ನವದೆಹಲಿ: ದೇಶದ ಹೆಮ್ಮೆಯ ಪಾಲಿಗೆ ಮತ್ತೊಂದು ಸೇರ್ಪಡೆ. ಭೂಮಿಯಲ್ಲೇ ಶತ್ರುವನ್ನು ಗುರಿಯಿಟ್ಟು ಹೊಡೆದುರುಳಿಸಬಲ್ಲ ಸಾಮರ್ಥ್ಯದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತವಿಂದು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ.
ಇದು ಆಕಾಶದಲ್ಲಿ ವೈಮಾನಿಕ ದಾಳಿಯಲ್ಲಿ ಸಮರ್ಥವಾಗಿ ಕೆಲಸ ಮಾಡುವ ಬ್ರಹ್ಮೋಸ್ನ ಮತ್ತೊಂದು ರೂಪ. ನೆಲದಿಂದಲೇ ಜಿಗಿದು ಸುಮಾರು 400 ಕಿ.ಮೀ. ದೂರದಲ್ಲಿರುವ ಶತ್ರು ನೆಲೆಯನ್ನು ಧ್ವಂಸ ಮಾಡಬಲ್ಲುದು ಮತ್ತು ಶತ್ರುಗಳ ದಾಳಿಯನ್ನು ಹಿಮ್ಮೆಟ್ಟಿಸಬಲ್ಲುದು.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ಇದು ಯಶಸ್ವಿಯಾಗಿ ಗುರಿ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿತು ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನೆ ಯಶಸ್ವಿ ಪರೀಕ್ಷೆ ನಡೆಸಿದ್ದು, ಬ್ರಹ್ಮೋಸ್ ಕ್ಷಿಪಣಿಯ ದಾಳಿಯ ವ್ಯಾಪ್ತಿಯನ್ನು 400 ಕಿ.ಮೀ.ಗಿಂತಲೂ ಹೆಚ್ಚು ದೂರಕ್ಕೆ ವರ್ಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯು ಪ್ರಪಂಚದಲ್ಲೇ ಅತ್ಯಂತ ವೇಗದ ಕ್ಷಿಪಣಿಯಾಗಿದ್ದು, ಈಗಿರುವ 298 ಕಿ.ಮೀ. ಇದ್ದ ಅದರ ದಾಳಿ ವ್ಯಾಪ್ತಿಯನ್ನು 450 ಕಿ.ಮೀ.ಗೆ ವಿಸ್ತರಿಸಲಾಗಿದೆ.
ಕಳೆದೆರಡು ತಿಂಗಳಲ್ಲಿ ಡಿಆರ್ಡಿಒ, 800 ಕಿ.ಮೀ. ದೂರದಲ್ಲೂ ಶತ್ರುವನ್ನು ಹೊಡೆಯಬಲ್ಲ ಶೌರ್ಯ ಕ್ಷಿಪಣಿ ವ್ಯವಸ್ಥೆಯೂ ಸೇರಿದಂತೆ ಹಲವು ಹಳೆಯ ಮತ್ತು ಹೊಸ ಕ್ಷಿಪಣಿಗಳನ್ನು ಪರೀಕ್ಷಿಸುತ್ತಿದೆ.
ಕಳೆದ ತಿಂಗಳಷ್ಟೇ ‘ಐಎನ್ಎಸ್ ಚೆನ್ನೈ’ ಸಮರ ನೌಕೆಯಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಹಾರಿಸಲಾಗಿದ್ದು, ಅದು ಕೂಡ 400 ಕಿ.ಮೀ.ಗೂ ಹೆಚ್ಚು ದೂರದ ಗುರಿಯನ್ನು ಹೊಡೆಯುವಲ್ಲಿ ಸಫಲವಾಗಿತ್ತು.
90ರ ದಶಕದಲ್ಲಿ ಭಾರತ-ರಷ್ಯಾ ಸಹಯೋಗದಲ್ಲಿ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ನಿರ್ಮಾಣ ಆರಂಭವಾಗಿದ್ದು, ಇದೀಗ ಭಾರತದ ಮೂರೂ ಪಡೆಗಳ (ಭೂಸೇನೆ, ವಾಯುಪಡೆ, ನೌಕಾಪಡೆ) ಸಮರ್ಥ ಮತ್ತು ಶಕ್ತಿಶಾಲಿ ಅಸ್ತ್ರವಾಗಿ ಹೊರಹೊಮ್ಮಿದ್ದು, ಸೇನೆಗೆ ಆನೆಬಲ ನೀಡಿದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating