ಆಗಸ್ಟ್ 18ರಂದು ನೇತಾಜಿಯವರ ಪುಣ್ಯತಿಥಿ
ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಅತ್ಯಂತ ಗಮನಾರ್ಹವಾದ ಪಾತ್ರ ವಹಿಸಿದ್ದರೂ ನಿರ್ಲಕ್ಷಿತವಾಗಿದ್ದ ಮಹಾನ್ ವೀರ ಸೇನಾನಿ ಸ್ವಾತಂತ್ರ್ಯವೀರ ಸುಭಾಸ್ ಚಂದ್ರ ಬೋಸ್ ಅವರ ನಿಗೂಢ ನಾಪತ್ತೆ ವಿಚಾರವು ಭಾರತೀಯನೆಂದಿಗೂ ಮರೆಯಲಾಗದ ದುರಂತ. ಈಗ ಟೋಕಿಯೋದ ರೆಂಕೋಜಿ ಮಂದಿರದಲ್ಲಿ ಇದೆ ಎನ್ನಲಾಗುತ್ತಿರುವ ಬೋಸ್ ಅವರ ಚಿತಾಭಸ್ಮದ ಡಿಎನ್ಎ ಪರೀಕ್ಷೆ ನಡೆಸಬೇಕು ಎಂಬುದಾಗಿ ಸುಭಾಸ್ ಚಂದ್ರ ಬೋಸ್ ಅವರ ಪುತ್ರಿ ಅನಿತಾ ಬೋಸ್ ಪ್ತಾಫ್ ಅವರು ಆಗಸ್ಟ್ 18ರಂದು, ನೇತಾಜಿಯವರ 77ನೇ ಪುಣ್ಯತಿಥಿಯ ದಿನದಂದು ಆಗ್ರಹಿಸಿದ್ದಾರೆ. ತೈವಾನ್‌ನಲ್ಲಿ ನಡೆದ ವಿಮಾನ ಪತನದಲ್ಲಿ ನೇತಾಜಿ ಮೃತಪಟ್ಟಿದ್ದರು ಎಂದು ಹೆಚ್ಚಿನವರು ಹೇಳುತ್ತಿದ್ದಾರೆ.
ಜರ್ಮನ್ ಪ್ರಜೆಯಾಗಿರುವ ಅನಿತಾ, ಭಾರತ ಮತ್ತು ಜಪಾನ್ ಸರಕಾರಗಳಿಗೆ ಈ ಕುರಿತು ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಭಾರತ ಸರಕಾರಕ್ಕೆ ಮನವಿ ಸಲ್ಲಿಸಿದ್ದೆ, ಆದರೆ ಇದಕ್ಕೆ ಪ್ರತ್ಯುತ್ತರವೇ ಸಿಕ್ಕಿಲ್ಲ ಎಂದು ಅನಿತಾ ಬೋಸ್ ವಿಷಾದದಿಂದ ಹೇಳಿದ್ದಾರೆ.
ಈ ಬಾರಿ ನಾನು ಸುಮ್ಮನಿರುವುದಿಲ್ಲ. ನಾನು ಜಪಾನ್ ಸರಕಾರದೊಂದಿಗೆ ಕೂಡ ಮಾತುಕತೆ ನಡೆಸುತ್ತೇನೆ ಎಂದು ಅವರು ಪಿಟಿಐಗೆ ಹೇಳಿದ್ದಾರೆ. ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಅತ್ಯಾಧುನಿಕವಾದ ಡಿಎನ್ಎ ಪರೀಕ್ಷೆ ಸಾಧ್ಯವಾಗುತ್ತದೆ ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ ಅವರು.
ಬೋಸ್ ದುರಂತ ಸಾವಿನ ಕುರಿತು ನಿಗೂಢತೆ ಇನ್ನೂ ಇದೆ. ಈ ನಿಗೂಢತೆ ಭೇದಿಸಬೇಕಾಗಿದೆ ಮತ್ತು ಅವರ ಚಿತಾಭಸ್ಮವನ್ನು ಭಾರತಕ್ಕೆ ತಂದರೆ, ಸ್ವಾತಂತ್ರ್ಯದ 75ನೇ ವರ್ಷ ಆಚರಿಸುತ್ತಿರುವ ಸಂದರ್ಭದಲ್ಲಿ ಕ್ರಾಂತಿಕಾರಿ ನಾಯಕನಿಗೆ ಸಲ್ಲುವ ನಿಜವಾದ ಗೌರವ ಇದಾಗಲಿದೆ ಎಂದು ಅವರು ಹೇಳಿದ್ದಾರೆ.
ಸ್ವಾತಂತ್ರ್ಯದ ಬಳಿಕ ಭಾರತವು ನೇತಾಜಿ ಕಣ್ಮರೆಯಾದ ವಿಷಯದ ನಿಗೂಢತೆ ಭೇದಿಸಲು ಮೂರು ಆಯೋಗಗಳನ್ನು ರಚಿಸಿತ್ತು. ಅವುಗಳಲ್ಲಿ ಶಾ ನವಾಜ್ ಆಯೋಗ ಮತ್ತು ಖೋಸ್ಲಾ ಆಯೋಗವನ್ನು ಕಾಂಗ್ರೆಸ್ ಸರಕಾರಗಳು ರಚಿಸಿದ್ದವು. ಆ ಎರಡೂ ಆಯೋಗಗಳ ವರದಿ ಬಹುತೇಕ ಒಂದೇ ರೀತಿಯಾಗಿದೆ – ಅದೆಂದರೆ, ನೇತಾಜಿಯವರು ವಿಮಾನ ಪತನದಲ್ಲಿ ಮೃತಪಟ್ಟಿದ್ದಾರೆ ಎಂಬುದು.
ಆದರೆ, ಮೂರನೇ ಆಯೋಗ – ಮುಖರ್ಜೀ ಆಯೋಗವನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ರಚಿಸಿದ್ದು, ಅದರ ಪ್ರಕಾರ, ನೇತಾಜಿಯವರು ವಿಮಾನ ಪತನವಾದಂದು ಮೃತಪಟ್ಟಿಲ್ಲ.
2015ರಲ್ಲಿ, ಗೃಹ ಇಲಾಖೆಯ ಸುಪರ್ದಿಯಲ್ಲಿದ್ದ 64 ಫೈಲುಗಳನ್ನು ಪಶ್ಚಿಮ ಬಂಗಾಳ ಸರಕಾರವು ಬಿಡುಗಡೆ ಮಾಡಿತ್ತು. ಅದೇ ರೀತಿ, ನರೇಂದ್ರ ಮೋದಿ ಸರಕಾರವು 2016ರಲ್ಲಿ 100 ಫೈಲುಗಳನ್ನು ಬಿಡುಗಡೆ ಮಾಡಿತ್ತು.
ಇದುವರೆಗೆ ನೇತಾಜಿ ಸಾವಿನ ನಿಗೂಢತೆ ಮಾತ್ರ ಭೇದಿಸಲಾಗಿಲ್ಲ.
ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜೀವನ ಪರಿಚಯ
ಜನನ: ಜನವರಿ 23, 1897
ಜನ್ಮಸ್ಥಳ: ಕಟಕ್, ಒರಿಸ್ಸಾ
ಹೆತ್ತವರು: ಜಾನಕಿನಾಥ್ ಬೋಸ್ (ತಂದೆ) ಮತ್ತು ಪ್ರಭಾವತಿ ದೇವಿ (ತಾಯಿ)
ಪತ್ನಿ: ಎಮಿಲಿ ಶೆಂಕಲ್ (Emily Schenkl)
ಮಕ್ಕಳು: ಪುತ್ರಿ ಅನಿತಾ ಬೋಸ್ ಪ್ತಾಫ್ – (Anita Bose Pfaff)
ಶಿಕ್ಷಣ: ರವೆನ್‌ಶಾ ಕಾಲೇಜಿಯೇಟ್ ಸ್ಕೂಲ್, ಕಟಕ್; ಪ್ರೆಸಿಡೆನ್ಸಿ ಕಾಲೇಜು ಕಲ್ಕತ್ತಾ; ಕೇಂಬ್ರಿಜ್ ಯುನಿವರ್ಸಿಟಿ, ಇಂಗ್ಲೆಂಡ್
ಸಂಸ್ಥೆಗಳು: ಭಾರತ ರಾಷ್ಟ್ರೀಯ ಕಾಂಗ್ರೆಸ್, ಫಾರ್ವರ್ಡ್ ಬ್ಲಾಕ್, ಭಾರತ ರಾಷ್ಟ್ರೀಯ ಸೇನೆ (Indian National Army)
ಹೋರಾಟ: ಭಾರತ ಸ್ವಾತಂತ್ರ್ಯ ಹೋರಾಟ
ರಾಜಕೀಯ ಸಿದ್ಧಾಂತ: ರಾಷ್ಟ್ರೀಯತೆ; ಕಮ್ಯೂನಿಸಂ; ಫ್ಯಾಸಿಸಂ ಪರ;
ಪ್ರಕಟಣೆ: ಭಾರತದ ಹೋರಾಟ – The Indian Struggle (1920–1942)
ಮರಣ: ಆಗಸ್ಟ್ 18, 1945
ಸ್ಮಾರಕ: ರೆಂಕೋಜಿ ಟೆಂಪಲ್, ಟೋಕಿಯೋ, ಜಪಾನ್; ನೇತಾಜಿ ಭವನ, ಕೋಲ್ಕತ್ತಾ, ಭಾರತ

Average Rating