ನವದೆಹಲಿ: ಬಿಹಾರ ಅಸೆಂಬ್ಲಿ ಚುನಾವಣೆ ಮತ್ತು 9 ರಾಜ್ಯಗಳ ಉಪಚುನಾವಣೆ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿಯೂ ಇದರ ಫಲಿತಾಂಶವು ಪ್ರತಿಫಲಿಸುವ ಸಾಧ್ಯತೆಯ ಬಗ್ಗೆ ರಾಜಧಾನಿಯಲ್ಲಿ ಸಾಕಷ್ಟು ಚರ್ಚೆ ಕೇಳಿಬರುತ್ತಿದೆ.
ಸಂಪುಟ ಪುನಾರಚನೆ ಬಗ್ಗೆ ಹಲವು ತಿಂಗಳಿಂದಲೇ ಗಾಳಿ ಮಾತುಗಳಿದ್ದವು. ಆದರೆ, ಚುನಾವಣೆಯ ಬಳಿಕ ಈ ಬಗೆಗಿನ ಧ್ವನಿಗೆ ಮತ್ತಷ್ಟು ಬಲ ಬಂದಿದೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ನಿಂದ ಬಂದು ಬಿಜೆಪಿ ಸೇರಿದವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಬಿಹಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಬದಲಾಗಿ ಕೇಂದ್ರ ಮಂತ್ರಿ ಮಂಡಲಕ್ಕೆ ಆಹ್ವಾನ ಪಡೆಯಲಿರುವ ಸುಶೀಲ್ ಕುಮಾರ್ ಮೋದಿ ಅವರು ಮೋದಿ ಸಂಪುಟಕ್ಕೆ ಕಾಲಿಡುವ ಸಾಧ್ಯತೆಗಳಿವೆ.
ಸುಶೀಲ್ ಮೋದಿ ಅವರಂತೂ ಭಾನುವಾರವೇ ಟ್ವೀಟ್ ಮಾಡಿ, ತಾವು ಹೊಸ ಜವಾಬ್ದಾರಿಗೆ ಸಿದ್ಧ ಎಂದು ಹೇಳಿದ್ದಾರೆ. ಅವರಿಗೆ ಬಹುಶಃ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ದೊರೆಯುವ ಸಾಧ್ಯತೆಗಳಿವೆ. ಲೋಕಜನಶಕ್ತಿ ಪಕ್ಷದ ರಾಂ ವಿಲಾಸ್ ಪಾಸ್ವಾನ್ ಅವರ ನಿಧನದ ಹಿನ್ನೆಲೆಯಲ್ಲಿ ಈ ಖಾತೆ ಖಾಲಿಯಾಗಿದೆ.
ಬಿಜೆಪಿ ರಾಜ್ಯಸಭಾ ಸದಸ್ಯರಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೂ ಮಹತ್ವದ ಖಾತೆ ದೊರೆಯುವ ಸಾಧ್ಯತೆಗಳಿವೆ. ಮಧ್ಯ ಪ್ರದೇಶದಲ್ಲಿ ಚಂಬಲ್-ಗ್ವಾಲಿಯರ್ ಪ್ರದೇಶದಲ್ಲಿ ಕಾಂಗ್ರೆಸ್ ಬಂಡುಕೋರರು ಬಿಜೆಪಿ ಟಿಕೆಟ್ನಲ್ಲಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: Election Result 2020 | ಬಿಹಾರದಲ್ಲಿ ಬಿಜೆಪಿ ಭರ್ಜರಿ ಬೇಟೆ, ದೇಶದೆಲ್ಲೆಡೆ 59ರಲ್ಲಿ 40 ಸ್ಥಾನ: ಮೋದಿಗೆ ಸ್ಪಷ್ಟ ಜನಾದೇಶ
ಮತ್ತೊಂದೆಡೆ, ಚುನಾವಣೆ ಸಮೀಪಿಸುತ್ತಿರುವ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿಯೂ ಕೆಲವು ಬಿಜೆಪಿ ಸಂಸದರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸ್ಥಾನ ದೊರೆಯುವ ಸಾಧ್ಯತೆಗಳು ದಟ್ಟವಾಗಿವೆ. ಎರಡೂ ರಾಜ್ಯಗಳಲ್ಲಿ 2021ರ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ.
ಕರ್ನಾಟಕ ಮೂಲದ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ನಿಧನದ ಹಿನ್ನೆಲೆಯಲ್ಲಿ ರೈಲ್ವೇ ರಾಜ್ಯ ಖಾತೆಯೂ ಖಾಲಿ ಇದೆ.
ಜೆಡಿಯು ಬಿಹಾರದಲ್ಲಿ ಹಿನ್ನಡೆ ಕಂಡಿರುವುದರಿಂದ, ಕೇಂದ್ರ ಸಂಪುಟದಲ್ಲಿ ಎರಡು ಸ್ಥಾನದ ತನ್ನ ಬೇಡಿಕೆಯನ್ನು ಅದು ಕೈಬಿಡುವ ಸಾಧ್ಯತೆಗಳಿವೆ. ಬಿಜೆಪಿಯು ಒಂದು ಸ್ಥಾನ ನೀಡಲು ಹಿಂದೆಯೇ ಒಪ್ಪಿತ್ತು.
ಇದರ ನಡುವೆ, ಶಿವಸೇನೆಯು ಎನ್ಡಿಎಯಿಂದ ಹೊರಬಂದು ಕಾಂಗ್ರೆಸ್ ಜೊತೆ ಕೈಜೋಡಿಸಿರುವುದರಿಂದ ಮತ್ತು ಶಿರೋಮಣಿ ಅಕಾಲಿ ದಳವೂ ಎನ್ಡಿಎಯಿಂದ ಹೊರ ಬಂದಿರುವುದರಿಂದ ಮೂರು ಸಚಿವರ ಖಾತೆಗಳನ್ನು ಪೀಯೂಷ್ ಗೋಯಲ್, ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಕಾಶ್ ಜಾವಡೇಕರ್ ಅವರು ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದರು. ಆ ಸ್ಥಾನಗಳೂ ಭರ್ತಿಯಾಗಬೇಕಿವೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating