ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಯೊಂದು ವಿಷಯದಲ್ಲೂ ಸುಳ್ಳು ಹೇಳುತ್ತಲೇ ಬಂದಿರುವ ಕಾಂಗ್ರೆಸ್, ಈಗ ಅಮರಿಕ ಅಧ್ಯಕ್ಷ ಚುನಾವಣಾ ಫಲಿತಾಂಶದಲ್ಲೂ ಸುಳ್ಳು ಹೇಳುತ್ತಾ, ಅಮೆರಿಕ-ಭಾರತ ಬಾಂಧವ್ಯವನ್ನೂ ರಾಜಕೀಯಗೊಳಿಸಲು ಹೊರಟಿದೆ.
ಈಗ ಗುಜರಾತ್ ಕಾಂಗ್ರೆಸ್ ಅಧ್ಯಕ್ಷರಾಗಿರುವ, ಪಾಟೀದಾರ್ ಮೀಸಲಾತಿ ಹೋರಾಟ ನಡೆಸಿ ಪ್ರಸಿದ್ಧಿಗೆ ಬಂದಿದ್ದ ಹಾರ್ದಿಕ್ ಪಟೇಲ್ ಅವರು ಟ್ವೀಟ್ ಮೂಲಕ ‘ಮೋದಿ ಅವರು ಅಬ್ ಕೀ ಬಾರ್, ಟ್ರಂಪ್ ಸರ್ಕಾರ್’ ಅಂತ ಹೇಳಿದ್ದಾರೆಂದು ಆರೋಪಿಸಿದ್ದಾರೆ.
ಅಷ್ಟೇ ಆದರೆ ಪರವಾಗಿಲ್ಲ, ಆದರೆ, ಜೋ ಬೈಡೆನ್‌ಗೆ ಶುಭಾಶಯ ಹೇಳುತ್ತಾ, ‘130 ಕೋಟಿ ಭಾರತೀಯರ ಪರವಾಗಿ ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದೂ ಹೇಳಿ, ತಮ್ಮ ಮೋದಿ ದ್ವೇಷವನ್ನು ತೋರ್ಪಡಿಸಿದ್ದಾರೆ.
ಕಳೆದ ವರ್ಷ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಹೋಗಿ ‘ಅಬ್ ಕೀ ಬಾರ್, ಟ್ರಂಪ್ ಸರ್ಕಾರ್’ ಎಂದು ಘೋಷಿಸಿ, ಅಮೆರಿಕದ ಆಂತರಿಕ ವಿಷಯದಲ್ಲಿ ತಲೆ ತೂರಿಸಿ ಬಂದಿದ್ದಾರೆ. ಈ ‘ದುಸ್ಸಾಹಸ’ಕ್ಕಾಗಿ ಹೊಸದಾಗಿ ಆಯ್ಕೆಯಾಗಿರುವ ಜೋ ಬೈಡನ್ ಆಡಳಿತದಡಿಯಲ್ಲಿ ಭಾರತ ಹಾಗೂ ಭಾರತೀಯರು ಬೆಲೆ ತೆರಬೇಕಾಗಿ ಬರಲಾರದು ಎಂದು ನಾನು ಆಶಿಸುವುದಾಗಿ ಹಾರ್ದಿಕ್ ಪಟೇಲ್ ಟ್ವೀಟ್ ಮಾಡಿದ್ದಾರೆ.
ಇದಕ್ಕಾಗಿ 130 ಕೋಟಿ ಭಾರತೀಯರ ಪರವಾಗಿ ಕ್ಷಮೆ ಯಾಚಿಸುತ್ತೇನೆ ಎಂದಿರುವ ಹಾರ್ದಿಕ್ ಪಟೇಲ್, ಇಡೀ ಭಾರತವನ್ನೇ ಪ್ರತಿನಿಧಿಸುವಂತೆ ಮಾತನಾಡಿದ್ದಾರೆ.
ಇದಲ್ಲದೆ, ಹಿರಿಯ ಕಾಂಗ್ರೆಸಿಗ, ಪಕ್ಷದ ವಕ್ತಾರ ಮನೀಶ್ ತಿವಾರಿ ಕೂಡ ಇದೇ ಸುಳ್ಳನ್ನು ಮತ್ತೆ ಹೇಳಿದ್ದಾರೆ. ಯುಪಿಎ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ತಿವಾರಿ, ಈಗ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒಬ್ರಿಯಾನ್ ಕೂಡ, ಮೋದಿ ದ್ವೇಷಕ್ಕಾಗಿ ಇದೇ ಸುಳ್ಳನ್ನು ಪ್ರಸಾರ ಮಾಡಿದ್ದಾರೆ.
https://twitter.com/derekobrienmp/status/1324573204430548992
ಕಾಂಗ್ರೆಸ್ ಮಾಜಿ ನಾಯಕಿ, ಈಗ ಶಿವಸೇನೆಯ ನಾಯಕಿಯಾಗಿರುವ ಪ್ರಿಯಾಂಕಾ ಚತುರ್ವೇದಿ, ಕಾಂಗ್ರೆಸ್ ಪರವಾಗಿರುವ ಪತ್ರಕರ್ತರಾಗಿರುವ ರೋಹಿಣಿ ಸಿಂಗ್, ಸದಾನಂದ ಧುಮೆ ಕೂಡ ಇದನ್ನೇ ಹರಡಿದ್ದಾರೆ.
ಆದರೆ 2019ರ ಸೆ.22ರಂದು ಮೋದಿ ಮಾಡಿದ ಭಾಷಣದಲ್ಲಿ ಏನಿತ್ತೆಂಬ ನಿಜಾಂಶವಿರುವ ವಿಡಿಯೊ ಇಲ್ಲಿದೆ:
ವಾಸ್ತವವಾಗಿ ಮೋದಿ ಅವರು ತಮ್ಮ ಗೌರವಾರ್ಥ ಹೂಸ್ಟನ್‌ನಲ್ಲಿ ಅಧ್ಯಕ್ಷ ಟ್ರಂಪ್ ಏರ್ಪಡಿಸಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಹೇಳಿದ್ದು: “ನಾವು ಭಾರತೀಯರು ಟ್ರಂಪ್ ಜೊತೆ ನಿಕಟ ಬಾಂಧವ್ಯ ಹೊಂದಿದ್ದೇವೆ. ಅಭ್ಯರ್ಥಿ ಟ್ರಂಪ್ ಅವರ ‘ಅಬ್ ಕೀ ಬಾರ್ ಟ್ರಂಪ್ ಸರ್ಕಾರ್’ ಎಂಬ ಮಾತುಗಳು ಜೋರಾಗಿ ಅನುರಣಿಸುತ್ತಿವೆ.”
ಎಂದರೆ, 2016ರಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷತೆಗೆ ಸ್ಫರ್ಧಿಸಿದ್ದ ಅವಧಿಯಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ, ಭಾರತೀಯರು ಮತ್ತು ಹಿಂದು ಸಮುದಾಯವು ಶ್ವೇತಭವನದಲ್ಲಿ ಸಮಾನ ಮಿತ್ರನನ್ನು ಹೊಂದಿರಲಿದೆ ಎನ್ನುತ್ತಾ, 2014ರಲ್ಲಿ ನರೇಂದ್ರ ಮೋದಿ ಅವರ ಜನಪ್ರಿಯ ಸ್ಲೋಗನ್ ‘ಅಬ್ ಕೀ ಬಾರ್ ಮೋದಿ ಸರ್ಕಾರ್’ ಎಂಬುದನ್ನು ಬದಲಿಸಿ, ಅಬ್ ಕೀ ಬಾರ್ ಟ್ರಂಪ್ ಸರ್ಕಾರ್ ಎಂದು ಹೇಳಿದ್ದರು.
ಇದನ್ನೇ ಮೋದಿ ಅವರು 2019ರ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಸ್ನೇಹ ಕೂಟದಲ್ಲಿ ನೆನಪಿಸಿಕೊಂಡಿದ್ದಷ್ಟೇ. ಅಭಿವೃದ್ಧಿ ಪರ ಶ್ರಮಿಸಿ, ರಚನಾತ್ಮಕ ಪ್ರತಿಪಕ್ಷವಾಗಬೇಕಿದ್ದ ಪಕ್ಷವೊಂದರ ಮೋದಿ ದ್ವೇಷದ ಪರಾಕಾಷ್ಠೆಯಿದು.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating