ಜೈಪುರ: ರಾಜಸ್ಥಾನದಲ್ಲಿ ಹಿಂದುಗಳ ಅತ್ಯಂತ ನಂಬಿಕೆ, ಶ್ರದ್ಧೆ ಹಾಗೂ ಸಡಗರದ ಹಬ್ಬ ದೀಪಾವಳಿಗಾಗಿ ಪಟಾಕಿ ಮಾರಾಟವನ್ನು ಅಲ್ಲಿನ ಕಾಂಗ್ರೆಸ್ ಸರ್ಕಾರ ನಿಷೇಧಿಸಿದೆ.
ಇದದಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೀಡಿರುವ ಕಾರಣ, ಪಟಾಕಿಯಿಂದಾಗಬಹುದಾದ ಅಡ್ಡ ಪರಿಣಾಮದಿಂದ ಕೋವಿಡ್-19 ರೋಗಿಗಳು ಹಾಗೂ ಸಾರ್ವಜನಿಕರನ್ನು ರಕ್ಷಿಸುವುದಕ್ಕಾಗಿ.
ಕೋವಿಡ್-19 ರೋಗಿಗಳು ಮಾತ್ರವಲ್ಲದೆ ಹೃದಯ ರೋಗಿಗಳು ಮತ್ತು ಉಸಿರಾಟದ ತೊಂದರೆಯಿರುವ ರೋಗಿಗಳ ಆರೋಗ್ಯ ಕಾಪಾಡುವುದಕ್ಕೂ ಇದು ಸೂಕ್ತವಾಗಿದ್ದು, ಜನರು ಪಟಾಕಿ ಸಿಡಿಸಬಾರದು ಎಂದು ಅವರು ಹೇಳಿದ್ದಾರೆ.
“ಪಟಾಕಿಗಳಿಂದ ಹೊರಸೂಸುವ ವಿಷಯುಕ್ತ ಹೊಗೆಯಿಂದ ಕೋವಿಡ್ ಬಾಧಿತರ ಆರೋಗ್ಯ ರಕ್ಷಣೆಗಾಗಿ ಮತ್ತು ಜನ ಸಾಮಾನ್ಯರ ಸ್ವಾಸ್ಥ್ಯ ಕಾಪಾಡುವುದಕ್ಕಾಗಿ ರಾಜ್ಯದಲ್ಲಿ ಪಟಾಕಿ ಮಾರಾಟ ನಿಷೇಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದ ವಾಹನಗಳ ಸಂಚಾರವನ್ನೂ ನಿರ್ಬಂಧಿಸಲಾಗಿದೆ” ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ಮದುವೆ ಮತ್ತು ಇತರ ಸಮಾರಂಭಗಳಲ್ಲಿಯೂ ಪಟಾಕಿ ಸಿಡಿಸದಂತೆ, ಪಟಾಕಿ ಮಾರಾಟದ ತಾತ್ಕಾಲಿಕ ಪರವಾನಗಿಯನ್ನೂ ರದ್ದುಗೊಳಿಸಲು ಸೂಚಿಸಲಾಗಿದೆ ಎಂದವರು ಹೇಳಿದ್ದಾರೆ.
ಇದರೊಂದಿಗೆ, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಕಾನೂನನ್ನೂ ಜಾರಿಗೊಳಿಸಲಾಗಿದ್ದು, ದೇಶದಲ್ಲೇ ಈ ರೀತಿ ಮಾಡಿದ ಮೊದಲ ರಾಜ್ಯವಾಗಿದೆ ಅದು. ಕೊರೊನಾ ವೈರಸ್ನಿಂದ ರಕ್ಷಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ವಾಯು ಮಾಲಿನ್ಯದ ಕುರಿತು ದೇಶಾದ್ಯಂತ ಕಾಳಜಿ ವ್ಯಕ್ತವಾಗಿದ್ದು, ರಾಜಕಾರಣಿಗಳ ಸಂಭ್ರಮಾಚರಣೆಗೆ, ಪಕ್ಷದ ಕಾರ್ಯಕ್ರಮಗಳಲ್ಲೆಲ್ಲ ಪಟಾಕಿ ನಿಷೇಧಿಸಿರಲಿಲ್ಲವಾದರೂ, ಇದೀಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧಿಸಿರುವುದು ರಾಜಸ್ಥಾನದಲ್ಲಿ ಚರ್ಚೆಗೂ ಕಾರಣವಾಗಿದೆ.

Average Rating