Read Time:4 Minute, 1 Second

ISRO ಸಾಧನೆ: ನಭಕ್ಕೆ ನೆಗೆದ ಭೂಪರಿವೀಕ್ಷಣಾ ಉಪಗ್ರಹ EOS01

0 0

ನವದೆಹಲಿ: ಕೋವಿಡ್ ಜಾಗತಿಕ ಹೆಮ್ಮಾರಿಯ ಉಪಟಳದ ನಡುವೆಯೂ ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿಗಳು ವಿಕ್ರಮ ಮೆರೆದಿದ್ದಾರೆ. ಕೋವಿಡ್ ಇದೆ ಎಂದು ಕೈಕಟ್ಟಿ ಕೂರದ ಅವರು, ಶನಿವಾರ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ EOS01 ಹಾಗೂ ಇತರ 9 ಉಪಗ್ರಹಗಳನ್ನು ಬಾನಿಗೆ ಹಾರಿಸಿದ್ದಾರೆ.

ಚೀನಾದ ಕೊರೊನಾ ವೈರಸ್‌ನ ಮಹಾಮಾರಿಯ ಸಂಕಷ್ಟದ ಕಾಲದಲ್ಲಿಯೂ ಇಸ್ರೋ ವಿಜ್ಞಾನಿಗಳು ಕೋವಿಡ್ ಮಾರ್ಗದರ್ಶಿ ಸೂತ್ರಗಳ ಆಧಾರದಲ್ಲೇ ಕೆಲಸ ಮುಗಿಸಿದ್ದಾರೆ. ಗುಣಮಟ್ಟದಲ್ಲಿಯೂ ಯಾವುದೇ ರಾಜಿ ಮಾಡಿಕೊಂಡಿಲ್ಲ. ಇಂತಹಾ ಸಮಯದಲ್ಲೂ ಇಸ್ರೋದ ಎಲ್ಲ ಉದ್ಯೋಗಿಗಳು ಆತ್ಮವಿಶ್ವಾಸದಿಂದ ಗುಣಮಟ್ಟದ ಕೆಲಸ ಮಾಡಿ ತೋರಿಸಿದ್ದು ಶ್ಲಾಘನೀಯ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ.

ಈ ಸಾಧನೆಯು ಇಸ್ರೋಗೆ ತುಂಬಾ ವಿಶೇಷ ಮತ್ತು ಅಸಹಜವೂ ಹೌದು. ಬಾಹ್ಯಾಕಾಶದ ಕೆಲಸವನ್ನೆಲ್ಲ ‘ವರ್ಕ್ ಫ್ರಂ ಹೋಮ್’ ಅಂತ ಮಾಡಲಾಗುವುದಿಲ್ಲ. ಪ್ರತಿಯೊಬ್ಬ ಎಂಜಿನಿಯರ್ ಕೂಡ ಪ್ರಯೋಗಾಲಯದಲ್ಲಿ ಇರಲೇಬೇಕಾಗುತ್ತದೆ. ಇಂತಹಾ ಸಾಹಸಮಯ ಕಾರ್ಯಗಳಲ್ಲಂತೂ ಪ್ರತಿಯೊಬ್ಬ ತಂತ್ರಜ್ಞ ಹಾಗೂ ಉದ್ಯೋಗಿ, ಒಟ್ಟಿಗೇ ಕೆಲಸ ಮಾಡಬೇಕಾಗುತ್ತದೆ ಎಂದಿದ್ದಾರೆ ಕೆ.ಶಿವನ್.

ವಿದೇಶದ 9 ಉಪಗ್ರಹಗಳು ಹಾಗೂ ಭಾರತದ ಭೂವೀಕ್ಷಣಾ ಉಪಗ್ರಹ EOS-01 ಅನ್ನು ಹೊತ್ತೊಯ್ದ ಪಿಎಸ್ಎಲ್‌ವಿ ರಾಕೆಟ್ 3.12ಕ್ಕೆ ನಭಕ್ಕೆ ನೆಗೆಯಿತು. ಕಳೆದ ವರ್ಷ ಡಿಸೆಂಬರ್ 11ರಂದು RISAT-2BR1 ಎಂಬ ಭೂಪರಿವೀಕ್ಷಣಾ ಉಪಗ್ರಹದ ಬಳಿಕ ಇಸ್ರೋದ ಮೊದಲ ಸಾಧನೆ ಇದಾಗಿದೆ.

ಜಿಸ್ಯಾಟ್-30 ಸಂವಹನ ಉಪಗ್ರಹವನ್ನು ಇಸ್ರೋ ಈ ವರ್ಷದ ಜನವರಿಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಿತ್ತಾದರೂ, ಅದು ಫ್ರೆಂಚ್ ಗಯಾನದ ಏರಿಯೇನ್ ರಾಕೆಟ್ ಮೂಲಕ ಕಳುಹಿಸಲಾಗಿತ್ತು.

ಚೀನಾದಿಂದ ಕೊರೊನಾ ಬಂದ ಬಳಿಕ ಇಸ್ರೋದ ಚಟುವಟಿಕೆಗಳಿಗೂ ಲಗಾಮು ಬಿದ್ದಿತ್ತು. 2020-21ರಲ್ಲಿ 20ಕ್ಕೂ ಹೆಚ್ಚು ಉಪಗ್ರಹ ಉಡ್ಡಯನಕ್ಕೆ ಇಸ್ರೋ ಯೋಜನೆ ರೂಪಿಸಿತ್ತು.

ಹೆಸರಿನ ಮಹತ್ವ
ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ – ಪಿಎಸ್‌ಎಲ್‌ವಿ ಎಂಬುದು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಸಾಗಿಸುವ ವಾಹಕ.

EOS-01 ಎಂಬುದು ರೆಡಾರ್ ಇಮೇಜಿಂಗ್ ಸೆಟಲೈಟ್ (RISAT) ಆಗಿದೆ. ಇದಕ್ಕೆ ಮೊದಲು RISAT-2B ಹಾಗೂ RISAT-2BR1 ಉಡ್ಡಯನ ಮಾಡಲಾಗಿದ್ದು, ಇದಕ್ಕೆ RISAT-2BR2 ಅಂತ ಹೆಸರಿಡಬೇಕಿತ್ತು.

ಆದರೆ, ಇದೀಗ ಹೊಸ ನಾಮಕರಣ ಸರಣಿ ಶುರುವಾಗಿದೆ. ಇದು ಭೂಪರಿವೀಕ್ಷಣಾ ಉಪಗ್ರಹ (EOS – Earth Obsevation Satellite).

ಕಾರ್ಯವನ್ನು ಆಧರಿಸಿಯೇ ಉಪಗ್ರಹಗಳಿಗೆ ಹೆಸರು ನೀಡುವ ಪದ್ಧತಿ ಈಗ ಮುಂದುವರಿದಂತಾಗಿದೆ. ಹಿಂದೆ ಕಾರ್ಟೋಸ್ಯಾಟ್ ಸರಣಿಯ ಉಪಗ್ರಹಗಳು ಭೂಮಿಯ ಸ್ಥಳ ಮತ್ತು ನಕಾಶೆ ಕುರಿತ ದತ್ತಾಂಶ ಒದಗಿಸುತ್ತವೆ. ಓಶಿಯನ್‌ಸ್ಯಾಟ್ ಉಪಗ್ರಹಗಳು ಸಮುದ್ರದ ಕುರಿತ ಮಾಹಿತಿ ವೀಕ್ಷಣೆಗಾಗಿ ಇರುವವು. ಇದೇ ರೀತಿ, ಇನ್ಸಾಟ್, ರಿಸೋರ್ಸ್‌ಸಾಟ್, ಜಿಸಾಟ್, ಸ್ಕಾಟ್‌ಸಾಟ್ ಸರಣಿಯ ಉಪಗ್ರಹಗಳು ಆಯಾ ಕೆಲಸದ ಉದ್ದೇಶಕ್ಕಾಗಿ ಬಾಹ್ಯಾಕಾಶಕ್ಕೆ ಕಳುಹಿಸಲಾದವು.

ಈ ಭೂಪರಿವೀಕ್ಷಣಾ ಉಪಗ್ರಹದ ಕೆಲಸವೇನು?
ಭೂಮಿ ಮತ್ತು ಕಾಡು, ಸಸ್ಯ ಸಂಪತ್ತಿನ ಮ್ಯಾಪಿಂಗ್ ಮತ್ತು ಪರಿವೀಕ್ಷಣೆ, ಜಲ, ಖನಿಜ ಅಥವಾ ಮೀನು ಮುಂತಾದ ಉತ್ಪನ್ನಗಳ ಮ್ಯಾಪಿಂಗ್, ವಾತಾವರಣ ಮತ್ತು ಪರಿಸರದ ವೀಕ್ಷಣೆ, ಮಣ್ಣಿನ ಸತ್ವದ ಮಾಹಿತಿ ಸಂಗ್ರಹ ಮುಂತಾದವು ಈ ಭೂಪರಿವೀಕ್ಷಣಾ ಉಪಗ್ರಹಗಳ ಕೆಲಸ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post WhatsApp Payment | ಡಿಜಿಟಲ್ ಪರ್ಸ್ ಕ್ಷೇತ್ರದಲ್ಲಿ ಸಂಚಲನ: ವಾಟ್ಸ್ಆ್ಯಪ್ ಮೂಲಕ ಹಣ ಕಳುಹಿಸಬಹುದು!
Next post US Election Result | ಬೈಡನ್‌ಗೆ ನಾ ‘ಬಿಡೆನ್’ ಎಂದ ಟ್ರಂಪ್: ಏನಾಗಲಿದೆ, ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಸುದ್ದಿ ಸಂಚಯ

ಇವುಗಳನ್ನೂ ನೋಡಿ