ಇಸ್ಲಾಮಾಬಾದ್: ಪಾಕಿಸ್ತಾನದ ಸಚಿವ ಸಂಪುಟವು ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿ ಸುಗ್ರೀವಾಜ್ಞೆ ಸಿದ್ಧಪಡಿಸಿದೆ. ಅತ್ಯಾಚಾರಿಗಳ ಗುಪ್ತಾಂಗವನ್ನು ರಾಸಾಯನಿಕವಾಗಿ ನಿಷ್ಕ್ರಿಯಗೊಳಿಸುವುದು ಮತ್ತು ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ – ಈ ಕುರಿತ ಅಧ್ಯಾದೇಶಕ್ಕೆ ಪಾಕಿಸ್ತಾನ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.
ಫೆಡರಲ್ ಕಾನೂನು ಸಚಿವ ಫರೋಗ್ ನಸೀಮ್ ನೇತೃತ್ವದಲ್ಲಿ ಗುರುವಾರ ಸಭೆ ಸೇರಿದ್ದ ಶಾಸನಾತ್ಮಕ ಕೇಸುಗಳ ಸಂಪುಟ ಸಮಿತಿಯು, ಅತ್ಯಾಚಾರ-ನಿರೋಧಕ (ತನಿಖೆ ಮತ್ತು ವಿಚಾರಣೆ) ಅಧ್ಯಾದೇಶ 2020 ಮತ್ತು ಕ್ರಿಮಿನಲ್ ಕಾನೂನು (ತಿದ್ದುಪಡಿ) ಅಧ್ಯಾದೇಶ 2020ಕ್ಕೆ ಅನುೋದನೆ ನೀಡಿತ್ತು.
ಈ ಅಧ್ಯಾದೇಶಗಳಿಗೆ ಈಗಾಗಲೇ ಸಂಪುಟವು ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.
ಅತ್ಯಾಚಾರಿಗಳ ವೃಷಣವನ್ನು ರಾಸಾಯನಿಕವಾಗಿ ನಿಷ್ಕ್ರಿಯಗೊಳಿಸುವ ಪರಿಕಲ್ಪನೆಯು ಅಪರಾಧಿಗಳ ಪುನರ್ವಸತಿ. ಭಾಗವಾಗಿದ್ದು, ಅಪರಾಧಿಗಳ ಒಪ್ಪಿಗೆ ಬೇಕಾಗುತ್ತದೆ ಎಂಬ ಅಂಶವೂ ಇದರಲ್ಲಿದೆ.
ಯಾಕೆಂದರೆ, ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ಅಪರಾಧಿಗಳ ಗುಪ್ತಾಂಗ ನಿಷ್ಕ್ರಿಯಗೊಳಿಸುವುದಕ್ಕೆ ಅಪರಾಧಿಯ ಅನುಮತಿ ಬೇಕಾಗುತ್ತದೆ. ಇದರ ಆಧಾರದಲ್ಲಿ ಈ ಕಾನೂನು ರೂಪಿಸಲಾಗಿದೆ ಎಂದು ಕಾನೂನು ಸಚಿವ ನಸೀಮ್ ಹೇಳಿದ್ದಾರೆ. ಆದರೆ, ರಾಸಾಯನಿಕವಾಗಿ ವೃಷಣ ಛೇದಿಸುವುದಕ್ಕೆ ನ್ಯಾಯಾಲಯ ತೀರ್ಪು ನೀಡಿದರೆ, ಅಪರಾಧಿಗೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅಧಿಕಾರವಿದೆ ಎಂದಿದ್ದಾರೆ ಅವರು.
ಈ ವೃಷಣ ಛೇದನಕ್ಕೆ ಅಪರಾಧಿ ಒಪ್ಪದೇ ಹೋದರೆ, ಪಾಕಿಸ್ತಾನ ದಂಡ ಸಂಹಿತೆಯ ಪ್ರಕಾರ ಆತನಿಗೆ ಮರಣ ದಂಡನೆ, ಜೀವಾವಧಿ ಶಿಕ್ಷೆ ಇಲ್ಲವೇ 25 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ವಿವರಿಸಿದ್ದಾರೆ ಪಾಕ್ ಸಚಿವರು.
ಆದರೆ, ನ್ಯಾಯಾಲಯವೇ ಶಿಕ್ಷೆಯನ್ನು ನಿರ್ಧರಿಸುತ್ತದೆ. ಅಧ್ಯಾದೇಶವು ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ಕೂಡ ಅವಕಾಶ ಮಾಡಿಕೊಡುತ್ತದೆ. ಈ ಪ್ರಸ್ತಾಪಿತ ಕಾನೂನಿನಲ್ಲಿ ಆರೋಪಿಯು ಅತ್ಯಾಚಾರ ಸಂತ್ರಸ್ತರ ಪ್ರತಿ-ವಿಚಾರಣೆಯನ್ನು ಮಾಡುವುದಕ್ಕೆ ಅವಕಾಶವೂ ಇರುವುದಿಲ್ಲ. ನ್ಯಾಯಾಧೀಶರು ಮತ್ತು ಆರೋಪಿಗಳ ಪರ ವಕೀಲರು ಮಾತ್ರವೇ ಈ ವಿಚಾರಣೆ ನಡೆಸಬಹುದಾಗಿರುತ್ತದೆ.
ಕ್ಯಾಮೆರಾ ಎದುರು ವಿಚಾರಣೆ, ಸಂತ್ರಸ್ತರಿಗೆ, ಸಾಕ್ಷಿಗಳಿಗೆ ರಕ್ಷಣೆ, ತನಿಖೆ ಮತ್ತು ವಿಚಾರಣೆಗೆ ಆಧುನಿಕ ಸಾಧನಗಳ ಬಳಕೆ, ಸಂತ್ರಸ್ತರಿಗೆ ಕಾನೂನು ನೆರವು ಮತ್ತು ಅವರ ಬೆಂಬಲಕ್ಕಾಗಿ ಸ್ವತಂತ್ರ ಸಲಹಾಕಾರರ ನೇಮಕ – ಈ ಅಂಶಗಳೂ ಇವೆ.
ಅಲ್ಲದೆ, ಅತ್ಯಾಚಾರ ಸಂತ್ರಸ್ತರಿಗೆ ನಡೆಸಲಾಗುವ ವಿವಾದಾತ್ಮಕ ಮತ್ತು ಅವೈಜ್ಞಾನಿಕ ‘ಎರಡು ಬೆರಳು’ ಪರೀಕ್ಷೆಗೆ ತಡೆ ವಿಧಿಸಲಾಗುತ್ತದೆ.
ವಿಶೇಷ ಮತ್ತು ನಿಖರವಾದ ಸುದ್ದಿಯ ಜೊತೆ ಮಾಹಿತಿಯನ್ನೂ ಪಡೆಯಲು ಐಡೆಫೀ ವಾಟ್ಸಪ್ ಗ್ರೂಪಿಗೆ ಸೇರಿರಿ.
ಟೆಲಿಗ್ರಾಂನಲ್ಲಿ ಫಾಲೋ ಮಾಡಲು ಇಲ್ಲಿ ಸೇರಿಕೊಳ್ಳಿ: t.me/idefy

Average Rating