲಕ ವಿರೋಧ ಪಕ್ಷಗಳ ಬಾಯಿ ಬಂದ್ ಆಗುವಂತೆ ಮಾಡಿದ್ದಾರೆ.
ವಾಸ್ತವವಾಗಿ ರಾಜ್ಯಗಳು ತಾವಾಗಿಯೇ ಯಾವುದೇ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವುದಿಲ್ಲ. ಇದಕ್ಕೆ ಕಾರಣವೆಂದರೆ, ತಮ್ಮ ವ್ಯವಸ್ಥೆಯ ಮೇಲೆಯೇ ಅಪನಂಬಿಕೆ ಎಂಬ ಕಳಂಕ ಅಂಟಿಕೊಳ್ಳಬಹುದೆಂಬ ಆತಂಕ. ಆದರೆ ದಿಟ್ಟತನ ತೋರಿದ ಯೋಗಿ ಆದಿತ್ಯನಾಥ್, ಯಾರ ಮುಲಾಜಿಗೂ ಒಳಗಾಗದೆ ಸಿಬಿಐ ತನಿಖೆಗೆ ತಾವಾಗಿಯೇ ಆದೇಶಿಸಿದ್ದಾರೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy
ಅಧಿಕಾರಿಗಳು ಹೆತ್ತವರ ಸಮ್ಮತಿಯಿಲ್ಲದೆಯೇ ಯುವತಿಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂಬ ಆರೋಪವು ಹೆಚ್ಚಿನ ಬಲ ಪಡೆದುಕೊಂಡು ಪ್ರತಿಭಟನೆಗೆ ಬಲ ನೀಡಿತ್ತು. ಇದೀಗ, ಸತ್ಯಾಂಶ ಹೊರಗೆಡಹುವುದಕ್ಕಾಗಿ ಸಿಬಿಐಗೆ ಒಪ್ಪಿಸಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಯೋಗಿ ಸರ್ಕಾರ, “ಕೆಲವು ಸಂಘಟನೆಗಳು ಹಿಂಸಾಚಾರಕ್ಕೆ ಪ್ರಯತ್ನಿಸುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಇದು ಅನಿವಾರ್ಯ” ಎಂದು ಹೇಳಿದೆ.
ಇದನ್ನೂ ಓದಿ: ಬಯಲಾಯಿತು ಒತ್ತಡ ಹೇರುವ ತಂತ್ರ
ಈ ಮಧ್ಯೆ, ಕೆಲವು ಪತ್ರಕರ್ತರೂ ವಿರೋಧಿಗಳ ಜೊತೆ ಕೈಜೋಡಿಸಿದ್ದರೆಂಬ ಆರೋಪವೂ ಕೇಳಿಬಂದಿದ್ದು, ಯೋಗಿ ಸರ್ಕಾರದ ವಿರುದ್ಧವೇ ಆರೋಪ ಮಾಡುವಂತೆ ಮೃತ ಯುವತಿಯ ಕುಟುಂಬಿಕರ ಮೇಲೆ ಒತ್ತಡ ಹೇರಿದ ಟೆಲಿಫೋನ್ ಸಂಭಾಷಣೆಯ ಟೇಪ್ಗಳು ಹೊರಬಿದ್ದಿದ್ದವು.
ಇಷ್ಟಲ್ಲದೆ, ಸಿಎಎ-ವಿರೋಧಿ ಹೋರಾಟಗಳಲ್ಲಿ ವಿದೇಶದಿಂದ ದುಡ್ಡು ಪಡೆದು ದೇಶಾದ್ಯಂತ ಗಲಭೆಗೆ ಹಣಕಾಸು ನೆರವು ನೀಡಿರುವ ಆರೋಪ ಹೊತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ಗೆ ಸೇರಿದವರೆನ್ನಲಾದ ನಾಲ್ಕು ಮಂದಿಯೂ ಈಗ ಹಾತ್ರಸ್ನಲ್ಲಿ ಬಂಧಿತರಾಗಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆಗೆ ಹಣಕಾಸು ನೆರವು ನೀಡುತ್ತಿದ್ದರೇ ಎಂಬ ಶಂಕೆಯಿಂದ ಸೋಮವಾರವೇ ಪಿಎಫ್ಐನ ನಾಲ್ವರು ಸದಸ್ಯರನ್ನು ಬಂಧಿಸಲಾಗಿರುವುದು ವಿಧ್ವಂಸಕ ಸಂಚು ಬಯಲಿಗೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿದೆ.
ಅರಾಜಕತೆ ಸೃಷ್ಟಿಸಲು ಯತ್ನಿಸಿದರೆ ಸುಮ್ಮನಿರುವುದಿಲ್ಲ. ಸಿಎಎ-ವಿರೋಧಿ ಹೋರಾಟದಲ್ಲಿ ಜನರನ್ನು ಎತ್ತಿ ಕಟ್ಟಲು ಯತ್ನಿಸಿದವರಿಗೆ ಆದ ಗತಿಯೇ ನಿಮಗೂ ಆಗಲಿದೆ ಎಂದು ಯೋಗಿ ಆದಿತ್ಯನಾಥ್ ಅವರು ಕಟುವಾಗಿಯೇ ಎಚ್ಚರಿಕೆ ನೀಡಿರುವುದು ಕೂಡ, ತಥಾಕಥಿತ ಹೋರಾಟಗಾರರ ಎದೆಯಲ್ಲಿ ನಡುಕ ಸೃಷ್ಟಿಸಿದೆ.
ಎಫ್ಐಆರ್ನಲ್ಲಿ ಏನಿದೆ
ಈ ಮಧ್ಯೆ, ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದ್ದು, ಕೆಲವೊಂದು ಅಚ್ಚರಿಯ ಅಂಶಗಳು ಇದರಲ್ಲಿದೆ.
19 ಎಫ್ಐಆರ್ಗಳನ್ನು ದಾಖಲಿಸಲಾಗಿದ್ದು, ಅಪರಿಚಿತರಿಂದ ‘ಸಂಚು’ ಆರೋಪಗಳಿವೆ. ಮಾತ್ರವೇ ಅಲ್ಲ, ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದಕ್ಕಾಗಿ ಹಾತ್ರಸ್ ಸಂತ್ರಸ್ತ ಕುಟುಂಬಕ್ಕೆ 50 ಲಕ್ಷದ ಆಮಿಷವನ್ನೂ ನೀಡಲಾಗಿದೆ ಎಂದು ಎಫ್ಐಆರ್ನಲ್ಲಿ ಇರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಸ್ವತಃ ಸಬ್ಇನ್ಸ್ಪೆಕ್ಟರ್ ಒಬ್ಬರು ನೀಡಿದ ದೂರಿನ ಆಧಾರದಲ್ಲಿ ಈ ಎಫ್ಐಆರ್ ದಾಖಲಿಸಲಾಗಿತ್ತು ಎಂಬುದು ಉಲ್ಲೇಖನೀಯ.
ಉತ್ತರ ಪ್ರದೇಶದಲ್ಲಿ ಜಾತಿ ಸಂಘರ್ಷವನ್ನು ಕೆರಳಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಯೋಗಿ ಸರ್ಕಾರದ ವಿರುದ್ಧ ಹೇಳಿಕೆ ನೀಡಲು ಸಂತ್ರಸ್ತೆಯ ಸಹೋದರನಿಗೆ ಪತ್ರಕರ್ತೆಯು ಒತ್ತಾಯಿಸುವ ವಿಷಯವೂ ಇದೆ.
ಅಲ್ಲದೆ, ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆಂದು ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಆರೋಪವೂ ಈ ಪ್ರಕರಣದಲ್ಲಿದೆ.
ಹಾತ್ರಸ್ ಪ್ರಕರಣದಲ್ಲಿ ಅತ್ಯಂತ ಗಂಭೀರವಾದ ಒಳಸಂಚಿದೆ. ನಾವು ಸತ್ಯ ಬಯಲಿಗೆಳೆಯುತ್ತೇವೆ ಎಂದಿದ್ದಾರೆ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್.
ಸೆಪ್ಟೆಂಬರ್ 14ರಂದು ದಲಿತ ಯುವತಿಯ ಹತ್ಯೆಯಾಗಿತ್ತು. ಮೇಲ್ವರ್ಗದವರು ಗಂಭೀರವಾಗಿ ಹಲ್ಲೆ ಮಾಡಿದ್ದರೆಂಬ ಆರೋಪವಿತ್ತು. ಆದರೆ ಅತ್ಯಾಚಾರ ಆರೋಪ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸರು, ಫೋರೆನ್ಸಿಕ್ ವರದಿಯ ಪ್ರಕಾರ, ಅತ್ಯಾಚಾರ ನಡೆದಿಲ್ಲ ಎಂದಿದ್ದರು. ಇಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಲಾಗುತ್ತಿದೆ. ಕುಟುಂಬಿಕರ ಸಮಕ್ಷಮದಲ್ಲೇ ಮೃತಳ ಅಂತ್ಯ ಸಂಸ್ಕಾರವನ್ನು ರಾತ್ರಿ ನೆರವೇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಯಾಕಾಗಿ ರಾತ್ರಿ ಅಂತ್ಯಸಂಸ್ಕಾರ?
ಇದಲ್ಲದೆ, ಘಟನೆ ಮುಂದಿಟ್ಟುಕೊಂಡು ಭಾರಿ ಗಲಭೆ ಸೃಷ್ಟಿಸುವ ಸಂಚು ನಡೆದಿದ್ದು, ಇದನ್ನು ತಪ್ಪಿಸುವುದಕ್ಕಾಗಿಯೇ ಮೃತಳ ಅಂತ್ಯಕ್ರಿಯೆಯನ್ನು ರಾತ್ರಿಯೇ ನೆರವೇರಿಸಲಾಗಿತ್ತು ಎಂದು ಜಿಲ್ಲಾಡಳಿತವು ಸ್ಪಷ್ಟಪಡಿಸಿದೆ. ಮೃತ ಶರೀರವನ್ನು ಮುಂದಿಟ್ಟುಕೊಂಡು, ದೊಡ್ಡ ಪ್ರಮಾಣದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಗಲಭೆ, ದೊಂಬಿ, ಹಿಂಸಾಚಾರ ನಡೆಸಲು ಸ್ಥಾಪಿತ ಹಿತಾಸಕ್ತಿಗಳು ಸನ್ನದ್ಧವಾಗಿದ್ದವು. ಘಟನೆಗೆ ಕೋಮು ಮತ್ತು ಜಾತಿ ಬಣ್ಣ ಹಚ್ಚುವ ಪ್ರಯತ್ನ ನಡೆದಿತ್ತು. ಈ ಬಗ್ಗೆ ಆನ್ಲೈನ್ನಲ್ಲಿಯೂ ಸುಳ್ಳು ಹಬ್ಬಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಸುಳ್ಳು ಹರಡಿಸಲಾಗುತ್ತಿದೆ. ಇವೆಲ್ಲವೂ ವಿರೋಧ ಪಕ್ಷಗಳು ರಾಜಕೀಯ ಲಾಭ ಪಡೆಯುವುದಕ್ಕಾಗಿ ನಡೆಸಿದ ಸಂಚಿನ ಭಾಗ. ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಈ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಯಾಗಲಿ ಎಂದು ಯೋಗಿ ಸರ್ಕಾರವು ಸುಪ್ರೀಂ ಕೋರ್ಟಿಗೆ ವಿನಂತಿಸಿಕೊಂಡಿರುವ ಅಫಿದವಿತ್ನಲ್ಲಿ ತಿಳಿಸಿದೆ.
ಇದಲ್ಲದೆ, ಅಭಿವೃದ್ಧಿ ಕಾರ್ಯಗಳಿಂದ ಜನಮೆಚ್ಚುಗೆ ಗಳಿಸುತ್ತಿರುವ ಯೋಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಕ್ಕಾಗಿ, ರಾಜ್ಯದಲ್ಲಿ, ದೇಶದಲ್ಲಿ ಗಲಭೆ ಹಬ್ಬಿಸುವ (ಸಿಎಎ ವಿರೋಧಿ ಹೋರಾಟದಂತೆ) ಅಂತಾರಾಷ್ಟ್ರೀಯ ಸಂಚಿನ ಭಾಗವೇ ಈ ಘಟನೆ ಎಂದೂ ಮತ್ತೊಂದು ಎಫ್ಐಆರ್ನಲ್ಲಿ ಹೇಳಲಾಗಿದೆ.
ಯೋಜಿತ ಸಂಚು
ಅದರ ಪ್ರಕಾರ, ಹಾತ್ರಸ್ ಘಟನೆ ವಿರುದ್ಧ ಹೇಗೆ ಪ್ರತಿಭಟನೆ ನಡೆಸಬೇಕು, ಪೊಲೀಸರ ಕಣ್ತಪ್ಪಿಸುವುದು ಹೇಗೆ ಎಂಬ ವಿವರಗಳನ್ನುಳ್ಳ ವೆಬ್ ಸೈಟೊಂದನ್ನು ತೆರೆಯಲಾಗಿತ್ತು. ಹೇಗೆ ದಂಗೆ ಮಾಡಬೇಕು, ಅಶ್ರುವಾಯು, ಜಲಫಿರಂಗಿಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬಿತ್ಯಾದಿ ವಿವರಗಳೂ ಅದರಲ್ಲಿದ್ದು ಈಗ ಅದನ್ನು ಮುಚ್ಚಲಾಗಿದೆ. ಇದು ಕೂಡ ಸಂಚಿನ ಭಾಗ.
ಅಮೆರಿಕದಲ್ಲಿ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್’ ಹೆಸರಿನಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಹಂಚಿಕೊಳ್ಳಲಾದ ದಂಗೆಯ ಕುರಿತ ಮಾಹಿತಿಯಿದ್ದ ಕರಪತ್ರದಲ್ಲಿದ್ದ ಹೆಚ್ಚಿನ ಅಂಶಗಳು ಈ ವೆಬ್ ಸೈಟಿನಲ್ಲಿದ್ದವು ಎಂದು ಚಾಂದ್ಪಾ ಠಾಣೆಯಲ್ಲಿ ದಾಖಲಿಸಲಾದ ಎಫ್ಐಆರ್ ಹೇಳುತ್ತದೆ.
ಸುಳ್ಳು ಹೇಳಿಕೆ ನೀಡುವಂತೆ ಪ್ರಚೋದಿಸಿ ವ್ಯಕ್ತಿಗಳಿಗೆ ಬೆದರಿಸುವ, ಸರ್ಕಾರಕ್ಕೆ ಅವಮಾನ ಮಾಡುವ ಉದ್ದೇಶದಿಂದ ಕರಪತ್ರ ಮುದ್ರಿಸುವ, ಫೋರ್ಜರಿ, ಸುಳ್ಳು ಸಾಕ್ಷಿ ಸೃಷ್ಟಿಸುವುದೇ ಮುಂತಾದ ವಿಷಯಗಳೂ ಎಫ್ಐಆರ್ನಲ್ಲಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಚುನಾವಣೆಯಿದೆ, ಇದಕ್ಕಾಗಿಯೇ ಸಂಚು!
ಉತ್ತರ ಪ್ರದೇಶದ ಏಳು ಅಸೆಂಬ್ಲಿ ಸ್ಥಾನಗಳಿಗೆ ಚುನಾವಣೆಯೂ ಸದ್ಯ ನಡೆಯಲಿರುವುದರಿಂದ, ಅಭಿವೃದ್ಧಿ ಕಾರ್ಯ ಸಹಿಸದೆ, ಯೋಗಿ ಸರ್ಕಾರಕ್ಕೆ ಮಸಿ ಬಳಿದು, ಚುನಾವಣೆ ಗೆಲ್ಲುವ ತಂತ್ರದ ಭಾಗವಾಗಿ ಜಾತಿ ವೈಷಮ್ಯದ ಬೀಜ ಬಿತ್ತಲಾಗಿದೆ. ರಾಜಕೀಯ ಲಾಭಕ್ಕಾಗಿಯೇ ದಂಗೆ ನಡೆಸಲಾಗುತ್ತಿದ. ದಿನಕ್ಕೊಂದು ಸಂಚು ರೂಪಿಸಲಾಗುತ್ತಿದೆ ಎಂದು ಯೋಗಿ ಆದಿತ್ಯನಾಥ್ ಭಾನುವಾರ ಪಕ್ಷದ ಸಭೆಯಲ್ಲಿ ಹೇಳಿದ್ದರು.

Average Rating