ನವದೆಹಲಿ: ಸತ್ಯನಿಷ್ಠ ಪತ್ರಕರ್ತ, ಮಹಾರಾಷ್ಟ್ರ ಸರ್ಕಾರದ ಗೂಂಡಾಗಿರಿ, ಡ್ರಗ್ ಮಾಫಿಯಾ ಲಿಂಕುಗಳನ್ನೆಲ್ಲಾ ಜಗತ್ತಿಗೆ ತೆರೆದಿಡಲು ಹೊರಟಿದ್ದ ರಿಪಬ್ಲಿಕ್ ಟಿವಿಯ ಮುಖ್ಯಸ್ಥ, ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಯನ್ನು ಮುಂಬಯಿ ಪೊಲೀಸರು ಬಂಧಿಸಿರುವುದು ಮತ್ತು ಬಂಧಿಸಿದ ರೀತಿಗೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗುತ್ತಿದೆ.
ಇದು ಮಾಧ್ಯಮ ಸ್ವಾತಂತ್ರ್ಯದ ಮೇಲೆ ಹಲ್ಲೆ, ಪ್ರಜಾಪ್ರಭುತ್ವದ ಕರಾಳ ದಿನ, ಸತ್ಯ ಹೇಳುವ ಮಾಧ್ಯಮಗಳ ಕತ್ತು ಹಿಚುಕುವ ಪ್ರಯತ್ನ ಎಂಬ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಖಂಡಿಸಿದ್ದಾರೆ.
ಇದು 1975ರಲ್ಲಿ ಇಂದಿರಾ ಗಾಂಧಿ ಆಡಳಿತ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಮತ್ತೆ ನೆನಪಿಸಿದೆ ಎಂದು ಬಿಜೆಪಿ ಮುಖಂಡರು ಕೆಂಡ ಕಾರಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಕಾಂಗ್ರೆಸ್, ಶಿವಸೇನೆ ಮತ್ತು ಅದರ ಮಿತ್ರರು ಮತ್ತೊಮ್ಮೆ ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ್ದಾರೆ. ರಿಪಬ್ಲಿಕ್ ಟಿವಿ ಹಾಗೂ ಅರ್ನಬ್ ಗೋಸ್ವಾಮಿ ವಿರುದ್ಧ ಇದು ಅಧಿಕಾರದ ದುರ್ಬಳಕೆಯಿದು. ಇದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ 4ನೇ ಆಧಾರ ಸ್ಥಂಬದ ಮೇಲೆ ನಡೆದ ದಾಳಿ. ಇದು ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ ಎಂದಿದ್ದಾರೆ.
ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರೂ ಖಂಡಿಸಿದ್ದು, ಅಭಿಪ್ರಾಯ ಭೇದ ಇರಬಹುದು, ಡಿಬೇಟ್ ನಡೆಸಬಹುದು ಮತ್ತು ಪ್ರಶ್ನೆಗಳನ್ನು ಯಾರು ಬೇಕಿದ್ದರೂ ಕೇಳಬಹುದು. ಆದರೆ, ಅರ್ನಬ್ರಂಥ ಪ್ರತಿಷ್ಠೆಯ ಪತ್ರಕರ್ತರನ್ನು ಪೊಲೀಸ್ ಬಲ ದುರುಪಯೋಗಪಡಿಸಿ ಬಂಧಿಸುವುದು ಖಂಡಿಸಲೇಬೇಕಾದ ವಿಚಾರ ಎಂದಿದ್ದಾರೆ. ಸಾಂಸ್ಥಿಕ ದಾಳಿ ಅಂತ ನರೇಂದ್ರ ಮೋದಿಯನ್ನು ಟೀಕಿಸುವ ಸೋನಿಯಾ ಮತ್ತು ರಾಹುಲ್, ಮಹಾರಾಷ್ಟ್ರದಲ್ಲಿರುವ ತಮ್ಮದೇ ಸರ್ಕಾರವು ಪತ್ರಿಕಾ ಹಾಡಹಗಲೇ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಮಾಡಿದಾಗ ಮೌನವಾಗಿರುವುದೇಕೆ? ಇದು ಹಿಪಾಕ್ರಸಿಯ ಅದ್ಭುತ ಉದಾಹರಣೆ ಎಂದಿದ್ದಾರೆ.
1975ರ ಕರಾಳ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ನಾವು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯ ವಿರುದ್ಧ ಹೋರಾಡಿದ್ದೇವೆ ಎಂದಿದ್ದಾರೆ ಪ್ರಸಾದ್.
ಇದನ್ನೂ ಓದಿ: Press Freedom | ಮುಂಬಯಿ ಪೊಲೀಸರಿಗೆ ಕಪ್ಪು ಚುಕ್ಕೆ: ಅರ್ನಬ್ ಗೋಸ್ವಾಮಿಗೆ ಹಲ್ಲೆ ನಡೆಸಿ ಬಂಧನ
ಭಾರತದ ಎಡಿಟರ್ಸ್ ಗಿಲ್ಡ್ ಕೂಡ ಘಟನೆಯನ್ನು ಖಂಡಿಸಿದ್ದು, ಗೋಸ್ವಾಮಿ ಅವರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕು ಮತ್ತು ವಿಮರ್ಶಾತ್ಮಕ ವರದಿಗಾರಿಕೆ ಮಾಡುವ ಮಾಧ್ಯಮಗಳ ವಿರುದ್ಧ ಅಧಿಕಾರದ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಆಗ್ರಹಿಸಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಪ್ರತಿಕ್ರಿಯಿಸಿ, ಇದೆಲ್ಲದಕ್ಕೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಪಕ್ಷದ ಹಿರಿಯ ಮುಖಂಡ ರಾಹುಲ್ ಗಾಂಧಿ ಹೊಣೆಗಾರರು ಎಂದಿದ್ದಾರೆ.
ಸರ್ಕಾರವೊಂದು ಮಾಧ್ಯಮಗಳನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ತುರ್ತು ಪರಿಸ್ಥಿತಿ ಹೇರಿದ್ದ ಕಾಲದಲ್ಲಿಯೂ ಇದೇ ರೀತಿಯಾಗಿತ್ತೆಂಬುದು ಮತ್ತೆ ನೆನಪಿಗೆ ಬಂದಿದೆ ಎಂದಿರುವ ಅವರು, ಸೋನಿಯಾ, ರಾಹುಲ್ ನೇತೃತ್ವದ ಕಾಂಗ್ರೆಸ್ನ ಫ್ಯಾಸಿಸ್ಟ್ ಮತ್ತು ತುರ್ತುಪರಿಸ್ಥಿತಿಯ ಮನಸ್ಥಿತಿಯನ್ನು ಖಂಡಿಸುವುದಾಗಿ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಜೆ.ಇರಾನಿ ಟ್ವೀಟ್ ಮಾಡಿ, ಅರ್ನಬ್ ಅವರ ಮೇಲಾದ ದೌರ್ಜನ್ಯವನ್ನು ವಿರೋಧಿಸದೇ ಇರುವ ಮಾಧ್ಯಮಗಳು ಖಂಡಿತವಾಗಿಯೂ ಫ್ಯಾಸಿಸಂ ಬೆಂಬಲಿಸುತ್ತವೆ ಅಂತಲೇ ತಿಳಿದುಕೊಳ್ಳಬೇಕಾಗುತ್ತದೆ. ಅವರು ನಿಮಗಿಷ್ಟವಿರಲಾರದು, ಆದರೆ, ಅರ್ನಬ್ ಮೇಲಾದ ದಬ್ಬಾಳಿಕೆಯನ್ನು ಬೆಂಬಲಿಸಬಾರದು. ಈಗ ನೀವು ಮೌನವಾದರೆ, ಯಾರಿಗೊತ್ತು, ಮುಂದಿನ ಸರದಿ ನಿಮ್ಮದೂ ಆಗಿರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: TRP Scam ಸಿಬಿಐಗೆ ವಹಿಸಿದ್ದು ಸುದ್ದಿಯಾಗಲಿಲ್ಲ: ಎಫ್ಐಆರ್ನಲ್ಲಿದ್ದುದು ರಿಪಬ್ಲಿಕ್ ಅಲ್ಲ, ಇಂಡಿಯಾ ಟುಡೇ ಹೆಸರು!
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating