ನವದೆಹಲಿ: ನೋಂದಾವಣೆಯೇ ಆಗದ ಪ್ರಧಾನಿ ಪರಿಹಾರ ನಿಧಿಯನ್ನು ಮುಚ್ಚಿಸಿ, ಅಧಿಕೃತ, ನೋಂದಾಯಿತ ಪಿಎಂ ಕೇರ್ಸ್ ಫಂಡ್ ಸ್ಥಾಪಿಸಿದ ಉದ್ದೇಶವನ್ನು ಪ್ರಶ್ನಿಸಿದ ಕಾಂಗ್ರೆಸ್ ಪಕ್ಷದ ನಿಜವಾದ ‘ಬಂಡವಾಳ’ ಈಗ ಬಯಲಾಗಿದೆ. 2016-2019ರ ನಡುವೆ ನವದೆಹಲಿಯ ಅಕ್ಬರ್ ರೋಡ್ನಲ್ಲಿರುವ ಕಾಂಗ್ರೆಸ್ ಮುಖ್ಯಾಲಯಕ್ಕೆ 106 ಕೋಟಿ ರೂ. ಲೆಕ್ಕಪತ್ರವೇ ಇಲ್ಲದ ಹಣ ಹರಿದು ಬಂದಿರುವ ವಿಚಾರ ಈಗ ಆದಾಯ ತೆರಿಗೆ ಇಲಾಖೆಯ ಕಣ್ಣಿಗೆ ಬಿದ್ದಿದ್ದು, ತನಿಖೆ ಆರಂಭಿಸಿದೆ.
ಮೊದಲ ಹಂತದಲ್ಲಿ 74.62 ಕೋಟಿ ಹಣವು 2019ರ ಫೆ.13 ಹಾಗೂ ಅಕ್ಟೋಬರ್ 4ರ ನಡುವೆ ಹಾಗೂ ಎರಡನೇ ಹಂತದಲ್ಲಿ 26.50 ಕೋಟಿ ರೂ. ಹಣವು 2016ರ ಆಗಸ್ಟ್-ಸೆಪ್ಟೆಂಬರ್ ನಡುವೆ ಸಂದಾಯವಾಗಿದೆ. ಮೂರನೇ ಹಂತದಲ್ಲಿ 5.22 ಕೋಟಿ ರೂ. ಹಣವನ್ನು 2017ರ ಏಪ್ರಿಲ್ ಹಾಗೂ ಸೆಪ್ಟೆಂಬರ್ ನಡುವೆ ತಲುಪಿಸಲಾಗಿದೆ ಎಂಬ ಅಂಶವು ದೇಶದ ಪ್ರಮುಖ ಸುದ್ದಿ ಚಾನೆಲ್ ಟೈಮ್ಸ್ ನೌ ಬಳಿ ಇರುವ 408 ಪುಟಗಳ ಆದಾಯ ತೆರಿಗೆ ಇಲಾಖೆಯ ವರದಿಯಲ್ಲಿದೆ.
ಸೋಮವಾರ ಟೈಮ್ಸ್ ನೌ ಈ ವರದಿಯನ್ನು ಬ್ರೇಕ್ ಮಾಡಿದ ತಕ್ಷಣವೇ ಪ್ರತಿಕ್ರಿಯಿಸಿರುವ ಬಿಜೆಪಿ, 2016ರಲ್ಲಿ ನೋಟು ಅಮಾನ್ಯೀಕರಣ ಮಾಡಿದಾಗ ಕಾಂಗ್ರೆಸ್ ಇದನ್ನು ಸತತವಾಗಿ ಟೀಕಿಸುತ್ತಾ ಬಂದಿತ್ತು. ಇದೀಗ ಅದರ ಮುಖ್ಯಾಲಯಕ್ಕೆ ಬಂದಿರುವ 106 ಕೋಟಿ ರೂ. ಹಣದ ಬಗ್ಗೆ ಕಾಂಗ್ರೆಸ್ ಉತ್ತರಿಸಲಿ ನೋಡೋಣ ಎಂದು ಸವಾಲೆಸೆದಿದೆ.
ಈಗಾಗಲೇ ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣದಲ್ಲಿ ಸಿಲುಕಿ, ನರೇಂದ್ರ ಮೋದಿ ಸರ್ಕಾರದ ವಿರುದ್ಧವೇ ಹಗರಣದ ಆರೋಪ ಮಾಡುತ್ತಿದ್ದ ಕಾಂಗ್ರೆಸ್, ಇದೀಗ ಇಕ್ಕಟ್ಟಿನಲ್ಲಿ ಸಿಲುಕಿದೆ. 2010ರಲ್ಲಿ ಯುಪಿಎ ಆಡಳಿತಾವಧಿಯಲ್ಲಿ ಭಾರತವು ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತಿತರ ವಿವಿಐಪಿಗಳ ಸೇವೆಗಾಗಿ 12 ಆಗಸ್ಟಾ ವೆಸ್ಟ್ಲ್ಯಾಂಡ್ AW101 ಹೆಲಿಕಾಪ್ಟರ್ ಖರೀದಿಗೆ ಸಹಿ ಹಾಕಿತ್ತು. ಆಗಸ್ಟಾ ವೆಸ್ಟ್ಲ್ಯಾಂಡ್ ಕಂಪನಿಗೆ ಈ ಗುತ್ತಿಗೆ ಒದಗಿಸಲು ರಾಜಕಾರಣಿಗಳು ಪ್ರಭಾವ ಬಳಸಿದ್ದರೆನ್ನಲಾಗಿದ್ದು, ಹಗರಣ ಬಯಲಾದಾಗ 2013ರಲ್ಲಿ ಈ ಒಪ್ಪಂದವನ್ನೇ ರದ್ದು ಮಾಡಬೇಕಾಗಿಬಂದಿತ್ತು.
3600 ಕೋಟಿ ರೂ. ಮೊತ್ತದ ಈ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಹಲವಾರು ಪ್ರಮುಖ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರೆಂದು ಸಾಕ್ಷಿದಾರನಾಗಿ ಬದಲಾಗಿದ್ದ ಆರೋಪಿ ರಾಜೀವ್ ಸಕ್ಸೇನಾ ಹೇಳಿದ್ದರು.
ತನಿಖೆಯ ವೇಳೆ ಸಲ್ಮಾನ್ ಖುರ್ಷಿದ್, ಕಮಲನಾಥ್ ಪುತ್ರ ಬಕುಳನಾಥ್, ಸೋನಿಯಾ ಗಾಂಧಿಯ ಆಪ್ತ ಅಹ್ಮದ್ ಪಟೇಲ್ ಮುಂತಾದವರ ಹೆಸರು ಬಯಲಾಗಿತ್ತು.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating